ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೆಂಗಳೂರು ಗ್ರಾಮಾಂತರ

ನೀರಿನ ಸಮಸ್ಯೆ ಬಗೆಹರಿಸುವುದು ದೊಡ್ಡ ಸವಾಲು: ಜಿ.ಎಚ್. ಮಲ್ಲೇಶ್

Srinivasa Murthy VN
Updated On : 10 Mar 2014, 1:57 am

ದೊಡ್ಡಬಳ್ಳಾಪುರ: ಸಾರ್ವತ್ರಿಕರಣಗೊಂಡಿರುವ ನೀರಿನ ಸಮಸ್ಯೆಯನ್ನು ಬಗೆಹರಿಸುವುದು ಗ್ರಾಪಂಗೆ ದೊಡ್ಡ ಸವಾಲಾಗಿದೆ. ಈ ಹಿನ್ನೆಲೆಯಲ್ಲಿ ಅರ್ಕಾವತಿ ಜಲಾನಯನದಲ್ಲಿ ನಡೆವ ಸಂಶೋಧನೆ ಅಥವಾ ಪುನಶ್ಚೇತನದಲ್ಲಿ ಪಂಚಾಯಿತಿ ಮತ್ತು ಗ್ರಾಮಸ್ಥರು ತೊಡಗಿಕೊಳ್ಳುವುದು ಅಗತ್ಯ ಎಂದು ಅರಳುಮಲ್ಲಿಗೆ ಗ್ರಾಮ ಪಂಚಾಯಿತಿ ಅಧ್ಯಕ್ಷ ಜಿ.ಎಚ್. ಮಲ್ಲೇಶ್ ಹೇಳಿದರು. ತಾಲೂಕಿನ ಎಸ್.ಎಂ.ಗೊಲ್ಲಹಳ್ಳಿಯಲ್ಲಿ ಭಾನುವಾರ ಅರಳುಮಲ್ಲಿಗೆ ಗ್ರಾಮ ಪಂಚಾಯಿತಿ ಮತ್ತು ಗೊಲ್ಲಹಳ್ಳಿ ಗ್ರಾಮಸ್ಥರ ಸಹಯೋಗದಲ್ಲಿ ಅಶೋಕ ಟ್ರಸ್ಟ್ ಫಾರ್ ರಿಸರ್ಚ್ ಇನ್ ಇಕಾಲಜಿ ಅಂಡ್ ಎನ್ವಿರಾನ್ಮೆಂಟ್  ಸ್ಥಾಪಿಸಿರುವ ಸ್ವಯಂ ಚಾಲಿತ ಹವಾಮಾನ ಕೇಂದ್ರದ ಉದ್ಘಾಟನೆ ಮಾಡಿ ಮಾತನಾಡಿದರು. ಕಾರ್ಯಕ್ರಮದಲ್ಲಿ ಮಾತನಾಡಿದ ಏಟ್ರೀ ಸಂಸ್ಥೆಯ ಶರತ್‌ಚಂದ್ರ ಲೇಲೆ, ಈಗಾಗಲೇ ದೇಶಾದ್ಯಂತ ಹಲವು ಪರಿಸರ ಸಂಬಂಧಿ ಶೋಧನೆಗಳನ್ನು ಸಂಸ್ಥೆ ಮಾಡುತ್ತಿದೆ. ಅರ್ಕಾವತಿ ನದಿ ಪುನಶ್ಚೇತನಕ್ಕೆ ಪೂರಕವಾಗಿ ಈ ಭಾಗದ ನೀರಿನ ನಿರ್ವಹಣೆ ಕುರಿತಂತೆ ಸಂಶೋದನೆ ಮಾಡಲಾಗುತ್ತಿದೆ. ನೀರಿನ ಅಭಾವಕ್ಕೆ ಮಳೆ ಕಡಿಮೆಯಾಗಿರುವುದೇ ಕಾರಣ ಎಂಬ ವಾದವಿದ್ದರೂ ಸರಾಸರಿ ಮಳೆ ಪ್ರಮಾಣದಲ್ಲಿ ವ್ಯತ್ಯಾಸ ಇಲ್ಲದಿರುವುದು ಅಚ್ಚರಿ ಮೂಡಿಸುತ್ತದೆ. ಅಕಾಲಿಕ ಮಳೆ, ಅಂತರ್ಜಲದ ಮಿತಿ ಮೀರಿದ ಬಳಕೆ, ಹರಿವು, ನೀಲಗಿರಿ ಬೆಳೆಯಿಂದಾಗುವ ಬಾಷ್ಪೀಕರಣ, ಇಂಗುವಿಕೆ, ಆರುವಿಕೆ ಮತ್ತಿತರ ಅಂಶಗಳ ಕುರಿತು ವೈಜ್ಞಾನಿಕ ಅಧ್ಯಯನ ಮಾಡಲಾಗುತ್ತಿದೆ. ಈ ಅಧ್ಯಯನದಲ್ಲಿ ಜನಸಮುದಾಯವೂ ಭಾಗವಹಿಸುವುದು ಅಗತ್ಯವಾಗಿದೆ ಎಂದು ವಿವರಿಸಿದರು.

ಯಾವ ಪಕ್ಷವನ್ನೂ ಸೇರಲ್ಲ; ನ್ಯಾ. ಸಂತೋಷ್ ಹೆಗ್ಡೆ
ಬೆಂಗಳೂರು: ತಾವು ಯಾವ ಪಕ್ಷವನ್ನೂ ಸೇರುವ ಇರಾದೆ ಹೊಂದಿಲ್ಲ ಎಂದು ನಿವೃತ್ತ ಲೋಕಾಯುಕ್ತ ನ್ಯಾ. ಸಂತೋಷ್ ಹೆಗ್ಡೆ ಹೇಳಿದರು. ಎಚ್‌ಎಸ್‌ಆರ್ ಬಡಾವಣೆಯಲ್ಲಿ ಆಸ್ಪೈರ್ ಎಂಬ ಬಂಜೆತನ ನಿವಾರಣಾ ಕೇಂದ್ರಕ್ಕೆ ಚಾಲನೆ ನೀಡಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಾಕಷ್ಟು ಸರ್ಕಾರಿ ಅಧಿಕಾರಿಗಳು ನಿವೃತ್ತಿ ನಂತರ ರಾಜಕೀಯ ಪ್ರವೇಶಿಸುತ್ತಾರೆ. ಆದರೆ ನಾನು ಅಂತಹ ಕೆಲಸ ಮಾಡುವುದಿಲ್ಲ. ಬದಲಾಗಿ ಶಿಕ್ಷಣ ಹಾಗೂ ಆರೋಗ್ಯ ಕ್ಷೇತ್ರದಲ್ಲಿ ಸುಧಾರಣೆ ತರುವ ನಿಟ್ಟಿನಲ್ಲಿ ಶ್ರಮಿಸುತ್ತೇನೆ ಎಂದರು. ಸರ್ಕಾರ ಆ ಎರಡು ಇಲಾಖೆಗಳತ್ತ ಹೆಚ್ಚು ಗಮನಹರಿಸಬೇಕಿದೆ. ಆದರೆ, ಆ ಎರಡೂ ಪ್ರಮುಖ ಇಲಾಖೆಗಳಲ್ಲಿ ಗುಣಮಟ್ಟದ ಕೆಲಸ ಆಗುತ್ತಿಲ್ಲ, ಸರ್ಕಾರ ಅವುಗಳನ್ನು ನಿರ್ಲಕ್ಷಿಸುತ್ತಿರುವುದೇ ಕಾರಣ ಎಂದು ವಿಷಾದಿಸಿದರು. ಹೆಚ್ಚುವರಿ ಪೊಲೀಸ್ ಆಯುಕ್ತ ಪ್ರಣವ್ ಮೊಹಂತಿ, ಇಂದಿರಾ ಗಾಂಧಿ ಮಕ್ಕಳ ಆಸ್ಪತ್ರೆ ನಿವೃತ್ತ ನಿರ್ದೇಶಕ ಡಾ.ಡಿ.ಜಿ. ಬೆನಕಪ್ಪ, ಡಾ.ಜಿ.ಬಿ. ಅಶ್ವಿನಿ, ಡಾ.ಜಿ.ಎಂ. ಅರವಿಂದ್ ಇತರರು ಕಾರ್ಯಕ್ರಮದಲ್ಲಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement