ನೀರು ಕೊಡುವ ಆತುರದಲ್ಲಿ ಪರಿಸರ ಕಾಳಜಿ ಮರೆಯದಿರಿ
(ಲೋಕಸೇವಾನಿರತ ಡಿ.ಕೊಂಗಾಡಿಯಪ್ಪ ವೇದಿಕೆ),ಮಾ.3
ಜನರಿಗೆ ನೀರು ಕೊಡುವ ಆತುರದಲ್ಲಿ ರಾಜಕಾರಣಿಗಳು ಪರಿಸರದ ಕಾಳಜಿ ಮರೆಯಬಾರದು. ನದಿ ತಿರುವು ಯೋಜನೆಗಳು ಪ್ರಾಕೃತಿಕ ವೈಪರಿತ್ಯಗಳಿಗೆ ಕಾರಣವಾಗಬಾರದು ಎಂದು ಹಿರಿಯ ಸಾಹಿತಿ ಡಾ.ನಾ.ಡಿಸೋಜ ಅಭಿಪ್ರಾಯಪಟ್ಟರು.
ಬೆಂ.ಗ್ರಾ.ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಮತ್ತು ದೊಡ್ಡಬಳ್ಳಾಪುರ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ನೇತೃತ್ವದಲ್ಲಿ ಇಲ್ಲಿನ ದತ್ತಾತ್ರೇಯ ಕಲ್ಯಾಣ ಮಂದಿರದಲ್ಲಿ ನಡೆದ ಬೆಂ.ಗ್ರಾ.ಜಿಲ್ಲಾ 16ನೇ ಕನ್ನಡ ಸಾಹಿತ್ಯ ಸಮ್ಮೇಳನ ಉದ್ಘಾಟಿಸಿ ಅವರು ಮಾತನಾಡಿದರು.
ಪರಿಸರದ ನೆಲೆ ಅರ್ಥ ಮಾಡಿಕೊಳ್ಳದೆ ಜನಪ್ರಿಯತೆಗಾಗಿ ಮಾತನಾಡುವುದು ಸಲ್ಲ. ಆಸ್ಟ್ರೇಲಿಯಾದಂತಹ ದೇಶದಲ್ಲೇ ನದಿತಿರುವು ಯೋಜನೆ ಫಲಕಾರಿಯಾಗಿಲ್ಲ. ಅಂತಹ ಯೋಜನೆಗಳು ಬೇಕೆ ಎಂಬ ಬಗ್ಗೆ ಚಿಂತನೆಯಾಗಬೇಕು. ಬಯಲುಸೀಮೆಯ ಜನಕ್ಕೆ ನೀರು ಕೊಡಬೇಕು ಎಂಬುದು ನಿಜ. ನಾಡಿನ ವೈವಿಧ್ಯತೆಯಂತೆ ಒಂದೆಡೆ ಸಹಜ-ಸಮೃದ್ಧ ನೀರಿದೆ. ಮತ್ತೊಂದೆಡೆ ನೆಲದ ಒಡಲು ಬರಿದಾಗಿದೆ. ಇಂತಹ ವೈರುಧ್ಯಕ್ಕೆ ವೈಜ್ಞಾನಿಕ ಪರಿಹಾರ ಕಂಡುಕೊಳ್ಳಬೇಕು ಎಂದರು.
ಕವಿಯ ಹೊಣೆ: ಪ್ರಜಾಪ್ರಭುತ್ವ ವ್ಯವಸ್ಥೆಯ ಆಧಾರ ಸ್ತಂಭವಾಗಿರುವ ಜನರ ಅಭಿಪ್ರಾಯಕ್ಕೆ ಮನ್ನಣೆ ನೀಡಬೇಕಾದ್ದು ಕವಿಯಾದವನ ಕರ್ತವ್ಯ. ದಲಿತ, ಹಿಂದುಳಿದ ಜನರ ಪರವಾದ ಸಾಹಿತ್ಯ ಸೃಷ್ಟಿಯಾಗಬೇಕು.
ಆಂತರಿಕವಾಗಿ ನೊಂದವರ ತಳಮಳಗಳಿಗೆ ಸಾಹಿತ್ಯ ದನಿಯಾಗುವುದರೊಂದಿಗೆ ಸಾಹಿತ್ಯ ಸಮ್ಮೇಳನಗಳು ಭಾಷೆ ಮತ್ತು ಸಾಹಿತ್ಯ ಬೆಳೆಸುವ ನಿಟ್ಟಿನಲ್ಲಿ ಮುಖ್ಯವಾಗಿವೆ. ವಿಜ್ಞಾನ ಸಾಹಿತಿಯೊಬ್ಬರಿಗೆ ಸಮ್ಮೇಳನಾಧ್ಯಕ್ಷತೆ ಗೌರವ ಸಂದಿರುವುದು ಗಣನೀಯ. ಇಂಗ್ಲಿಷ್ ಕೇವಲ ಭಾಷೆ ಮಾತ್ರ. ಅದನ್ನು ತಲೆ ಮೇಲೆ ಹೊತ್ತು ತಿರುಗುವುದು ದೊಡ್ಡಸ್ತಿಕೆ ಅಲ್ಲ. ಇಂಗ್ಲಿಷಿನಲ್ಲಿ ಎಲ್ಲವೂ ಇದೆ ಎಂಬುದೇ ದೊಡ್ಡ ಭ್ರಮೆ. ಇಂಗ್ಲಿಷಿನ ಗೂಟಕ್ಕೆ ಕಟ್ಟಿದ ಕನ್ನಡದ ಪ್ರಾಣಿ ಗೂಟ ಕಿತ್ತೆಸೆದ ಮೇಲೂ ಭ್ರಮೆಯಿಂದ ಸುತ್ತುತ್ತಿರುವುದು ವಿಷಾದನೀಯ ಎಂದರು.
ಜಿಲ್ಲಾ ಕಸಾಪ ಅಧ್ಯಕ್ಷ ಹುಲಿಕಲ್ ನಟರಾಜ್ ಮಾತನಾಡಿ, ಕನ್ನಡ ಸಾಹಿತ್ಯ ಸಮ್ಮೇಳನ ಅತ್ಯಂತ ಅರ್ಥಪೂರ್ಣವಾಗಿ ನಡೆಯುತ್ತಿದೆ. ಸ್ಥಳೀಯ ಸಮಸ್ಯೆಗಳು, ವಿಚಾರಗಳು ಮತ್ತು ಮಹತ್ವವನ್ನು ಕುರಿತ ಚರ್ಚೆಗಳಿಗೆ ವೇದಿಕೆಯಾಗಿರುವುದು ಗಣನೀಯ. ದೊಡ್ಡಬಳ್ಳಾಪುರ ಜಿಲ್ಲಾ ಕೇಂದ್ರ ಮತ್ತು ಬಯಲುಸೀಮೆಗೆ ಶಾಶ್ವತ ನೀರಾವರಿ ನಮ್ಮ ಹಕ್ಕೊತ್ತಾಯವಾಗಿದೆ ಎಂದರು.
ಸಮ್ಮೇಳನಾಧ್ಯಕ್ಷ ಡಾ.ಎ.ಓ.ಆವಲಮೂರ್ತಿ ಅವರಿಗೆ ಜಿಲ್ಲಾಧ್ಯಕ್ಷರು ಪರಿಷತ್ತಿನ ಧ್ವಜ ಹಸ್ತಾಂತರಿಸಿದರು. ಕರ್ನಾಟಕ ರಾಜ್ಯ ರೇಷ್ಮೆ ಮಾರಾಟ ಮಂಡಲಿ ಅಧ್ಯಕ್ಷ ಕೆ.ಎಂ.ಹನುಮಂತರಾಯಪ್ಪ ಸ್ಮರಣ ಸಂಚಿಕೆಯನ್ನು ಬಿಡುಗಡೆ ಮಾಡಿದರು. ಉದ್ಘಾಟನಾ ಕಾರ್ಯಕ್ರಮದಲ್ಲಿ ತಾಲೂಕು 8ನೇ ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷ ಎಂ.ಇ.ಖಲೀಲುಲ್ಲಾಖಾನ್, ಜಿಲ್ಲಾ ಸರ್ಕಾರಿ ನೌಕರರ ಸಂಘ ಅಧ್ಯಕ್ಷ ಶಿವರಾಜ್, ಜಿಲ್ಲಾ ಕಸಾಪ ಮಾಜಿ ಅಧ್ಯಕ್ಷ ನಾಗಪ್ರಿಯ, ಚಿ.ಮಾ.ಸುಧಾಕರ್, ಜಿಲ್ಲಾ ಕಾರ್ಯದರ್ಶಿ ಕೆ.ಮಹಾಲಿಂಗಯ್ಯ, ಸದಾನಂದ ಆರಾಧ್ಯ, ಕೋಶಾಧ್ಯಕ್ಷ ನ.ಮಹದೇವ್, ತಾ.ಕಸಾಪ ಅಧ್ಯಕ್ಷ ಡಿ.ಶ್ರೀಕಾಂತ, ಗೌ.ಅಧ್ಯಕ್ಷ ಕೆ.ಆರ್.ರವಿಕಿರಣ್, ಶಿಕ್ಷಕರ ಸಂಘದ ಮಲ್ಲಿಕಾರ್ಜುನರೆಡ್ಡಿ ಸೇರಿದಂತೆ ಅನೇಕರು ಹಾಜರಿದ್ದರು. ಕುಮಾರಿ ನೇಹಾ ಅವರಿಂದ ಸ್ವಾಗತ ನೃತ್ಯ ನಡೆಯಿತು.