ಮಾವು ಸಂಸ್ಕರಣಾ ಘಟಕ ಸ್ಥಾಪನೆ ಅಗತ್ಯ
ರಾಮನಗರ: ರಾಜ್ಯದ ಮಾವು ಉತ್ಪಾದನೆಯಲ್ಲಿ ಎರಡನೇ ಸ್ಥಾನ ಪಡೆದಿರುವ ರಾಮನಗರ ಜಿಲ್ಲೆಯಲ್ಲಿ ಮಾವು ಸಂಸ್ಕರಣಾ ಘಟಕ ಸ್ಥಾಪನೆಗೆ ಶೀಘ್ರ ಕ್ರಮ ಅಗತ್ಯವಾಗಿದೆ ಎಂದು ಜಿಲ್ಲಾಧಿಕಾರಿ ಡಾ.ಡಿ.ಎಸ್. ವಿಶ್ವನಾಥ್ ಹೇಳಿದರು.
ನಗರದ ಜಾನಪದ ಲೋಕದ ಬಳಿ ಜಿಪಂ, ತೋಟಗಾರಿಕೆ ಇಲಾಖೆಯಿಂದ ಶುಕ್ರವಾರ ಪ್ರಾರಂಭಗೊಂಡ 10 ದಿನಗಳ ಮಾವು ಪರಿಷೆಗೆ ಚಾಲನೆ ನೀಡಿ ಮಾತನಾಡಿದ ಅವರು, ಗುಣಮಟ್ಟ ಕಾಯ್ದುಕೊಂಡರೆ ನಮ್ಮ ಮಾವಿಗೆ ಜಾಗತಿಕ ಮಟ್ಟದಲ್ಲಿ ಬೇಡಿಕೆ ಬರುತ್ತದೆ ಎಂದರು.
ಮಾವು ಉತ್ಪಾದನೆ, ಶೇಖರಣೆ ಮತ್ತು ಹಣ್ಣು ಮಾಡುವಿಕೆಯಲ್ಲಿ ವೈಜ್ಞಾನಿಕ ಪದ್ಧತಿ ಅಳವಡಿಸಿಕೊಳ್ಳುವುದು ಅಗತ್ಯ. ಈ ನಿಟ್ಟಿನಲ್ಲಿ ಮಾವು ಸಂಸ್ಕರಣಾ ಘಟಕ ಸ್ಥಾಪನೆಗೆ ಒತ್ತು ನೀಡಲಾಗುವುದು ಎಂದು ಅವರು ಭರವಸೆ ನೀಡಿದರು.
ತೋಟಗಾರಿಕೆಗೆ ಉತ್ತೇಜನ: ಜಗತ್ತಿನಲ್ಲೇ ಭಾರತ ಹಣ್ಣು ಮತ್ತು ತರಕಾರಿ ಉತ್ಪಾದನೆಯಲ್ಲಿ 2ನೇ ಸ್ಥಾನದಲ್ಲಿದ್ದರೆ, ದೇಶದ ಮಟ್ಟಿಗೆ ಕರ್ನಾಟಕ 4ನೇ ಸ್ಥಾನ ಪಡೆದಿದೆ. ಮಾವು ಉತ್ಪಾದನೆಯಲ್ಲಿ ಕೋಲಾರಕ್ಕೆ ಅಗ್ರಸ್ಥಾನವಿದ್ದು, ನಂತರದ ಸ್ಥಾನ ರಾಮನಗರ ಜಿಲ್ಲೆಗೆ ಎಂದು ವಿಶ್ವನಾಥ್ ತಿಳಿಸಿದರು.
ಈ ಜಿಲ್ಲೆಯ 22 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಮಾವು ಬೆಳೆ ಇದೆ. ಈ ಜಿಲ್ಲೆಯಲ್ಲಿ ಬಾದಾಮಿ ಮಾವಿನ ಹಣ್ಣು ಹೆಚ್ಚಾಗಿರುವುದು ವಿಶೇಷ. ಈ ತಳಿಯನ್ನು ಮತ್ತಷ್ಟು ಅಭಿವೃದ್ಧಿಪಡಿಸಲು ಒತ್ತು ನೀಡಲಾಗಿದೆ ಎಂದು ಅವರು ಹೇಳಿದರು.
ಮಾವಿನ ಹಣ್ಣಿನಲ್ಲಿ ಗುಣಮಟ್ಟ ಕಾಯ್ದುಕೊಳ್ಳುವ ನಿಟ್ಟಿನಲ್ಲಿ ಮರದಿಂದ ಕಾಯಿ ಕೀಳುವಾಗಲೇ ದರ್ಜೆವಾರು ವಿಂಗಡಣೆ ಸೂಕ್ತ. ಹಣ್ಣು ಮಾಡುವಾಗ ರಾಸಾಯನಿಕ ವಸ್ತುಗಳನ್ನು ಬಳಸುವ ಬದಲು ವೈಜ್ಞಾನಿಕ ಪದ್ಧತಿ ಅನುಸರಣೆ ಮಾಡಬೇಕು ಎಂದರು.
ಸಹಭಾಗಿತ್ವಕ್ಕೂ ಸಿದ್ಧ: ಖಾಸಗಿ ಸಹಭಾಗಿತ್ವದಲ್ಲಿ ಮಾವು ಸಂಸ್ಕರಣಾ ಘಟಕ ಸ್ಥಾಪನೆಗೆ ಸರ್ಕಾರ ಸಿದ್ಧವಿದೆ. ಘಟಕ ಸ್ಥಾಪನೆಗೆ ಮುಂದೆ ಬರುವ ಖಾಸಗಿಯವರಿಗೆ ಸೂಕ್ತ ಜಾಗ ಸೇರಿದಂತೆ ಅಗತ್ಯ ಸಹಕಾರ ನೀಡಲು ಜಿಲ್ಲಾಡಳಿತ ಸಿದ್ಧವಿದೆ ಎಂದು ವಿಶ್ವನಾಥ್ ತಿಳಿಸಿದರು.
ಆನೆ ದಾಳಿ ಮತ್ತಿತರ ಪ್ರಕೃತಿ ವಿಕೋಪ ಕಾರಣಗಳಿಂದ ಬೆಳೆ ನಷ್ಟ ಅನುಭವಿಸಿರುವ ರೈತರಿಗೆ ಪರಿಹಾರ ವಿತರಿಸಲು ಸರ್ಕಾರ ರು. 2.13 ಕೋಟಿ ಅನುದಾನ ಬಿಡುಗಡೆ ಮಾಡಿದೆ. ತೋಟಗಾರಿಕೆ ಇಲಾಖೆ ಸಮೀಕ್ಷಾ ವರದಿ ಸಲ್ಲಿಸಿದ ತಕ್ಷಣವೇ ಪರಿಹಾರ ವಿತರಿಸಲಾಗುತ್ತದೆ ಎಂದರು.
ಕಾರ್ಯಕ್ರಮದಲ್ಲಿ ಜಿಪಂ ಸಿಇಒ ಡಾ.ಎಂ.ವಿ. ವೆಂಕಟೇಶ್, ತೋಟಗಾರಿಕೆ ಇಲಾಖೆ ಉಪ ನಿರ್ದೇಶಕಿ ಎಚ್.ಎನ್. ಹೇಮಾ ಮಾತನಾಡಿದರು. ಲತಾ ಮಠಮತಿ, ವಿವೇಕ್, ಸುಮಾ, ಮಾವು ಬೆಳೆಗಾರರ ಸಂಘದ ಪದಾಧಿಕಾರಿಗಳು ಮತ್ತು ರೈತ ಮುಖಂಡರು ಭಾಗವಹಿಸಿದ್ದರು.
ಹಲಸು ಮಾರಾಟಕ್ಕೂ ಕ್ರಮ
ಈ ಬಾರಿ ಮಾವು ಪರಿಷೆಯಲ್ಲಿ ಹಲಸಿನ ಹಣ್ಣುಗಳ ಮಾರಾಟಕ್ಕೂ ಪ್ರಾಮುಖ್ಯತೆ ನೀಡಲಾಗಿದೆ. ಹಲಸಿನ ವಿವಿಧ ತಳಿಗಳ ಮಾರಾಟ, ಪ್ರದರ್ಶನದ ಜತೆಗೆ ನರೇಗಾ ಯೋಜನೆಯಡಿ ಮಾವು ಹಲಸು ಮುಂತಾದ ತೋಟಗಾರಿಕೆ ಬೆಳೆಗಳ ಗಿಡಗಳನ್ನು ಬೆಳೆಯಲು ನೀಡುತ್ತಿರುವ ಪ್ರೋತ್ಸಾಹದ ಮಾಹಿತಿಗಳನ್ನೂ ರೈತರಿಗೆ ಒದಗಿಸಲಾಗುತ್ತಿದೆ.
10 ದಿನಗಳ ಮಾವು ಪರಿಷೆ
ರಾಮ್ ಗೋಲ್ಡ್ ಮಾವು ಪರಿಷೆ ಈ ಬಾರಿ 10 ದಿನ ಇರುತ್ತದೆ. ಬೆಂಗಳೂರು-ಮೈಸೂರು ಹೆದ್ದಾರಿ ಪಕ್ಕದಲ್ಲಿ 25 ಮಳಿಗೆಗಳನ್ನು ತೆರೆಯಲಾಗಿದೆ. ವಿವಿಧ ತಳಿಯ ಮಾವಿನ ಹಣ್ಣುಗಳ ಪ್ರದರ್ಶನ ಮತ್ತು ಮಾರಾಟ ವ್ಯವಸ್ಥೆ ಇಲ್ಲಿದೆ. ನೈಸರ್ಗಿಕ ಹಾಗೂ ಸ್ವಾಭಾವಿಕವಾಗಿ ಹಣ್ಣು ಮಾಡಿರುವುದರಿಂದ ಈ ಹಣ್ಣುಗಳಿಂದ ಆರೋಗ್ಯದ ಮೇಲೆ ದುಷ್ಪರಿಣಾಮವೂ ಇಲ್ಲವೆನ್ನುವುದು ಆಯೋಜಕರ ಮಾತು.
ಖ್ಯಾತಿಗೊಳಿಸಲು ಚಿಂತನೆ
ರಾಮನಗರದಲ್ಲಿ ಕಳೆದ 3 ವರ್ಷದಿಂದಲೂ ಮಾವು ಪರಿಷೆ ನಡೆಸಲಾಗುತ್ತಿದೆ. ರಾಮ್ ಗೋಲ್ಡ್ ಬ್ರಾಂಡ್ ಹೆಸರಿನಡಿ ಇಲ್ಲಿನ ಮಾವು ಉತ್ಪನ್ನಗಳನ್ನು ರೈತರಿಂದ ನೇರವಾಗಿ ಗ್ರಾಹಕರಿಗೆ ಮಾರಾಟ ವ್ಯವಸ್ಥೆ ಮಾಡಲಾಗಿದೆ ಎಂದು ಜಿಪಂ ಸಿಇಒ ಡಾ.ಎಂ.ವಿ. ವೆಂಕಟೇಶ್ ಹೇಳಿದರು. ರಾಮ್ ಗೋಲ್ಡ್ ಮಾವಿನ ಹಣ್ಣುಗಳನ್ನು ರಾಜ್ಯದ ವಿವಿಧೆಡೆ ಮಾರಾಟ ಮಾಡುವುದಕ್ಕೆ ವ್ಯವಸ್ಥೆ ಮಾಡಲಾಗಿದೆ. ಮುಂದಿನ ದಿನಗಳಲ್ಲಿ ಈ ಬ್ರಾಂಡ್ ಅನ್ನು ಸಾಕಷ್ಟು ಖ್ಯಾತಿಗೊಳಿಸಿ, ಹೊರ ರಾಜ್ಯಗಳಲ್ಲಿ ಮಾರಾಟಕ್ಕೆ ಪ್ರೋತ್ಸಾಹಿಸುವ ಉದ್ದೇಶವಿದೆ ಎಂದರು.