ಕೃಷಿ ಭೂಮಿ ಮಣ್ಣಿನ ಪರೀಕ್ಷೆ ಅಗತ್ಯ
ಮಾಗಡಿ: ಭೂಮಿಯ ಮಣ್ಣಿನ ಪರೀಕ್ಷೆ, ಬೀಜ ಪರೀಕ್ಷೆ, ಸಮಗ್ರ ಪೋಷಕಾಂಶಗಳ ನೀಡಿಕೆ ಕೃಷಿಗೆ ಅತ್ಯಗತ್ಯವಾಗಿದೆ ಎಂದು ಚಂದೂರಾಯನಹಳ್ಳಿ ಕೃಷಿ ವಿಜ್ಞಾನ ಕೇಂದ್ರದ ಸಂಯೋಜಕಿ ಡಾ. ಲತಾ ಕುಲಕರ್ಣಿ ತಿಳಿಸಿದರು.
ಅವರು ಮಾಗಡಿ ಪಟ್ಟಣದ ಸಹಾಯಕ ಕೃಷಿ ನಿರ್ದೇಶಕರ ಕಚೇರಿಯಲ್ಲಿ 2014-15ನೇ ಸಾಲಿನ ಭೂ ಚೇತನ ಯೋಜನೆಯ 2ನೇ ಹಂತದ ತಾಲೂಕು ಮಟ್ಟದ ಕಾರ್ಯಾಗಾರದಲ್ಲಿ ಮಾತನಾಡಿ, ರೈತರು ತಮ್ಮ ಭೂಮಿಯ ಮಣ್ಣನ್ನು ಪರೀಕ್ಷೆ ಮಾಡಿಸಿ ಅಗತ್ಯ ಲಘು ಪೋಷಕಾಂಶ ನೀಡಿ ಫಲವತ್ತತೆಯ ಸಮತೋಲನವನ್ನು ಕಾಪಾಡಿಕೊಳ್ಳುವ ಮೂಲಕ ಭೂ ಚೇತನಗೊಳಿಸಿಕೊಳ್ಳಬೇಕು.
ಪರೀಕ್ಷೆಗೊಳಪಡಿಸಿರುವ ಬೀಜಗಳನ್ನೇ ಬಿತ್ತನೆ ಮಾಡುವುದರಿಂದ ಕನಿಷ್ಠ ಶೇ.80 ರಷ್ಟು ಬೀಜ ಮೊಳಕೆಯೊಡೆಯುವ ಸಾಧ್ಯತೆ ಇರುತ್ತದೆ. ಅಗತ್ಯ ಸಾವಯವ ಗೊಬ್ಬರ, ಜೈವಿಕ ಬೀಜೋಪಕಾರ, ಲಘು ಪೋಷಕಾಂಶ ಎಲ್ಲವನ್ನು ಸಮರ್ಪಕವಾಗಿ ಭೂಮಿಗೆ ಸೇರಿಸಿ,ತಾಂತ್ರಿಕತೆ ಅಳವಡಿಸಿಕೊಂಡು ಬೆಳೆ ಬೆಳೆದರೆ ನಿರೀಕ್ಷಿತ ಉತ್ತಮ ಇಳುವರಿ ಪಡೆಯಲು ಸಾಧ್ಯವಿದೆ.
ಕೃಷಿ ಬೆಳೆಯೂ ಸಹ ವ್ಯವಹಾರವಿದ್ದಂತೆ, ಖರ್ಚು ವೆಚ್ಚವನ್ನು ಬರೆದಿಡಬೇಕು. ಈ ನಿಟ್ಟಿನಲ್ಲಿ ಕೃಷಿಯನ್ನೂ ಲಾಭದಾಯಕ ಕಸಬನ್ನಾಗಿ ಪರಿವರ್ತಿಸಿಕೊಳ್ಳಬಹುದು ಎಂದರು.
ಮಣ್ಣಿನ ಪರೀಕ್ಷೆ: ಕೃಷಿ ವಿಜ್ಞಾನ ಕೇಂದ್ರದ ಡಾ. ಕಮಲಾಬಾಯಿ ಕಾರ್ಯಗಾರ ಉದ್ಘಾಟಿಸಿ ಮಾತನಾಡಿ ಭೂ ಚೇತನಗೊಳಿಸಬೇಕಾದರೆ ಮಣ್ಣಿನ ಪರೀಕ್ಷೆ ಮಾಡಿಸಬೇಕು.
ನಮ್ಮ ಭೂಮಿ ಮಣ್ಣಿನ ಫಲವತ್ತತೆ ಹೆಚ್ಚಿಸಿದರೆ ಮಾತ್ರ ರೈತರು ತಮ್ಮ ಭೂಮಿಯಲ್ಲಿ ನಿರೀಕ್ಷಿತ ಇಳುವರಿ ಪಡೆಯಬಹುದು. ಮನುಷ್ಯರಂತೆ ಮಣ್ಣು ಆರೋಗ್ಯವಾಗಿರಬೇಕಾದರೆ, ವಿವಿಧ ಮೂಲಗಳಿಂದ ಸಮಗ್ರ ಪೋಷಕಾಂಶವನ್ನು ಮಣ್ಣಿಗೆ ಸೇರಿಸಬೇಕು.
ಇದಕ್ಕೆಲ್ಲ ರೈತರು ಮತ್ತು ಇಲಾಖೆ ಅಧಿಕಾರಿಗಳು ಸೇತುವೆಯಂತೆ ಕೆಲಸ ಮಾಡಬೇಕಿದೆ. ಭೂ ಚೇತನ ಯೋಜನೆಯ ಯಶಸ್ಸಿಗೆ ಅನುವುಗಾರರು ಮೊದಲು ಚೇತನಗೊಳ್ಳಬೇಕು. ಇದಕ್ಕಾಗಿ ಮೊದಲು ವಿಜ್ಞಾನಿಗಳು ನೀಡುವ 2014-15ನೇ ಸಾಲಿಗೆ 26,930 ಹೆಕ್ಟರ್ ಪ್ರದೇಶವನ್ನು ಭೂಚೇತನ ಯೋಜನೆಗೆ ಗುರಿ ಹಾಕಿಕೊಳ್ಳಲಾಗಿದೆ ಎಂದು ಸಮಗ್ರ ಮಾಹಿತಿಯನ್ನು ಸಹಾಯಕ ಕೃಷಿ ನಿರ್ದೇಶಕ ಎಚ್.ಜಿ. ಕೃಷ್ಣಪ್ಪ ನೀಡಿದರು.
ರೇಷ್ಮೆ ಇಲಾಖೆಯ ಸಹಾಯಕ ನಿರ್ದೇಶಕ ಸುಬ್ರಹ್ಮಣ್ಯ, ಪಶು ಸಂಗೋಪಾನೆ ಇಲಾಖೆ ಸಹಾಯಕ ನಿರ್ದೇಶಕ ಡಾ.ಸಿ. ರಾಜಶೇಖರ್, ಹೈದರಾಬಾದ್ ಇಕ್ರಿಸ್ಯಾಟ್ ಸಂಸ್ಥೆಯ ದೇವೇಂದ್ರರಾವ್ ಅನುಗಾರರಿಗೆ ಸಮಗ್ರ ಮಾಹಿತಿ ನೀಡಿದರು.
ಕಸಬಾ ಕೃಷಿ ಅಧಿಕಾರಿ ಕೆ. ಹರಿಶಂಕರ್, ಮಾಡಬಾಳ್ ಹೋಬಳಿ ಕೃಷಿ ಅಧಿಕಾರಿ ಎನ್. ರೂಪಶ್ರೀ ಹಾಗೂ 40ಕ್ಕೂ ಹೆಚ್ಚು ಅನುವುಗಾರರು ಇದ್ದರು.