ಕನ್ನಡ ಬಾರದ ಶಾಸಕರು ನಾಡಿಗೆ ಕಂಟಕ: ಕುಂವೀ
ದೊಡ್ಡಬಳ್ಳಾಪುರ(ಲೋಕಸೇವಾನಿರತ ಡಿ.ಕೊಂಗಾಡಿಯಪ್ಪ ವೇದಿಕೆ): ಕನ್ನಡ ಬಾರದ ಶಾಸಕರು ನಾಡಿನ ಕಂಟಕ. ಹಲವು ಬಾರಿ ಗೆದ್ದು ಮಂತ್ರಿಗಳಾದರೂ ಕನ್ನಡ ಮಾತನಾಡಲು ಬಾರದ ಜನ ರಾಜ್ಯ ಮಂತ್ರಿಮಂಡಲದಲ್ಲಿದ್ದಾರೆ ಎಂದು ಖ್ಯಾತ ಸಾಹಿತಿ ಕುಂ.ವೀರಭದ್ರಪ್ಪ ಕಿಡಿಕಾರಿದರು.
ಇಲ್ಲಿನ ದತ್ತಾತ್ರೇಯ ಕಲ್ಯಾಣ ಭವನದಲ್ಲಿ ಮಂಗಳವಾರ ಸಂಜೆ ನಡೆದ ಬೆಂಗಳೂರು ಗ್ರಾಮಾಂತರ ಜಿಲ್ಲಾ 16ನೇ ಕನ್ನಡ ಸಾಹಿತ್ಯ ಸಮ್ಮೇಳನದ ಸಮಾರೋಪ ಭಾಷಣ ಮಾಡಿದ ಅವರು, ಗುಲ್ಪರ್ಗಾ ಶಾಸಕ, ಮಂತ್ರಿ ಖಮರುಲ್ ಇಸ್ಲಾಂಗೆ ಒಂದೇ ಒಂದು ವಾಕ್ಯ ಕನ್ನಡ ಸರಿಯಾಗಿ ಮಾತನಾಡಲು ಬರಲ್ಲ. ಇಂತಹವರು ಕನ್ನಡತನಕ್ಕೆ ಅಪಾಯಕಾರಿ ಎಂದು ನೇರ ಆರೋಪ ಮಾಡಿದರು.
ಇಂಗ್ಲಿಷ್ ಬೂಟು ಇದ್ದಂತೆ: ಇದು ಅಂಗಳಕ್ಕಷ್ಟೇ ಸೀಮಿತವಾಗಬೇಕು. ಅದು ಅಡುಗೆ ಮನೆ ಹೊಕ್ಕರೆ ಅಪಾಯ ಕಟ್ಟಿಟ್ಟ ಬುತ್ತಿ. ಆದರೆ ಕನ್ನಡದ ತೆರೆದ ಮನಸ್ಸುಗಳು ಇಂಗ್ಲಿಷನ್ನು ಅಡುಗೆ ಮನೆವರೆಗೆ ಕೊಂಡೊಯ್ಯುವ ತಪ್ಪು ಮಾಡಿದ್ದಾರೆ. ಬೂಟು ಎಷ್ಟೇ ದುಬಾರಿಯಾದರೂ, ಚೆಂದವಿದ್ದರೂ ಅದು ಇರುವ ಕಡೆ ಇರಬೇಕಷ್ಟೇ.
ಇಂಗ್ಲಿಷ್ ನಮ್ಮತನ ನಾಶ ಮಾಡುತ್ತದೆ ಎಂಬುದು ಇಂಗ್ಲೆಂಡ್ ಪಕ್ಕದ ಜಕಾಸ್ಲೋವಾಕಿಯಾದ ಜನಕ್ಕೆ ಗೊತ್ತು. ಆದರೆ ಕನ್ನಡಿಗರಿಗೆ ಗೊತ್ತಾಗುತ್ತಿಲ್ಲ. ನಮ್ಮಲ್ಲಿ ಕನ್ನಡ ಮಾಧ್ಯಮದ ಸರ್ಕಾರಿ ಶಾಲೆಗಳಲ್ಲಿ ಓದಿರುವ ಜನ ಒಳ್ಳೆಯ ಮುಖ್ಯಮಂತ್ರಿಗಳಾಗಿದ್ದಾರೆಯೇ ಹೊರತು ಕಾನ್ವೆಂಟ್ ಶಿಶುಗಳಲ್ಲ ಎಂದರು. ಅಷ್ಟೇ ಅಲ್ಲ, ಮಠ ಮಾನ್ಯಗಳು ಕೂಡ ಸ್ಥಳೀಯ ಭಾಷೆಯ ಬೆಳವಣಿಗೆಗೆ ಬೆಂಬಲಿಸಬೇಕು ಎಂದು ಕರೆ ನೀಡಿದರು.
ಹಳೆಗನ್ನಡ ಹಿತೋಕ್ತಿ: ಕನ್ನಡವನ್ನು ಸ್ಪಷ್ಟವಾಗಿ ಅರಿಯಬೇಕಿದ್ದರೆ ಹಳೆಗನ್ನಡ ಕೃತಿಗಳನ್ನು ಓದಬೇಕು. ಪಂಪ, ರನ್ನರನ್ನು ಅರಗಿಸಿಕೊಳ್ಳದಿದ್ದರೆ ಕನ್ನಡ ಕಲಿಕೆ ಕಷ್ಟ. ಭಾಷಾ ದೈಹಿಕ ಶಾಸ್ತ್ರವನ್ನು ಮರೆಯದೆ, ಪರಂಪರಾಗತ ಭಾಷಿಕ ನೆಲೆಗಳ ಬಗ್ಗೆ ಸ್ಪಷ್ಟ ಅರಿವು ಪಡೆಯಬೇಕು. ಕನ್ನಡಕ್ಕೆ ಅಸ್ತಿತ್ವದ ಯಾವುದೇ ಆತಂಕಗಳಿಲ್ಲ. ಇನ್ನೂ 10 ಸಾವಿರ ವರ್ಷ ಬದುಕಬಲ್ಲ ಭಾಷೆ ಕನ್ನಡ. ಈ ವೈವಿಧ್ಯತೆ ಇತರೆ ಯಾವುದೇ ಪ್ರಾದೇಶಿಕ ಭಾಷೆಗಳಿಗೆ ಇಲ್ಲ. ಗ್ರಾಮೀಣ ಪ್ರದೇಶದ ಮಹಿಳೆ ಉಳಿದಿರುವವರೆಗೆ ಕನ್ನಡ ಉಳಿಯುತ್ತದೆ. ಕನ್ನಡಿಗರ ಸ್ವಾಭಿಮಾನ ಕೂಡ ಗಣನೀಯ. ಎಲ್ಲ ಭಾಷೆಗಳಿಗೂ ತಾಯ್ತನ ಕರುಣಿಸುವ ಉದಾರತೆ ಕನ್ನಡಕ್ಕೆ ಮಾತ್ರ ಇದೆ. ವಾಸ್ತವವಾಗಿ ಬೇರೆ ಭಾಷೆಗಳನ್ನು ಸಹಿಸಿಕೊಳ್ಳದ ಭಾಷೆ ಉದ್ದಾರ ಆಗಲ್ಲ ಎಂದು ಹೇಳಿದರು.
ಮೌಢ್ಯ ತಡೆಯಿರಿ: ಇಂದು ಮಾಧ್ಯಮಗಳು ಮೌಢ್ಯವನ್ನು ಪ್ರಚೋದಿಸುತ್ತಿವೆ. ಜ್ಯೋತಿಷ್ಯ ಕಾರ್ಯಕ್ರಮಗಳು ನಮ್ಮ ದಿನಚರಿಯನ್ನು ನಿರ್ಧರಿಸುತ್ತಿವೆ. ಅನಾಚಾರಕ್ಕೆ ಪ್ರಚೋದಿಸುವ ಈ ಬಗೆಯ ಕೃತ್ಯಗಳ ವಿರುದ್ಧ ಜನ ಸಿಡಿದೇಳಬೇಕು. ಸ್ವಯಂ ಘೋಷಿತ ದೇವಮಾನವರು ಹುಟ್ಟಿಕೊಳ್ಳುವ ವಿಶ್ವದ ಅನನ್ಯ ದೇಶ ಭಾರತ ಎಂಬುದು ವಿಷಾದನೀಯ ಎಂದ ಅವರು ದೊಡ್ಡಬಳ್ಳಾಪುರದ ಸ್ಥಳೀಯ ಚಿಂತನೆಗಳು ಮತ್ತು ಐತಿಹ್ಯದ ಬಗ್ಗೆ ಪ್ರಸ್ತಾಪಿಸಿದರು.
ಸನ್ಮಾನ: ಇದೇ ಸಂದರ್ಭದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸಿದ ದೊಡ್ಡಬಳ್ಳಾಪುರದ ಪಿ.ಜಿ.ಸುಬ್ಬರಾವ್, ಕೆಂಪಹನುಮಯ್ಯ, ಎಸ್.ಸಿ.ಜಗದೀಶ್, ಅಂಜುಳಮ್ಮ, ಹೊಸಕೋಟೆಯ ಕೆ.ಮಂಜುನಾಥ್, ನಾರಾಯಣಮೂರ್ತಿ, ದೇವನಹಳ್ಳಿಯ ಆರ್.ರಮೇಶ್, ಮುಕುಂದರಾವ್, ನೆಲಮಂಗಲದ ಎನ್.ಜಿ.ಗೋಪಾಲ್, ಬಿ.ರಾಮಯ್ಯ ಅವರನ್ನು ಸನ್ಮಾನಿಸಲಾಯಿತು. ಸಮ್ಮೇಳನಾಧ್ಯಕ್ಷ ವಿಜ್ಞಾನ ಬರೆಹಗಾರ ಡಾ.ಎ.ಓ.ಆವಲಮೂರ್ತಿ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಕನ್ನಡ ಪ್ರಾಧ್ಯಾಪಕ ಪ್ರೊ.ಎಂ.ಜಿ.ಚಂದ್ರಶೇಖರಯ್ಯ, ಜಿಲ್ಲಾ ಕಸಾಪ ಅಧ್ಯಕ್ಷ ಹುಲಿಕಲ್ ನಟರಾಜ್, ಕಜಾಪ ಮಾಜಿ ಅಧ್ಯಕ್ಷ ಎಂ.ಕೃಷ್ಣಮೂರ್ತಿ ಮಾತನಾಡಿದರು. ತಾಲೂಕು ಸಮ್ಮೇಳನಾಧ್ಯಕ್ಷ ಖಲೀಲುಲ್ಲಾಖಾನ್, ಜಿಲ್ಲಾ ಕಸಾಪ ಮಾಜಿ ಅಧ್ಯಕ್ಷ ನಾಗಪ್ರಿಯ, ತಾ.ಕಸಾಪ ಮಾಜಿ ಅಧ್ಯಕ್ಷ ಬಾ.ರಾ.ನರಸಿಂಹಮೂರ್ತಿ, ಪ್ರೊ.ಚಂದ್ರಪ್ಪ, ಡಾ.ಬಿ.ನರಸಿಂಹಮೂರ್ತಿ, ಕೆ.ಆರ್.ರವಿಕಿರಣ್, ಅಧ್ಯಕ್ಷ ಡಿ.ಶ್ರೀಕಾಂತ್, ಜಿಲ್ಲಾ ಕಾರ್ಯದರ್ಶಿ ಕೆ.ಮಹಾಲಿಂಗಯ್ಯ, ಸದಾನಂದಾರಾಧ್ಯ, ನ.ಮಹದೇವ್ ಇದ್ದರು.
ಎತ್ತಿನಹೊಳೆಯಿಂದ ಬಯಲುಸೀಮೆ ದಾಹ ತಣಿಯದು
ದೊಡ್ಡಬಳಾಪುರ(ಲೋಕಸೇವಾನಿರತ ಡಿ.ಕೊಂಗಾಡಿಯಪ್ಪ ವೇದಿಕೆ): ಎತ್ತಿನಹೊಳೆ ಯೋಜನೆಯಿಂದ ಬರುವ ನೀರು ಬಯಲುಸೀಮೆಯ ದಾಹ ತಣಿಸದು. ಸರ್ಕಾರ ಈ ವಿಚಾರದಲ್ಲಿ ಆತುರದ ಮತ್ತು ಸ್ವಾರ್ಥದ ನಿರ್ಧಾರ ಕೈಗೊಳ್ಳುವುದನ್ನು ಬಿಡಬೇಕು ಎಂದು ನೀರಾವರಿ ತಜ್ಞ ಡಾ.ಜಿ.ಎಸ್.ಪರಮಶಿವಯ್ಯ ಹೇಳಿದ್ದಾರೆ.
ಇಲ್ಲಿನ ದತ್ತಾತ್ರೇಯ ಕಲ್ಯಾಣ ಮಂದಿರದಲ್ಲಿ ನಡೆಯುತ್ತಿರುವ ಬೆಂಗಳೂರು ಗ್ರಾಮಾಂತರ ಜಿಲ್ಲಾ 16ನೇ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಅವರು ನೀರಾವರಿ ವಿಚಾರಗಳ ಕುರಿತು ಮಾತನಾಡಿದರು.
ಇದೇ ಸಂದರ್ಭದಲ್ಲಿ ಅವರು ಜನರೊಂದಿಗೆ ಮುಕ್ತ ಸಂವಾದ ನಡೆಸಿ ಸರ್ಕಾರದ ನೀರಾವರಿ ಯೋಜನೆಗಳ ಅವೈಜ್ಞಾನಿಕತೆ ಬಗ್ಗೆ ಕಿಡಿ ಕಾರಿದರು.
ಎತ್ತಿನಹೊಳೆ ಯೋಜನೆ ವ್ಯರ್ಥವಾಗಿ ಹಣ ಪೋಲು ಮಾಡಲು ಕಂಡುಕೊಂಡಿರುವ ಮಾರ್ಗ ಎಂದು ನೇರ ಆರೋಪ ಮಾಡಿರುವ ಅವರು, ಸರ್ಕಾರದ ಅಂಕಿ-ಅಂಶಗಳ ಪ್ರಕಾರವೇ ನಮಗೆ ಎತ್ತಿನಹೊಳೆಯಿಂದ 15.8 ಟಿಎಂಸಿ ನೀರು ಲಭ್ಯವಿದೆ. ಆದರೆ ಇದಕ್ಕೆ ಬರೋಬ್ಬರಿ 4 ಸಾವಿರ ಕೋಟಿ ವ್ಯಯಿಸಲಾಗುತ್ತಿದೆ. ಆದರೆ ಅದಕ್ಕೆ ಪರ್ಯಾಯವಾಗಿ ಸಿದ್ಧಪಡಿಸಿರುವ ವೈಜ್ಞಾನಿಕ ಯೋಜನೆಯೊಂದರ ಮೂಲಕ 24 ಟಿಎಂಸಿ ನೀರನ್ನು ಪೈಲಟ್ ಯೋಜನೆ ಜಾರಿಗೊಳಿಸಿದರೆ ಕೇವಲ 700 ಕೋಟಿ ವೆಚ್ಚದಲ್ಲಿ ಬಯಲುಸೀಮೆಗೆ ಶೀಘ್ರವಾಗಿಯೇ ನೀರನ್ನು ಕೊಡಬಹುದು ಎಂದು ವಿಶ್ಲೇಷಿಸಿದರು.
ಇದು ನದಿ ತಿರುವು ಯೋಜನೆಯಲ್ಲ: ವಾಸ್ತವವಾಗಿ ಇದು ನದಿ ತಿರುವು ಯೋಜನೆಯಲ್ಲ. ಜನರನ್ನು ದಿಕ್ಕುತಪ್ಪಿಸುವ ಯತ್ನ ನಡೆಯುತ್ತಿದೆ ಎಂದ ಅವರು ಸಕಲೇಶಪುರದಿಂದ ನೀರು ತರುವುದರಿಂದ ಪಶ್ಚಿಮಘಟ್ಟಗಳಿಗೆ ಯಾವ ಕಾರಣಕ್ಕೂ ಪರಿಸರದ ಹಾನಿ ಸಂಭವಿಸುವುದಿಲ್ಲ. ಪಶ್ಚಿಮ ಘಟ್ಟ ವ್ಯಾಪ್ತಿಯ ಕೆಲವೇ ಕಿ.ಮೀಗಳಿಂದ ನೀರು ತರುವ ಯೋಜನೆ ಇದಾಗಿದೆ. ಹೀಗಿರುವಾಗ ಅನಗತ್ಯವಾಗಿ ಪರಿಸರ ಕುರಿತಾದ ಹೇಳಿಕೆಗಳನ್ನು ಕೊಡುವುದು ಬೇಡ. ಕರಾವಳಿ ಜನರ ನೀರಿನ ಬಟ್ಟಲಿಗೆ ನಾವು ಕೈ ಹಾಕಿಲ್ಲ. ಅಧಿಕವಾಗಿರುವ ನೀರನ್ನು ಮಾತ್ರ ಇತ್ತ ತರುವ ಪ್ರಯತ್ನ ಅಷ್ಟೇ. ಎತ್ತಿನಹೊಳೆ ಮೂಲಕ ಬಯಲುಸೀಮೆ ಜಿಲ್ಲೆಗಳಿಗೆ ನೀರಾವರಿ ಅಸಾಧ್ಯ ಎಂದರು.
ನಮಗೆ ಪೇಪರ್ ಪ್ರಾಜೆಕ್ಟ್ ಬೇಡ. ಸರ್ಕಾರಕ್ಕೆ ನೈತಿಕತೆ ಇದ್ದರೆ ವಸ್ತುರೂಪದಲ್ಲಿ ಯೋಜನೆ ಜಾರಿಗೊಳಿಸುವ ಪ್ರಯತ್ನ ಮಾಡಲಿ ಎಂದ ಅವರು ಗೋದಾವರಿ, ಮಹದಾಯಿ ನದಿಯಿಂದ ಸಮುದ್ರ ಸೇರುತ್ತಿರುವ 925 ಟಿಎಂಸಿ ನೀರನ್ನು ದಕ್ಷಿಣ ಭಾರತಕ್ಕೆ ಹರಿಸಲು ಯೋಜನೆ ತಯಾರಾಗಿದೆ. ಅದರಲ್ಲಿ ಕರ್ನಾಟಕಕ್ಕೆ ಕೂಡ ಸಾಕಷ್ಟು ನೀರು ಲಭ್ಯವಾಗುತ್ತದೆ. ಆದರೆ ಆ ಯೋಜನೆ ಅನುಷ್ಠಾನ ಅಷ್ಟು ಸುಲಭವಲ್ಲ.
ಉತ್ತರದಲ್ಲಿ ಬೇಸಿಗೆಯಲ್ಲೂ ಹರಿಯುವ ನದಿಗಳ ನೀರು ದಕ್ಷಿಣಕ್ಕೆ ಹರಿಸುವುದು ಒಳ್ಳೆಯದೇ. ಕಾವೇರಿ-ತುಂಗಭದ್ರ ನದಿಗಳ ಹೆಚ್ಚುವರಿ ನೀರನ್ನು ಬಳಕೆ ಮಾಡಿಕೊಳ್ಳುವ ಬಗ್ಗೆಯೂ ಚಿಂತಿಸಬೇಕು ಎಂದರು.
ಸಿಎಂ ಸಭೆ ಕರೆಯಲಿ: ರಾಜ್ಯದ ನೀರಾವರಿ ಯೋಜನೆಗಳ ಬಗ್ಗೆ ಮತ್ತು ಬಯಲುಸೀಮೆ ಜಿಲ್ಲೆಗಳಿಗೆ ಪರಮಶಿವಯ್ಯ ವರದಿ ಜಾರಿಯಿಂದಾಗುವ ಪ್ರಯೋಜನ ಮತ್ತು ಈ ಬಗ್ಗೆ ಹುಟ್ಟಿಕೊಂಡಿರುವ ತಪ್ಪುಕಲ್ಪನೆಗಳ ಬಗ್ಗೆ ಚರ್ಚಿಸಲು ಮುಖ್ಯಮಂತ್ರಿಗಳು ಈ ಕೂಡಲೇ ಸಭೆ ಕರೆಯಲಿ. ನಾನೂ ಸಭೆಯಲ್ಲಿ ಭಾಗವಹಿಸಿ ವಸ್ತು-ಸ್ಥಿತಿಗಳನ್ನು ಪರಿಪೂರ್ಣವಾಗಿ ವಿವರಿಸುತ್ತೇನೆ. ಆದರೆ ಅವರಿಗೆ ಸಭೆ ಕರೆಯಲೂ ಮನಸ್ಸಿದ್ದಂತಿಲ್ಲ ಎಂದು ಆರೋಪಿಸಿದರು. ಇದೇ ಸಂದರ್ಭದಲ್ಲಿ ದೊಡ್‌ಡಬಳ್ಳಾಪುರದ ಹಲವಾರು ನೀರಾವರಿ ಹೋರಾಟಗಾರರು ಮತ್ತು ಸಂಘಟನೆಗಳ ಪ್ರಮುಖರು ಹಾಜರಿದ್ದರು.