ಯಲಿಯೂರು ವ್ಯವಸಾಯ ಸೇವಾ ಸಹಕಾರ ಬ್ಯಾಂಕಿನ ಅಧ್ಯಕ್ಷ ರಾಘವೇಂದ್ರ
ದೇವನಹಳ್ಳಿ: ದೇವನಹಳ್ಳಿ ತಾಲೂಕು ಯಲಿಯೂರು ಗ್ರಾಮದ ವ್ಯವಸಾಯ ಸೇವಾ ಸಹಕಾರ ಬ್ಯಾಂಕಿಗೆ ಸೋಮವಾರ ನಡೆದ ಅಧ್ಯಕ್ಷರ ಚುನಾವಣೆಯಲ್ಲಿ ಎಸ್. ತೆಲ್ಲೋಹಳ್ಳಿಯ ರಾಘವೇಂದ್ರ ಅಧ್ಯಕ್ಷರಾಗಿ ಚುನಾಯಿತರಾಗಿದ್ದಾರೆ ಎಂದು ಚುನಾವಣಾಧಿಕಾರಿಗಳಾದ ಲತಾ ಘೋಷಣೆ ಮಾಡಿದರು.
ಈ ಬ್ಯಾಂಕಿನ ಚುನಾವಣೆಯಲ್ಲಿ ಎಸ್. ತೆಲ್ಲೋಹಳ್ಳಿಯ ರಾಘವೇಂದ್ರ ಮತ್ತು ಯಲಿಯೂರಿನ ಬಚ್ಚಣ್ಣ ಅಧ್ಯಕ್ಷ ಸ್ಥಾನಕ್ಕೆ ನಾಮ ಪತ್ರ ಸಲ್ಲಿಸಿದ್ದರು. 8 ನಿರ್ದೇಶಕರು ಮತ್ತು ಡಿಸಿಸಿ ಬ್ಯಾಂಕಿನ ಮೇಲ್ವಿಚಾರಕರು ಸೇರಿ ಒಂಬತ್ತು ಮಂದಿ ಮತದಾರರಿದ್ದು ಎಲ್ಲರೂ ಹಾಜರಿದ್ದರು. ಆದರೆ ಚುನಾವಣೆ ಸಂಧರ್ಭದಲ್ಲಿ ಒಬ್ಬರು ತಮ್ಮ ಮತ ಚಲಾಯಿಸದೆ ಮತಚೀಟಿಯನ್ನು ಹಾಗೆಯೇ ಮತಪೆಟ್ಟಿಗೆಯಲ್ಲಿ ಹಾಕಿದ್ದಾರೆ ಎನ್ನಲಾಗಿದೆ. ಮತಗಳ ಎಣಿಕೆ ನಂತರ ರಾಘವೇಂದ್ರ ಅವರಿಗೆ 5 ಮತಗಳು ಹಾಗೂ ಬಚ್ಚಣ್ಣ ಅವರಿಗೆ 3 ಮತಗಳು ಲಭ್ಯವಾಗಿದೆ. ನೂತನ ಅಧ್ಯಕ್ಷರಿಗೆ ಶಾಸಕ ಪಿಳ್ಳಮುನಿಶಾಮಪ್ಪ, ಪಿಎಲ್‌ಡಿ ಬ್ಯಾಂಕಿನ ಮಾಜಿ ಅಧ್ಯಕ್ಷ ಶ್ರೀರಾಮಯ್ಯ,
ತಾಲೂಕು ಸೊಸೈಟಿ ಅಧ್ಯಕ್ಷ ಗಂಗಾಧರ್, ಡಿಸಿಸಿ ಬ್ಯಾಂಕಿನ ನಿರ್ದೇಶಕ ಕಾರಹಳ್ಳಿ ದೇವರಾಜ್, ತಾಲೂಕು ವಕೀಲರ ಸಂಘದ ಅಧ್ಯಕ್ಷ ಎನ್. ಶ್ರೀನಿವಾಸಮೂರ್ತಿ ಅಭಿನಂದನೆ ಸಲ್ಲಿಸಿದರು. ಈ ಸಂದರ್ಭದಲ್ಲಿ ಗ್ರಾಮದ ಮುಖಂಡರಾದ ರಾಮಾಂಜಿನಪ್ಪ, ಹನುಮಂತಪ್ಪ ಹಾಗೂ ಆನಂದ್ ಭಾಗವಹಿಸಿದ್ದರು.