ನಾಳೆಯಿಂದ ಮಂಡೂರು ಬಂದ್
ಕೃಷ್ಣರಾಜಪುರ: ಮಂಡೂರಿನಲ್ಲಿ ಅವೈಜ್ಞಾನಿಕವಾಗಿ ಕಸ ಸುರಿಯುವುದನ್ನು ನಿಲ್ಲಿಸುವಂತೆ ಬಿಬಿಎಂಪಿಗೆ ನೀಡಿರುವ ಗಡುವು ಶನಿವಾರಕ್ಕೆ ಮುಗಿಯಲಿದ್ದು ಕಸದ ಲಾರಿಗಳು ಬಂದರೆ ಭಾನುವಾರದಿಂದ ಅನಿರ್ದಿಷ್ಟಾವದಿ ಬಂದ್ ಮಾಡಿ ಪ್ರತಿಭಟನೆ ನಡೆಸುವುದಾಗಿ ಗ್ರಾಮಸ್ಥರು ಎಚ್ಚರಿಸಿದ್ದಾರೆ.
ಸಾವಿರಾರು ಟನ್ ಕಸವನ್ನು ತಂದು ಮಂಡೂರಿನಲ್ಲಿ ಸುರಿಯಲಾಗುತ್ತಿದೆ. ಕಳೆದ 10 ವರ್ಷಗಳಿಂದ ಕೋಟ್ಯಂತರ ಟನ್ ಕಸ ಶೇಖರಣೆಯಾಗಿದ್ದು ಅಂತರ್ಜಲ ಕಲುಷಿತವಾಗಿದೆ.
ಭೂಮಿಯಲ್ಲಿನ ಫಲವತ್ತತೆ ನಾಶವಾಗಿದೆ, ಗ್ರಾಮಗಳಲ್ಲಿ ಸಾಂಕ್ರಾಮಿಕ ರೋಗಗಳು ಹೆಚ್ಚುತ್ತಿವೆ, ನಾಯಿ, ಸೊಳ್ಳೆಗಳ ಕಾಟವಂತೂ ಹೇಳ ತೀರದಾಗಿದೆ, ಸುತ್ತಮುತ್ತಲಿನ 10 ಗ್ರಾಮಗಳು ಅಕ್ಷರಶಃ ಶಾಪಗ್ರಸ್ತವಾಗಿವೆ ಎಂಬುದು ಸಾರ್ವಜನಿಕರ ಆರೋಪ.
ಈ ಎಲ್ಲಾ ಅಂಶಗಳನ್ನೊಳಗೊಂಡ ಮನವಿ ಪತ್ರವನ್ನು ಹಿಂದಿನ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಅವರಿಗೆ ನೀಡಿದ್ದರೂ ಈ ಬಗ್ಗೆ ಕ್ರಮ ಜರುಗಿಸದ ಅವರು ಬಿಬಿಎಂಪಿ ಆಯುಕ್ತರು, ಮಹಾಪೌರರು ಸೇರಿದಂತೆ ಹಲವರೊಂದಿಗೆ ಚರ್ಚಿಸಿ 9 ತಿಂಗಳು ಸಮಯಾವಕಾಶ ಪಡೆದಿದ್ದರು. ಲಿಖಿತರೂಪದ ಭರವಸೆ ನೀಡಿದ್ದರು. ಆ ಅವಧಿ ಈಗ ಮುಗಿದಿದೆ ಎಂದಿರುವ ಮಂಡೂರು ಸುತ್ತಮುತ್ತಲಿನ ಗ್ರಾಮಸ್ಥರು ತಮಟೆ ಹೊಡೆದು ಅರಿವು ಮೂಡಿಸಿದರು. ಶನಿವಾರಕ್ಕೆ ಸರ್ಕಾರದ ಗಡುವು ಮುಗಿಯಲಿದ್ದು ಕಸದ ಲಾರಿಗಳು ಬಂದರೆ ತಮ್ಮ ವಹಿವಾಟುಗಳನ್ನು ಸ್ಥಗಿತಗೊಳಿಸಿ ಪ್ರತಿಭಟನೆಗೆ ಕೈಜೋಡಿಸುವಂತೆ ಮನವಿ ಮಾಡಿದರು. ಸರ್ಕಾರಿ ಕಚೇರಿಗಳನ್ನೂ ಕಾರ್ಯನಿರ್ವಹಿಸಲು ಬಿಡುವುದಿಲ್ಲ ಎಂದು ಎಚ್ಚರಿಕೆ ನೀಡಿದರು.
ಸರ್ಕಾರ ಹಟ ಹಿಡಿದು ಕಸವನ್ನು ಮತ್ತೆ ಇಲ್ಲೇ ಹಾಕಲು ಪ್ರಯತ್ನಿಸಿದರೆ ಭಾನುವಾರದಿಂದ ಅನಿರ್ದಿಷ್ಟಾವಧಿ ಪ್ರತಿಭಟನೆ ನಡೆಸುವುದಾಗಿ ಗ್ರಾಮಸ್ಥರು ತಿಳಿಸಿದ್ದಾರೆ.
ಪ್ರತಿಭಟನೆಯಲ್ಲಿ ಸ್ಥಳೀಯ ಶಾಸಕ ಅರವಿಂದ ಲಿಂಬಾವಳಿ, ಸಂಸದ ಪಿ.ಸಿ. ಮೋಹನ್ ಸಹ ಹಾಜರಿರುತ್ತಾರೆ ಎಂದು ಮುಖಂಡರಾದ ಕಿತ್ತಗನೂರ್ ಜಯರಾಮ್, ಪಾಪಣ್ಣ, ರಾಕೇಶ್ ಗೌಡ, ವೇಣು ಮುಂತಾದವರು ತಿಳಿಸಿದರು.