ಸ್ವಾತಂತ್ರ್ಯ ಹೋರಾಟಗಾರ ಶಂಕರಸಾ ನಿಧನ
ಹುಬ್ಬಳ್ಳಿ: ಸ್ವಾತಂತ್ರ್ಯ ಹೋರಾಟಗಾರ ಶಂಕರಸಾ ಅಂಬಾಸಾ ಕಾಟವೆ(96) ಶುಕ್ರವಾರ ನಿಧನರಾದರು. ಹಲವು ದಿನಗಳಿಂದ ಅಸ್ವಸ್ಥರಾಗಿದ್ದ ಅವರು ಇಲ್ಲಿನ ಭವಾನಿ ನಗರ ನಿವಾಸದಲ್ಲಿ ಶುಕ್ರವಾರ ಬೆಳಗ್ಗೆ ಕೊನೆಯುಸಿರೆಳೆದರು. ನೇತಾಜಿ ಸುಭಾಶ್ಚಂದ್ರ ಭೋಸ್ರನ್ನು ಹುಬ್ಬಳ್ಳಿಗೆ ಕರೆತರುವ ಮೂಲಕ ಸ್ವಾತಂತ್ರ್ಯ ಹೋರಾಟದಲ್ಲಿ ಶಂಕರಸಾ ಮುಂಚೂಣಿಯಲ್ಲಿದ್ದರು. 1942ರ ಚಲೇ ಜಾವ್ ಚಳವಳಿಯ ಸಂದರ್ಭದಲ್ಲಿ ಬಂಧನಕ್ಕೊಳಗಾಗಿದ್ದರು. ಮೃತರಿಗೆ ಮಾಜಿ ಶಾಸಕ ಅಶೋಕ ಕಾಟವೆ ಸೇರಿದಂತೆ ಮೂವರು ಗಂಡು ಮಕ್ಕಳು, ಐವರು ಪುತ್ರಿಯರು, ಅಪಾರ ಬಂಧುಗಳಿದ್ದಾರೆ.
ನಕಲಿ ಐಟಿ ಅಧಿಕಾರಿಗಳ ಹೆಸರಲ್ಲಿ ದರೋಡೆ
ಮೂಡಿಗೆರೆ: ಏಳು ಜನರ ತಂಡವೊಂದು ಶುಕ್ರವಾರ ಬೆಳಗಿನ ಜಾವ ಆದಾಯ ತೆರಿಗೆ ಅಧಿಕಾರಿಗಳ ವೇಷದಲ್ಲಿ ಹೀಚುವಳ್ಳಿ ಎಸ್ಟೇಟ್ನ ಮನೆಯೊಂದಕ್ಕೆ ಅತಿಕ್ರಮಣ ಪ್ರವೇಶ ಮಾಡಿ, ಮನೆ ಮಂದಿಯನ್ನು ಕೋಠಡಿಯಲ್ಲಿ ಕೂಡಿ ಹಾಕಿ, ಮನೆಯಲ್ಲಿದ್ದ ವಸ್ತುಗಳನ್ನು ಚೀಲದೊಳಗೆ ತುಂಬಿಕೊಂಡು ಟಾಟಾ ಸುಮೋ ವಾಹನದಲ್ಲಿ ಸಾಗಿಸುವಾಗ ಇಂಡಿಕಾ ಕಾರಿಗೆ ಡಿಕ್ಕಿ ಹೊಡೆದ ಪರಿಣಾಮ ಚಾಲಕ ಮೂಡಿಗೆರೆಯಲ್ಲಿಯೇ ಸಿಕ್ಕಿ ಬಿದಿದ್ದು, ಉಳಿದ ಆರು ಮಂದಿ ಪರಾರಿಯಾಗಿದ್ದಾರೆ. ಆರೋಪಿಗಳು ಮನೆಯಿಂದ 18 ಲಕ್ಷಕ್ಕೂ ಅಧಿಕ ಮೌಲ್ಯದ ಚಿನ್ನಾಭರಣ, ರು. 3 ಲಕ್ಷ ನಗದು ಮತ್ತು ಸುಮಾರು 2 ಲಕ್ಷ ಬೆಲೆಬಾಳುವ 8 ಚೀಲ ಕಾಳುಮೆಣಸನ್ನು ಹೊತ್ತೋಯ್ದಿದ್ದರು. ಬಂಧಿತ ಚಾಲಕ ಹೊಳಲ್ಕೆರೆಯ ಚತ್ರಪತಿ ಎಂದು ತಿಳಿದು ಬಂದಿದೆ. ಟಾಟಾ ಸುಮೊದಲ್ಲಿ 1 ರಿವಾಲ್ವಾರ್, 3 ಜೊತೆ ಪೊಲೀಸ್ ಬುಟುಗಳು, 2 ಜರ್ಕಿನ್, 1 ಪೊಲೀಸ್ ಹ್ಯಾಟ್, 8 ಚೀಲ ಕಾಳು ಮೆಣಸು, ಬೆಳ್ಳಿಯ ಒಂದು ಹಸೆ ಮಣೆ, ನಕಲಿ ಗಡ್ಡ, ಪತ್ತೆಯಾಗಿವೆ. ಇದರಲ್ಲಿ ರಿವಾಲ್ವಾರ್ ಮತ್ತು ಪೊಲೀಸ್ ಕ್ಯಾಪ್ ನಕಲಿ ಎಂದು ಹೇಳಲಾಗಿದೆ.
ಮೂಡಿಗೆರೆ ಪೊಲೀಸರು ದೂರು ದಾಖಲಿಸಿಕೊಂಡು ಪರಾರಿಯಾಗಿರು ಆರೋಪಿಗಳ ಪತ್ತೆ ಬಲೆ ಬೀಸಿದ್ದಾರೆ.
ನಾಡಿಪತಿ ಚಿಕಿತ್ಸಾ ಶಿಬಿರ 14ರವರೆಗೆ
ಕನಕಪುರ: ತಾಲೂಕಿನ ಕೆಬ್ಬೆದೊಡ್ಡಿ ಗ್ರಾಮದ ಪಿರಮಿಡ್ ವ್ಯಾಲಿಯಲ್ಲಿ ಮೇ 14 ರ ವರೆಗೆ ಯಾವುದೇ ಔಷಧ ಹಾಗೂ ಶಸ್ತ್ರಚಿಕಿತ್ಸೆಗಳ ಅಗತ್ಯವಿಲ್ಲದೆ ಎಲ್ಲಾ ಬಗೆಯ ರೋಗಗಳಿಗೂ ಚಿಕಿತ್ಸೆ ಒದಗಿಸುವ ಪರ್ಯಾಯ ರೋಗ ನಿವಾರಣಾ ಪದ್ಧತಿ ನಾಡಿಪತಿ ಚಿಕಿತ್ಸಾ ಶಿಬಿರ ನಡೆಯಲಿದೆ. ಉಚಿತ ಶಿಬಿರದಲ್ಲಿ ಆಂಧ್ರದ ಹೆಸರಾಂತ ನಾಡಿಪತಿ ವೈದ್ಯ ಡಾ. ಕೃಷ್ಣಂರಾಜು ತಂಡ ಪರ್ಯಾಯ ಚಿಕಿತ್ಸಾ ಪದ್ಧತಿಗಳಾದ ನಾಡಿ ವೀಕ್ಷಣೆ, ಆಕ್ಯುಪ್ರೆಷರ್, ಆಕ್ಯುಪಂಚರ್,ನ್ಯಾಚ್ಯುರಲ್ ಥೆರಪಿ, ಕಪ್ಪಿಂಗ್ ಥೆರಪಿ, ಮ್ಯಾಗ್ನೆಟಿಕ್ ಥೆರಪಿ ಸೇರಿದಂತೆ 25 ಕ್ಕೂ ಹೆಚ್ಚು ಬಗೆಯ ಚಿಕಿತ್ಸಾ ವಿಧಾನಗಳಿಂದ ಜನರಿಗೆ ಉಚಿತವಾಗಿ ಚಿಕಿತ್ಸೆ ನೀಡಲಿದ್ದಾರೆ, ಇದುವರೆಗೂ ಎರಡು ಸಾವಿರಕ್ಕೂ ಹೆಚ್ಚು ಮಂದಿ ಶಿಬಿರದ ಪ್ರಯೋಜನ ಪಡೆದಿದ್ದು ತಾಲೂಕಿನ ಜನರು ನಾಡೀಪತಿ ಚಿಕಿತ್ಸೆಯ ಉಪಯೋಗ ಪಡೆಯಬೇಕೆಂದು ವ್ಯವಸ್ಥಾಪಕರಾದ ಕೆಬ್ಬೆದೊಡ್ಡಿ ನಾಗರಾಜ್ ಹಾಗೂ ಲಲಿತಾ ಸುಬ್ರಹ್ಮಣ್ಯ ಕೋರಿದ್ದಾರೆ.
ಕೀಳು ಮಟ್ಟದ ರಾಜಕೀಯ ಬೇಡ
ಮಾಗಡಿ: ಹಾಲು ಉತ್ಪಾದಕರ ಸಹಕಾರ ಸಂಘಗಳಲ್ಲಿ ಅವ್ಯವಹಾರ ನಡೆದಿದೆ ಎಂದು ಆರೋಪಿಸಿರುವ ಎಂ. ನರಸಿಂಹಯ್ಯ ಕೀಳು ಮಟ್ಟದ ರಾಜಕೀಯ ಬಿಡಬೇಕು ಎಂದು ತಾಲೂಕು ಹಾಲು ಉತ್ಪಾದಕರ ಸಹಕಾರ ನೌಕರರ ಸಂಘದ ಅಧ್ಯಕ್ಷ ಬಿ.ಎನ್.ನಂಜೇಗೌಡ ಎಚ್ಚರಿಸಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಹಾಲು ಉತ್ಪಾದಕರ ಸಹಕಾರ ಸಂಘದಲ್ಲಿ ಅವ್ಯವಹಾರ ನಡೆದಿದೆ ಎಂದು ಆರೋಪಿಸಿರುವುದು ಸತ್ಯಕ್ಕೆ ದೂರವಾದ ಸಂಗತಿ. ಎಂ. ನರಸಿಂಹಯ್ಯ ಕೀಳು ಮಟ್ಟದ ರಾಜಕೀಯ ಮಾಡದೆ ನೇರವಾಗಿ 238 ಹಾಲು ಉತ್ಪಾದಕರ ಸಹಕಾರ ಸಂಘಗಳನ್ನು ತನಿಖೆಗೆ ಒಳಪಡಿಸಲಿ ಎಂದರು.
ತಾಲೂಕು ಹಾಲು ಉತ್ಪಾದಕರ ಸಹಕಾರ ಸಂಘದ ಕಾರ್ಯದರ್ಶಿ ಸಿ.ವಿ. ರಾಜಣ್ಣ, ಉಪಾಧ್ಯಕ್ಷ ಭರತೇಶ್, ಗಂಗಾಧರ್, ಜಯರಾಮಯ್ಯ, ವೆಂಕಟೇಶ್,ನರಸಿಂಹಮೂರ್ತಿ, ಎಂ.ಆರ್. ಮಂಜುನಾಥ್, ಆನಂದ್ ಇದ್ದರು.
ಅರ್ಜಿ ಆಹ್ವಾನ
ರಾಮನಗರ: ಜಿಲ್ಲೆಯ ಪ್ರತಿಷ್ಠಿತ ಶಾಲೆಗಳ 6ನೇ ತರಗತಿಗೆ ಸೇರಬಯಸುವ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗದ ಪ್ರತಿಭಾವಂತ ವಿದ್ಯಾರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. 5ನೇ ತರಗತಿಯಲ್ಲಿ ಶೇ.60ಕ್ಕಿಂತ ಹೆಚ್ಚು ಅಂಕಗಳೊಂದಿಗೆ ಉತ್ತೀರ್ಣರಾದ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಲು ಅರ್ಹರು. ಪೋಷಕರ ವಾರ್ಷಿಕ ವರಮಾನ ರು.2 ಲಕ್ಷದೊಳಗಿದ್ದು, ತಹಸೀಲ್ದಾರರಿಂದ ಪಡೆದ ಜಾತಿ ಮತ್ತು ಆದಾಯ ಪತ್ರ ಕಡ್ಡಾಯವಾಗಿ ಲಗತ್ತಿಸಬೇಕು. ಅರ್ಜಿ ನಮೂನೆಯನ್ನು ಜಿಲ್ಲಾ ಸಮಾಜ ಕಲ್ಯಾಣಾಧಿಕಾರಿಗಳ ಕಚೇರಿ, ತಾಲೂಕು ಸಮಾಜ ಕಲ್ಯಾಣ ಅಧಿಕಾರಿಗಳು ಅಥವಾ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಯಿಂದ ಪಡೆದು, ಭರ್ತಿ ಮಾಡಿದ ಅರ್ಜಿ ಮೇ 20ರೊಳಗೆ ಸಲ್ಲಿಸಬಹುದು ಜಿಲ್ಲಾ ಸಮಾಜ ಕಲ್ಯಾಣಾಧಿಕಾರಿ ರಂಗೇಗೌಡ ತಿಳಿಸಿದ್ದಾರೆ.