'ಅಧಿಕಾರ ಸಿಕ್ಕ ಮೇಲೆ ಲೂಟಿ ಹೊಡೆಯುವುದು ಕಾಂಗ್ರೆಸ್ ಸಂಸ್ಕೃತಿ'
ಸೂಲಿಬೆಲೆ: ಅಭಿವೃದ್ಧಿಯ ಹೆಸರಿನಲ್ಲಿ ಮತಪಡೆದ ಅಧಿಕಾರ ಸಿಕ್ಕ ಮೇಲೆ ದೇಶದ ಸಂಪತ್ತು ಲೂಟಿ ಮಾಡುವುದು ಕಾಂಗ್ರೆಸ್ ಸಂಸ್ಕೃತಿಯಾಗಿದೆ. ದೇಶದ ಭದ್ರತೆ ಮತ್ತು ಅಭಿವೃದ್ಧಿಗೆ ಮೋದಿಯೇ ಸೂಕ್ತ. ಅವರನ್ನು ಪ್ರಧಾನಿ ಮಂತ್ರಿಯನ್ನಾಗಿಸಲು ಮತದಾರರು ಮುಂದಾಗುವ ಮೂಲಕ ಕಾಂಗ್ರೆಸ್ಸಿಗರನ್ನು ಮನೆಗೆ ಕಳುಹಿಸಬೇಕು ಎಂದು ಎಂದು ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಿ.ಎನ್. ಬಚ್ಚೇಗೌಡ ಯುಪಿಎ ವಿರುದ್ಧ ವಾಗ್ದಾಳಿ ನಡೆಸಿದರು.
ಇಲ್ಲಿನ ಸಂತೆ ಮೈದಾನದಲ್ಲಿ ಭಾನುವಾರ ಸಂಜೆ ಹಮ್ಮಿಕೊಂಡಿದ್ದ ಹೋಬಳಿ ಮಟ್ಟದ ಕಾರ್ಯಕರ್ತರ ಸಭೆಯನ್ನು ಉದ್ಘಾಟಿಸಿ ಮಾತನಾಡಿದರು. ದಲಿತರು, ಮುಸ್ಲಿಂ ಚುನಾವಣೆ ಸಮಯದಲ್ಲಿ ಮಾತ್ರ ಕಾಂಗ್ರೆಸ್‌ಗೆ ಜ್ಞಾಪಕಕ್ಕೆ ಬರುತ್ತಿದ್ದು, ಓಟ್ ಬ್ಯಾಂಕ್ ಭದ್ರ ಪಡೆಸಿಕೊಳ್ಳಲು ಜಾತಿಗಳನ್ನು ಎತ್ತಿಕಟ್ಟುವ ಕೆಲಸ ಕಾಂಗ್ರೆಸ್ ಮಾಡುತ್ತಿದೆ. ಸುಳ್ಳಿನ ಸರದಾರ ವೀರಪ್ಪ ಮೊಯ್ಲಿ ಚಿಕ್ಕಬಳ್ಳಾಪುರ ಕ್ಷೇತ್ರದಲ್ಲಿ ಮಾಡಿದ ಅಭಿವೃದ್ಧಿ ಶೂನ್ಯ. ಮೋದಿಗೆ ಹೆಚ್ಚಿನ ಬೆಂಬಲ ದೊರಕಿದ್ದು, ಈಗಾಗಲೇ ಎಲ್ಲ ಸಮೀಕ್ಷೆಗಳಿಂದ ಹೊರ ಬಂದಿದೆ. ಬಹುಮತದೊಂದಿಗೆ ಬಚ್ಚೇಗೌಡರನ್ನು ಗೆಲ್ಲಿಸುವಂತೆ ಕರೆಯಿತ್ತರು.
ಸುಳ್ಳಿನ ಸರದಾರ ಪ್ರಶಸ್ತಿ ಕೊಡಬೇಕು: ಸುಳ್ಳುಗಾರರಿಗೆ ನೋಬಲ್ ಪ್ರಶಸ್ತಿ ಕೊಡಬಹುದು ಎಂದಾದರೇ ವೀರಪ್ಪ ಮೊಯ್ಲಿ ಹೆಸರನ್ನು ಸೂಚಿಸಬಹುದು. ಕಾರ್ಕಳದಲ್ಲಿ 3 ಬಾರಿ ಸೋತ ಮೊಯ್ಲಿಗೆ ಚಿಕ್ಕಬಳ್ಳಾಪುರ ಕ್ಷೇತ್ರದ ಮತದಾರರು ರಾಜಕೀಯ ಪುನರ್ ಜನ್ಮ ನೀಡಿದರೂ ಈತ ಕ್ಷೇತ್ರದ ಜನರ ವಿಶ್ವಾಸವನ್ನು ಉಳಿಸಿಕೊಳ್ಳುವಲ್ಲಿ ವಿಫಲರಾಗಿದ್ದು, ಈ ಬಾರಿ ಗಂಟು ಮೂಟೆ ಕಟ್ಟಿ ಕಳುಹಿಸಿ ಎಂದರು.
ಜಾತಿ ಹೆಸರಿನಲ್ಲಿ ದೇಶ ಒಡೆಯವ ಕೆಲಸ: ಚುನಾವಣೆಗಳು ಹತ್ತಿರವಾಗುತ್ತಿದಂತೆ ಕಾಂಗ್ರೆಸ್ಸಿಗರಿಗೆ ದಲಿತರು, ಮುಸ್ಲಿಮರ ಮೇಲೆ ವಿಶೇಷ ಪ್ರೀತಿ ಬರುತ್ತದೆ. ಬಿಜೆಪಿಯದ್ದು ಕೋಮವಾದ ಎಂದು ಮುಸ್ಲಿಮರನ್ನು ಎತ್ತಿಕಟ್ಟಿ ಮತ ಪಡೆಯುವ ಕಾಂಗ್ರೆಸ್ ಅಧಿಕಾರ ಸಿಕ್ಕ ನಂತರ ಎಲ್ಲರನ್ನು ಮರೆತು ಹಣ ಲೂಟಿ ಹೊಡೆಯುವುದರಲ್ಲಿ ನಿರತವಾಗುತ್ತದೆ. ಕಳೆದ 10 ವರ್ಷಗಳಲ್ಲಿ ಸಾವಿರಾರು ಕೋಟಿ ಹಗರಣಗಳ ಮೂಲಕ ನಡೆಸಿದ ಕೀರ್ತಿ ಕಾಂಗ್ರೆಸ್ಸಿಗೆ ಸಲ್ಲುತ್ತದೆ. ಮೋದಿ ಸದೃಢ ಭಾರತ ಕಟ್ಟಲು ಉತ್ತಮ ಸಾರಥಿಯಾಗಲು ಸಾಧ್ಯ. ಬಚ್ಚೇಗೌಡರಿಗೆ ಅವಕಾಶ ಕೊಡಿ. ಬದಲಾವಣಿ ತನ್ನಿ ಎಂದು ದೇವನಹಳ್ಳಿಯ ಮಾಜಿ ಶಾಸಕ ಚಂದ್ರಣ್ಣ ಹೇಳಿದರು. ಇದೇ ವೇಳೆ ಕಾಂಗ್ರೆಸ್ ತೊರೆದು ತಾಪಂ ಮಾಜಿ ಸದಸ್ಯ ಚನ್ನಪ್ಪ, ಇಮ್ರಾನ್ ಮೊದಲಾದವರು ಬಿಜೆಪಿ ಸೇರಿದರು. ಹೋಬಳಿ ಬಿಜೆಪಿ ಅಧ್ಯಕ್ಷ ಬಿ.ಎನ್. ಗೋಪಾಲಗೌಡ, ಬಿಜೆಪಿ ತಾ.ಅಧ್ಯಕ್ಷ ಮುನಿಯಪ್ಪ ಹಾಜರಿದ್ದರು.