ಭೂವಿವಾದದ ಘರ್ಷಣೆ ಮೂವರ ಸೆರೆ
ಕೃಷ್ಣರಾಜಪುರ: ಭೂವಿವಾದ ಘರ್ಷಣೆಯಲ್ಲಿ ವ್ಯಕ್ತಿಯೋರ್ವ ತೀವ್ರ ಗಾಯಗೊಂಡಿದ್ದು, ಪ್ರಕರಣ ಸಂಬಂಧ ಆವಲಹಳ್ಳಿ ಪೊಲೀಸರು ಮೂವರನ್ನು ಬಂಧಿಸಿದ್ದಾರೆ. ಬೆಂಗಳೂರು ಪೂರ್ವ ತಾಲೂಕು ಕಟ್ಟುಗೊಲ್ಲಹಳ್ಳಿಯಲ್ಲಿ ಗುರುವಾರ ಮಧ್ಯಾಹ್ನ ಏಕಾಏಕಿ ಎರಡು ಗುಂಪುಗಳ ನಡುವೆ ಘರ್ಷಣೆಯಾಗಿದೆ. ಘರ್ಷಣೆಯಲ್ಲಿ ಗ್ರಾಮದ ಮುನಿಯಪ್ಪ ಎಂಬುವರ ಕಾಲಿಗೆ ಮಚ್ಚಿನ ಏಟು ಬಿದ್ದು, ತೀವ್ರವಾಗಿ ಗಾಯಗೊಂಡಿದ್ದಾರೆ. ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಪ್ರಕರಣಕ್ಕೆ ಸಂಬಂಧ ಆಂಜನಪ್ಪ, ನಾಗರಾಜು, ಮುನಿರಾಜು ಎಂಬುವರನ್ನು ಬಂಧಿಸಲಾಗಿದೆ. ತಲೆಮರೆಸಿಕೊಂಡಿರುವ ಇನ್ನು ಕೆಲವರನ್ನು ಬಂಧಿಸಲಾಗುವುದೆಂದು ಪೊಲೀಸರು ತಿಳಿಸಿದ್ದಾರೆ.
ಕಟ್ಟುಗೊಲ್ಲಹಳ್ಳಿ ಗ್ರಾಮದಲ್ಲಿ 2 ಎಕರೆ ಜಮೀನನ್ನು ಈ ಹಿಂದೆ ಮಾರಾಟ ಮಾಡಲಾಗಿದ್ದು, ಈ ಪ್ರದೇಶದಲ್ಲಿ ಮನೆಗಳನ್ನು ನಿರ್ಮಿಸಿಕೊಂಡು ಹಲವು ಕುಟುಂಬಗಳು ಜೀವನ ಸಾಗಿಸುತ್ತಿವೆ. ಇತ್ತೀಚೆಗೆ ಮುನಿಯಪ್ಪ ಜಮೀನಿನ ಮೂಲ ವಾರುಸುದಾರರೊಂದಿಗೆ ಸೇರಿ ವಿನಾಕಾರಣ ಕಿರುಕುಳ ನೀಡುತ್ತಿದ್ದಾರೆಂದು ಆರೋಪಿಸಿ ಮಾತಿಗೆ ಮಾತು ಬೆಳೆದು ಘರ್ಷಣೆಯಾಗಿದೆ ಎಂದು ಗ್ರಾಮಸ್ಥರು ತಿಳಿಸಿದ್ದಾರೆ.
ನೀರಾವರಿ ತಜ್ಞ ಪರಮಶಿವಯ್ಯಗೆ ಶ್ರದ್ಧಾಂಜಲಿ
ವಿಜಯಪುರ: ತಾಲೂಕಿನ ಶಾಶ್ವತ ನೀರಾವರಿ ಹೋರಾಟ ಸಮಿತಿಯ ವತಿಯಿಂದ ನೀರಾವರಿ ತಜ್ಞ ಹಾಗೂ ಬಯಲುಸೀಮೆ ಜಿಲ್ಲೆಗಳಿಗೆ ದಾಹ ನೀಗಿಸಲು ವರದಿ ರೂಪಿಸಿದ ಡಾ.ಜಿ.ಎಸ್.ಪರಮಶಿವಯ್ಯ ಅವರಿಗೆ ಶ್ರದ್ಧಾಂಜಲಿ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮ ಶಿವಗಣೇಶ ಸರ್ಕಲ್ನ ಶಾಂತಿ ಸಾಗರ್ ಹೊಟೇಲ್ ಸಭಾಂಗದಲ್ಲಿ ಏರ್ಪಡಿಸಲಾಗಿತ್ತು. ಇದೇ ಸಂದರ್ಭದಲ್ಲಿ ಹೋರಾಟ ಸಮಿತಿಯ ಸಂಚಾಲಕ ಕಲ್ಯಾಣ ಕುಮಾರ್ ಮಾತನಾಡಿ ಬಯಲು ಸೀಮೆಗೆ ನೀರು ಹರಿಸುವ ಅವರ ತನಸು ನನಸಾಗಲೇ ಬೇಕು. ಆಗಲೇ ಅವರ ಆತ್ಮಕ್ಕೆ ಶಾಂತಿ ಸಿಗುವುದು. ಅಲ್ಲಿಯ ತನಕ ಹೋರಾಟ ನಿಲ್ಲದು. ಈ ರಾಜಕಾರಣಿಗಳು ತಮ್ಮ ಬೇಳೆ ಬೇಯಿಸಿಕೊಳ್ಳಲು ಎತ್ತಿನ ಹೊಳೆಯ ಕುರಿತಂತೆ ತಪ್ಪು ವಿಚಾರವನ್ನು ಬಿತ್ತುತ್ತಿದ್ದಾರೆ. ಇದು ಹಾಗಾಗದೇ ಡಾ.ಜಿ.ಪರಮಶಿವಯ್ಯ ವರದಿಯಂತೆ ನಡೆದರೆ ಮಾತ್ರ ಶಾಶ್ವತ ನೀರಾವರಿ ಯೋಜನೆ ಸಫಲವಾಗಲು ಸಾಧ್ಯ ಎಂದರು. ಇದೇ ಸಂದರ್ಭದಲ್ಲಿ ತಾ.ಕಸಾಪ ಅಧ್ಯಕ್ಷ ರಾಜಗೋಪಾಲ್ ಮಾತನಾಡಿ ಪರಮಶಿವಯ್ಯ ಅವರು ಸಾಕಷ್ಟು ಆಳವಾದ ರೀತಿಯಲ್ಲಿ ಬಯಲು ಸೀಮೆಗೆ ನೀರು ಹರಿಯುವಂತೆ ವರದಿ ತಯಾರಿಸಿ ಸರ್ಕಾರಕ್ಕೆ ನೀಡಿದ್ದಾರೆ. ಆದರೆ ಈಗ ಇದನ್ನು ಕಾರ್ಯಗತ ಗೊಳಿಸದೇ ದಿಕ್ಕು ತಪ್ಪಿಸಲಾಗುತ್ತಿದೆ ಎಂದು ಆರೋಪಿಸಿದರು. ಈ ಸಂದರ್ಭದಲ್ಲಿ ಪಿ.ಎಲ್.ಡಿ ಬ್ಯಾಂಕ್ ಮಾಜಿ ಅಧ್ಯಕ್ಷ ವೀರಭದ್ರಪ್ಪ, ಜೆಡಿಎಸ್ ಮುಖಂಡ ಸದಣ್ಣ, ಎಂಪಿಸಿಎಸ್ ಅಧ್ಯಕ್ಷ ಬೀರಪ್ಪ ಹೋರಾಟ ಸಮಿತಿ ಸದಸ್ಯರು ನಾಗರಿಕರು ಭಾಗವಹಿಸಿದ್ದರು.
ಕನಕಪುರದಲ್ಲಿ...
ಕನಕಪುರ: ಬಯಲು ಸೀಮೆಯ ಹತ್ತಾರು ಜಿಲ್ಲೆಗಳ ನೀರಿನ ಬರವನ್ನು ನೀಗಿಸಲು, ಎತ್ತಿನಹೊಳೆ, ನೇತ್ರಾವತಿ ತಿರುವು ಮೊದಲಾದ ಯೋಜನೆಗಳನ್ನು ರೂಪಿಸಿದ ನೀರಾವರಿ ತಜ್ಞ ಡಾ.ಪರಮಶಿವಯ್ಯ ನಿಧನಕ್ಕೆ ಕನಕಪುರದ ರೈತಸಂಘ, ಜಯಕರ್ನಾಟಕ, ಕರ್ನಾಟಕ ರಕ್ಷಣಾವೇದಿಕೆ, ಕರ್ನಾಟಕ ಸಂಘ ಮೊದಲಾದವು ಸಂತಾಪ ಸೂಚಿಸಿವೆ. ನೀರಾವರಿ ತಜ್ಞ ಡಾ.ಪರಮಶಿವಯ್ಯ ತಮ್ಮ ಕನಸು ನನಸಾಗುವುದಕ್ಕೆ ಮುನ್ನವೇ ಇಹಲೋಕ ತ್ಯಜಿಸಿದ್ದಾರೆ. ನಾಡಿನ ಬೆಳವಣಿಗೆ ದೃಷ್ಟಿಯಿಂದ ಅಪಾರವಾದ ನಷ್ಟವಾಗಿದೆ ಎಂದು ರೈತಸಂಘದ ಕೆ.ಬಿ.ನಾಗರಾಜು, ಸಂಪತ್, ಲಕ್ಷ್ಮೀನಾರಾಯಣಗೌಡ, ಮರಳವಾಡಿ ಉಮಾಶಂಕರ್, ಎಲ್ಲೇಗೌಡ ಬೆಸಗರಹಳ್ಳಿ ಮೊದಲಾದವರು ಅಶ್ರುತರ್ಪಣ ಮಿಡಿದಿದ್ದಾರೆ.
ಅಂಚೆ ಅದಾಲತ್
ಬೆಂಗಳೂರು: ಪ್ರಧಾನ ಪೋಸ್ಟ್ ಮಾಸ್ಟರ್ ಕಚೇರಿಯಲ್ಲಿ ಅಂಚೆ ಅದಾಲತ್ ಮಾ. 22ರಂದು ಬೆಳಗ್ಗೆ 11ಕ್ಕೆ ನಡೆಯಲಿದೆ. ನಗರದ ಜಿಪಿಒ ಕಟ್ಟಡದ 1ನೇ ಮಹಡಿಯಲ್ಲಿ ನಡೆಯುತ್ತಿದ್ದು, ಹತ್ತಿರವಿರುವ ಗ್ರಾಹಕರು ಉಳಿತಾಯ ಖಾತೆ ಸೇರಿದಂತೆ ಇನ್ನಿತರ ಸೌಲಭ್ಯಗಳಿಗಾಗಿ ಸಂಪರ್ಕಿಸಬಹುದಾಗಿದೆ. ಸಲಹೆ ಹಾಗೂ ದೂರುಗಳಿದ್ದಲ್ಲಿ ಮಾ. 16ರ ಒಳಗೆ ಅಂಚೆ ಕಚೇರಿಗೆ ಕಳುಹಿಸಬಹುದಾಗಿದೆ.ಛ