ಆಸ್ತಿ ತೆರಿಗೆ ಹೆಚ್ಚಳ: ಜನತೆ ಆಕ್ರೋಶ
-ವಿಶೇಷ ವರದಿ
ರಾಮನಗರ: ರಾಜಕೀಯ ಅರಾಜಕತೆ, ಜನ ವಿರೋಧಿ ಆಡಳಿತ ಮತ್ತು ಅಕ್ರಮ ಖಾತೆಗಳ ಕೂಪವಾಗಿರುವ ರಾಮನಗರ ನಗರಸಭೆ ಆಡಳಿತವು ನಾಗರಿಕರಿಗೆ ವಾರಕ್ಕೊಮ್ಮೆ ಕುಡಿಯುವ ನೀರು ಸಹಿತ ಕನಿಷ್ಠ ಮೂಲ ಸೌಕರ್ಯ ಕಲ್ಪಿಸಲಾಗದಿದ್ದರೂ ಆಸ್ತಿ ತೆರಿಗೆ ಜತೆಗೆ ಕಸ ವಿಲೇವಾರಿ ನಿರ್ವಹಣಾ ಶುಲ್ಕ ಹೆಚ್ಚಿಸುವ ಮೂಲಕ ಜನರ ಆಕ್ರೋಶಕ್ಕೆ ಗುರಿಯಾಗಿದೆ.
ಅತ್ತ ಕೇಂದ್ರದಲ್ಲಿ ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರವು ಅಗತ್ಯ ವಸ್ತುಗಳ ಬೆಲೆ ಏರಿಕೆಗೆ ಕಡಿವಾಣ ಹಾಕುವಲ್ಲಿ ವಿಫಲವಾಗಿದ್ದಕ್ಕೆ ಈ ಬಾರಿ ಚುನಾವಣೆಯಲ್ಲಿ ಧೂಳೀಪಟವಾಗಿದೆ. ಈಗ ಅದೇ ಪಕ್ಷದ ಹಿಡಿತದಲ್ಲಿರುವ ನಗರಸಭೆಯು ಸಂಪನ್ಮೂಲ ಕ್ರೂಢೀಕರಣಕ್ಕಾಗಿ ಜನರ ಕಿಸೆಗೆ ಕತ್ತರಿ ಹಾಕಲು ಮುಂದಾಗಿರುವುದು ವಿಪರ್ಯಾಸದ ಸಂಗತಿ.
ಆಸ್ತಿ ತೆರಿಗೆ ಹೆಚ್ಚಿಸಲು ಸ್ವಯಂ ನಿರ್ಧಾರ ಕೈಗೊಂಡಿರುವ ನಗರಸಭೆ ಆಡಳಿತವು ಪೌರಾಡಳಿತ ನಿರ್ದೇಶನಾಲಯ ಹೊರಡಿಸಿದ ಸುತ್ತೋಲೆಯನ್ನು ಆಧರಿಸಿ ಪ್ರಾಥಮಿಕ ತ್ಯಾಜ್ಯ ಸಂಗ್ರಹಣೆ ಮತ್ತು ನಿರ್ವಹಣೆಯ ಸೇವಾ ಶುಲ್ಕವನ್ನು ಭಾರಿ ಪ್ರಮಾಣದಲ್ಲಿ ಹೆಚ್ಚಳ ಮಾಡಿದೆ. ಜಿಲ್ಲಾಧಿಕಾರಿಯು ಆಡಳಿತಾಧಿಕಾರಿ ಆಗಿದ್ದ
ಸಂದರ್ಭದಲ್ಲಿ ಈ ಷಡ್ಯಂತ್ರ ರೂಪಿತವಾಗಿದೆ.
ಪರಿಷ್ಕೃತ ದರ ಜಾರಿಗೆ: ಪರಿಷ್ಕೃತ ಆಸ್ತಿ ತೆರಿಗೆ ಮತ್ತು ತ್ಯಾಜ್ಯ ಸಂಗ್ರಹಣೆ, ನಿರ್ವಹಣೆಯ ಸೇವಾ ಶುಲ್ಕ ಪರಿಷ್ಕರಣೆಯು 2014ನೇ ಏಪ್ರಿಲ್ 1ರಿಂದಲೇ ಜಾರಿಯಾಗಿದೆ. ಆಸ್ತಿ ತೆರಿಗೆಯ ಜತೆಯಲ್ಲೇ ತ್ಯಾಜ್ಯ ಸೇವಾ ಶುಲ್ಕವನ್ನೂ ವಸೂಲು ಮಾಡಲಾಗುತ್ತಿದೆ. ಕಂದಾಯ ಪಾವತಿಸಲು ನಗರಸಭೆ ಕಚೇರಿ ಬಳಿ ಆಸ್ತಿ ಮಾಲೀಕರು ತೆರಳಿದಾಗಲೇ ದರ ಪರಿಷ್ಕರಣೆ ಆಗಿರುವುದು ಬಯಲಾಗಿದೆ.
ಪ್ರತಿ 3 ವರ್ಷಕ್ಕೊಮ್ಮೆ ಶೇಕಡ 15 ರಿಂದ 30ರಷ್ಟು ತೆರಿಗೆ ಹೆಚ್ಚಳಕ್ಕೆ ಅವಕಾಶವಿದೆ. ಒಂದೊಮ್ಮೆ ನಗರಸಭೆ ಆಡಳಿತವು ಜನಪರವಾಗಿ ತೀರ್ಮಾನ ಕೈಗೊಳ್ಳಲೇಬೇಕೆಂದಿದ್ದರೆ ಶೇಕಡ 15ರಷ್ಟು ಹೆಚ್ಚಳ ಮಾಡಬಹುದಿತ್ತು. ಆದರೆ, ಏಕಾಏಕಿ ಶೇಕಡ 30ರಷ್ಟು ಹೆಚ್ಚಳ ಮಾಡಿರುವುದನ್ನು ಗಮನಿಸಿದರೆ ಇಲ್ಲಿ ಜನಪರ ಕಾಳಜಿಯ ಕೊರತೆ ಎದ್ದು ಕಾಣುತ್ತಿದೆ.
ಜನಪ್ರತಿನಿಧಿಗಳಿಗೆ ಬಿಸಿತುಪ್ಪ: ರಾಮನಗರ ನಗರಸಭೆಯಲ್ಲಿ ಸುಮಾರು 1 ವರ್ಷ ಚುನಾಯಿತ ಆಡಳಿತ ವ್ಯವಸ್ಥೆ ಇರಲಿಲ್ಲ.
ಆಗ ಜಿಲ್ಲಾಧಿಕಾರಿಯೇ ಈ ಸಂಸ್ಥೆಯ ಆಡಳಿತಾಧಿಕಾರಿ ಆಗಿದ್ದರು. ಅವರ ಅಧಿಕಾರಾವಧಿಯಲ್ಲೇ ಆಸ್ತಿ ತೆರಿಗೆ ಪರಿಷ್ಕರಣೆಗೆ ನಿರ್ಧಾರವಾಗಿದ್ದು, ಈಗಷ್ಟೇ ಜಾರಿಯಾಗಿದೆ. ಇದು ಸಹಜವಾಗಿಯೇ ಚುನಾಯಿತ ಪ್ರತಿನಿಧಿಗಳಿಗೆ ಬಿಸಿತುಪ್ಪವಾಗಿದೆ.
ತೆರಿಗೆ ಮತ್ತು ಸೇವಾ ಶುಲ್ಕ ಹೆಚ್ಚಳದಿಂದ ನಗರಸಭೆಗೆ ದೊಡ್ಡ ಮಟ್ಟದ ಸಂಪನ್ಮೂಲ ಕ್ರೋಢೀಕರಣ ಆಗುತ್ತದೆ ಎನ್ನುವ ಆಸೆ ಒಂದೆಡೆಯಾದರೆ, ದೊಡ್ಡ ಪ್ರಮಾಣದಲ್ಲಿ ಹೆಚ್ಚಳ ಮಾಡಿರುವುದರಿಂದ ಜನರ ಆಕ್ರೋಶಕ್ಕೆ ಗುರಿಯಾಗಿರುವ ಕಸಿವಿಸಿಯು ಇನ್ನೊಂದೆಡೆ ಜನಪ್ರತಿನಿಧಿಗಳನ್ನು ಕಾಡುತ್ತಿದೆ. ಇದೀಗ ಕಾಟಾಚಾರಕ್ಕೆ ಕೊಂಚ ಶುಲ್ಕ ಇಳಿಸುವ ಕಸರತ್ತಿಗೆ ಮುಂದಾಗಿದ್ದಾರೆ ಎನ್ನುವ ಮಾಹಿತಿ ಇದೆ.
ಸೇವಾ ಶುಲ್ಕ ನಿಗದಿ: ಪ್ರಾಥಮಿಕ ತ್ಯಾಜ್ಯ ಸಂಗ್ರಹಣೆ ಮತ್ತು ನಿರ್ವಹಣೆ, ಮನೆ ಮನೆಯ ಕಸ ಸಂಗ್ರಹಣೆ ಕಾರ್ಯ ನಡೆಸುವುದಕ್ಕಾಗಿ ವಾಸದ ಕಟ್ಟಡ, ವಾಣಿಜ್ಯ ಮಳಿಗೆಗಳು, ಹೋಟೆಲ್, ಕಲ್ಯಾಣ ಮಂಟಪ, ನರ್ಸಿಂಗ್ ಹೋಂ ಇತರೆ ಕಟ್ಟಡಗಳಿಗೆ ವಿಸ್ತೀರ್ಣವಾರು ಪರಿಷ್ಕಣತ ಸೇವಾ ಶುಲ್ಕದ ವಿವರವನ್ನು ನಗರಸಭೆ ಆಡಳಿತ ಬಿಡುಗಡೆ ಮಾಡಿದೆ.
ಈ ಪ್ರಕಾರ 1 ಸಾವಿರ ಚದರ ಅಡಿವರೆಗಿನ ಮನೆಗೆ ಮಾಸಿಕ ರು. 25, 1 ಸಾವಿರ ಚದರ ಅಡಿಗಿಂತ ಹೆಚ್ಚು ವಿಸ್ತಾರದಲ್ಲಿರುವ ಮನೆಗೆ ರು.50, ವಾಣಿಜ್ಯ ಮಳಿಗೆಗಳ ಪೈಕಿ 500 ಚದರ ಅಡಿವರೆಗಿನ ಕಟ್ಟಡಕ್ಕೆ ರು.50, 1 ಸಾವಿರ ಚದರ ಅಡಿವರೆಗಿನ ಕಟ್ಟಡಕ್ಕೆ ರು.70, 1 ಸಾವಿರಕ್ಕಿಂತ ಹೆಚ್ಚು ವಿಸ್ತೀರ್ಣದ ಕಟ್ಟಡಕ್ಕೆ ರು.100 ಸೇವಾ ಶುಲ್ಕ ನಿಗದಿಯಾಗಿದೆ.
ಹೋಟೆಲ್, ಕಲ್ಯಾಣ ಮಂಟಪ, ನರ್ಸಿಂಗ್ ಹೋಂ ಇತ್ಯಾದಿ 500 ಚದರ ಅಡಿ ಕಟ್ಟಡಕ್ಕೆ ರು.150, 1 ಸಾವಿರ ಚದರ ಅಡಿವರೆಗಿನ ಕಟ್ಟಡಕ್ಕೆ ರು.300 ಹಾಗೂ 1 ಸಾವಿರ ಚದರ ಅಡಿಗಿಂತ ಹೆಚ್ಚು ವಿಸ್ತಾರದ ಕಟ್ಟಡಕ್ಕೆ ರು.500 ಸೇವಾ ಶುಲ್ಕ ನಿಗದಿಪಡಿಸಲಾಗಿದೆ. ಈ ಶುಲ್ಕವನ್ನು ಆಸ್ತಿ ತೆರಿಗೆ ಜತೆಯಲ್ಲೇ ವಸೂಲು ಮಾಡಲಾಗುತ್ತಿದೆ.
ನೀರಿನ ಕರ ಇಲ್ಲೇ ಅಧಿಕ
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯಷ್ಟೇ ಸರಿ ಸಮನಾಗಿ ರಾಮನಗರ ನಗರಸಭೆಯು ಕುಡಿಯುವ ನೀರಿನ ಶುಲ್ಕ ವಸೂಲು ಮಾಡುತ್ತಿದೆ. ಈ ನಗರದಲ್ಲಿ 8-10 ದಿನಕ್ಕೊಮ್ಮೆ ಕುಡಿಯುವ ನೀರು ಸರಬರಾಜು ಆಗುತ್ತಿದೆ ಎನ್ನುವ ಮಾಹಿತಿಯನ್ನು ಸ್ವತಃ ಜಿಲ್ಲಾ ಉಸ್ತುವಾರಿ ಸಚಿವ ಡಿ.ಕೆ.ಶಿವಕುಮಾರ್ ಅವರೇ ಹೇಳಿದ್ದಾರೆ.
ಬೆಂಗಳೂರಿನಲ್ಲಿ 6 ಸಾವಿರ ಲೀಟರರ್ನೀರಿಗೆ ರು.65 ಇದ್ದ ಶುಲ್ಕವನ್ನು ಈಗಷ್ಟೇ ರು.100ಕ್ಕೆ ಹೆಚ್ಚಿಸಲಾಗಿದೆ.
ಆದರೆ, ರಾಮನಗರದಲ್ಲಿ ಪ್ರತಿ ಸಂಪರ್ಕಕ್ಕೆ ರು.100 ಶುಲ್ಕ ನಿಗದಿಪಡಿಸಿ ವರ್ಷಗಳೇ ಉರುಳಿವೆ. ಹಾಗಾದರೆ, ರಾಮನಗರದಲ್ಲಿ ಬೆಂಗಳೂರಿಗರಿಗಿಂತ ಮಿಗಿಲಾದ ನಾಗರಿಕ ಸೌಲಭ್ಯಗಳನ್ನು ಕಲ್ಪಿಸಲಾಗಿದೆಯೇ ಎನ್ನುವ ಪ್ರಶ್ನೆ ಎದುರಾಗುತ್ತದೆ.