ರು. 192 ಕೋಟಿ ವೆಚ್ಚದ ಅಭಿವೃದ್ಧಿ ಕಾಮಗಾರಿಗೆ ಸಚಿವರಿಂದ ಚಾಲನೆ
ಆನೇಕಲ್: ಚುನಾವಣೆ ಪ್ರಣಾಳಿಕೆಯಲ್ಲಿ ನೀಡಿದ ಬಹುತೇಕ ಆಶ್ವಾಸನೆಗಳನ್ನು ಈಡೇರಿಸಿದ ತೃಪ್ತಿ ಕಾಂಗ್ರೆಸ್ ಪಕ್ಷಕ್ಕಿದೆ. ಮುಂಬರುವ ಲೋಕಸಭೆ ಚುನಾವಣೆಯಲ್ಲೂ ಇದೇ ವಚನ ಪಾಲಿಸಲಾಗುವುದು ಎಂದು ಸಾರಿಗೆ ಸಚಿವ ಆರ್. ರಾಮಲಿಂಗಾರೆಡ್ಡಿ ತಿಳಿಸಿದರು.
ಅವರು ಆನೇಕಲ್ಲಿನ ಶ್ರೀರಾಮ ಕುಟೀರದಲ್ಲಿ ಅಂದಾಜು 192 ಕೋಟಿ ರು. ವೆಚ್ಚದ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಿ ಮಾತನಾಡಿದರು. ರಾಜಕಾರಣದಿಂದ ದೂರ ಉಳಿದ ಕೆಲ ಶಕ್ತಿಗಳು ತಾವು ಮಾಡಲಾಗದ ಕೆಲಸವನ್ನು ಕಾಂಗ್ರೆಸ್ ಸರ್ಕಾರ ನಿಜ ಮಾಡಿ ತೋರಿಸುತ್ತಿರುವುದನ್ನು ಸಹಿಸಲು ಆಗುತ್ತಿಲ್ಲ. ಬಜೆಟ್ ಸೇರಿದಂತೆ ಏನೇ ಅಭಿವೃದ್ಧಿ ಕಾಮಗಾರಿ ಮಾಡಿದರೂ ಚುನಾವಣಾ ಗಿಮಿಕ್ ಎಂಬ ಗಿಣಿ ಪಾಠ ಹೇಳುತ್ತಾರೆ. ಕಾಂಗ್ರೆಸ್ ಮುಖ್ಯ ಮಂತ್ರಿ, ಮಂತ್ರಿಗಳು ತಾವು ಏನೂ ಮಾಡಲು ಸಾಧ್ಯವೋ ಅದನ್ನು ಮಾತ್ರ ಹೇಳುತ್ತಾರೆ. ಅಷ್ಟೇ ಅಲ್ಲ ಮಾಡಿಯೇ ತೀರುತ್ತಾರೆ. ಕಾಂಗ್ರೆಸ್ ಬಗ್ಗೆ ಅಪನಂಬಿಕೆ ಬೇಡ. ಜನಪರ ಕೆಲಸ ಮಾಡಲು ಬೇಕಿರುವುದು ಇಚ್ಛಾಶಕ್ತಿಯೇ ಹೊರತು ಹೇಳಿಕೆಗಳ ಮೂಲಕ ಜನರ ದಾರಿ ತಪ್ಪಿಸುವುದಲ್ಲ ಎಂದು ಬಿಜೆಪಿಯನ್ನು ಪರೋಕ್ಷವಾಗಿ ತರಾಟೆಗೆ ತೆಗೆದುಕೊಂಡರು.
ಇಂಧನ ಸಚಿವ ಡಿ.ಕೆ. ಶಿವಕುಮಾರ್ ಮಾತನಾಡಿ ಕಾಂಗ್ರೆಸ್ ಎಂದಿಗೂ ದೀನ ದಲಿತರು ಸೇರಿದಂತೆ ಎಲ್ಲ ವರ್ಗದ ಬಡ ಜನತೆಯ ಪರವಾಗಿದೆ. ಹಿಂದಿನ ಸರ್ಕಾರವು ಜನರಿಗೆ ಉಚಿತ ನಿವೇಶನ ನೀಡಲಾಗಲಿಲ್ಲ. ರೈತರ ಬಡ್ಡಿ, ಅಸಲು ಸೇರಿದಂತೆ ಸಾಲ ಮನ್ನಾ ಮಾಡಲಾಗಲಿಲ್ಲ. ಹಲವಾರು ಯೋಜನೆಗಳ ಬಗ್ಗೆ ಮಾಧ್ಯಮದ ಮೂಲಕ ಪ್ರಚಾರ ಪಡೆದರು. ಆದರೇ ಜಾರಿಗೆ ಹಂತಕ್ಕೆ ತರಲು ಇಚ್ಛಾಶಕ್ತಿ ಹಾಗೂ ಅನುಭವದ ಕೊರತೆಯಿಂದಾಗಿ ಎಡವಿದರು ಎಂದರು.
ಆನೇಕಲ್ ತಾಲೂಕಿಗೆ ಕೆಎಚ್‌ಬಿ ಹಾಗೂ ಜಲ ಮಂಡಳಿ ಜೊತೆ ಜಂಟಿ ಚರ್ಚೆ ನಡೆಸಿ ಶಾಶ್ವತ ಕುಡಿಯುವ ನೀರನ್ನು ಪೂರೈಸಲು ಟೆಂಡರ್ ಹಂತ ದಾಟಿದೆ. ಕಾಮಗಾರಿಗೆ ಗರಿಷ್ಠ 6 ತಿಂಗಳು ಅವಧಿ ನೀಡಲಾಗಿದೆ. ತಾಲೂಕಿಗೆ ನಿರಂತರ ವಿದ್ಯುತ್ ಪೂರೈಸುವ ಸಲುವಾಗಿ 66-11 ಕೆವಿ ಸಾಮರ್ಥ್ಯದ ಎರಡು ವಿದ್ಯುತ್ ಫೀಡರ್ ಪಾಯಿಂಟ್‌ಗಳ ನಿರ್ಮಾಣ ಮಾಡಲಾಗಿದೆ.
ಉತ್ತರದ ದಾಮೋದರ ವ್ಯಾಲಿಯಿಂದ ರು. 4-50 ತಲಾ ಯುನಿಟ್‌ನಂತೆ ವಿದ್ಯುತ್ ಖರೀದಿ ಒಪ್ಪಂದಕ್ಕೆ ಸಹಿ ಮಾಡಲಾಗಿದೆ. 24 ಗಂಟೆ ವಿದ್ಯುತ್ ಪೂರೈಕೆ ರಾಜ್ಯವನ್ನಾಗಿ ಮಾಡಿ ಮೂಲಭೂತ ಸೌಕರ್ಯಗಳನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ನೀಡಿ ಉದ್ಯಮಿಗಳನ್ನು ಆಕರ್ಷಿಸಿ ಉದ್ಯೋಗಾವಕಾಶಗಳನ್ನು ಹೆಚ್ಚಿಸುವ ಮುಂದಾಲೋಚನೆ ಇದೆ ಎಂದು ತಿಳಿಸಿದರು.
ವೇದಿಕೆಯಲ್ಲಿ ಸಂಸದ ಡಿ.ಕೆ.ಸುರೇಶ್, ಮೇಲ್ಮನೆ ಸದಸ್ಯ ಬಿ.ಟಿ. ದಯಾನಂದ, ಶಾಸಕ ಬಿ.ಶಿವಣ್ಣ, ಬೆಂಗಳೂರು ನಗರ ಜಿಲ್ಲಾ ಪಂಚಾಯ್ತಿ ಅಧ್ಯಕ್ಷೆ ಇಂದಿರಮ್ಮ ನಾಗರಾಜು, ತಾಪಂ ಅಧ್ಯಕ್ಷ ಅಮ್ಜದ್‌ಪಾಷ, ಪುರಸಭಾ ಸದಸ್ಯರು, ಜಿಲ್ಲಾ ಪಂಚಾಯ್ತಿ ಸದಸ್ಯರು ಸೇರಿಂದಂತೆ ಚುನಾಯಿತ ಪ್ರತಿನಿಧಿಗಳು ಹಾಗೂ ವಿವಿಧ ಇಲಾಖಾ ಅಧಿಕಾರಿಗಳಿದ್ದರು.