ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೆಂಗಳೂರು ಗ್ರಾಮಾಂತರ

ಆನೇಕಲ್, ಸೂರ್ಯನಗರಕ್ಕೆ ಕಾವೇರಿ ನೀರು

Srinivasa Murthy VN
Updated On : 5 Mar 2014, 12:45 pm

ಆನೇಕಲ್: ತಾಲೂಕಿನ ಶಾಶ್ವತ ಕುಡಿಯುವ ನೀರಿನ ಯೋಜನೆಗಾಗಿ 162 ಕೋಟಿ ರು. ಮಂಜೂರಾಗಿದ್ದು ಮೊದಲ ಹಂತದಲ್ಲಿ 33 ಕೋಟಿ ರು. ಬಿಡುಗಡೆ ಮಾಡಲಾಗಿದೆ. ಕರ್ನಾಟಕ ಗೃಹ ಮಂಡಳಿ ಹಾಗೂ ಜಲ ಮಂಡಳಿ ಸಹಭಾಗಿತ್ವದಲ್ಲಿ ಕಾಮಗಾರಿ ಪ್ರಾರಂಭವಾಗಿದ್ದು ಹಂತ ಹಂತವಾಗಿ ಯೋಜನೆಯ ಸಮರ್ಪಕ ಜಾರಿ ಮಾಡಲಾಗುವುದು  ಎಂದು ಶಾಸಕ ಬಿ. ಶಿವಣ್ಣ ತಿಳಿಸಿದರು.
ಅವರು ಪಟ್ಟಣದಲ್ಲಿ 192 ಕೋಟಿ ರು. ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಿ ಮಾತನಾಡಿದರು.
ಸಂಸದ ಡಿ.ಕೆ. ಸುರೇಶ್ ಹಾಗೂ ಜನಪ್ರತಿನಿಧಿಗಳ ಜೊತೆ ಮುಖ್ಯಮಂತ್ರಿಗಳ ಬಳಿ ನಿಯೋಗ ತೆರಳಿ ತಾಲೂಕಿನಲ್ಲಿ 25 ಲಕ್ಷಕ್ಕೂ ಹೆಚ್ಚು ಜನರಿದ್ದು ಯಾವುದೇ ನದಿ ಪಾತ್ರವಿಲ್ಲ. ಅಂತರ್ಜಲ ಮಟ್ಟ ಕುಸಿದಿದ್ದು ನೀರಿನ ಬವಣೆ ಹೆಚ್ಚಾಗಿದೆ ಎಂದು ಮನವರಿಕೆ ಮಾಡಿಕೊಟ್ಟೆವು. ಕಾವೇರಿ 4 ನೇ ಹಂತದ ಉಳಿಕೆ ನೀರನ್ನು ಆನೇಕಲ್ ಹಾಗೂ ಬೆಂಗಳೂರು ದಕ್ಷಿಣ ವಿಧಾನ ಸಭಾ ಕ್ಷೇತ್ರಕ್ಕೆ ವಿತರಿಸಲು ಮಾಡಿದ ಮನವಿ ಫಲ ನೀಡಿದೆ ಎಂದರು.
ನೀರಿನ ಮಾರ್ಗ: ಜಂಬೂ ಸವಾರಿ ದಿಣ್ಣೆಯಿಂದ ಬನ್ನೇರುಘಟ್ಟ ಮಾರ್ಗ, ಜಿಗಣಿ ಕೈಗಾರಿಕಾ ಪ್ರದೇಶ, ಹಾರಗದ್ದೆ ಮೂಲಕ ಸೂರ್ಯ ನಗರ 2ನೇ ಹಂತ, ಮೊದಲನೇ ಹಂತ ಹಾಗೂ ಆನೇಕಲ್ ಪಟ್ಟಣಕ್ಕೆ 15 ಎಂಎಲ್‌ಡಿ ನೀರು ಪೂರೈಸಲು ಮಂಜೂರಾತಿ ಪಡೆದಿದ್ದು ಕಾಮಗಾರಿ ಪ್ರಗತಿಯ ಹಂತದಲ್ಲಿದೆ ಪಟ್ಟಣದ ಒಳ ಚರಂಡಿ ವ್ಯವಸ್ಥೆ ಕಾಮಗಾರಿ ಬಹುತೇಕ ಮುಗಿದಿದೆ.
ರಸ್ತೆ ವಿಸ್ತರಣೆ, ನೂತನ ಮಿನಿ ಬಸ್ ಸೇವೆ, ಗ್ರಾಮಾಂತರ ಬಸ್, ಕೈಗಾರಿಕೆಗಳ ನಡುವೆ ಬಸ್ ಸಂಪರ್ಕ ಚಾಲನೆಯಲ್ಲಿದೆ. ಜೋಡಿ ರಸ್ತೆ ನಿರ್ಮಾಣ ಹಾಗೂ ಬೀದಿ ದೀಪಗಳ ಅಳವಡಿಕೆ ನನ್ನ ಕನಸಾಗಿದ್ದು ಲೋಕಸಭಾ ಚುನಾವಣೆ ನಂತರ ಅನುಷ್ಠಾನ ಮಾಡುತ್ತೇನೆ ಎಂದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement