ವೀರಭದ್ರಸ್ವಾಮಿ ಆಯುಕ್ತರಾಗಿ ನೇಮಕ
ರಾಮನಗರ: ರಾಮನಗರ-ಚನ್ನಪಟ್ಟಣ ನಗರಾಭಿವೃದ್ಧಿ ಪ್ರಾಧಿಕಾರದ ಆಯುಕ್ತರನ್ನಾಗಿ ವಿ.ಎನ್. ವೀರಭದ್ರಸ್ವಾಮಿ ಅವರನ್ನು ನೇಮಿಸಿ ಸರ್ಕಾರ ಆದೇಶ ಹೊರಡಿಸಿದೆ. ಅವರು ಮೇ 23ರಂದು ಆಯುಕ್ತರಾದ ಜೆ.ಜಿ.ಪದ್ಮನಾಭ್ ಅವರಿಂದ ಅಧಿಕಾರ ವಹಿಸಿಕೊಂಡಿದ್ದಾರೆ. ವೀರಭದ್ರಸ್ವಾಮಿ ಅವರು ಇದಕ್ಕೂ ಮುನ್ನ ಬಳ್ಳಾರಿ ಜಿಲ್ಲೆಯ ಕೈಗಾರಿಕಾ ಮತ್ತು ವಾಣಿಜ್ಯ ಇಲಾಖೆಯ ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕರಾಗಿ ಕಾರ್ಯ ನಿರ್ವಹಿಸುತ್ತಿದ್ದರು. ರಾ-ಚ ಪ್ರಾಧಿಕಾರದ ಆಯುಕ್ತರಾಗಿ ಕಾರ್ಯ ನಿರ್ವಹಿಸುತ್ತಿದ್ದ ಜೆ.ಜಿ.ಪದ್ಮನಾಭ್ ಅವರನ್ನು ಅವರ ಮಾತೃ ಇಲಾಖೆಗೆ ಹಿಂದಿರುಗಿಸಲಾಗಿದೆ.
ಬಾಲಕಿಯರ ಬಾಲಮಂದಿರ ಸಂಸ್ಥೆ
ರಾಮನಗರ: ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯು ರಾಮನಗರದಲ್ಲಿ ಬಾಲಕಿಯರ ಬಾಲಮಂದಿರ ಸಂಸ್ಥೆಯನ್ನು ಪ್ರಾರಂಭಿಸಲು ಉದ್ದೇಶಿಸಿದೆ. ಈ ಸಂಸ್ಥೆಯನ್ನು ಪ್ರಾರಂಭಿಸಲು ಬಾಡಿಗೆ ಕಟ್ಟಡದ ಅವಶ್ಯಕತೆಯಿದೆ. ಈ ಕುರಿತು ವಿವರಕ್ಕೆ 2ನೇ ಮಹಡಿ, ರಾಮನಗರ ಜಿಲ್ಲೆ, ಇವರನ್ನು ಸಂಪರ್ಕಿಸಬಹುದು. ದೂ.080-27271862
ಹಿಂದುಳಿದ ವರ್ಗಗಳ ಇಲಾಖೆಯಿಂದ ಸಹಾಯಧನಕ್ಕೆ ಅರ್ಜಿ ಆಹ್ವಾನ
ರಾಮನಗರ: ಹಿಂದುಳಿದ ವರ್ಗಗಳ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯಿಂದ ಆರ್ಥಿಕವಾಗಿ ಹಿಂದುಳಿದ ಅಲ್ಪಸಂಖ್ಯಾತ ಕೋಮಿಗೆ ಸೇರಿದ ಮುಸ್ಲಿಂ, ಕ್ರಿಶ್ಚಿಯನ್, ಜೈನ್, ಬೌದ್ಧ ಹೆಣ್ಣು ಮಕ್ಕಳಿಗೆ, ವಿಚ್ಛೇದಿತ ಮಹಿಳೆ ಮತ್ತು ವಿಧವೆಯರಿಗೆ ವೈಯಕ್ತಿಕ ಹಾಗೂ ಸಾಮೂಹಿಕ ಮದುವೆ ಕಾರ್ಯಗಳಿಗೆ ಸಹಾಯಧನ ನೀಡಲು ಅರ್ಜಿ ಆಹ್ವಾನಿಸಲಾಗಿದೆ. ಅಲ್ಪಸಂಖ್ಯಾತ ಕುಟುಂಬದ ಹೆಣ್ಣು ಮಕ್ಕಳಿಗೆ ವಿಚ್ಛೇದಿತ ಮಹಿಳೆಯರಿಗೆ ಹಾಗೂ ವಿಧವೆಯರಿಗೆ ವಿವಾಹದ ಖರ್ಚು ವೆಚ್ಚಗಳು, ಜೀವನಾವಶ್ಯಕ ಸಾಮಗ್ರಿಗಳನ್ನು ಖರೀದಿಸಲು ರು.50 ಸಾವಿರ ಸಹಾಯ ಧನವನ್ನು ನೀಡಲಾಗುವುದು. ಸಹಾಯಧನವನ್ನು ಪಡೆಯಲು ವಾರ್ಷಿಕ ವರಮಾನ ರು.1.50 ಲಕ್ಷಕ್ಕಿಂತ ಕಡಿಮೆ ಇರಬೇಕು. ಸೌಲಭ್ಯವನ್ನು ಜೀವಿತಾವಧಿಯಲ್ಲಿ ಒಮ್ಮೆ ಮಾತ್ರ ಪಡೆಯಬಹುದಾಗಿದೆ. ಮದುವೆಯ ದಿನಾಂಕಕ್ಕೆ ವಧುವಿಗೆ 18 ವರ್ಷ ಹಾಗೂ ವರನಿಗೆ 21 ವರ್ಷವಾಗಿರಬೇಕು. ವಧು ರಾಜ್ಯದಲ್ಲಿ ಕನಿಷ್ಠ 3 ವರ್ಷದವರೆಗೆ ವಾಸವಾಗಿರುವ ಬಗ್ಗೆ ವಾಸ ದೃಢೀಕರಣ ಪತ್ರ ಹೊಂದಿರಬೇಕು.
ಅಮೋಘವರ್ಷಗೆ 1380 ನೇ ರ್ಯಾಂಕ್
ಮಾಗಡಿ: ಪಟ್ಟಣದ ಬಿಜಿಎಸ್ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿ ಸಿ. ಅಮೋಘವರ್ಷ ಸಿಇಟಿ ಪರೀಕ್ಷೆಯಲ್ಲಿ 1380 ನೇ ರ್ಯಾಂಕ್‌ಗಳಿಸಿದ್ದು, ಫಲಿತಾಂಶದಲ್ಲಿ ಉತ್ತಮ ಸಾಧನೆಗೈದಿದ್ದಾನೆ ಎಂದು ಪ್ರಾಂಶುಪಾಲ ಕೆ. ಉಮೇಶ್ ಪ್ರಶಂಸೆ ವ್ಯಕ್ತಪಡಿಸಿದ್ದಾರೆ. ಸಿಇಟಿಯಲ್ಲಿ ಉತ್ತಮ ಸಾಧನೆ ಮಾಡುವ ಮೂಲಕ ಮಾಗಡಿ ಬಿಜಿಎಸ್ ಪದವಿ ಪೂರ್ವ ಕಾಲೇಜಿಗೆ ಮತ್ತು ಸಂಸ್ಥೆಗೆ ತಾಲೂಕಿಗೆ ಕೀರ್ತಿ ತಂದಿರುವ ವಿದ್ಯಾರ್ಥಿ ಅಮೋಘವರ್ಷನಿಗೆ ಆದಿಚುಂಚನಗಿರಿ ವಿಜಯನಗರ ಶಾಖಾ ಮಠದ ಸೌಮ್ಯನಾಥಸ್ವಾಮೀಜಿ, ಪ್ರಾಂಶುಪಾಲ ಕೆ. ಉಮೇಶ್ ಹಾಗೂ ಉಪನ್ಯಾಸಕ ವರ್ಗ ಅಭಿನಂದಿಸಿದೆ.
ಎಂ.ಕುಮಾರ್‌ಗೆ 356 ನೇ ರ್ಯಾಂಕ್
ಮಾಗಡಿ: ಹಳ್ಳಿ ಪ್ರತಿಭೆ ಸಿಇಟಿಯಲ್ಲಿ 356 ನೇ ವೈದ್ಯಕೀಯ ರ್ಯಾಂಕ್ ಪಡೆದು ಸಾಧನೆಗೈದಿದ್ದಾನೆ. ಮಾಗಡಿ ತಾಲೂಕಿನ ಕುದೂರು ಹೋಬಳಿ ಸಮೀಪದ ಕುಗ್ರಾಮ ಕೆಂಪಾಪುರ ಗ್ರಾಮದ ವಾಸಿ ಮೋಹನ್‌ಕುಮಾರ್ ಸಿಇಟಿ ವೈದ್ಯಕೀಯದಲ್ಲಿ 356 ನೇ ರ್ಯಾಂಕ್ ಗಳಿಸಿದ್ದು, ಎಂಜಿನಿಯರ್ ವಿಭಾಗದಲ್ಲಿ 1030ನೇ ರ್ಯಾಂಕ್ ಗಳಿಸಿ ತಾಲೂಕಿಗೆ ಮತ್ತು ಕಾಲೇಜಿಗೆ ಕೀರ್ತಿ ತಂದಿದ್ದಾನೆ.ಈತ ಕುದೂರು ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಶೇ.94 ರಷ್ಟು ಅಂಕಗಳಿಸಿದ್ದ. ಮಗನ ಮೋಹನ್ ಕುಮಾರ್ ಸಾಧನೆಯನ್ನು ಕಂಡು ತಂದೆ ಶಿವಕುಮಾರ್ ಮತ್ತು ತಾಯಿ ಭಾರತಿ ಸಂತಸ ವ್ಯಕ್ತಪಡಿಸಿದ್ದು, ನನ್ನ ಮಗ ವೈದ್ಯನಾಗಿ ಹಳ್ಳಿಗಾಡಿನ ಜನರ ಸೇವೆ ಮಾಡಲಿ ಎಂದು ಹಾರೈಸಿದ್ದಾರೆ.
ಕುಂಬಾಭಿಷೇಕ
ಆನೇಕಲ್: ಬಿದರಗುಪ್ಪೆ ಕೋಟೆಯಲ್ಲಿ ನೆಲೆಸಿ ನೂತನವಾಗಿ ಜೀರ್ಣೋದ್ಧಾರಗೊಂಡಿರುವ ಲಕ್ಷ್ಮೀ ನಾರಾಯಣಸ್ವಾಮಿಯ ಪ್ರತಿಷ್ಠಾಪನಾ ಮಹೋತ್ಸವವು ಮೇ 31 ಶನಿವಾರ ಪ್ರಾರಂಭಗೊಂಡ ಜೂ.2 ಸೋಮವಾರದವರೆಗೆ ವಿವಿಧ ಕೈಂಕರ್ಯಗಳು ನಡೆಯಲಿದೆ ಎಂದು ಜೀಣೋದ್ಧಾರ ಸಮಿತಿಯ ವೇ.ಬ್ರ. ವೆಂಕಟೇಶ ಮೂರ್ತಿ ತಿಳಿಸಿದ್ದಾರೆ.
ತಲಕಾಡು ಸಂಸ್ಥಾನ ಗೋವಿಂದಾನಂದ ಸರಸ್ವತಿ ಸ್ವಾಮೀಜಿ ವಹಿಸಲಿದ್ದಾರೆ. ಪಂಡಿತ್ ನಂಜುಂಡ ದೀಕ್ಷಿತರು ಕಾರ್ಯಕ್ರಮಗಳ ನೇತೃತ್ವ ವಹಿಸಲಿದ್ದಾರೆ.