'ಕುಡಿತದಿಂದ ಆರ್ಥಿಕ ಹಾನಿ'
ನೆಲಮಂಗಲ: ಕುಡಿತ ಆರ್ಥಿಕ ಹಾನಿಯನ್ನುಂಟು ಮಾಡುತ್ತದೆ ಎಂದು ವಿಶ್ರಾಂತ ತಾಲೂಕು ವೈದ್ಯಾಧಿಕಾರಿ ಹಾಗೂ ಲೈಂಗಿಕ ರೋಗ ತಜ್ಞ ಡಾ.ಜಿ.ಎ.ವೆಂಕಟೇಶಲು ತಿಳಿಸಿದರು.
ಅವರು ಸೋಮವಾರ ತಾಲೂಕಿನ ಯಂಟಗಾನಹಳ್ಳಿ ಸರ್ಕಾರಿ ಪದವಿ ಪೂರ್ವ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನಾ ಘಟಕವು ರಾಜ್ಯ ಮದ್ಯಪಾನ ಸಂಯಮ ಮಂಡಳಿ ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲಾ
ವಾರ್ತಾ ಇಲಾಖೆಯ ಸಹಯೋಗದಲ್ಲಿ ಏರ್ಪಡಿಸಿದ್ದ ಮದ್ಯಪಾನ ಒಂದು ಪಾತಕ ವಿಷಯ ಕುರಿತು ಉಪನ್ಯಾಸ ನೀಡಿದರು.
ಸಟೋರಿಯಸ್ ಕಂಪನಿ ವತಿಯಿಂದ 1 ಲಕ್ಷ ಮೌಲ್ಯದ ವಿಜ್ಞಾನ ಉಪಕರಣಗಳನ್ನು ಕಾಲೇಜಿಗೆ ಕೊಡುಗೆಯಾಗಿ ಕಂಪನಿಯ ವ್ಯವಸ್ಥಾಪಕ ಮುಖ್ಯಸ್ಥ ಆಂಥೋನಿ ನೀಡಿದರು. ಸಂಶೋಧನಾ ವಿಭಾಗದ ಮುಖ್ಯಸ್ಥ ಡಾ.ಅಶೋಕ ಮುಂಡರಗಿ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ ಪ್ರವೇಶ ಪತ್ರ ವಿತರಿಸಿದರು.
ಉಪಮುಖ್ಯ ವ್ಯವಸ್ಥಾಪಕ ಎಂ.ಜಿ. ಉದಯಕುಮಾರ್ ಭೌತಶಾಸ್ತ್ರದ ಉಪಕರಣಗಳನ್ನು ವಿತರಿಸಿ ಸಮಯ ನಿರ್ವಹಣೆ ಬಗ್ಗೆ ಮಾತನಾಡಿದರು. ಪ್ರಾಂಶುಪಾಲ ಎಂ.ವಿ. ನೆಗಳೂರ ಅಧ್ಯಕ್ಷತೆ ವಹಿಸಿದ್ದರು. ಯೋಜನಾಧಿಕಾರಿ ಮಧುಸೂಧನ್.ಬಿ ಕುಡಿತದ ದುಷ್ಪರಿಣಾಮಗಳನ್ನು ವಿವರಿಸಿದರು. ಉಪನ್ಯಾಸಕ ಲೋಕೇಶಪ್ಪ ಮೂಲ ವಿಜ್ಞಾನದ ಅಧ್ಯಯನದ ಮಹತ್ವ ತಿಳಿಸಿದರು. ಕಾಲೇಜು ಅಭಿವೃದ್ಧಿ ಸಮಿತಿಯ ಉಪಾಧ್ಯಕ್ಷ ಜಿ. ಸಂಪತ್, ಗ್ರಾಮ ಪಂಚಾಯ್ತಿ ಅಧ್ಯಕ್ಷ ಕೆ.ಎನ್. ಸುರೇಶ್, ಡೈರಿ ಅಧ್ಯಕ್ಷ ಹನುಮಯ್ಯ ಮುಖ್ಯ ಶಿಕ್ಷಕ ಡಿ. ಶ್ರೀನಿವಾಸಯ್ಯ ಇದ್ದರು.
ಮಹಿಳೆಯ ಸರ ಕಸಿದು ಪರಾರಿ
ಚನ್ನಪಟ್ಟಣ: ಕಾರು ಹತ್ತುತ್ತಿದ್ದ ಮಹಿಳೆಯ ಕುತ್ತಿಗೆಯಲ್ಲಿದ್ದ ಸರವನ್ನು ಕಸಿದಿರುವ ಘಟನೆ ತಾಲೂಕಿನ ಮತ್ತೀಕೆರೆ ಸಮೀಪದ ಇಂದ್ರಧನುಷ್ ಹೊಟೇಲ್ ಬಳಿ ಭಾನುವಾರ ರಾತ್ರಿ ಸಂಭವಿಸಿದೆ. ಪಟ್ಟಣದ 2ನೇ ಕ್ರಾಸ್ನ ವಾಸಿ ದಿವ್ಯಾ ಎಂಬುವರು ತಮ್ಮ ಪತಿಯೊಂದಿಗೆ ಹೊಟೇಲ್ಗೆ ಹೋಗಿದ್ದರು. ಮನೆಗೆ ಹಿಂದಿರುಗಲು ಕಾರು ಹತ್ತುತ್ತಿರಬೇಕಾದರೆ ಆಗಂತುಕ ವ್ಯಕ್ತಿ ಕುತ್ತಿಗೆಗೆ ಕೈಹಾಕಿ 65 ಗ್ರಾಂ ತೂಕದ ಚಿನ್ನದ ಸರವನ್ನು ಕಸಿದು ಕೊಂಡು ದ್ವಿಚಕ್ರವಾಹನದಲ್ಲಿ ಪರಾರಿಯಾಗಿದ್ದಾನೆ. ಈ ಸಂಬಂಧ ಮಹಿಳೆಯ ಪತಿ ರಿಷಿಕುಮಾರ್ ಗ್ರಾಮಾಂತರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.