ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೆಂಗಳೂರು ಗ್ರಾಮಾಂತರ

ಪ್ರವಾಸೋದ್ಯಮ ಕೇಂದ್ರವಾಗಿ ಬೊಂಬೆನಾಡು

Srinivasa Murthy VN
Updated On : 11 May 2014, 1:09 am

ಚನ್ನಪಟ್ಟಣ: ಬೊಂಬೆನಾಡು ಪ್ರವಾಸೋದ್ಯಮಕ್ಕೆ ಸೂಕ್ತವಾಗಿದ್ದು, ಈ ತಾಲೂಕಿನ ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡುವ ಯೋಜನೆಗಳನ್ನು ಅನುಷ್ಠಾನಗೊಳಿಸುವುದಾಗಿ ಶಾಸಕ ಸಿ.ಪಿ. ಯೋಗೇಶ್ವರ್ ತಿಳಿಸಿದರು.
ತಾಲೂಕಿನ ಸಿಂಗರಾಜಿಪುರ ಗ್ರಾಮದಲ್ಲಿ ಕಣ್ವ ಕೋಡಂಬಹಳ್ಳಿ ಏತನೀರಾವರಿ ಯೋಜನೆಗೆ ಚಾಲನೆ ನೀಡಿ ಮಾತನಾಡಿ, ರಾಜಧಾನಿಗೆ ಸನಿಹದಲ್ಲಿರುವ ಕಾರಣ ಒಂದು ದಿನದ ಪ್ರವಾಸಕ್ಕೆ ನಮ್ಮ ತಾಲೂಕನ್ನು ಅಭಿವೃದ್ಧಿ ಪಡಿಸಲು ಸಾಕಷ್ಟು ಅವಕಾಶಗಳಿದ್ದು, ಈ ನಿಟ್ಟಿನಲ್ಲಿ ನೀಲ ನಕ್ಷೆ ಸಿದ್ಧಪಡಿಸಿ ಸರ್ಕಾರದಿಂದ ಅನುಮೋದನೆ ದೊರಕಿಸಿ ಕೊಡುವುದಾಗಿ ತಿಳಿಸಿದರು.
ಕೆಆರ್‌ಎಸ್‌ನಿಂದ ನೀರು: ಕಾವೇರಿ ಪ್ರಾಧಿಕಾರದ ಅಂತಿಮ ತೀರ್ಪಿನಲ್ಲಿ ಕೆಆರ್‌ಎಸ್‌ನಿಂದ 10 ಟಿಎಂಸಿ ನೀರನ್ನು ಬಳಸಿ ಕೊಳ್ಳಲು ಅವಕಾಶ ಇದ್ದು, ಇದನ್ನು ಬಳಕೆ ಮಾಡುವ ಬಗ್ಗೆ ರಾಜ್ಯ ಯಾವುದೇ ಯೋಜನೆ ಸಿದ್ಧಪಡಿಸಿಲ್ಲ. ತಾಲೂಕಿನ ಸಮಗ್ರ ನೀರಾವರಿಗೆ ಇನ್ನೂ 2 ಟಿಎಂಸಿ ನೀರಿನ ಅಗತ್ಯತೆ ಇದ್ದು, ಕಣ್ವಗೆ ಕೆಆರ್‌ಎಸ್‌ನಿಂದ ನೀರುತರಲು ಯೋಜನೆ ಸಿದ್ಧಪಡಿಸಿರುವುದಾಗಿ ತಿಳಿಸಿದರು.
ಕೆಆರ್‌ಎಸ್‌ನಿಂದ ಮಾರ್ಕೋನಹಳ್ಳಿ ಜಲಾಶಯದ ಮೂಲಕ ಕಣ್ವಗೆ ನೀರು ತರಲು ಯೋಜನೆ ಸಿದ್ಧಪಡಿಸಿದ್ದು, ಮಳೆಗಾಲದಲ್ಲಿ ನೆರೆ ನಿಯಂತ್ರಣ ಕಾಲುವೆ ಮೂಲಕ ನೀರನ್ನು ಕಣ್ವ ಜಲಾಶಯದ ಮೂಲಕ ಮತ್ತೆ ಕಾವೇರಿಗೆ ಹರಿಸಲಾಗುವುದು ಇದರಿಂದಾಗಿ ತಾಲೂಕಿಗೆ ಶಾಶ್ವತ ನೀರಾವರಿ ಯೋಜನೆ ಲಭ್ಯವಾಗಲಿದೆ ಎಂದು ತಿಳಿಸಿದರು.
ಆಗಸ್ಟ್‌ನಲ್ಲಿ ಕಣ್ವ ಯೋಜನೆ ಪೂರ್ಣ: ಶಿಂಷಾನದಿಯಿಂದ ಕಣ್ವ ನದಿಗೆ ನೀರು ತುಂಬುವ ಏತನೀರಾವರಿ ಯೋಜನೆ ಕಾಮಗಾರಿ ಪ್ರಗತಿಯಲ್ಲಿದ್ದು, ಮುಂದಿನ ಆಗಸ್ಟ್ ತಿಂಗಳೊಳಗೆ ಮೋಗೇನಹಳ್ಳಿ ಕೆರೆಗೆ ನೀರು ತುಂಬಿಸುವ ಮೂಲಕ ಯೋಜನೆಯನ್ನು ತಾಲೂಕಿಗೆ ಸಮರ್ಪಿಸಲಾಗುವುದು. ಕಣ್ವ ಜಲಾಶಯಕ್ಕೂ ಈ ವರ್ಷದಲ್ಲೇ ನೀರು ತುಂಬಿಸುವುದಾಗಿ ತಿಳಿಸಿದರು.
ಕೆರೆಗಳ ಆಧುನೀಕರಣ: ತಾಲೂಕಿನ ಎಲ್ಲಾ ಕೆರೆಗಳ ಹೂಳು ತೆಗೆಯುವ ಜತೆಗೆ ಕೆರೆಗಳ ಏರಿ ದುರಸ್ತಿ, ತೂಬಿನ ದುರಸ್ತಿ ಕೋಡಿ ದುರಸ್ತಿ ಸೇರಿದಂತೆ ಕೆರೆಗಳ ಆಧುನೀಕರಣ ಕಾಮಗಾರಿಗೆ ಸದ್ಯದಲ್ಲೇ ಚಾಲನೆ ನೀಡಲು ಯೋಜನೆ ಸಿದ್ಧಪಡಿಸಿರುವುದಾಗಿ ತಿಳಿಸಿದರು.
ಬಿ.ಟಿ. ಜಯಮುದ್ದಪ್ಪ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶಿವಮಾದು, ವೀರೇಗೌಡ, ಡಿ.ಕೆ. ಕಾಂತರಾಜು, ಎಚ್.ಎಸ್. ಕಾಂತರಾಜು, ಚಕ್ಕೆರೆ ರಾಜು, ಶಿವಮಲ್ಲೇಗೌಡ, ಗಂಗಾಧರ್, ವೆಂಕಟೇಗೌಡ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement