ಟಿ.ಹೊಸಹಳ್ಳಿ ಗ್ರಾಪಂ ಅಧ್ಯಕ್ಷೆ ವಿರುದ್ಧ ಅವಿಶ್ವಾಸ ನಿರ್ಣಯ
ಕನಕಪುರ: ತಾಲೂಕು ಟಿ.ಹೊಸಹಳ್ಳಿ ಗ್ರಾಪಂ ಅಧ್ಯಕ್ಷೆ ಸುಧಾಕುಮಾರ್ ವಿರುದ್ಧ ಅವಿಶ್ವಾಸ ನಿರ್ಣಯ ಮಂಡನೆ ಸಭೆ ಉಪವಿಭಾಗಾಧಿಕಾರಿ ಬಿ.ಎಚ್.ಸಿದ್ಧಪ್ಪ ಅಧ್ಯಕ್ಷತೆಯಲ್ಲಿ ನಡೆಯಿತು. ಟಿ.ಹೊಸಹಳ್ಳಿ ಗ್ರಾಪಂನಲ್ಲಿ 18 ಸದಸ್ಯ ಬಲವಿದ್ದು 15 ಚುನಾಯಿತ ಸದಸ್ಯರು ಅಧ್ಯಕ್ಷೆ ವಿರುದ್ಧ ಅವಿಶ್ವಾಸ ನಿರ್ಣಯ ಮಂಡಿಸಿದರು. ಪಕ್ಷದ ಆಂತರಿಕ ಒಡಂಬಡಿಕೆಯಂತೆ ಎರಡನೇ ಅವಧಿಗೆ ಅಧಿಕಾರ ಬಿಟ್ಟುಕೊಡದ ಅಧ್ಯಕ್ಷೆ ವಿರುದ್ಧ 8 ಸದಸ್ಯರು ಲಿಖಿತವಾಗಿ ಉಪವಿಭಾಗಾಧಿಕಾರಿಗೆ ದೂರು ಸಲ್ಲಿಸಿದ್ದರು. ಮಂಗಳವಾರ ನಡೆದ ಸಭೆಯಲ್ಲಿ ಹಾಜರಿದ್ದ ಸದಸ್ಯರಲ್ಲಿ 15 ಮಂದಿ ಹಾಜರಾಗಿ ಅಧ್ಯಕ್ಷರ ವಿರುದ್ಧ ಕೈಎತ್ತುವ ಮೂಲಕ ವಿರೋಧ ವ್ಯಕ್ತಪಡಿಸಿದರು. ಉಳಿದ ಮೂವರು ಸದಸ್ಯರು ಗೈರುಹಾಜರಾಗಿದ್ದರು. ಅವಿಶ್ವಾಸ ನಿರ್ಣಯ ಗೊತ್ತುವಳಿ ಅಂಗೀಕಾರವಾಗುತ್ತಿದ್ದಂತೆ ಉಪವಿಭಾಗಾಧಿಕಾರಿ ಸಿದ್ಧಪ್ಪ ಹಾಲಿ ಅಧ್ಯಕ್ಷೆ ಸುಧಾ ಕುಮಾರ್ಗೆ ನೊಟೀಸ್ ಜಾರಿಮಾಡಿ ಪಂಚಾಯತ್ ದಾಖಲೆಗಳನ್ನು ತಕ್ಷಣವೇ ಕಚೇರಿಗೆ ಮರಳಿಸಬೇಕೆಂದು ಆದೇಶಿಸಿದರು. ಜಿಪಂ ಸದಸ್ಯೆ ಗೀತಾಈಶ್ವರ್, ಕರಿಯಪ್ಪ,ನಾಗೇಶ್, ಕೆಂಪೇಗೌಡ, ರಾಜು, ರಾಮಕೃಷ್ಣ, ಶಿವಾನಂದ ಪಾಲ್ಗೊಂಡಿದ್ದರು. ಆರಕ್ಷಕ ವೃತ್ತ ನಿರೀಕ್ಷಕ ಮಾರುತಿ ಸಭೆಯಲ್ಲಿ ಪಾಲ್ಗೊಂಡು ಸೂಕ್ತ ಬಂದೋಬಸ್ತ್ ನಿರ್ವಹಿಸಿದರು. ಪಂಚಾಯತ್ ಅಭಿವೃದ್ಧಿ ಅಧಿಕಾರಿ ಮುನಿರಾಜು ಕಲಾಪಗಳನ್ನು ನಿರ್ವಹಿಸಿದರು.