ಮಹಿಳೆಯರ ಸೃಜನಶೀಲ ಪ್ರತಿಭೆಯ ಅನಾವರಣ
ದೊಡ್ಡಬಳ್ಳಾಪುರ: ಬೆಂಗಳೂರು ಗ್ರಾಮಾಂತರ ಜಿಲ್ಲಾ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಅಭಿನೇತ್ರಿ ಸಾಂಸ್ಕೃತಿಕ ಸಂಘ ಮತ್ತು ಅಭಿನೇತ್ರಿ ಮಹಿಳಾ ಸಂಘದ ನೇತೃತ್ವದಲ್ಲಿ ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮ ಇಲ್ಲಿನ ರಾಘವೇಂದ್ರ ಸ್ವಾಮಿ ಕಲ್ಯಾಣ ಮಂದಿರದಲ್ಲಿ ನಡೆಯಿತು.
ಕಾರ್ಯಕ್ರಮವನ್ನು ವರಲಕ್ಷ್ಮಿ ವೆಂಕಟರಮಣಯ್ಯ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ತುಮಕೂರು ಜಿಲ್ಲಾ ತರಬೇತಿ ಸಂಸ್ಥೆಯ ಉಪನ್ಯಾಸಕಿ ಎಂ.ಶಾಂತಲ, ಮಹಿಳೆಯರು ಎಲ್ಲ ಸ್ತರಗಳಲ್ಲಿ ತಮ್ಮದೇ ಆದ ಸ್ವಂತಿಕೆ ಮತ್ತು ಸೃಜನಶೀಲತೆಯನ್ನು ಬೆಳಸಿಕೊಳ್ಳಬೇಕು. ಆಗ ಮಾತ್ರ ಬದಲಾಗುತ್ತಿರುವ ಸಮಾಜಕ್ಕೆ ಪೂರಕವಾಗಿ ನಮ್ಮ ಪ್ರತಿಭೆಯನ್ನು ಅನಾವರಣಗೊಳಿಸಲು ಸಾಧ್ಯ ಎಂದರು.
ಸಂಘದ ಕಾರ್ಯದರ್ಶಿ ರೇವತಿ ಅನಂತರಾಂ ಅಧ್ಯಕ್ಷತೆ ವಹಿಸಿದ್ದರು. ನಿಖಿಲ ವಿದ್ಯಾಶಾಲೆಯ ಶರಾವತಿ, ಗುಜರಾತ್ ಪಾಟೀದಾರ್ ಮಹಿಳಾ ಸಂಘದ ಅಧ್ಯಕ್ಷೆ ದಮಯಂತಿ, ಆರ್ಯವೈಶ್ಯ ಮಂಡಲಿ ಅಧ್ಯಕ್ಷೆ ಸರಸ್ವತಿ, ಗಾಯತ್ರಿದೇವಿ ಮಹಿಳಾ ಮಂಡಲಿ ಅಧ್ಯಕ್ಷೆ ವರಲಕ್ಷ್ಮಿ, ಬ್ರಾಹ್ಮಣ ಮಹಿಳಾ ಸಂಘದ ಅಧ್ಯಕ್ಷೆ ಲಲಿತಾ ಕಸೂತಿ ಶಿಕ್ಷಕಿ ರೇಣುಕಾ ಪ್ರಕಾಶ್, ಪ್ರಭಾವತಿ ಮತ್ತಿತರರು ಹಾಜರಿದ್ದರು. ಇದೇ ಸಂದರ್ಭದಲ್ಲಿ ದಾನಿ ಇಂದಿರಾ ಅವರನ್ನು ಸನ್ಮಾನಿಸಲಾಯಿತು.
ನೃತ್ಯೋತ್ಸವ: ಸಮಾರೋಪ ಕಾರ್ಯಕ್ರಮದ ಅಂಗವಾಗಿ ನಡೆದ ನೃತ್ಯೋತ್ಸವದಲ್ಲಿ ಅಭಿನೇತ್ರಿ ಭರತನಾಟ್ಯ, ಅಷ್ಟಲಕ್ಷ್ಮೀ ನೃತ್ಯ, ಫ್ಯಾಷನ್ ಶೋ, ಪಟಕುಣಿತ, ದೇವರನಾಮ, ಸುಗಮಸಂಗೀತ, ಪಟೇಲ್ ಮಹಿಳಾ ಸಂಘದ ಗುಜರಾತಿ ನೃತ್ಯ, ಜಾನಕಿ ಅವರ ಚಿತ್ರಗೀತೆ, ಚೌಡೇಶ್ವರಿ ಮಹಿಳಾ ಸಂಘದ ದೇವರನಾಮ, ಅಮೂಲ್ಯ ಮಹಿಳಾ ತಂಡದ ದಾಸಭಾರತಿ, ಪದ್ಮ ಮತ್ತು ಪೂರ್ಣಿಮ ಅವರ ದೇವರನಾಮ, ಗುಜರಾತ್ ಪಾಟೀದಾರ್ ಮಹಿಳಾ ಸಂಘದ ಕೋಲಾಟ, ಜಾನಪದ ನೃತ್ಯ, ಬಿಂದಿಗೆ ನೃತ್ಯ, ಗಾಯತ್ರಿದೇವಿ ಮಹಿಳಾ ಸಂಘದ ಲಾವಣಿ ಮತ್ತು ಜನಪದ ಕಾರ್ಯಕ್ರಮಗಳು ಗಮನ ಸೆಳೆದವು.
ಸಮಾರೋಪ: ಇದೇ ಸಂದರ್ಭದಲ್ಲಿ ನಡೆದ ಮಹಿಳಾ ದಿನಾಚರಣೆ ಸಮಾರೋಪ ಕಾರ್ಯಕ್ರಮದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನೀಡಿದ ಮಹಿಳೆಯರಿಗೆ ಬಹುಮಾನಗಳನ್ನು ವಿತರಿಸಲಾಯಿತು. ಮಹಿಳೆಯರಿಂದ ಗೊಂಬೆ ನೃತ್ಯ, ಗುಜರಾತಿ ನೃತ್ಯ, ಭರತನಾಟ್ಯ, ದೇವರನಾಮ, ದಾಸರಪದ, ಸಂಗೀತ, ದೀಪದ ನೃತ್ಯ, ಕೋಲಾಟ, ದಶಾವತಾರ ನೃತ್ಯ ಸೇರಿದಂತೆ ಹಲವು ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.