ದೇವನಹಳ್ಳಿಯಲ್ಲಿ ಬಸವ ಜಯಂತಿ
ದೇವನಹಳ್ಳಿ: ದೇವನಹಳ್ಳಿ ತಾಲೂಕು ವೀರಶೈವ ಸಮಾಜ, ವೀರಶೈವ ಲಿಂಗಾಯಿತ ನೌಕರರ ಕ್ಷೇಮಾಭಿವೃದ್ಧಿ ಸಂಘ ಹಾಗೂ ವೀರಶೈವ ಮಹಿಳಾ ಸಂಘದ ಆಶ್ರಯದಲ್ಲಿ ಬಸವ ಜಯಂತಿ ಹಾಗೂ ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿದವರಿಗೆ ಸನ್ಮಾನ ಸಮಾರಂಭ ಶನಿವಾರ ವಿಜಯಪುರ ಕ್ರಾಸ್ ಬಳಿ ಆಯೋಜಿಸಲಾಗಿತ್ತು.
ಸಮಾರಂಭದ ಉದ್ಘಾಟನೆಯನ್ನು ಶಾಸಕ ಪಿಳ್ಳಮುನಿಶಾಮಪ್ಪ ನೆರವೇರಿಸಿ, ಎಂಟು ನೂರು ವರ್ಷಗಳ ಹಿಂದೆಯೇ ಬಸವಣ್ಣನವರು ತಮ್ಮ ಅಧಿಕಾರಾವಧಿಯಲ್ಲಿ ಎಲ್ಲ ಜಾತಿಯವರಿಗೂ ಸಮಾನ ಅವಕಾಶ ನೀಡಿ ಕ್ರಾಂತಿಕಾರಿ ಬದಲಾವಣೆ ಮಾಡಿದ್ದರು. ಬಸವಣ್ಣನವರ ವಚನಗಳು ಎಲ್ಲ ಜಾತಿಯವರಿಗೂ ಆದರ್ಶವಾಗಿದೆ ಎಂದು ತಿಳಿಸಿದರಲ್ಲದೆ ಈ ಸಂಘಕ್ಕೆ ಅಗತ್ಯವಾದ ನಿವೇಶನ ಸರ್ಕಾರದಿಂದ ಕೊಡಿಸುವ ಭರವಸೆ ನೀಡಿದರು.
ನಿವೃತ್ತ ಪೊಲೀಸ್ ಕಮೀಷನರ್ ಜ್ಯೋತಿ ಪ್ರಕಾಶ್ ಮಿರ್ಜಿ ಮಾತನಾಡಿ, ಬಸವಣ್ಣನವರ ಜಯಂತಿ ಕೇವಲ ಭಾಷಣ ಮತ್ತು ಸನ್ಮಾನಗಳಿಗೆ ಮಾತ್ರ ಸೀಮಿತವಾಗಬಾರದು ಬಸವಣ್ಣನವರ ವಚನದಂತೆ ಪ್ರತಿ ವರ್ಷ ಏನಾದರೂ ಸಾಮಾಜಿಕ ಬದಲಾವಣೆಯ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕು ಎಂದರು. ಇದೇ ಸಂಧರ್ಭದಲ್ಲಿ ವೀರಶೈವ ವಧುವರರ ಮಾಹಿತಿ ಕೇಂದ್ರ ಉದ್ಘಾಟಿಸಿದ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪರ ಆಪ್ತ ಸಹಾಯಕ ಸಿದ್ದಲಿಂಗಸ್ವಾಮಿ ಮಾತನಾಡಿ, ಯಾವುದೇ ಸಂಘ ಬೆಳೆಯಲು ಸಂಘಟನೆ ಮುಖ್ಯ. ಬಸವಣ್ಣ ಹಾಗೂ ಶರಣರ ವಚನಗಳ ಬಗ್ಗೆ ವಿದ್ಯಾರ್ಥಿಳಿಗೆ ಅರಿವು ಮೂಡಿಸಿ ಪ್ರತಿ ವರ್ಷ ಪರೀಕ್ಷೆ ನಡೆಸಿ ಪ್ರೋತ್ಸಾಹ ಧನ ನೀಡುವಂತಾಗಬೇಕು ಎಂದರು.
ಶಿವಗಂಗೆ ಹೊನ್ನಮ್ಮದೇವಿ ಮಠದ ಶ್ರೀ ರುದ್ರಮುನಿ ಶಿವಾಚಾರ್ಯ ಸ್ವಾಮೀಜಿ ಆಶೀರ್ವಚನ ನೀಡಿ, ವೀರಶೈವ ಜನಾಂಗಲ್ಲಿ ಅನೇಕ ಮಂದಿ ಆರ್ಥಿಕವಾಗಿ ಮುಂದೆ ಇದ್ದರೂ ರಾಜಕೀಯವಾಗಿ ಅಧಿಕಾರ ಪಡೆಯಬೇಕು ಎಂದರಲ್ಲದೆ ಎಲ್ಲ ಜಾತಿ ಧರ್ಮದವರನ್ನು ಪ್ರೀತಿಸಿ ಅಪ್ಪಿಕೊಳ್ಳುವ ಧರ್ಮ ಅಂದರೆ ಬಸವಣ್ಣನ ಸಮಾಜ ಅದೇ ವೀರಶೈವ ಧರ್ಮ ಎಂದರು. ವಿಜಯಪುರ ಬಸವ ಕಲ್ಯಾಣ ಮಠದ ಮಹದೇವ ಸ್ವಾಮೀಜಿ ಆಶೀರ್ವಚನ ನೀಡಿದರು. ಸಮಾರಂಭದ ಅಧ್ಯಕ್ಷತೆಯನ್ನು ಸಂಘದ ಅಧ್ಯಕ್ಷ ಎಂ.ಎಸ್. ರಮೇಶ್ ವಹಿಸಿದ್ದರು. ಪುರಸಭಾ ಸದಸ್ಯರಾದ ವೈ.ಸಿ. ಸತೀಶ್ ಕುಮಾರ್, ಟಿ.ವಿ. ಬಸವರಾಜು, ಎಂ.ಬಿ.ತಿಪ್ಪಣ್ಣ, ಜಿ. ಚನ್ನಪ್ಪ ಇದ್ದರು.
ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿದ ನಿವೃತ್ತ ಪೊಲೀಸ್ ಕಮೀಷನರ್ ಜ್ಯೋತಿ ಪ್ರಕಾಶ್ ಮಿರ್ಜಿ, ಜರಗನಹಳ್ಳಿ ಶಿವಶಂಕರ್, ಸೂರ್ಯಕಲಾ ಮೂರ್ತಿ, ಜಗದೀಶ್ ಹಾಗೂ ಪತ್ರಕರ್ತ ಬಿ.ಪಿಳ್ಳರಾಜುರನ್ನು ಸನ್ಮಾನಿಸಲಾಯಿತು. ಸನ್ಮಾನಿತರ ಪರ ಜ್ಯೋತಿಪ್ರಕಾಶ್ ಮಿರ್ಜಿ, ಜರಗನಹಳ್ಳಿ ಶಿವಶಂಕರ್ ಹಾಗೂ ಸೂರ್ಯಕಲಾ ಮೂರ್ತಿ ಮಾತನಾಡಿದರು. ಯಲಹಂಕ ನೀಲಾಂಬಿಕ ಭಜನೆ ಮಂಡಳಿಯ ಮಂಜುಳ ತಿಪ್ಪಣ್ಣ ಹಾಗೂ ಡಾ. ಕವಿತಾ ಪ್ರಸಾದ್ರಿಂದ ಭಕ್ತಿಗೀತೆಗಳ ಗಾಯನ ನಡೆಯಿತು.