ಅಬ್ಬರದ ಪ್ರಚಾರ ನಡೆಸಿದ ಸಂಸದೆ ರಮ್ಯಾ
ನಾಗಮಂಗಲ: ಮಂಡ್ಯ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ರಮ್ಯಾ ಶನಿವಾರ ಎಡಬಿಡದೇ ಪ್ರಚಾರ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಜನಬಳಿ ಮತಯಾಚಿಸಿದರು. ಆದಿ ಚುಂಚನಗಿರಿ ಕ್ಷೇತ್ರಕ್ಕೆ ತೆರಳಿ, ಶಿವೈಕ್ಯ ಜಗದ್ಗುರು ಬಾಲ ಗಂಗಾಧರ ನಾಥ ಶ್ರೀಗಳ ಗದ್ದುಗೆ ವಂದಿಸಿ ನಂತರ ನಿರ್ಮಲಾನಂದನಾಥರನ್ನು ಭೇಟಿ ಮಾಡಿ ಆಶೀರ್ವಾದ ಪಡೆದರು. ನಂತರ ಭಾರತ ನಿರ್ಮಾಣ ಯಾತ್ರಾ ಕಾರ್ಯಕ್ರಮದ ಅಂಗವಾಗಿ ಏರ್ಪಡಿಸಿದ್ದ ಪಾದಯಾತ್ರೆಯಲ್ಲಿ ಪಾಲ್ಗೊಂಡು ತಾಲೂಕಿನ ಮಾಯಿಗೋನಹಳ್ಳಿಯಿಂದ ಪಟ್ಟಣಕ್ಕೆ ಆಗಮಿಸಿದರು. ನಂತರ ಮಿನಿ ವಿಧಾನಸೌಧದ ಮುಂಭಾಗ ಸಾರ್ವಜನಿಕರನ್ನುದ್ದೇಶಿಸಿ ರಮ್ಯಾ ಮಾತನಾಡಿದರು. ಕಳೆದ ಲೋಕಸಭಾ ಚುನಾವಣೆ ನಾನು ಗೆದ್ದ ಮೇಲೆ ಎಲ್ಲಾ ತಾಲೂಕುಗಳಿಗೂ ಸಮಾನತೆಯಿಂದ ಅನುದಾನ ವಿನಿಯೋಗಿಸಿದ್ದೇನೆ. ನಾಗಮಂಗಲ ಕ್ಷೇತ್ರದ ಅಭಿವೃದ್ಧಿಗಾಗಿ 60 ಲಕ್ಷ ರು. ಅನುದಾನ ನೀಡಿದ್ದೇನೆ. ಕಡಿಮೆ ಅವಧಿಯಲ್ಲಿಯೂ ಜಿಲ್ಲೆಯ ಅಭಿವೃದ್ಧಿಗೆ ಪ್ರಾಮಾಣಿಕ ಪ್ರಯತ್ನ ಮಾಡಿರುವ ತೃಪ್ತಿ ನನಗಿದೆ ಎಂದರು. ಕಸಬಾ ಹೋಬಳಿ ಮಾಯಿಗೋನಹಳ್ಳಿಯಿಂದ ರಮ್ಯಾ ಪಾದಯಾತ್ರೆ ಪಟ್ಟಣ ಪ್ರವೇಶಿಸುತ್ತಿದ್ದಂತೆ ಅಭಿಮಾನಿಗಳು ಹಾಗೂ ಪಕ್ಷದ ಕಾರ್ಯಕರ್ತರು ಸ್ವಾಗತಿಸಿದರು. ಪಾದಯಾತ್ರೆಯಲ್ಲಿ ಮಾಜಿ ಶಾಸಕ ಎಲ್.ಆರ್. ಶಿವರಾಮೇಗೌಡ ಮತ್ತು ಕೆ. ಸುರೇಶ್ಗೌಡ ಜೊತೆಗೂಡಿ ಅಭಿಮಾನಿಗಳಿಗೆ ಹುರುಪು ತುಂಬಿದರು.