ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೆಂಗಳೂರು ಗ್ರಾಮಾಂತರ

ಸಾಹಿತ್ಯ ಸಮ್ಮೇಳನ; ಮುಂದುವರಿದ ಹಗ್ಗಜಗ್ಗಾಟ

Srinivasa Murthy VN
Updated On : 29 May 2014, 1:41 am

-ನಾರಾಯಣ ಹೆಗಡೆ
ಹಾವೇರಿ: ಹಲವು ವರ್ಷಗಳ ಬೇಡಿಕೆ ಬಳಿಕ 81ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಆತಿಥ್ಯ ಹಾವೇರಿ ಜಿಲ್ಲೆಗೆ ಒದಗಿದ್ದರೂ ಸ್ಥಳ ನಿಗದಿ ವಿಚಾರದಲ್ಲಿ ಹಾವೇರಿ, ರಾಣಿಬೆನ್ನೂರು ನಡುವೆ ಹಗ್ಗಜಗ್ಗಾಟ ಮುಂದುವರಿದಿದೆ.
ಇದು ವೈಯಕ್ತಿಕ ಪ್ರತಿಷ್ಠೆ ಹಂತಕ್ಕೆ ತಲುಪಿದ್ದು, ಎರಡೂ ಕಡೆಯವರಿಂದ ನಾ ಬಿಡೆ, ನೀ ಕೊಡೆ ಎಂಬಂಥ ಸ್ಥಿತಿ ನಿರ್ಮಾಣವಾಗಿದೆ. ಮಡಿಕೇರಿ ಸಮ್ಮೇಳನದಲ್ಲಿ ಮುಂದಿನ ಬಾರಿ ಹಾವೇರಿಯಲ್ಲಿ ಸಮ್ಮೇಳನ ಎಂದು ಘೋಷಣೆಯಾದ ಬಳಿಕ ಅದನ್ನು ಕಸಾಪ ಅಧ್ಯಕ್ಷರು ರಾಣಿಬೆನ್ನೂರಿಗೆ ಸ್ಥಳಾಂತರ ಮಾಡಿದ್ದು ಸಾಹಿತ್ಯಾಭಿಮಾನಿಗಳ ನಡುವೆ ಕಂದಕ ನಿರ್ಮಿಸಿದೆ. ಹಾವೇರಿಯಲ್ಲೇ ಸಮ್ಮೇಳನ ಆಗಬೇಕು ಎಂದು ಜನಪ್ರತಿನಿಧಿಗಳು, ಮಠಾಧೀಶರು, ಸಾಹಿತಿಗಳು, ಕನ್ನಡಪರ ಸಂಘಟನೆಗಳ ಪ್ರಮುಖರು ಒತ್ತಾಯ ಮಾಡುತ್ತಿದ್ದಾರೆ.
ಆದರೆ, ಕಸಾಪ ಜಿಲ್ಲಾಧ್ಯಕ್ಷ ಜಿ.ಬಿ. ಮಾಸಣಗಿ ರಾಣಿಬೆನ್ನೂರಿನಲ್ಲೇ ಸಮ್ಮೇಳನ ನಡೆಸಲು ಎಲ್ಲ ರೀತಿಯ ಪ್ರಯತ್ನ ಮುಂದುವರಿಸಿದ್ದಾರೆ.
ಶಾಸಕರ ಮನವಿ: ಹಾವೇರಿಯಲ್ಲಿ ಈಚೆಗೆ ನಡೆದ ಸಾಹಿತ್ಯಾಸಕ್ತರ ಸಭೆಯಲ್ಲಿ ಕೈಗೊಂಡ ನಿರ್ಣಯದಂತೆ ಶಾಸಕ ರುದ್ರಪ್ಪ ಲಮಾಣಿ ಕಸಾಪ ರಾಜ್ಯಾಧ್ಯಕ್ಷ ಪುಂಡಲೀಕ ಹಾಲಂಬಿ ಅವರೊಂದಿಗೆ ಮಾತುಕತೆ ನಡೆಸಿದ್ದಾರೆ. ನಿಮ್ಮ ನೇತೃತ್ವದಲ್ಲೇ ಹಾವೇರಿಯಲ್ಲಿ ಸಭೆ ಕರೆದು ಗೊಂದಲ ನಿವಾರಿಸಬೇಕು. ಕಸಾಪ ಜಿಲ್ಲಾಧ್ಯಕ್ಷರು ಯಾರನ್ನೂ ವಿಶ್ವಾಸಕ್ಕೆ ತೆಗೆದುಕೊಂಡಿಲ್ಲ. ರಾಣಿಬೆನ್ನೂರು ಎಂದು ಏಕಪಕ್ಷೀಯ ನಿರ್ಧಾರ ಕೈಗೊಂಡಿದ್ದಾರೆ. ಇದರಿಂದ ಎಲ್ಲರಲ್ಲಿ ಅತೃಪ್ತಿ ಹೊಗೆಯಾಡುತ್ತಿದೆ. ನೀವು ಮಧ್ಯ ಪ್ರವೇಶಿಸಿ ವಿವಾದ ಬಗೆಹರಿಸಬೇಕು ಎಂದು ಶಾಸಕರು ಮನವಿ ಮಾಡಿದ್ದಾರೆ.
ಜೂ. 4ರಂದು ಸಭೆ: ಸ್ಥಳ ನಿಗದಿ ಕುರಿತು ಎದ್ದಿರುವ ಗೊಂದಲ ನಿವಾರಣೆಗಾಗಿ ಜೂ. 4ರಂದು ಮಧ್ಯಾಹ್ನ 2 ಗಂಟೆಗೆ ರಾಣಿಬೆನ್ನೂರು ಸಮೀಪದ ಹನುಮನಮಟ್ಟಿ ಕೃಷಿ ವಿಜ್ಞಾನ ಕೇಂದ್ರದಲ್ಲಿ ಸಭೆ ಕರೆಯಲಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement