ಮಾತು ಕೇಳದ ಅಧಿಕಾರಿಗಳ ವಿರುದ್ಧ ಕಟ್ಟುನಿಟ್ಟಿನ ಕ್ರಮ
ಮಾತು ಕೇಳದ ಅಧಿಕಾರಿಗಳ ವಿರುದ್ಧ ಇನ್ನು ಮುಂದೆ ಕಟ್ಟುನಿಟ್ಟಿನ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಗುಡುಗಿದ್ದಾರೆ.
ಕ.ಪ್ರ.ವಾರ್ತೆ ಬೆಂಗಳೂರು ಮೇ 30
ಮಾತು ಕೇಳದ ಅಧಿಕಾರಿಗಳ ವಿರುದ್ಧ ಇನ್ನು ಮುಂದೆ ಕಟ್ಟುನಿಟ್ಟಿನ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಗುಡುಗಿದ್ದಾರೆ.
ಬೆಂಗಳೂರು ಪ್ರೆಸ್ ಕ್ಲಬ್ನ ಬಹೂಪಯೋಗಿ ಕಟ್ಟಡ ಉದ್ಘಾಟನೆ ನಂತರ ಮಾಧ್ಯಮ ಸಂವಾದ ಕಾರ್ಯಕ್ರಮದಲ್ಲಿ ಈ ಎಚ್ಚರಿಕೆ ನೀಡಿದ್ದಾರೆ.
'ನಿಮ್ಮ ಸರ್ಕಾರದಲ್ಲಿ ಸಚಿವರು ನಿಮ್ಮ ಸಾಧನೆ ಬಗ್ಗೆ ಮಾತನಾಡುವುದಿಲ್ಲ. ಅಧಿಕಾರಿಗಳು ಬಹಿರಂಗವಾಗಿ ಮಾತನಾಡುವುದನ್ನು ನಿಲ್ಲಿಸುವುದಿಲ್ಲ. ಇದರಿಂದ ಆಡಳಿತ ವ್ಯವಸ್ಥೆ ಶಿಥಿಲವಾಗಿದೆ ಎಂಬ ಭಾವನೆ ಸಾರ್ವಜನಿಕ ವಲಯದಲ್ಲಿ ಮೂಡುತ್ತಿದೆ ಎಂಬ ಪ್ರಶ್ನೆಗೆ ಈ ಉತ್ತರ ನೀಡಿದ್ದಾರೆ.
ಅಧಿಕಾರಿಗಳು ಕಾನೂನು ಪ್ರಕಾರ ಸರ್ಕಾರ ಮತ್ತು ಮುಖ್ಯಮಂತ್ರಿಗಳ ಮಾತನ್ನು ಕೇಳಲೇಬೇಕು. ಮಾತು ಕೇಳದ ಅಧಿಕಾರಿಗಳ ವಿರುದ್ಧ ಇನ್ನು ಮುಂದೆ ಕಟ್ಟುನಿಟ್ಟಿನ ಕ್ರಮ ತೆಗೆದುಕೊಳ್ಳುತ್ತೇನೆ. ಜತೆಗೆ ಸಚಿವರು ತಮ್ಮ ಇಲಾಖೆ ಕೆಲಸ ನಿರ್ಲಕ್ಷಿಸಿಲ್ಲ. ಆದರೆ ಇದು ಮಾಧ್ಯಮಗಳಲ್ಲಿ ವರದಿಯಾಗದೇ ಇರಬಹುದು. ಸಚಿವರು ಸುಮ್ಮನಿದ್ದಾರೆ ಎಂಬುದನ್ನು ಒಪ್ಪಲು ಸಾಧ್ಯವಿಲ್ಲ ಎಂದರು.
ವೈಫಲ್ಯವಲ್ಲ : ಎಡಿಜಿಪಿ ರವೀಂದ್ರನಾಥ್ ಪ್ರಕರಣದಲ್ಲಿ ಸರ್ಕಾರ ವಿಫಲವಾಗಿದೆ ಎಂಬ ಪ್ರತಿಪಕ್ಷದ ಆರೋಪದಲ್ಲಿ ಹುರುಳಿಲ್ಲ. ಇದು ಕಾಫಿ ಶಾಪ್ನಲ್ಲಿ ನಡೆದ ಪ್ರಕರಣ. ಎಡಿಜಿಪಿ ರವೀಂದ್ರನಾಥ್ ಅವರು ತಮ್ಮ ಭಾವಚಿತ್ರ ತೆಗೆದಿದ್ದಾರೆ ಎಂದು ಇಬ್ಬರು ಮಹಿಳೆಯರು ನೀಡಿದ ದೂರಿನ ಹಿನ್ನೆಲೆಯಲ್ಲಿ ಈ ವಿವಾದ ಸೃಷ್ಟಿಯಾಗಿದೆ. ಹಿರಿಯ ಅಧಿಕಾರಿಗಳ ವಿರುದ್ಧ ಅವರು ಆರೋಪಿಸಿದ ಹಿನ್ನೆಲೆಯಲ್ಲಿ ಪ್ರಕರಣವನ್ನು ಸಿಐಡಿಗೆ ವರ್ಗಾಯಿಸಲಾಗಿದೆ. ಅದೇ ರೀತಿ ರವೀಂದ್ರನಾಥ್ ಅವರು ದಲಿತ ದೌರ್ಜನ್ಯ ಪ್ರಕರಣದ ದೂರು ನೀಡಿದ್ದಾರೆ. ಅದನ್ನೂ ಸಿಐಡಿಗೆ ವರ್ಗಾಯಿಸಲಾಗಿದೆ ಎಂದು ಹೇಳಿದರು.
ಈ ಸಂಬಂಧ ತಪ್ಪಿತಸ್ಥರ ವಿರುದ್ಧ ಕ್ರಮ ತೆಗೆದುಕೊಳ್ಳುತ್ತೇವೆ. ಪ್ರಕರಣ ಸಂಬಂಧ ನಗರ ಪೊಲೀಸ್ ಆಯುಕ್ತ ರಾಘವೇಂದ್ರ ಔರಾದ್ಕರ್ ಅವರನ್ನು ವರ್ಗಾಯಿಸುವ ಪ್ರಸ್ತಾಪವಿಲ್ಲ. ಎಡಿಜಿಪಿ ರವೀಂದ್ರನಾಥ್ ಅವರಿಗೂ ಸದ್ಯದಲ್ಲೇ ಹುದ್ದೆ ನೀಡುತ್ತೇವೆ. ಅವರು ನೀಡಿರುವ ರಾಜೀನಾಮೆ ಪತ್ರ ನನ್ನ ಕೈಗೆ ತಲುಪಿಲ್ಲ ಎಂದು ವಿವರಿಸಿದರು.
ಸಾಮೂಹಿಕ ಹೊಣೆ : ಮೈಸೂರು ಹಾಗೂ ಮಂಡ್ಯ ಲೋಕಸಭಾ ಕ್ಷೇತ್ರದ ಸೋಲಿಗೆ ನಾನು ವೈಯಕ್ತಿಕ ಹೊಣೆಗಾರನಾಗುವುದಿಲ್ಲ. ನಾನು ರಾಜ್ಯದ ಎಲ್ಲ ಜಿಲ್ಲೆಗಳಿಗೆ ಸೇರಿದವನು. ಹೀಗಾಗಿ ಮೈಸೂರು ಕ್ಷೇತ್ರದಲ್ಲಿನ ಕಾಂಗ್ರೆಸ್ ಸೋಲಿಗೆ ಮಾತ್ರ ನಾನು ಹೊಣೆಗಾರನಾಗುವುದಿಲ್ಲ. ಅದೇ ರೀತಿ ರಾಜ್ಯದ ಜನರು ನಮಗೆ ಐದು ವರ್ಷ ಆಡಳಿತ ನಡೆಸುವುದಕ್ಕಾಗಿ ಜನಾದೇಶ ನೀಡಿದ್ದಾರೆ. ಹೀಗಾಗಿ ಲೋಕಸಭಾ ಚುನಾವಣೆ ಸೋಲಿನಿಂದ ಸರ್ಕಾರದ ಸಾಧನೆ ಅಳೆಯುವುದಕ್ಕೆ ಸಾಧ್ಯವಿಲ್ಲ. ಸೋಲಿಗೆ ಸಾಮೂಹಿಕ ಹೊಣೆಗಾರಿಕೆ ಹೊರುತ್ತೇವೆ ಎಂದು ಹೇಳಿದರು.
ಡಿಸಿಎಂ ಸ್ಥಾನ ವಿಚಾರ ಬೀದಿಯಲ್ಲಿ ಚರ್ಚಿಸುವುದಲ್ಲ
ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ ಅವರಿಗೆ ಉಪಮುಖ್ಯಮಂತ್ರಿ ಸ್ಥಾನ ನೀಡುವುದು ಹೈಕಮಾಂಡ್ಗೆ ಬಿಟ್ಟ ವಿಚಾರ. ಈ ಬಗ್ಗೆ ಹಾದಿಬೀದಿಯಲ್ಲಿ ಚರ್ಚೆ ನಡೆಸುವುದು ಸರಿಯಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ. ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಅವರು, ಇದುವರೆಗೆ ಈ ಬಗ್ಗೆ ಇಂಥ ಯಾವುದೇ ಚರ್ಚೆ ಹೈಕಮಾಂಡ್ ಹಂತದಲ್ಲಿ ಆಗಿರುವುದು ನನ್ನ ಗಮನಕ್ಕೆ ಬಂದಿಲ್ಲ ಎಂದು ಹೇಳಿದರು. ರಾಜ್ಯ ಸಚಿವ ಸಂಪುಟವನ್ನು ಪುನಾರಚಿಸುವುದಿಲ್ಲ. ಆದರೆ ಖಾಲಿ ಇರುವ ಸ್ಥಾನಗಳನ್ನು ಆದಷ್ಟು ಬೇಗ ಭರ್ತಿ ಮಾಡಿಕೊಳ್ಳಲಾಗುವುದು ಎಂದು ತಿಳಿಸಿದರು.
ಸಾಮಾಜಿಕ ಜಾಲತಾಣಗಳ ಅಕೌಂಟ್ ತೆರೆಯಲು ಸೂಚನೆ
ರಾಜ್ಯ ಸರ್ಕಾರದ ಸಚಿವರಿಗೆ ಫೇಸ್ಬುಕ್ ಹಾಗೂ ಟ್ವಿಟರ್ನಂಥ ಸಾಮಾಜಿಕ ಜಾಲ ತಾಣಗಳ ಅಕೌಂಟ್ ತೆರೆಯುವಂತೆ ಸೂಚನೆ ನೀಡಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ. ಕೇಂದ್ರ ಸಚಿವರಿಗೆ ಸಾಮಾಜಿಕ ಜಾಲ ತಾಣಗಳಲ್ಲಿ ಅಕೌಂಟ್ ತೆರೆಯುವಂತೆ ಪ್ರಧಾನಿ ನರೇಂದ್ರ ಮೋದಿ ಸೂಚನೆ ನೀಡಿದ ಬೆನ್ನಲ್ಲೇ ರಾಜ್ಯ ಸರ್ಕಾರ ಈ ನಿರ್ಧಾರಕ್ಕೆ ಬಂದಿದೆ. ಪ್ರೆಸ್ಕ್ಲಬ್ನಲ್ಲಿ ನಡೆದ ಮಾಧ್ಯಮ ಸಂವಾದ ಕಾರ್ಯಕ್ರಮದಲ್ಲಿ ಸುದ್ದಿಗಾರರ ಪ್ರಶ್ನೆಯೊಂದಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಈ ಪ್ರತಿಕ್ರಿಯೆ ನೀಡಿದ್ದಾರೆ.