ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೆಂಗಳೂರು ಗ್ರಾಮಾಂತರ

'ಅನಧಿಕೃತ ಶಾಲೆಗೆ ಸೇರಿಸಬೇಡಿ'

Srinivasa Murthy VN
Updated On : 31 May 2014, 1:40 am

ಆನೇಕಲ್ಲು: ತಾಲೂಕಿಲ್ಲಿ 3 ಖಾಸಗಿ ಅನುದಾನ ರಹಿತ ಪ್ರಾಥಮಿಕ ಶಾಲೆಗಳಿದ್ದು, ಪೋಷಕರು ತಮ್ಮ ಮಕ್ಕಳನ್ನು ಕೆಳಕಂಡ ಶಾಲೆಗಳಿಗೆ 2014-15ನೇ ಸಾಲಿಗೆ ದಾಖಲು ಮಾಡಬಾರದೆಂದು ಕ್ಷೇತ್ರ ಶಿಕ್ಷಣಾಧಿಕಾರಿ ಶೇಖರಪ್ಪ ಮನವಿ ಮಾಡಿದ್ದಾರೆ.
ತಾಲೂಕಿನ ವಡೇರ ಮಂಚನಹಳ್ಳಿಯ ಗ್ರೀನ್‌ವ್ಯಾಲಿ ಅಕಾಡೆಮಿ ಪ್ರಾಥಮಿಕ ಶಾಲೆ, ವೀರಸಂದ್ರದ ಸುಜನ ವಿದ್ಯಾಮಂದಿರ ಹಾಗೂ ದೊಡ್ಡಹಾಗಡೆಯ ಚೈತನ್ಯ ಶಾಲೆಗಳಾಗಿವೆ. ಈ ಶಾಲಾ ಆಡಳಿತ ಮಂಡಳಿಯವರಿಗೆ ನೋಟಿಸ್ ನೀಡಿದ್ದು ಕಾನೂನು ಕ್ರಮ ಜರುಗಿಸಲು ಸಿದ್ಧತೆ ನಡೆದಿದೆ.
ಪೋಷಕರು ಮಕ್ಕಳನ್ನು ಶಾಲೆಗೆ ದಾಖಲಿಸುವಾಗ ಇಲಾಖೆಯಿಂದ ಮಾನ್ಯತೆ ಬಗ್ಗೆ ಖಚಿತ ಪಡಿಸಿಕೊಳ್ಳಬೇಕು ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ತಿಳಿಸಿದ್ದಾರೆ.
ಸರ್ಕಾರಿ ಶಾಲೆಗೆ ಸೇರಿಸಿ: ಸರ್ಕಾರಿ ಶಾಲೆಗಳಲ್ಲಿ ಅತ್ಯಂತ ಅನುಭವಿ ಹಾಗೂ ನುರಿತ ಶಿಕ್ಷಕರಿರುತ್ತಾರೆ. ಗುಣಮಟ್ಟದ ಶಿಕ್ಷಣ ನೀಡಲು ಉಚಿತ ಶಿಕ್ಷಣ, ಸಮವಸ್ತ್ರ, ಪುಸ್ತಕ, ಅರ್ಹರಿಗೆ ಸೈಕಲ್, ಮದ್ಯಾಹ್ನದ ಬಿಸಿ ಊಟದಂಥ ಯೋಜನೆಗಳನ್ನು ಸರ್ಕಾರ ಜಾರಿ ಮಾಡಿದ್ದು ಎಲ್ಲ ಪೋಷಕರು ತಾವು ಓದಿದ ಸರ್ಕಾರಿ ಶಾಲೆಯಲ್ಲಿ ತಮ್ಮ ಮಕ್ಕಳನ್ನು ದಾಖಲಿಸಲು ಕೋರಿದ್ದಾರೆ.

ತಮಟೆ ಕಲಾವಿದರ ಸಮ್ಮೇಳನ ಇಂದು
ಚನ್ನಪಟ್ಟಣ: ತಾಲೂಕಿನ ಪಂಚಮುಖಿ ಟ್ರಸ್ಟ್‌ವತಿಯಿಂದ ಪೂಜಾ ಮತ್ತು ತಮಟೆ ಕಲಾವಿದರ ಸಮ್ಮೇಳನವನ್ನು ಮೇ 31 ರಂದು ತಾಲೂಕಿನ ದೊಡ್ಡಮಳೂರು ಗ್ರಾಮದ ಅಪ್ರಮೇಯ ಸ್ವಾಮಿ ದೇವಾಯಲದ ಆವರಣದಲ್ಲಿ ಹಮ್ಮಿ ಕೊಳ್ಳಲಾಗಿದೆ. ಎಂ.ಎನ್ ಕೃಷ್ಣಕುಮಾರ್ ಕಾರ್ಯಕ್ರಮ ಉದ್ಘಾಟಿಸಲಿದ್ದು, ಕವಿ ಮತ್ತೀಕೆರೆ ಚಲುವರಾಜು ಅಧ್ಯಕ್ಷತೆ ವಹಿಸಲಿದ್ದಾರೆ.  ಉಪ ತಹಸೀಲ್ದಾರ್ ಯೋಗೇಶ್, ಮುಜರಾಯಿ ಇಲಾಖೆ ಕಾರ್ಯನಿರ್ವಹಣಾಧಿಕಾರಿ ಮಂಗಳಮ್ಮ, ಜಿಪಂ ಸದಸ್ಯೆ ನಾಗೇಶ್ವರಿ ಮುಂತಾದವರು ಪಾಲ್ಗೊಳ್ಳಲಿದ್ದಾರೆ.

ಜಾನಪದ ಲೋಕೋತ್ಸವ ನಾಳೆ
ಚನ್ನಪಟ್ಟಣ: ತಾಲೂಕಿನ ಮಂಕುಂದ ಗ್ರಾಮದ ಅಂಬೇಡ್ಕರ್ ಸಾಂಸ್ಕೃತಿಕ ಕಲಾ ಟ್ರಸ್ಟ್ ವತಿಯಿಂದ ಜಾನಪದ ಲೋಕೋತ್ಸವ ಮತ್ತು ಗೀತಗಾಯನ ಕಾರ್ಯಕ್ರಮವನ್ನು  ಜೂ.1ರಂದು ದೊಡ್ಡಮಳೂರು ಗ್ರಾಮದಲ್ಲಿ ಹಮ್ಮಿಕೊಳ್ಳಲಾಗಿದೆ. ಜಾನಪದ ಗಾಯಕ ಎಂ.ನಾಗೇಂದ್ರ ಉದ್ಘಾಟಿಸಲಿದ್ದು, ಚಿತ್ರ ನಿರ್ಮಾಪಕ ಎನ್.ನಾಗರಾಜು, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಶಾಂತಮ್ಮ, ಸಮತಾ ಸೈನಿಕ ದಳದ ಲೋಕೇಶ್, ಡಾ. ಅಕ್ರಂಪಾಷಾ, ಉಪನ್ಯಾಸಕ ಬಿ.ಪಿ.ಸುರೇಶ್ ಮುಂತಾದವರು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ.

ಸ್ನೇಹಲತಾಗೆ ಚಿನ್ನದ ಪದಕ
ಚನ್ನಪಟ್ಟಣ: ಬೆಂಗಳೂರು ವಿವಿ ನಡೆಸುವ ಮಾಸ್ಟರ್ ಆಫ್ ಟೂರಿಸಂ ಆಡ್ಮಿನಿಸ್ಟ್ರೇಷನ್ ಪರೀಕ್ಷೆಯಲ್ಲಿ ಪಟ್ಟಣದ ಚರ್ಚ್ ರಸ್ತೆಯ ಆಲ್ಫೀನಾ ಸ್ನೇಹಲತಾ ಚಿನ್ನದ ಪದಕ ಪಡೆದಿದ್ದಾರೆ. ಚರ್ಚ್‌ರಸ್ತೆ ಆವರ್ತಪುರದ ನಿವಾಸಿಗಳಾದ ಅಬ್ರಹಾಂ ಮತ್ತು ನವೀಲರತ್ನ ದಂಪತಿ ಪುತ್ರಿಯಾಗಿರುವ ಈಕೆ ಬೆಂಗಳೂರಿನ ರಾಜಾಜಿ ನಗರದ ಕೆಎಲ್‌ಇ ಕಾಲೇಜಿನಲ್ಲಿಮಾಸ್ಟರ್ ಆಫ್ ಟೂರಿಸಂ ಆಡ್ಮಿನಿಸ್ಟ್ರೇಷನ್ ಪದವಿಗೆ ಅಭ್ಯಾಸ ಮಾಡಿ ಚಿನ್ನದ ಪದಕ ಪಡೆದಿದ್ದಾರೆ. ಇತ್ತೀಚಿಗೆ ನಡೆದ 49ನೇ ವಿವಿ ಘಟಿಕೋತ್ಸವದಲ್ಲಿ ವಿವಿ ಕುಲಾಧಿಪತಿ ರಾಜ್ಯಪಾಲ ಹಂಸರಾಜ ಭಾರದ್ವಾಜ್, ನ್ಯಾಯಮೂರ್ತಿ ಎಸ್.ರಾಜೇಂದ್ರಬಾಬು, ಉನ್ನತ ಶಿಕ್ಷಣ ಸಚಿವ ಆರ್.ವಿ.ದೇಶಪಾಂಡೆ, ಸಂಗೀತ ನಿರ್ದೇಶಕ ಹಂಸಲೇಖ ಇವರಿಗೆ ಚಿನ್ನದ ಪದಕ ಪ್ರದಾನ ಮಾಡಿದರು.

ರವೀಂದ್ರ ವಿರುದ್ಧ ಪೂರ್ವ ನಿಯೋಜಿತ ಸಂಚು: ದಲಿತ ಸಂಘಗಳ ಆರೋಪ
ದೇವನಹಳ್ಳಿ: ಪ್ರಾಮಾಣಿಕ ಪೊಲೀಸ್ ಅಧಿಕಾರಿ ಎಡಿಜಿಪಿ ಡಾ.ರವೀಂದ್ರನಾಥ್ ಅವರನ್ನು ಉದ್ದೇಶಪೂರ್ವಕವಾಗಿ ಪೂರ್ವ ನಿಯೋಜಿತ ಸಂಚಿನಿಂದಾಗಿ ಅವರ ಮೇಲೆ ಆರೋಪ ಬರುವಂತೆ ಮಾಡಲಾಗಿದೆ ಎಂದು ದೇವನಹಳ್ಳಿ ತಾಲೂಕು ದಲಿತ ಸಂಘಟನೆಗಳ ಒಕ್ಕೂಟ ಆರೋಪಿಸಿವೆ.
ಮುಖ್ಯಮಂತ್ರಿ ಎರಡು ದಿನದೊಳಗಾಗಿ ಕ್ರಮ ತೆಗೆದುಕೊಳ್ಳದೆ ಇದ್ದಲ್ಲಿ ಸೋಮವಾರ ಪ್ರತಿಭಟನೆ ನಡೆಸಲಾಗುವುದು ಎಂದು ದಲಿತ ಸಂಘಟನೆ ಮುಖಂಡರಾದ ಕಾರಹಳ್ಳಿ ಶ್ರೀನಿವಾಸ್ ಇಲ್ಲಿನ ಪ್ರವಾಸಿ ಮಂದಿರದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ  ತಿಳಿಸಿದ್ದಾರೆ.  ಪ.ಜಾತಿಗೆ ಸೇರಿದ ನಿಷ್ಠಾವಂತ ಪೊಲೀಸ್ ಅಧಿಕಾರಿ ಡಾ.ರವೀಂದ್ರನಾಥ್ ಉನ್ನತ ಹುದ್ದೆಗೆ ಹೋಗದಂತೆ ತಡೆಯಲು ಅವರ ಮೇಲೆ ಆರೋಪ ೂರುವಂತೆ ಮಾಡಲಾಗಿದೆ ಎಂದು ದಲಿತ ಸಂಘರ್ಷ ಸಮಿಕಿ ಜಿಲ್ಲಾ ಉಪಾಧ್ಯಕ್ಷ ಬುಳ್ಳಹಳ್ಳಿ ರಾಜಪ್ಪ ತಿಳಿಸಿ ಗೃಹ ಸಚಿವರು ಮತ್ತು ಮುಖ್ಯಮಂತ್ರಿಗಳು ತಪ್ಪಿತಸ್ಥ ಅಧಿಕಾರಿಗಳ ಕ್ರಮ ಜರುಗಿಸಬೇಕೆಂದು ಒತ್ತಾಯಿಸಿದ್ದಾರೆ. ಪುರಸಭಾ ಸದಸ್ಯರಾದ ಎಂ.ಮೂರ್ತಿ, ನರಸಿಂಹಮೂರ್ತಿ, ಮಾಜಿ ಸದಸ್ಯ ಕುಮಾರ್ ಇತರೆ ಸಂಘಟನೆಗಳ ಮುಖಂಡರು  ಭಾಗವಹಿಸಿದ್ದರು.

ನೇಣು ಬಿಗಿದು ತಾಯಿ-ಮಗು ಸಾವು
ನೆಲಮಂಗಲ: ತಾಯಿ-ಮಗಳು ನೇಣು ಬಿಗಿದ ರೀತಿಯಲ್ಲಿ ಅನುಮಾನಾಸ್ಪದವಾಗಿ ಸಾವನ್ನಪ್ಪಿರುವ ಘಟನೆ ಮಾದನಾಯಕನಹಳ್ಳಿ ಗ್ರಾಮದಲ್ಲಿ ಶುಕ್ರವಾರ ನಡೆದಿದೆ. ಸಾವನ್ನಪ್ಪಿರುವವರನ್ನು ಪುಷ್ಪಲತಾ (32) ತೇಜು (4) ಎಂದು ಗುರುತಿಸಲಾಗಿದೆ. ಈಕೆಯ ಗಂಡ ಜಯರಾಮ ಎಂಬಾತ ಹೆಂಡತಿ ಪುಷ್ಪಲತಾಗೆ ವರದಕ್ಷಿಣೆ ತರುವಂತೆ ಪಾನಮತ್ತನಾಗಿ ಬಂದು ಕಿರುಕುಳ ನೀಡುತ್ತಿದ್ದ. ಆತನೇ ಹೆಂಡತಿ, ಮಗಳನ್ನು ಕೊಲೆಗೈದು ನೇಣು ಹಾಕಿದ್ದಾನೆ ಎಂದು ಆಕೆಯ ಪೋಷಕರು ಆರೋಪಿಸಿದ್ದಾರೆ. ಈ ಬಗ್ಗೆ ಮಾದನಾಯಕನಹಳ್ಳಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಕಾರು ಅಪಘಾತ: ಬಾಲಕಿ ಸಾವು
ಮಾಗಡಿ: ಇಂಡಿಕಾ ಕಾರು ಬಾಲಕಿಗೆ ಡಿಕ್ಕಿ ಹೊಡೆದ ಪರಿಣಾಮ ಬಾಲಕಿ ಸ್ಥಳದಲ್ಲೇ ಮೃತಪಟ್ಟ ಘಟನೆ ತಾಲೂಕಿನ ಚಿಕ್ಕಮುದಿಗೆರೆ ಬಳಿ ನಡೆದಿದೆ. ಮಾಗಡಿ ಪಟ್ಟಣದ ಅಸ್ಲಂಪಾಷ ಎಂಬುವರ ಪುತ್ರಿ ನವಾಜಿಯಾ (8) ರಸ್ತೆ ಅಪಘಾತದಲ್ಲಿ ಮೃತಪಟ್ಟ ದುರ್ದೈವಿ ಎಂದು ಪೊಲೀಸರು ತಿಳಿಸಿದ್ದಾರೆ. ಮದುವೆಯ ಸಮಾರಂಭಕ್ಕೆಂದು ಕುಣಿಗಲ್‌ಗೆ ತೆರಳಿದ ಅಸ್ಲಂ ಕುಟುಂಬ ಮದುವೆ ಮುಗಿಸಿಕೊಂಡು ಮನೆಗೆ ವಾಪಸಾಗುತ್ತಿರಬೇಕಾದರೆ ದಾರಿ ಮಧ್ಯೆ ಬಾಲಕಿ ಮೂತ್ರ ವಿಸರ್ಜನೆಗೆ ತೆರಳಿದ್ದಾಳೆ. ಮೂತ್ರ ವಿಸರ್ಜನೆ ಮಾಡಿದ ನಂತರ ಕಾರಿಗೆ ಹತ್ತಲು ಬರುತ್ತಿದ್ದಾಗ ಈ ದುರ್ಘಟನೆ ಸಂಭವಿಸಿದೆ. ಮಾಗಡಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.

ವಿಎಸ್‌ಎಸ್‌ಎನ್ ಅಧ್ಯಕ್ಷರಾಗಿ ಚನ್ನಪ್ಪ
ದೇವನಹಳ್ಳಿ: ದೇವನಹಳ್ಳಿ ತಾಲೂಕು ಬೊಮ್ಮವಾರ ಗ್ರಾಮದ ವ್ಯವಸಾಯ ಸೇವಾ ಸಹಕಾರ ಸಂಘದಲ್ಲಿ ಶುಕ್ರವಾರ ನಿರ್ದೇಶಕ ಎನ್. ರಾಮಮೂರ್ತಿ ಅಧ್ಯಕ್ಷತೆಯಲ್ಲಿ ನಡೆದ ವಿಶೇಷ ಸಭೆಯಲ್ಲಿ ನೂತನ ಅಧ್ಯಕ್ಷರಾಗಿ ಸಾವುಕನಹಳ್ಳಿಯ ಪಿ.ಚನ್ನಪ್ಪ ಅವಿರೋಧ ಆಯ್ಕೆಯಾಗಿದ್ದಾರೆ.
ನಿರ್ದೇಶಕರಾದ ಬಿ.ಕೆ.ದಿನಕರ್,ಮುನಿಯಪ್ಪ, ಕೆ.ಎನ್.ಬಸವರಾಜ್ ಹಾಗೂ ಮುನಿವೆಂಕಟಮ್ಮ ಉಪಸ್ಥಿತರಿದ್ದರು. ಜೆಡಿಎಸ್ ಮುಖಂಡ ಮುನಿರಾಮಯ್ಯ ಮತ್ತಿತರರು ನೂತನ ಅಧ್ಯಕ್ಷರನ್ನು ಅಭಿನಂದಿಸಿದರು. ನೂತನ ಅಧ್ಯಕ್ಷ ಚನ್ನಪ್ಪ ಮಾತನಾಡಿ ಈ ಸಂಘದ ವ್ಯಾಪ್ತಿಗೆ ಬರುವ ಎಲ್ಲ ಪಡಿತರದಾರರಿಗೆ ಸಮರ್ಪಕವಾಗಿ ಆಹಾರ ಧಾನ್ಯ ವಿತರಣೆ ಮಾಡಿ ಎಂದು ಸಲಹೆ ನೀಡಿದರು.

ಸಾಯಿಬಾಬಾ ಕುಂಭಾಭಿಷೇಕ
ಸೂಲಿಬೆಲೆ: ಪಟ್ಟಣದ ಶಿರಡಿ ಸಾಯಿಬಾಬಾ ಮಂದಿರದಲ್ಲಿ ಕುಂಭಾಭಿಷೇಕ ಸೇರಿದಂತೆ ಹಲವಾರು ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಶಿರಡಿ ಸಾಯಿ ಬಾಬಾ ಟ್ರಸ್ಟ್ ವತಿಯಂದ ಹಮ್ಮಿಕೊಂಡಿದ್ದ ಮೂರು ದಿನಗಳ ಕಾರ್ಯಕ್ರಮದಲ್ಲಿ ಹೋಮ, ಹವನ, ವಿಶೇಷ ಪೂಜಾ ಕಾರ್ಯಕ್ರಮಗಳಲ್ಲಿ  ನೂರಾರು ಭಕ್ತರು ಪಾಲ್ಗೊಂಡಿದ್ದರು. ಖ್ಯಾತಿ ಗಾಯಕಿ ವೀಣಾನಾಯ್ಡು ಅವರಿಂದ ಭಕ್ತ ಗೀತೆಗಳ ಗಾಯನ ಕಾರ್ಯಕ್ರಮ ಗಮನ ಸೆಳೆಯಿತು. ಟ್ರಸ್ಟ್ ಪದಾಧಿಕಾರಿಗಳು ಸೇರಿದಂತೆ ಹೆಚ್ಚಿನ ಸಂಖ್ಯೆಯ ಭಕ್ತರು ಭಾಗವಹಿಸಿದ್ದರು.

ಮಹಾತ್ಮಸ್ವಾಮಿ ಜಯಂತಿ
ನೆಲಮಂಗಲ: ಲೋಕ ಕಲ್ಯಾಣಾರ್ಥವಾಗಿ ಮಹಾತ್ಮಸ್ವಾಮಿ ಜಯಂತಿಯನ್ನು ತಾಲೂಕಿನ ಪಾಲನಹಳ್ಳಿಯ ದೇವಾಲಯದಲ್ಲಿ ಶುಕ್ರವಾರ ಆಚರಿಸಿದರು. ದೇವಾಲಯದ ಆವರಣದ ಸುತ್ತ ವಿವಿಧ ಬಗೆಯ ಹೂವು ಹಾಗೂ ವಿದ್ಯುತ್ ದ್ವೀಪಗಳಿಂದ ಅಲಂಕರಿಸಿದ್ದರು. ಇದೇ ಸಂದರ್ಭದಲ್ಲಿ ವಿವಿಧ ಕ್ಷೇತ್ರದ ಕಲಾವಿದರು ಹಾಗೂ ಸಾಹಿತಿಗಳನ್ನು ಸನ್ಮಾನಿಸಿ ಗೌರವಿಸಿದರು.

ಗಾಯನ-ವ್ಯಾಖ್ಯಾನ  
ಚನ್ನಪಟ್ಟಣ: ಪಟ್ಟಣದ ಸ್ವಾಮಿ ವಿವೇಕಾನಂದ ಮಿಷನ್ ಹಾಗೂ  ಪದ್ಮ, ಪಿ.ಚಾರಿಟಬಲ್ ಟ್ರಸ್ಟ್ ವತಿಯಿಂದ ಪಟ್ಟಣದ ಉಪನೋಂದಣಾಧಿಕಾರಿ ಕಚೇರಿ ಮೇಲ್ಭಾಗದಲ್ಲಿ ಮಂಕುತಿಮ್ಮನ ಕಗ್ಗದ ಗಾಯನ ಮತ್ತು ವ್ಯಾಖ್ಯಾನ ಕಾರ್ಯಕ್ರಮವನ್ನು ಮೇ 31 ರಂದು ಹಮ್ಮಿ ಕೊಳ್ಳಲಾಗಿದೆ. ಖ್ಯಾತ ಅಂಕಣಕಾರ ಡಾ.ಗುರುರಾಜ ಕರ್ಜಗಿ ವ್ಯಾಖ್ಯಾನ ಮಾಡಲಿದ್ದು, ಅಧ್ಯಾಪಕ ಕೆ.ವೇಣುಗೋಪಾಲ್ ಗಾಯನ ನಡೆಸಲಿದ್ದಾರೆ.

ವಿಧಾನ ಪರಿಷತ್‌ಗೆ ನಾಮನಿರ್ದೇಶನ: ವಾಟಾಳ್ ಮನವಿ
ಬೆಂಗಳೂರು: ವಿಧಾನ ಪರಿಷತ್‌ಗೆ ತಮ್ಮನ್ನು ನಾಮನಿರ್ದೇಶನ ಮಾಡುವಂತೆ ಕನ್ನಡ ಚಳವಳಿ ವಾಟಾಳ್ ಪಕ್ಷದ ಅಧ್ಯಕ್ಷ ವಾಟಾಳ್ ನಾಗರಾಜ್ ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ ಅವರಿಗೆ ಮನವಿ ಮಾಡಿದ್ದಾರೆ. ಪರಮೇಶ್ವರ ನಿವಾಸಕ್ಕೆ ಶುಕ್ರವಾರ ಭೇಟಿ ನೀಡಿದ ಅವರು, ನಾನು ಸಾಮಾಜಿಕ ಸೇವಾ ಕ್ಷೇತ್ರದಲ್ಲಿ ತೊಡಗಿಸಿಕೊಂಡಿದ್ದೇನೆ. ನನ್ನನ್ನು ಪರಿಷತ್ ಸದಸ್ಯನನ್ನಾಗಿ ಮಾಡುವುದಕ್ಕೆ ಹಲವು ಶಾಸಕರು ಹಾಗೂ ಸಂಸದರ ಬೆಂಬಲವಿದೆ. ಹೀಗಾಗಿ ಕಾಂಗ್ರೆಸ್ ಸಹಕಾರ ನೀಡಬೇಕು ಎಂದು ಮನವಿ ಮಾಡಿದರು.

ತರಬೇತಿ ಶಿಬಿರ
ಬೆಂಗಳೂರು: ನಿಮ್ಮ ಮಿತ್ರ ಫೌಂಡೇಶನ್ ವತಿಯಿಂದ ಗಿರಿನಗರ ಮತ್ತು ಸಾರಕ್ಕಿ ಶಾಖೆ ಆವರಣದಲ್ಲಿ ವಿವಿಧ ತರಬೇತಿ ಶಿಬಿರವನ್ನು ಜೂನ್‌ನಲ್ಲಿ ಆಯೋಜಿಸಲಾಗಿದೆ. ವ್ಯಕ್ತಿತ್ವ ವಿಕಸನ, ಉದ್ಯೋಗ ಸಂಬಂಧಿ ತರಗತಿ, ಗೃಹ ಕೈಗಾರಿಕಾ ಉತ್ಪನ್ನಗಳಿಗೆ ಸಂಬಂಧಿಸಿದ ತರಬೇತಿ ಹಮ್ಮಿಕೊಳ್ಳಲಾಗಿದೆ. ಪ್ರತಿ ಗುಂಪಿಗೆ 20 ಮಂದಿ ಮಾತ್ರ ಆಯ್ಕೆ ಮಾಡಲಾಗುವುದು. ವಿದ್ಯಾರ್ಹತೆ ನಿರ್ಬಂಧವಿಲ್ಲ. ವಿವರಗಳಿಗೆ ದೂ. 9964450465ಗೆ ಕರೆ ಮಾಡಿ.

ಗೃಹಿಣಿ ಆತ್ಮಹತ್ಯೆ
ಚನ್ನಪಟ್ಟಣ: ಕೌಟುಂಬಿಕ ದೌರ್ಜನ್ಯದಿಂದ ಬೇಸತ್ತು ಆತ್ಮಹತ್ಯೆಗೆ ಯತ್ನಿಸಿದ್ದ ಗೃಹಿಣಿಯೊಬ್ಬರು ಚಿಕಿತ್ಸೆ ಫಲಕಾರಿಯಾಗದೆ ಸಾವಿಗೀಡಾಗಿರುವ ಘಟನೆ ಪಟ್ಟಣದ ಹೊಸ ಮಕಾನ್‌ನಲ್ಲಿ ನಡೆದಿದೆ. ಇಲ್ಲಿನ ನಿವಾಸಿ ಸಲ್ಮಾ(24) ಮೃತ ಗೃಹಿಣಿ. ಪತಿಯ ಮನೆಯವರ ದೌರ್ಜನ್ಯದಿಂದ ಮನನೊಂದು ಮೂರು ದಿನಗಳ ಹಿಂದೆ ಮೈಮೇಲೆ ಸೀಮೆಎಣ್ಣೆ ಸುರಿದು ಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದರು.ತೀವ್ರ ಗಾಯಗೊಂಡಿದ್ದ ಇವರನ್ನು ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿತ್ತಾದರೂ, ಚಿಕಿತ್ಸೆ ಫಲಕಾರಿಯಾಗದೆ ಸಾವಿಗೀಡಾಗಿದ್ದಾರೆ. ಠಾಣೆಯಲ್ಲಿ ದೂರು ದಾಖಲಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement