ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೆಂಗಳೂರು ಗ್ರಾಮಾಂತರ

ಲೋಕಾಯುಕ್ತ ಪೊಲೀಸರ ದಾಳಿ, ಕಡತ ಪರಿಶೀಲನೆ

Srinivasa Murthy VN
Updated On : 21 May 2014, 2:09 am

ರಾಮನಗರ: ತಾಲೂಕಿನ ದೊಡ್ಡಗಂಗವಾಡಿ ವ್ಯವಸಾಯ ಸೇವಾ ಸಹಕಾರ ಸಂಘದ ಕಚೇರಿ ಮೇಲೆ ಲೋಕಾಯುಕ್ತ ಪೊಲೀಸರು ಮಂಗಳವಾರ ದಾಳಿ ನಡೆಸಿ, ಸಂಘದ ಕಡತಗಳನ್ನು ಪರಿಶೀಲನೆ ನಡೆಸಿದ್ದಾರೆ.
ಸಂಘದ ಕಾರ್ಯದರ್ಶಿ ರಾಮಚಂದ್ರಯ್ಯ ರು.65 ಲಕ್ಷ ಗೋಲ್ ಮಾಲ್ ನಡೆಸಿದ್ದಾರೆ ಎಂದು 65ಕ್ಕೂ ಹೆಚ್ಚು ಮಂದಿ ರೈತರು ಲೋಕಾಯುಕ್ತಕ್ಕೆ ದೂರು ನೀಡಿದ್ದರು. ಈ ಹಿನ್ನೆಲೆಯಲ್ಲಿ ಲೋಕಾಯುಕ್ತ ಇನ್ಸ್‌ಪೆಕ್ಟರ್ ಅನಿಲ್‌ಕುಮಾರ್ ನೇತೃತ್ವದ ತಂಡ ಸಂಘದ ಕಚೇರಿಯ ಬೀಗ ಒಡೆದು ಕಡತಗಳನ್ನು ಪರಿಶೀಲನೆ ನಡೆಸಿತು.
ಸಂಘದ ಅಕ್ಕಿ ಗೋದಾಮಿನಲ್ಲಿ ಮೂಟೆಯಲ್ಲಿ ಕಟ್ಟಿ ಇಟ್ಟಿದ್ದ ಕಡತ ಹಾಗೂ ಕಾರ್ಯದರ್ಶಿ ರಾಮಚಂದ್ರಯ್ಯ ಮನೆಯಲ್ಲಿದ್ದ ಕಡತಗಳನ್ನು ಲೋಕಾಯುಕ್ತ ಪೊಲೀಸರು ವಶಕ್ಕೆ ಪಡೆದರು. ತನಿಖೆ ವೇಳೆ ಲೆಕ್ಕಾಚಾರದಲ್ಲಿ ಅನೇಕ ಲೋಪದೋಷಗಳಿರುವುದು ಕಂಡುಬಂದಿದೆ. 16 ವರ್ಷದಿಂದ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸುತ್ತಿರುವ ರಾಮಚಂದ್ರಯ್ಯ ವಿರುದ್ಧ ಸತ್ತವರ ಹೆಸರಿನಲ್ಲಿ ಹಣ ಡ್ರಾ ಮಾಡಿರುವುದು, 3 ಸಾವಿರ ಕಂದಾಯ ಪಾವತಿಸಿ 13 ಸಾವಿರ ಲೆಕ್ಕ ತೋರಿಸಿರುವುದು, ಸಾಲ ಮನ್ನಾ ವಿಚಾರದಲ್ಲಿ ಗೋಲ್ ಹೀಗೆ ಒಟ್ಟು 65 ಲಕ್ಷ ರು. ಅವ್ಯವಹಾರ ನಡೆಸಿದ್ದಾರೆ ಎಂಬ ಆರೋಪವಿದೆ.

ಸಿಬಿಎಸ್‌ಸಿ: ನೀತಾ ಅತ್ಯುತ್ತಮ ಸಾಧನೆ
ಚನ್ನಪಟ್ಟಣ: ಈ ಸಾಲಿನ ಸಿಬಿಎಸ್‌ಸಿ  10ನೇ ತರಗತಿ ಫಲಿತಾಂಶದಲ್ಲಿ ಪಟ್ಟಣದ ಕೇಂಬ್ರಿಡ್ಜ್ ವಿದ್ಯಾಸಂಸ್ಥೆ ನೂರಕ್ಕೆ ನೂರರಷ್ಟು ಫಲಿತಾಂಶ ಪಡೆದಿದೆ. ಕಳೆದ ಐದುವರ್ಷಗಳಿಂದ ವಿದ್ಯಾಸಂಸ್ಥೆ ಪ್ರತಿ ವರ್ಷ ನೂರಕ್ಕೆ ನೂರರಷ್ಟು ಫಲಿತಾಂಶ ಪಡೆಯುತ್ತಾ ಬಂದಿರುವುದು  ಸಂಸ್ಥೆಯ ಹೆಗ್ಗಳಿಕೆಯಾಗಿದೆ. ಈ ಬಾರಿಯ ಪರೀಕ್ಷೆಗೆ ಕುಳಿತಿದ್ದ 67 ಮಂದಿ ವಿದ್ಯಾರ್ಥಿಗಳಲ್ಲಿ 5 ಮಂದಿ ಟಾಪರ್‌ಗಳಾಗಿ( ಶೆ.95 ಅಂಕ)19 ಮಂದಿ ವಿದ್ಯಾರ್ಥಿಗಳು ಅತ್ಯುನ್ನತ ದರ್ಜೆಯಲ್ಲಿ, ಉಳಿದವರು ಪ್ರಥಮ ದರ್ಜೆಯಲ್ಲಿ ಉತ್ತೀರ್ಣರಾಗಿದ್ದಾರೆ. ತಾಲೂಕಿನ ಮತ್ತೀಕೆರೆ ಗ್ರಾಮದವರಾದ ನರೇಗಾ ತಾಂತ್ರಿಕ ಅಧಿಕಾರಿ ಎಂ.ಟಿ.ಮಂಜು ಹಾಗೂ ಪುಷ್ಪ ದಂಪತಿಯ ಪುತ್ರಿ. ನೀತಾ.ಎಂ, ಪೂಜಾ.ಸಿ.ಶೇಖರ್, ಸಂಯಮ.ಎಂ, ಚೈತನ್ಯ.ಎಸ್, ಶಿಖಾ.ಎಸ್.ಬಂಡಾರಿ ಶೇ.95ರಷ್ಟು  ಅಂಕ ಪಡೆದ ವಿದ್ಯಾರ್ಥಿಗಳಾಗಿದ್ದಾರೆ. ಉತ್ತಮ ಫಲಿತಾಂಶ ತಂದು ಕೊಡುವ ಮೂಲಕ ಶಾಲೆಗೆ ಕೀರ್ತಿ ತಂದ ವಿದ್ಯಾರ್ಥಿಗಳಿಗೆ ಹಾಗೂ ಸಂಸ್ಥೆಯ ಬೋಧಕ ಮತ್ತು ಬೋಧಕೇತರ ಸಿಬ್ಬಂದಿಗಳಿಗೆ ಸಂಸ್ಥೆಯ ಸಂಸ್ಥಾಪಕ ಕಾರ್ಯದರ್ಶಿ ಎಸ್.ಲಿಂಗೇಶ್ ಕುಮಾರ್, ಟ್ರಸ್ಟಿ ಚಿತ್ರಾಲಿಂಗೇಶ್ ಕುಮಾರ್, ಪ್ರಾಂಶುಪಾಲರಾದ ಇಂದ್ರಾಣಿ. ಎಸ್.ವಿ ಅಭಿನಂದಿಸಿದ್ದಾರೆ.

ಉದ್ಯಾನಕ್ಕೆ ಮೂಲಭೂತ ಸೌಕರ್ಯಕ್ಕೆ  ಮನವಿ
ಕೆಜಿಎಫ್: ನಗರಸಭೆ ಕಚೇರಿ ಮುಂಭಾಗದಲ್ಲಿರುವ ನೇತಾಜಿ ಸುಭಾಶ್ ಚಂದ್ರಭೋಸ್ ಉದ್ಯಾನವಕ್ಕೆ ಮೂಲಭೂತ ಸೌಲಭ್ಯಗಳನ್ನು ಒದಗಿಸಬೇಕು ಎಂದು ಆಗ್ರಹಿಸಿ ಸೇಂಟ್ ಥಾಮಸ್ ಚಾರಿಟಬಲ್ ಟ್ರಸ್ಟ್‌ನ ಕಾರ್ಯಕರ್ತರು ಪೌರಾಯುಕ್ತ ವಿ.ಬಾಲಚಂದ್ರ ಅವರಿಗೆ ಮನವಿ ಸಲ್ಲಿಸಿದರು. ಉದ್ಯಾನವನದಲ್ಲಿ ಕುಡಿಯುವ ನೀರು, ಶೌಚಾಲಯ, ವಿದ್ಯುತ್ ದೀಪ ಒದಗಿಸಲು ಆಗ್ರಹಿಸಿದರು.

ಡಾ.ವೆಂಕಟೇಶ್  ಪ್ರಭಾರ ಜಿಲ್ಲಾಧಿಕಾರಿ
ರಾಮನಗರ: ಜಿಲ್ಲಾಧಿಕಾರಿ ಡಾ.ಡಿ.ಎಸ್. ವಿಶ್ವನಾಥ್ ರಜೆ ಮೇಲೆ ತೆರಳಿದ್ದಾರೆ. ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿ ಡಾ.ಎಂ.ವಿ.ವೆಂಕಟೇಶ್ ಅವರನ್ನು ಪ್ರಭಾರ ಜಿಲ್ಲಾಧಿಕಾರಿಯನ್ನಾಗಿ ನೇಮಿಸಲಾಗಿದೆ. ವಿಶ್ವನಾಥ್ ಅವರು ವೈಯಕ್ತಿಕ ಕಾರಣಗಳಿಂದ ಮೇ 19ರಿಂದ ಜೂ.7ರತನಕ 20 ದಿನ ಗಳಿಕೆ ರಜೆ ಕೋರಿದ್ದರು. ಕರ್ನಾಟಕ ಸರ್ಕಾರದ ಸಚಿವಾಲಯವು ಅವರ ಕೋರಿಕೆಯನ್ನು ಮಾನ್ಯ ಮಾಡಿ, ವೆಂಕಟೇಶ್ ಅವರಿಗೆ ಜಿ.ಪಂ. ಸಿಇಒ ಜತೆಗೆ ಹೆಚ್ಚುವರಿಯಾಗಿ ಪ್ರಭಾರ ಜಿಲ್ಲಾಧಿಕಾರಿ ಹೊಣೆ ಹೊರಿಸಲಾಗಿದೆ.

ಡಿಕ್ಕಿ: ಬೈಕ್ ಸವಾರನ ಬೆರಳು ತುಂಡು
ಮಾಗಡಿ: ಆಟೋ ಬೈಕ್ ನಡುವೆ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಸಚ್ಚಿದಾನಂದ ಎಂಬುವವರ ಕಾಲಿನ ಎರಡು ಬೆರಳುಗಳು ತುಂಡಾಗಿರುವ ಘಟನೆ ತಾಲೂಕಿನ ಬಾಳೇನಹಳ್ಳಿ ಬಳಿ ನಡೆದಿದೆ. ಗಾಯಳು ಸಚ್ಚಿದಾನಂದನನ್ನು ಮಾಗಡಿ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಮಾಗಡಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.

ಅನಧಿಕೃತ ಒತ್ತುವರಿ ಜಮೀನು ಶೀಘ್ರ ತೆರವು
ನೆಲಮಂಗಲ:  ತಿಪ್ಪಗೊಂಡನಹಳ್ಳಿ ಜಲಾಶಯದ ನದಿ ಪಾತ್ರದಲ್ಲಿನ  ಅನಧಿಕೃತವಾಗಿ ಒತ್ತುವರಿ ಮಾಡಿಕೊಂಡಿರುವ ಜಮೀನನ್ನು ತೆರವುಗೊಳಿಸುವುದಾಗಿ ಬೆಂಗಳೂರು ಗ್ರಾಮಾಂತರ ಜಿಲ್ಲಾಧಿಕಾರಿ ವಿ.ಶಂಕರ್ ತಿಳಿಸಿದ್ದಾರೆ. ಅವರು ಮಂಗಳವಾರ ತಾಲೂಕಿನ ಮಲ್ಲಾಪುರ ಗ್ರಾಮದ ಕೆರೆಯ ಜಮೀನಿನಲ್ಲಿ ಅಕ್ರಮವಾಗಿ ಒತ್ತುವರಿ ಮಾಡಿಕೊಂಡು ಬೇಸಾಯ ಮಾಡುತ್ತಿದ್ದನ್ನು ತೆರವುಗೊಳಿಸಿ ಮಾತನಾಡುತ್ತಾ ತಾಲೂಕಿನಲ್ಲಿ ನದಿ ಪಾತ್ರಗಳಲ್ಲಿ 40 ಕ್ಕೂ ಹೆಚ್ಚು ಅನಧಿಕೃತ ಕಾರ್ಖಾನೆಗಳು ಹಾಗೂ 50 ಕ್ಕೂ ಹೆಚ್ಚು ಅನಧಿಕೃತ ಬಡಾವಣೆ ನಿರ್ಮಿಸಿರುವುದನ್ನು  ಕಂದಾಯ ಇಲಾಖೆ ಗುರುತಿಸಿದ್ದು, ಅವುಗಳನ್ನು ತೆರವುಗೊಳಿಸಲಾಗುತ್ತದೆ ಎಂದರು.  ಸರ್ಕಾರಿ ಭೂಮಿ ಕಬಳಿಕೆ ಹಾಗೂ ಒತ್ತುವರಿ ಮಾಡಿರುವವರ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತದೆ. ತೆರವು ಕಾರ್ಯಾಚರಣೆ ನಿರಂತರ ನಡೆಯಲಿದೆ ಎಂದು ತಿಳಿಸಿದರು. ತಹಸೀಲ್ದಾರ್ ಹನುಮಂತರಾಯಪ್ಪ, ರಾಜಸ್ವ ನಿರೀಕ್ಷಕರಾದ ನಂಜಪ್ಪ, ಅಶ್ವತ್ಥ್, ಗ್ರಾಮ ಲೆಕ್ಕಾಧಿಕಾರಿ ಬಸವರಾಜ್, ರವಿ, ಸುದೀಪ್ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement