ಕರಾವಳಿಯಲ್ಲಿ ಮತ್ತೆ ಬಿಚ್ಚುತ್ತಿದೆ ಕರಾಳ ಲೋಕ
-ಜಿತೇಂದ್ರ ಕುಂದೇಶ್ವರ
ಮಂಗಳೂರು: ಭೂಗತ ಪಾತಕಿ ರವಿ ಪೂಜಾರಿ ಮತ್ತು ಬನ್ನಂಜೆ ರಾಜ ಹಫ್ತಾ ವಸೂಲಿ ಪೈಪೋಟಿ!
ಭೂ ವಿವಾದ, ರಿಯಲ್ ಎಸ್ಟೇಟ್ ಉದ್ಯಮಿಗಳಿಗೆ ಭೂಗತ ಪಾತಕಿ ಕೊರಗ ವಿಶ್ವನಾಥ ಶೆಟ್ಟಿ ಕಾಟ. ಇವೆಲ್ಲದರ ನಡುವೆ ಸ್ಥಳೀಯ ರೌಡಿಗಳ ರಕ್ತದಾಹದಿಂದಾಗಿ ನಿರಂತರ ಲೂಟಿ, ಕೊಲೆಗಳಿಂದ ಕರಾವಳಿ ತತ್ತರಿಸುತ್ತಿದೆ. ಮೂರು ವರ್ಷಗಳ ಹಿಂದಿನ ವರ್ಲ್ಡ್‌ವೈಡ್ ಶಿಪ್ಪಿಂಗ್ ಶೂಟೌಟ್‌ನಿಂದ ಹಿಡಿದು ಇತ್ತೀಚಿನ ಬಿಜೈ ಬಿಲ್ಡರ್ ಹಫ್ತಾ ವಸೂಲಿ ಬೆದರಿಕೆ ವರೆಗೂ ರವಿ ಪೂಜಾರಿ ಹಫ್ತಾ ವಸೂಲಿಯಲ್ಲಿ ಮುಂಚೂಣಿಯಲ್ಲಿದ್ದಾನೆ.
ರವಿ ಪೂಜಾರಿ ಉದ್ಯಮ ಏರುಗತಿ ಕಾಣುತ್ತಿದ್ದಂತೆಯೇ ಬನ್ನಂಜೆ ರಾಜ ತನ್ನ ಇಮೇಜ್ ಹೆಚ್ಚಿಸಲು ಅಂಕೋಲಾದ ಆರ್.ಎನ್.ನಾಯಕ್ ಅವರನ್ನು ಕೊಲೆ ಮಾಡಿಸಿ, ತಾನೇ ಮಾಡಿದ್ದು ಎಂದು ಮಾಧ್ಯಮಗಳಿಗೆ ತಿಳಿಸಿದ್ದಾನೆ. ಇದರಿಂದಾಗಿ ಬೆಳೆಯುತ್ತಿರುವ ಮಂಗಳೂರಲ್ಲಿ ಅನೇಕ ಉದ್ಯಮಿಗಳು, ಹೆಸರು ಹೇಳಿದ ತಕ್ಷಣ ಹಫ್ತಾ ನೀಡುವ ಪರಿಸ್ಥಿತಿ ಉಂಟಾಗಿದೆ.
ಇವರ ನಡುವೆ 3ನೇ ಪಾತಕಿ ಕೊರಗ ಶೆಟ್ಟಿ ಡಾನ್ ಆಗಲು ಹವಣಿಸುತ್ತಿದ್ದಾನೆ. ಕದ್ರಿಯಲ್ಲಿ ಮೇ 9ರಂದು ಅನೀಶ್ ಶೆಟ್ಟಿ ಭೀಕರವಾಗಿ ತನ್ನದೇ ಸಹಚರರಿಂದ ಕೊಲೆಯಾಗುತ್ತಾನೆ. ಇದಕ್ಕೆ ಕಾರಣ ಆತನ ಬಾಸ್ ಕೊರಗ ವಿಶ್ವನಾಥ ಶೆಟ್ಟಿಗೆ ಅಂಡರ್‌ವರ್ಲ್ಡ್‌ನ ಮಾಮೂಲಿ ಕಮಿಷನ್ ಒಪ್ಪಿಸದೇ ಇದ್ದದ್ದು. ಭೂ ವಿವಾದ, ವ್ಯವಹಾರಗಳ ಕಮಿಷನ್ ಒಬ್ಬನೇ ತಿನ್ನುತ್ತಿದ್ದ ಕಾರಣಕ್ಕೆ ಕೊಲೆಯಾದ.
ಕೊರಗ ವಿಶ್ವನಾಥ ಶೆಟ್ಟಿ ಹಳೆ ಪಂಟರ್. ಆರಂಭದಲ್ಲಿ ದಾವೂದ್ ಇಬ್ರಾಹಿಂ ಗ್ಯಾಂಗ್‌ನಲ್ಲಿದ್ದ. ಮುಂಬೈ ಸರಣಿ ಸ್ಫೋಟಗಳ ಬಳಿಕ ಆತನ ಜತೆಯೇ ವಿದೇಶಕ್ಕೆ ಪಲಾಯನ ಮಾಡಿದ್ದ. ಬಳಿಕ ಬನ್ನಂಜೆ ರಾಜ ಜತೆಗಿದ್ದ್ದ. 8 ವರ್ಷ ಹಿಂದೆ ಹಣ ಹಂಚಿಕೆ ವಿಚಾರಕ್ಕೆ ಜಗಳವಾಗಿ ರಾಜನಿಂದ ಪ್ರತ್ಯೇಕವಾದ.
ಅಲೆವೂರು ಪ್ರಭಾಕರ ಆಚಾರ್ಯ ಕೊಲೆ, ಚೆಮ್ಮನೂರು ಜುವೆಲ್ಲರ್ಸ್ ದರೋಡೆ ಮೂಲಕ ಭೂಗತ ಲೋಕದಲ್ಲಿ ಸ್ವಂತ ಅಸ್ತಿತ್ವ ಕಂಡು ಕೊಂಡ ಕೊರಗ ಶೆಟ್ಟಿ ಇದೀಗ ಉಡುಪಿ, ಮಂಗಳೂರಲ್ಲಿ ರಿಯಲ್ ಎಸ್ಟೇಟ್ ಉದ್ಯಮದಲ್ಲಿ ಬೆದರಿಕೆ ಹಾಕುವ ಮೂಲಕ ಕಮಿಷನ್ ಹೊಡೆಯುವ ಉದ್ಯಮ ನಡೆಸುತ್ತಿದ್ದಾನೆ. ಪ್ರಮುಖ ಬಂಟನನ್ನೇ ಕೊಲೆ ಮಾಡಿರುವ ಕೊರಗ ಶೆಟ್ಟಿಗೆ ಮಾರುಕಟ್ಟೆ ಇಳಿಮುಖವಾಗಿದೆ. ಹೀಗಾಗಿ ದೊಡ್ಡ ಪಾತಕಿಗಳ ನಡುವೆ ಅಸ್ತಿತ್ವ ಮತ್ತು ಮಾರುಕಟ್ಟೆ ಉಳಿಸಿಕೊಳ್ಳಲು ತನ್ನ ಹೆಸರು ಪ್ರಚಾರದಲ್ಲಿರಲು ಶತ ಪ್ರಯತ್ನದಲ್ಲಿ ತೊಡಗಿದ್ದಾನೆ.
'ಅನೀಶ್ ಕೊಲೆ ಮಾಡಿಸಿದ್ದು ನಾನೇ' ಎಂದು ಉಡುಪಿ, ಮಂಗಳೂರಿನ ಪತ್ರಿಕಾ ಮತ್ತು ಸುದ್ದಿ ವಾಹಿನಿಗಳ ಬಹುತೇಕ ಪತ್ರಕರ್ತರಿಗೆ ಕರೆ ಮಾಡಿದ್ದಾನೆ. ಪ್ರಚಾರ ಹುಚ್ಚು ಎಲ್ಲಿಯವರೆಗೆ ಎಂದರೆ ಉಡುಪಿ ಶ್ರೀಕೃಷ್ಣ ಮಠದ ಪಂಕ್ತಿ ಭೇದ ವಿಚಾರದಲ್ಲೂ ಮೂಗು ತೂರಿಸಿ ಬಂಟ ಮಹಿಳೆಯನ್ನು ಎಬ್ಬಿಸಿದ ಅಡುಗೆ ಭಟ್ಟ ಕ್ಷಮೆ ಕೇಳದೆ ಇದ್ದರೆ ಕೊಲೆ ಮಾಡುವುದಾಗಿ ಪ್ರತಾಪ ತೋರಿಸಿದ್ದಾನೆ.
ಬಾಲ ಬಿಚ್ಚಿದ ಮಲಬಾರಿ: ಜೈಲ್‌ನಲ್ಲಿರುವ ಪಾತಕಿ ರಶೀದ್ ಮಲಬಾರಿ ಹೆಸರು ಹೇಳಿಕೊಂಡು ರೌಡಿಗಳು ಉಳ್ಳಾಲದ ಫೈನಾನ್ಶಿಯರ್‌ನಿಂದ ರು. 40 ಲಕ್ಷ ವಸೂಲಿ ಮಾಡಿದ್ದಾರೆ. ರೌಡಿಗಳನ್ನು ಬೇರೊಂದು ಪ್ರಕರಣದಲ್ಲಿ ಬಂಧಿಸಿದಾಗ ವಿಚಾರ ಬಹಿರಂಗವಾಗಿದೆ. ಈ ನಡುವೆ ಸ್ಥಳೀಯ ರೌಡಿಗಳ ಅಸ್ತಿತ್ವಕ್ಕೆ ಕೊಲೆಗಳು ನಡೆಯತೊಡಗಿದೆ. ಪ್ರತೀಕಾರ ಕೊಲೆಗಳು ಮಾಮೂಲು ಎಂಬಂತಾಗಿದೆ. ಚುನಾವಣೆ ಪೂರ್ವ ಸುರತ್ಕಲ್‌ನಲ್ಲಿ ಬಸ್‌ನಿಂದ ಇಳಿಸಿ ಹಾಡಹಗಲೇ ಪ್ರಕಾಶ್ ಎಂಬಾತನ ಹತ್ಯೆ. ಚುನಾವಣೆ ಅನಂತರ ಕಾಂಗ್ರೆಸ್ ಮುಖಂಡ ಗಂಗಾಧರ ಪಾಂಗಾಳ ಅವರನ್ನು ಅಪಘಾತ ನಡೆಸಿ ಕೊಲೆ ಮಾಡಲಾಗಿದೆ.