ದೇಶಸೇವೆಗೆ ಅರ್ಪಿಸಿಕೊಳ್ಳುವುದು ಪುಣ್ಯದ ಕೆಲಸ: ಪಂಚಲಿಂಗೇಗೌಡ
ಚನ್ನಪಟ್ಟಣ: ದೇಶಸೇವೆಯಂತಹ ಮಹತ್ಕಾರ್ಯದಲ್ಲಿ ನಮ್ಮನ್ನು ನಾವು ಅರ್ಪಿಸಿಕೊಳ್ಳುವುದು ಅತ್ಯಂತ ಪುಣ್ಯದ ಕೆಲಸವಾಗಿದ್ದು, ದೇಶಕ್ಕಾಗಿ ವೀರಮರಣವಪ್ಪಿದ ಸೋಮೇಗೌಡ ನಮಗೆಲ್ಲ ಮಾದರಿ ಎಂದು ಬಿಎಸ್ಎಫ್ ಕಮಾಂಡೆಂಟ್ ಪಂಚಲಿಂಗೇಗೌಡ ಅಭಿಪ್ರಾಯಪಟ್ಟರು.
ತಾಲೂಕಿನ ಹನಿಯೂರು ಗ್ರಾಮದ ಯೋಧ ಕ್ರಿಕೆಟರ್ಸ್ ವತಿಯಿಂದ ಇತ್ತೀಚೆಗೆ ಬಿಹಾರ ಬಾಂಬ್ ಸ್ಫೋಟದಲ್ಲಿ ಹುತಾತ್ಮರಾದ ಸಿಆರ್ಪಿಎಫ್ ಯೋಧ ಸೋಮೇಗೌಡರ ಸ್ಮರಣಾರ್ಥ ಹಮ್ಮಿಕೊಳ್ಳಲಾಗಿದ್ದ ಟೆನ್ನಿಸ್ಬಾಲ್ ಕ್ರಿಕೆಟ್ ಪಂದ್ಯಾವಳಿಯಲ್ಲಿ ಪಾಲ್ಗೊಂಡು ಮಾತನಾಡಿ, ಈ ದೇಶದ ಭದ್ರತೆಗಾಗಿ ಯೋಧರು ತಮ್ಮ ಜೀವದ ಹಂಗನ್ನು ತೊರೆದು ಹೋರಾಡುತ್ತಾರೆ. ಇಂತಹ ಯೋಧರಿಗೆ ಗೌರವ ಸಲ್ಲಿಸುವುದು ನಮ್ಮೆಲ್ಲರ ಆದ್ಯ ಕರ್ತವ್ಯ ಎಂದರು.ದೇಶದ ಹೊರಗಿನ ಶತ್ರುಗಳೊಂದಿಗೆ ಹೋರಾಡುವುದಕ್ಕಿಂತ ನಮ್ಮಲ್ಲಿನ ಆಂತರಿಕ ಸಮಸ್ಯೆಗಳಗನ್ನು ನಿವಾರಿಸಲು ಹೆಚ್ಚಿನ ಯೋಧರು ಸಾವಿಗೀಡಾಗುತ್ತಿದ್ದಾರೆ. ಮೃತಯೋಧರ ಸ್ಮರಣಾರ್ಥ ಇಂತಹ ಕಾರ್ಯಕ್ರಮಗಳನ್ನು ಆಯೋಜಿಸಿ ಯುವ ಜನತೆಗೆ ದೇಶ ಸೇವೆಯ ಬಗ್ಗೆ ಜಾಗೃತಿ ಮೂಡಿಸುವತ್ತಿರುವ ಯೋಧ ಕ್ರಿಕೆಟರ್ಸ್ನ ಕಾರ್ಯ ನಿಜಕ್ಕೂ ಪ್ರಶಂಸನಾರ್ಹವಾದುದು ಎಂದರು.
ಪಂದ್ಯಾವಳಿಯಲ್ಲಿ 18 ತಂಡಗಳು ಭಾಗವಹಿಸಿದ್ದವು, ಫೈನಲ್ ಪಂದ್ಯದಲ್ಲಿ ಹನಿಯೂರಿನ ಯೋಧ ಕ್ರಿಕೆಟರ್ಸ್ ಪ್ರಥಮ ಬಹುಮಾನ ಪಡೆದರೆ, ಚನ್ನಪಟ್ಟಣದ ವೀರೂ ಕ್ರಿಕೆಟರ್ಸ್ ದ್ವಿತೀಯ ಬಹುಮಾನ ತನ್ನದಾಗಿಸಿ ಕೊಂಡಿತು. ಸರಣಿ ಪುರುಷೋತ್ತಮ, ಹ್ಯಾಟ್ರಿಕ್ ಸಿಕ್ಸರ್, ಅತಿಹೆಚ್ಚು ವಿಕೆಟ್ ಪಡೆದವರಿಗೆ ಬಹುಮಾನ ನೀಡಲಾಯಿತು. ವೀರಯೋಧ ಸೊಮೇಗೌಡರ ಸಂಬಂಧಿ ಎಚ್.ಸಿ ರಘು ಹಾಗೂ ಉಚ್ಚನ್ಯಾಯಲಯದ ವಕೀಲ ಎಸ್.ರಾಜು ಹಾಗೂ ಗ್ರಾಂ.ಪಂ.ಅಧ್ಯಕ್ಷ ಎಚ್.ಸಿ ಜಯರಾಮುರನ್ನು ಸನ್ಮಾನಿಸಲಾಯಿತು. ಗ್ರಾಮದ ಮುಖಂಡರಾದ ಸೋಮಶೇಖರೇಗೌಡ, ಬೊರೇಗೌಡ, ಅಂಕೆಗೌಡ, ಎಚ್.ಎಂ. ಪುಟ್ಟೇಗೌಡ ಪಂ. ಸದಸ್ಯರಾದ ಹುಚ್ಚೇಗೌಡ, ಪುಟ್ಟಸ್ವಾಮಿ ಯುವ ಮಿತ್ರರಾದ ಎಚ್.ಸಿ ರಘು, ಎಚ್.ಎಸ್.ಸುದರ್ಶನ್ ಉಪಸ್ಥಿತರಿದ್ದರು.