ಅಮೆರಿಕದಲ್ಲಿ ನನ್ನ ಹೆಸರು ಹೇಳಿ ದೇಣಿಗೆ ಸಂಗ್ರಹ: ತಿಮ್ಮಕ್ಕ ಆರೋಪ
ರಾಮನಗರ: ನನ್ನ ಹೆಸರು ದುರ್ಬಳಕೆ ಮಾಡಿಕೊಂಡು ಅಮೆರಿಕದ ಸಂಸ್ಥೆಯೊಂದು 1 ಮಿಲಿಯನ್ ಡಾಲರ್ಮೊತದಷ್ಟು ದೇಣಿಗೆ ಸಂಗ್ರಹಿಸಿ ಭಾರಿ ಅವ್ಯವಹಾರ ನಡೆಸಿದೆ ಎಂದು ಆರೋಪಿಸಿ ಸಾಲುಮರದ ತಿಮ್ಮಕ್ಕ ರಾಮನಗರ ನ್ಯಾಯಾಲಯದಲ್ಲಿ ದಾವೆ ಹೂಡಿದ್ದಾರೆ.
ಅಮೆರಿಕದಲ್ಲಿ ತಿಮ್ಮಕ್ಕ ರಿಸೋರ್ಸ್ ಫಾರ್ ಎನ್ವಿರಾನ್ಮೆಂಟ್ ಎಜುಕೇಷನ್ ಹೆಸರಿನಲ್ಲಿ ಸ್ವಯಂ ಸೇವಾ ಸಂಸ್ಥೆ ಹುಟ್ಟುಹಾಕಿರುವ ಕೆಲವರು ತನ್ನ ಹೆಸರು ಬಳಕೆ ಮಾಡಿಕೊಂಡು ಭಾರಿ ಮೊತ್ತದ ಹಣ ವಸೂಲು ಮಾಡಿದ್ದಾರೆ ಎಂದು ದಾವೆಯಲ್ಲಿ ಆರೋಪಿಸಿದ್ದಾರೆ.
ಈಚೆಗೆ ತನ್ನ ಅಭಿಮಾನಿಗಳೆಂದು ಹೇಳಿಕೊಂಡು ಬಂದಿದ್ದ ಮೂವರು ಮಹಿಳೆಯರು ನನ್ನ ಸಾಧನೆಗಳ ಬಗ್ಗೆ ವಿಡಿಯೋ ಚಿತ್ರೀಕರಣ ಮಾಡಿದ್ದು, ಆಟೋಗ್ರಾಫ್ ಪಡೆದುಕೊಂಡಿದ್ದರು. ನನ್ನ ಹೆಸರು, ಸಾಧನೆ ಮತ್ತು ಪರಿಸರದ ಬಗೆಗಿನ ಕಾಳಜಿಯನ್ನು ಆಧಾರವಾಗಿಟ್ಟುಕೊಂಡು ದೇಣಿಗೆ ಸಂಗ್ರಹಿಸಿದ್ದಾರೆ ಎಂದು ತಿಮ್ಮಕ್ಕ ದೂರಿದ್ದಾರೆ. ಸಂಸ್ಥೆ ಸ್ಥಾಪನೆ ಬಗ್ಗೆಯಾಗಲಿ, ದೇಣಿಗೆ ವಸೂಲಾತಿಗೂ ನನ್ನ ಪೂರ್ವಾನುಮತಿ ಪಡೆದುಕೊಳ್ಳಲಾಗಿಲ್ಲ. ಸದರಿ ಸಂಸ್ಥೆಯಿಂದ ತಮಗೆ ರಾಯಲ್ಟಿಯೂ ಸಂದಾಯವಾಗಿಲ್ಲ. ಈ ಪ್ರಕರಣದ ವಿಚಾರಣೆ ನಡೆಸಿ, ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು ಎಂದು ದಾವೆಯಲ್ಲಿ ಒತ್ತಾಯಿಸಿದ್ದಾರೆ.