ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೆಂಗಳೂರು ಗ್ರಾಮಾಂತರ

ರಂಗಭೂಮಿ ಕಲೆ ಕುರಿತು ದತ್ತಿ ಉಪನ್ಯಾಸ ನಾಳೆ

Srinivasa Murthy VN
Updated On : 10 Mar 2014, 11:54 am

ಚನ್ನಪಟ್ಟಣ: ತಾಲೂಕು ಕಸಾಪ ವತಿಯಿಂದ ರಂಗಭೂಮಿ ಕಲೆಯನ್ನು ಉಳಿಸುವ ಹಾಗೂ ಬೆಳೆಸುವ ಕುರಿತಾದ ದತ್ತಿ ಉಪನ್ಯಾಸ ಕಾರ್ಯಕ್ರಮವನ್ನು ಮಾ.12 ರಂದು ಇಲ್ಲಿನ ವಿದ್ಯಾನಿಕೇನತ ಮಹಿಳಾ ಪ್ರಥಮ ದರ್ಜೆ ಕಾಲೇಜಿನಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಕಸಾಪ ತಾಲೂಕು ಕಾರ್ಯದರ್ಶಿ ರಾಮಕೃಷ್ಣಯ್ಯ ತಿಳಿಸಿದ್ದಾರೆ.
ಕರವೇ ಜಿಲ್ಲಾ ಕಾರ್ಯಾಧ್ಯಕ್ಷ ಎಂ.ಎನ್. ಸತ್ಯನಾರಾಯಣ ನೀಡಿರುವ ನಾರಾಯಣಗೌಡ ಮತ್ತು ನಾಗರತ್ನಮ್ಮ ಅವರ ನೆನಪಿನ ದತ್ತಿ ಕಾರ್ಯಕ್ರಮದಲ್ಲಿ ಡಿ.ಪುಟ್ಟಸ್ವಾಮಿಗೌಡ ಉಪನ್ಯಾಸ ನೀಡಲಿದ್ದು, ಕಸಾಪ ತಾಲೂಕು ಅಧ್ಯಕ್ಷ ಎಂ. ಶಿವಮಾದು ಕಾರ್ಯಕ್ರಮ  ಉದ್ಘಾಟಿಸಲಿದ್ದಾರೆ.  ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲ ಟಿ.ಎಂ.ರಾಜು ವಹಿಸಲಿದ್ದಾರೆ. ಕಸಾಪ ಕಾರ್ಯಕಾರಿ  ಸಮಿತಿ ಸದಸ್ಯ ಶಿವರಾಮು ಮೈಲನಾಯಕನಹಳ್ಳಿ, ರಂಗಭೂಮಿ ಕಲಾವಿದ ಕೂಡ್ಲೂರು ಜಿ.ವೆಂಕಟೇಶ್, ಸು.ನಾ. ನಂದಕುಮಾರ್ ಪಾಲ್ಗೊಳ್ಳಲಿದ್ದು,  ಶಾರದಾ ನಾಗೇಶ್, ಪ್ರಸನ್ನಕುಮಾರ್ ದೊಡ್ಡಮಳೂರು ಗೀತಗಾಯನ ನಡೆಸಿಕೊಡಲಿದ್ದಾರೆ.

ನಾಳೆ ವಿದ್ಯುತ್ ವ್ಯತ್ಯಯ
ರಾಮನಗರ: ಚನ್ನಪಟ್ಟಣ ನಗರ ವ್ಯಾಪ್ತಿಯಲ್ಲಿ ನಿರಂತರ ಜ್ಯೋತಿ ಯೋಜನೆಯಡಿ ಎ.ಬಿ. ಕೇಬಲ್ ಅಳವಡಿಸುವ ಕಾಮಗಾರಿ ಹಮ್ಮಿಕೊಂಡಿರುವುದರಿಂದ ಮಾ.12ರಂದು ಸಿಪಿಟಿ-1 ಮಾರ್ಗಕ್ಕೆ ಸಂಬಂಧಿಸಿದ ಪಿಟಿಎಸ್, ವಂದಾರಗುಪ್ಪೆ, ಬಸವೇಶ್ವರ ನಗರ, ಕೆರೆಮೇಗಳದೊಡ್ಡಿ, ಕೆಂಚಪ್ಪಯ್ಯನದೊಡ್ಡಿ, ಕಲಾನಗರ, ಜೀವನ್‌ಪುರ, ಪೇಟೆಕೇರಿ, ತಟ್ಟೆಕೆರೆ, ವಿನಾಯಕನಗರ ಮತ್ತು ಯಲಚಿಪಾಳ್ಯ ಸುತ್ತಮುತ್ತಲ ಪ್ರದೇಶದಲ್ಲಿ ವಿದ್ಯುತ್ ಇರುವುದಿಲ್ಲ.
ಮಾ.13ರಂದು ಎಸ್‌ಎಸ್‌ಮಿಲ್ ಮಾರ್ಗಕ್ಕೆ ಸಂಬಂಧಿಸಿದ ರಾಜಕೆಂಪೇಗೌಡ ಬಡಾವಣೆ, ಮಂಜುನಾಥ ನಗರ, ಚರ್ಚ್ ರಸ್ತೆ, ಮಂಗಳವಾರಪೇಟೆ, ಚಿಕ್ಕಮಳೂರು, ಕುವೆಂಪುನಗರ, ಕೋಟೆ, ತಿಟ್ಟಮಾರನಹಳ್ಳಿ ರಸ್ತೆ, ಬೈರಾಪಟ್ಟಣ, ದೊಡ್ಡಮಳೂರು, ಗಂಗೇದೊಡ್ಡಿ, ಮುದಗೆರೆ ವ್ಯಾಪ್ತಿಯಲ್ಲಿ ಅಂದು ಬೆಳಗ್ಗೆ 10ರಿಂದ ಸಂಜೆ 6ರವರೆಗೆ ವಿದ್ಯುತ್ ಸರಬರಾಜು ಇರುವುದಿಲ್ಲ. ಸಾರ್ವಜನಿಕರು ಸಹಕರಿಸಬೇಕು ಎಂದು ಬೆಸ್ಕಾಂನ ಚನ್ನಪಟ್ಟಣ ಉಪ ವಿಭಾಗದ ಎಇಇ ಕೋರಿದ್ದಾರೆ.

ನಿತ್ಯಾನಂದ ವಿರುದ್ಧದ ಪ್ರಕರಣ; ಗೋವಿಂದನ್ ನೇಮಕಕ್ಕೆ ಹೈ ತಡೆ
ಬೆಂಗಳೂರು: ನಿತ್ಯಾನಂದನ ವಿರುದ್ಧದ ಅತ್ಯಾಚಾರ ಪ್ರಕರಣದ ವಿಚಾರಣೆಗೆ ವಿಶೇಷ ಸಾರ್ವಜನಿಕ ಅಭಿಯೋಜಕರನ್ನಾಗಿ ಪಿ. ಗೋವಿಂದನ್ ಅವರನ್ನು ನೇಮಿಸಿದ್ದ ಸರ್ಕಾರದ ಆದೇಶಕ್ಕೆ ಹೈಕೋರ್ಟ್ ತಡೆಯಾಜ್ಞೆ ನೀಡಿದೆ. ಆರತಿ ರಾವ್ ಮೇಲಿನ ಅತ್ಯಾಚಾರ ಪ್ರಕರಣದಲ್ಲಿ ಮೂರನೇ ಆರೋಪಿಯಾಗಿರುವ ಶಿಷ್ಯ ಶಿವವಲ್ಲಭನೇನಿ ಅವರ ವಿಚಾರಣೆಗೆ ಗೋವಿಂದನ್ ಅವರನ್ನು ಸರ್ಕಾರಿ ಅಭಿಯೋಜಕರಾಗಿ ನೇಮಿಸಲಾಗಿತ್ತು. ಸರ್ಕಾರದ ಆದೇಶ ಪ್ರಶ್ನಿಸಿ ವಲ್ಲಭನೇನಿ ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದರು. ವಿಚಾರಣೆ ನಡೆಸಿದ ನ್ಯಾ. ಅಬ್ದುಲ್ ನಜೀರ್, ರಾಜ್ಯ ಸರ್ಕಾರಕ್ಕೆ ನೋಟಿಸ್ ಜಾರಿ ಮಾಡಿ ನಾಲ್ಕು ವಾರಗಳಲ್ಲಿ ಆಕ್ಷೇಪಣೆ ಸಲ್ಲಿಸುವಂತೆ ಸೂಚಿಸಿದ್ದಾರೆ.

ಆನೇಕಲ್ ಪುರಸಭೆ ಬಿಜೆಪಿ ತೆಕ್ಕೆಯಲ್ಲೇ ಉಳಿಸಿಕೊಳ್ಳಲು ಯತ್ನ
ಆನೇಕಲ್ಲು: ಇತ್ತೀಚೆಗಷ್ಟೇ ತಾಲೂಕು ಪಂಚಾಯ್ತಿ ಆಡಳಿತವನ್ನು ಮತ್ತೆ ಪಡೆದ ಬಿಜೆಪಿ ಆನೇಕಲ್ ಪುರಸಭೆಯನ್ನೂ ತನ್ನ ವಶದಲ್ಲೇ ಮುಂದುವರಿಸಲು ಯತ್ನ ನಡೆಸಿದೆ. ಆನೇಕಲ್ ಪುರಸಭೆಯ 23 ವಾರ್ಡುಗಳ ಪೈಕಿ 9 ಸ್ಥಾನವನ್ನು ಗೆದ್ದಿರುವ ಬಿಜೆಪಿ ಪಕ್ಷೇತರರಿಬ್ಬರನ್ನು ಮನವೊಲಿಸಿ ಪುರಸಭೆ ಚುಕ್ಕಾಣಿಯನ್ನು ಹಿಡಿಯಲು ಮುಂದಾಗಿದೆ. ಈ ನಿಟ್ಟಿನಲ್ಲಿ ಪುರಸಭೆ ಸದಸ್ಯ ನರಸಿಂಹರೆಡ್ಡಿ ಅವರ ಮನೆಯಲ್ಲಿ ಸಭೆ ನಡೆಸಿದ ಬಿಜೆಪಿ ಸದಸ್ಯರು ಹಾಗೂ ಮುಖಂಡರು ಸತತ 2ನೇ ಬಾರಿ ಗೆದ್ದಿರುವ 2ನೇ ವಾರ್ಡಿನ ಸದಸ್ಯ ಎಂ. ನಾರಾಯಣಸ್ವಾಮಿಯವರನ್ನು ಅಧ್ಯಕ್ಷ ಸ್ಥಾನಕ್ಕೆ ಅಭ್ಯರ್ಥಿಯನ್ನಾಗಿಸಿದ್ದಾರೆ. ಸಾಮಾನ್ಯ ಸ್ಥಾನವಾಗಿರುವ ಪುರಸಭೆ ಅಧ್ಯಕ್ಷ ಸ್ಥಾನಕ್ಕೆ ಬಿಸಿಎಂ ಬಿ ಅಭ್ಯರ್ಥಿಯನ್ನು ಕಣಕ್ಕೆ ಇಳಿಸುವ ಮೂಲಕ ಸರ್ವರಿಗೂ ಸಮಪಾಲು ತಂತ್ರವನ್ನು ಅನುಸರಿಸಿದೆ. ಉಪಾಧ್ಯಕ್ಷ ಸ್ಥಾನಕ್ಕೆ 4ನೇ ವಾರ್ಡಿನಿಂದ ಮೊದಲ ಬಾರಿಗೆ ಆಯ್ಕೆಯಾಗಿರುವ ಪವಿತ್ರ ರಘು ಅವರನ್ನು ಸೂಚಿಸಿದೆ. 17ನೇ ವಾರ್ಡಿನಿಂದ ಆಯ್ಕೆಯಾಗಿರುವ ಪಕ್ಷೇತರ ಅಭ್ಯರ್ಥಿ ರತ್ನಮ್ಮ ಹಾಗೂ 13ನೇ  ವಾರ್ಡಿನ ಚಂದ್ರಿಕಾ  ಹನುಮಂತು ಅವರೊಂದಿಗೆ ನಿಕಟ ಸಂಪರ್ಕ ಹೊಂದಿದ್ದು ಪಕ್ಷದ ಬಲಾಬಲ 11 ಆಗಲಿದೆ. ಅಧಿಕಾರಿದ ಗದ್ದುಗೆ ಏರಲು ಮತ್ತೊಂದು ಸದಸ್ಯರ ಬೆಂಬಲ ಬೇಕಿದ್ದು ಸರ್ವತೋಮುಖ ಅಭಿವೃದ್ಧಿಗಾಗಿ ಕಾಂಗ್ರೆಸ್ ಅಥವಾ ಜೆಡಿಎಸ್ ಸದಸ್ಯರ ಸಹಕಾರ ಪಡೆಯಲು ಪ್ರಾಮಾಣಿಕ ಪ್ರಯತ್ನ ಮಾಡಲಾಗಿದೆ ಎಂದು ಬಿಜೆಪಿ ಸದಸ್ಯರಾದ  ನರಸಿಂಹರೆಡ್ಡಿ ತಿಳಿಸಿದ್ದಾರೆ.  ಎಲ್ಲ ಅಂದುಕೊಂಡಂತೆ ನಡೆದರೇ ಬಿಜೆಪಿಗೆ ಪುರಸಭಾ ಗದ್ದುಗೆ ಏರಲು ಕಷ್ಟವಾಗುವುದಿಲ್ಲ. ಕಾಂಗ್ರೆಸ್ 6 ಸದಸ್ಯರು ಹಾಗೂ ಜೆಡಿಎಸ್ 5 ಸದಸ್ಯರು ಆಯ್ಕೆಯಾಗಿದ್ದಾರೆ. ಮತ್ತೋರ್ವ ಪಕ್ಷೇತರ ಸದಸ್ಯ ಮೋಹನ್ ಅವರ ಬೆಂಬಲ ತಮಗೆ ಖಚಿತವೆಂದು  ಮುಖಂಡ ಮಲ್ಲಿಕಾರ್ಜುನ್ ತಿಳಿಸಿದ್ದಾರೆ. ಸದಸ್ಯ ಬಲ: ಬಿಜೆಪಿ-9, ಕಾಂಗ್ರೆಸ್-6, ಜೆಡಿಎಸ್-5 ಹಾಗೂ ಪಕ್ಷೇತರರು-3.

16ರಂದು ಕುವೆಂಪು- ದೇಜಗೌ ಸಾಂಸ್ಕೃತಿಕ ಪ್ರತಿಷ್ಠಾನ ಉದ್ಘಾಟನಾ ಸಮಾರಂಭ  
ಚನ್ನಪಟ್ಟಣ: ಕುವೆಂಪು- ದೇಜಗೌ ಸಾಂಸ್ಕೃತಿಕ ಪ್ರತಿಷ್ಠಾನದ ಉದ್ಘಾಟನಾ ಸಮಾರಂಭ ಮಾ.16 ರಂದು ಇಲ್ಲಿನ ಅನುಗ್ರಹ ಕನ್ವೆಷನ್ ಹಾಲ್‌ನಲ್ಲಿ ನಡೆಯಲಿದೆ. ಕಾರ್ಯಕ್ರಮವನ್ನು ಖ್ಯಾತ ಬರಹಗಾರ ಸಿ.ಪಿ.ಕೃಷ್ಣಕುಮಾರ್ ಉದ್ಘಾಟಿಸಲಿದ್ದು, ಶಾಸಕ ಸಿ.ಪಿ.ಯೋಗೇಶ್ವರ್ ಅಧ್ಯಕ್ಷತೆ ವಹಿಸುವರು. ಕಾರ್ಯಕ್ರಮದಲ್ಲಿ ಜಿಲ್ಲಾ ಕಸಾಪ ಅಧ್ಯಕ್ಷ ಬಿ.ಟಿ.ನಾಗೇಶ್, ಪ್ರೊ.ಮಾಯೀಗೌಡ, ಒಕ್ಕಲಿಗರ ಸಂಘದ ನಿರ್ದೇಶಕ ಕುಕ್ಕೂರು ದೊಡ್ಡಿ ಶಿವಣ್ಣ, ಮುಕುಂದರಾವ್ ಲೋಕಂಡೆ, ಮರಿಮಲ್ಲಯ್ಯ, ಎಸ್.ಟಿ. ನಾರಾಯಣಗೌಡ ಮುಂತಾದವರು ಪಾಲ್ಗೊಳ್ಳಲಿದ್ದಾರೆ ಎಂದು ಪ್ರತಿಷ್ಠಾನದ ಅಧ್ಯಕ್ಷ ಡಾ.ಚಕ್ಕೆರೆ ಶಿವಶಂಕರ್ ಮತ್ತು ಕಾರ್ಯದರ್ಶಿ ಎಚ್. ಕೃಷ್ಣೇಗೌಡ ತಿಳಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement