ಶೈಕ್ಷಣಿಕ ಕ್ರಾಂತಿಗೆ ವೀರಶೈವ ಮಠಗಳ ಪಾತ್ರ ಅಗಾಧ
ನೆಲಮಂಗಲ: ಕರ್ನಾಟಕದಲ್ಲಿ ಶೈಕ್ಷಣಿಕ ಕ್ರಾಂತಿಯನ್ನು ಉಂಟು ಮಾಡುವಲ್ಲಿ ವೀರಶೈವ ಮಠಗಳ ಪಾತ್ರ ಅಗಾದವಾದದ್ದು ಎಂದು ಕರ್ನಾಟಕ ವೀರಶೈವ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಬಿ.ಎಸ್.ಪರಮಶಿವಯ್ಯ ತಿಳಿಸಿದರು.
ಅವರು ಸೋಮವಾರ ತಾಲೂಕಿನ ಶಿವಗಂಗೆಯ ಶ್ರೀ ಮೇಲಣಗವಿ ಮಠದಲ್ಲಿ ನಡೆದ ಶ್ರೀ ರೇಣುಕಾಚಾರ್ಯ ಜಯಂತಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿ, ವೀರಶೈವ ಧರ್ಮ ಎಲ್ಲರನ್ನು ಪ್ರೀತಿ ವಿಶ್ವಾಸದಿಂದ ಕಾಣುತ್ತಾ ರಾಜ್ಯದಲ್ಲಿ ಮತ್ತು ದೇಶದ ನಾನಾ ಭಾಗದಲ್ಲಿ ಸ್ವಾತಂತ್ರ್ಯ ಪೂರ್ವದಲ್ಲಿಯೇ ಶಿಕ್ಷಣ ಸಂಸ್ಥೆಗಳನ್ನು ಮುಖ್ಯವಾಗಿ ಗ್ರಾಮೀಣ ಪ್ರದೇಶದಲ್ಲಿ ತೆರೆಯುವ ಮೂಲಕ ಅಕ್ಷರ ಕ್ರಾಂತಿಯನ್ನು ಉಂಟು ಮಾಡಿದವು. ಆದರೆ ಇಂದು ಸರ್ಕಾರದ ಹಲವು ಯೋಜನೆಗಳು ಮತ್ತು ಶಿಕ್ಷಣ ಕ್ಷೇತ್ರದಲ್ಲಿ ತರುತ್ತಿರುವ ಬದಲಾವಣೆಯಿಂದ ಶಿಕ್ಷಣ ಸಂಸ್ಥೆಗಳನ್ನು ನಡೆಸಲು ಕಷ್ಟವಾಗುತ್ತಿದೆ ಇದು ವಿಷಾದದ ಸಂಗತಿ ಎಂದರು.
ಸಿದ್ಧಗಂಗೆಯ ಶ್ರೀ ಸಿದ್ಧಲಿಂಗ ಸ್ವಾಮೀಜಿ ಮಾತನಾಡುತ್ತಾ ರೇಣುಕಾಚಾರ್ಯರು ವೀರಶೈವ ಧರ್ಮದ ಸಾರವನ್ನು ತಿಳಿಸುತ್ತಾ ಶಿಕ್ಷಣ, ಧರ್ಮ, ಸಾಂಸ್ಕೃತಿಕ ನೆಲೆಗಟ್ಟಿನಲ್ಲಿ ಬೆಳೆಸಿ ಉಳಿಸಿಕೊಂಡು ಶಾಂತಿ ನೆಮ್ಮದಿಯನ್ನು ಹೊಂದಿ ಇತರರಿಗೂ ಜೀವನ ಕಲೆಯನ್ನು ತಿಳಿಸಿದ ಕೀರ್ತಿಅವರಿಗೆ ಸಲ್ಲುತ್ತದೆ ಎಂದರು.
ಕೊಡುಗೆ ನೀಡಿದೆ: ವಿಭೂತಿಪುರದ ಶ್ರೀ ಮಹಂತ ಶಿವಯೋಗಿ ಸ್ವಾಮೀಜಿ ಮಾತನಾಡುತ್ತಾ ಶಿವಗಂಗೆಯ ಮೇಲಣಗವಿ ಮಠ ಪಂಚಪೀಠದ ಶ್ರೀ ಬಾಳೆಹೊನ್ನೂರು ಕ್ಷೇತ್ರಕ್ಕೆ ಪೀಠಾಧಿಕಾರಿಗಳನ್ನು ಕೊಡುಗೆ ನೀಡಿದೆ. ಈ ಶಿವಗಂಗೆಯ ಪರಿಸರದಲ್ಲಿ ಗುಬ್ಬಿ ಮಲ್ಲಣಾರ್ಯ ಸೇರಿದಂತೆ ಹಲವಾರು ಮಹಾನ್ ಪಂಡಿತರು ಶಿವಗಂಗೆಯ ಪರಿಸರದಲ್ಲಿ ಬೀಡು ಬಿಟ್ಟು ಕ್ಷೇತ್ರವನ್ನು ಪರಿಶುದ್ಧಗೊಳಿಸುವ ಮೂಲಕ ಇಲ್ಲಿ ಸಂಸ್ಕೃತಿಯನ್ನು ಬಿತ್ತಿದರು. ಈ ಕಾರ್ಯವನ್ನು ಇಂದು ಮೇಲಣಗವಿ ಮಠ ಬೆಳೆಸಿಕೊಂಡು ಬರುತ್ತಿದ್ದು ಇಲ್ಲಿಯ ಮಲಯ ಶಾಂತಮುನಿ ದೇಶೀಕೇಂದ್ರ ಶಿವಾಚಾರ್ಯ ಸ್ವಾಮೀಜಿ ಅವರ ಸೇವೆಯ ಫಲವಾಗಿ ಮಠ ಮತ್ತಷ್ಟು ಪ್ರಬುದ್ಧ ಮಾನಕ್ಕೆ ಬಂದಿದೆ ಎಂದರು.
ಗೌರವ: ಸಂದರ್ಭದಲ್ಲಿ ಶಿವಗಂಗಾ ಶ್ರೀ ಪ್ರಶಸ್ತಿಯನ್ನು ಕಂಬಾಳು ಗ್ರಾಮದ ನಿಸರ್ಗಪ್ರಿಯ ಸಿದ್ದಗಂಗಯ್ಯ ಅವರಿಗೆ ನೀಡಿ ಗೌರವಿಸಲಾಯಿತು. ಮಠದ ವತಿಯಿಂದ ದಿನದರ್ಶಿಕೆಯನ್ನು ಚಿತ್ರ ನಿರ್ದೇಶಕ ಎಸ್.ನಾರಾಯಣ್ ಬಿಡುಗಡೆ ಗೊಳಿಸಿದರು.
ಮಠದ ವೆಬ್‌ಸೈಟ್ ಅನ್ನು ಶಾಸಕ ಡಾ.ಕೆ.ಶ್ರೀನಿವಾಸಮೂರ್ತಿ ಬಿಡುಗಡೆ ಮಾಡಿದರು. ಮಠದ ಧ್ವನಿ ಸುರುಳಿಯನ್ನು ಮಾಜಿ ಸಚಿವ ವಿ.ಸೋಮಣ್ಣ ಬಿಡುಗಡೆ ಗೊಳಿಸಿದರು.
ಮಾಜಿ ಶಾಸಕ ಎಂ.ವಿ.ನಾಗರಾಜು, ಶಾಸಕ ಇ.ಕೃಷ್ಣಪ್ಪ, ತಾ.ಪಂ. ಮಾಜಿ ಅಧ್ಯಕ್ಷ ಪುಟ್ಟಗಂಗಯ್ಯ, ಹಾಲು ಒಕ್ಕೂಟದ ನಿರ್ದೇಶಕ ಎಂ.ಜಿ. ತಿಮ್ಮರಾಜು, ಜಿಲ್ಲಾ ವೀರಶೈವ ಮಹಾಸಭಾ ಅಧ್ಯಕ್ಷ ಎನ್.ಎಸ್. ನಟರಾಜು, ಜಿ.ಪಂ.ಸದಸ್ಯೆ ಸುನಂದ ಶಿವಕುಮಾರ್, ಗ್ರಾ.ಪಂ.ಅಧ್ಯಕ್ಷೆ ಜಾನಕಮ್ಮ ಜಯಣ್ಣ, ಹೊನ್ನಗಂಗಶೆಟ್ಟಿ ಇದ್ದರು.