ಬೆಂಗಳೂರು: ಕರ್ನಾಟಕ ಕಾನೂನು ವಿಶ್ವವಿದ್ಯಾನಿಲಯದ ಡೀನ್ ಹುದ್ದೆಗೆ ಜಿ.ಆರ್.ಜಗದೀಶ್ ಅವರ ನೇಮಕಗೊಳಿಸಿ ವಿವಿ ಹೊರಡಿಸಿದ್ದ ಆದೇಶವನ್ನು ಹೈಕೋರ್ಟ್ ರದ್ದುಗೊಳಿಸಿದೆ. ಎಸ್‌ಡಿಎಂ ಕಾಲೇಜಿನ ಪ್ರಾಧ್ಯಾಪಕ ಪಿ.ಡಿ.ಸೆಬಾಸ್ಟಿನ್ ಎಂಬುವರು ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾ.ಎಲ್.ನಾರಾಯಣಸ್ವಾಮಿ ಅವರಿದ್ದ ಏಕಸದಸ್ಯ ಪೀಠ, ಮೂರು ವಾರಗಳಲ್ಲಿ ಮರು ನೇಮಕ ಪ್ರಕ್ರಿಯೆ ನಡೆಸುವಂತೆ ಆದೇಶಿಸಿದೆ. ಡೀನ್ ಹುದ್ದೆಗೆ ಶಿವಮೊಗ್ಗದ ಸಿಬಿಆರ್ ರಾಷ್ಟ್ರೀಯ ಕಾನೂನು ಕಾಲೇಜಿನ ಪ್ರಾಂಶುಪಾಲರಾಗಿದ್ದ ಜಿ.ಆರ್.ಜಗದೀಶ್ ಅವರನ್ನು ನೇಮಕಗೊಳಿಸಿ ವಿವಿ ಕಳೆದ ಫೆಬ್ರವರಿಯಲ್ಲಿ ಆದೇಶ ಹೊರಡಿಸಿತ್ತು. ಇದನ್ನು ಅರ್ಜಿದಾರರು ಪ್ರಶ್ನಿಸಿದ್ದರು.
ಡಿ.ಜಿ. ಹಳ್ಳಿ ಹತ್ಯೆ; ಮೂವರ ಸೆರೆ
ದೇವರಜೀವನಹಳ್ಳಿಯ ಸಕ್ಕರೆಮಂಡಿಯಲ್ಲಿ ಸೋಮವಾರ ರಾತ್ರಿ ನಡೆದ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಮೂವರನ್ನು ಬಂಧಿಸಿದ್ದಾರೆ. ಡಿ.ಜೆ.ಹಳ್ಳಿ ಇ ಬ್ಲಾಕ್ ನಿವಾಸಿಗಳಾದ ಅರುಣ್ ಅಲಿಯಾಸ್ ಕುನ್ಯಾ, ಜಾನ್, ಪ್ರಭಾ ಬಂಧಿತರು. ಆರೋಪಿಗಳು ಸೋಮವಾರ ರಾತ್ರಿ ಸತೀಶ್ ಎಂಬಾತನನ್ನು ಹತ್ಯೆ ಮಾಡಿದ್ದರು. ಘಟನೆ ಬಗ್ಗೆ ಪ್ರತಿಕ್ರಿಯಿಸಿರುವ ಪೊಲೀಸರು, ಎರಡೂ ಗುಂಪಿನ ಯುವಕರು ಡಿ.ಜೆ.ಹಳ್ಳಿಯ ಇ ಬ್ಲಾಕ್ ಮತ್ತು ಶ್ರೀನಿವಾಸ ನಗರ ನಿವಾಸಿಗಳು. ಭಾನುವಾರ ಬೆಳಗ್ಗೆ ಕ್ರಿಕೆಟ್ ಆಟವಾಡುತ್ತಿದ್ದಾಗ ಕ್ಷುಲ್ಲಕ ವಿಚಾರಕ್ಕೆ ಜಗಳವಾಗಿತ್ತು. ಅದೇ ದಿನ ರಾತ್ರಿ ಈ ವಿಚಾರವಾಗಿ ಮತ್ತೆ ಎರಡು ಗುಂಪಿನ ಯುವಕರ ನಡುವೆ ಮಾರಾಮಾರಿ ನಡೆದಿದೆ. ಇದೇ ವೇಳೆ ಅಲ್ಲಿಗೆ ಬಂದ ಗಸ್ತು ಪೊಲೀಸರು ಅವರನ್ನು ಸಮಾಧಾನಪಡಿಸಿ ಕಳುಹಿಸಿದ್ದರು. ಆದರೆ, ಅಲ್ಲಿಗೆ ಸುಮ್ಮನಾಗದ ಅರುಣ್ ಹಾಗೂ ಇತರೆ ಐವರು ಸೋಮವಾರ ರಾತ್ರಿ ಶ್ರೀನಿವಾಸ ನಗರಕ್ಕೆ ಹೋಗಿದ್ದಾರೆ. ಕಾರ್ತಿಕ್ ಎಂಬಾತನಿಗಾಗಿ ಹುಡುಕಾಟ ನಡೆಸಿದ್ದಾರೆ. ಆದರೆ, ಕಾರ್ತಿಕ್ ಹಾಗೂ ಇತರರು ಅಲ್ಲಿಂದ ಪರಾರಿಯಾಗಿದ್ದರು. ಈ ವೇಳೆ ಸತೀಶ್ ಹಾಗೂ ರಾಜನ್ ಎಂಬುವವರುಅವರ ಕೈಗೆ ಸಿಕ್ಕಿಬಿದ್ದಿದ್ದಾನೆ. ಅರುಣ್ ಹಾಗೂ ಇತರರು ಅವರ ಜತೆ ಜಗಳ ತೆಗೆದು ಇಬ್ಬರನ್ನೂ ಮಾರಕಾಸ್ತ್ರದಿಂದ ಇರಿದು ಪರಾರಿಯಾಗಿದ್ದರು. ಸತೀಶ್ ಮೃತಪಟ್ಟಿದ್ದು, ರಾಜನ್ ಚೇತರಿಸಿಕೊಂಡಿದ್ದಾನೆ ಎಂದು ತಿಳಿಸಿದ್ದಾರೆ.
ಸಹಾಯವಾಣಿಗೆ ಅರ್ಜಿ
ರಾಮನಗರ: ಜಿಲ್ಲಾಧಿಕಾರಿ ಮತ್ತು ತಾಲೂಕು ಕಚೇರಿಗಳಲ್ಲಿ ಸಕಾಲ ಸಹಾಯವಾಣಿ ತೆರೆಯಲು ಗಣಕಯಂತ್ರದ ಬಗ್ಗೆ ಜ್ಞಾನವುಳ್ಳ ಆಸಕ್ತ ಸರ್ಕಾರೇತರ ಸಂಸ್ಥೆ, ನಿವೃತ್ತ ಅಧಿಕಾರಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಮಾಸಿಕ ರು. 5 ಸಾವಿರ ವೇತನ ನೀಡಲಾಗುವುದು. ಆಸಕ್ತರು ತಮ್ಮ ದಾಖಲಾತಿಗಳೊಂದಿಗೆ ಜು.15ರೊಳಗೆ ಜಿಲ್ಲಾಧಿಕಾರಿಗಳು, ರಾಮನಗರ ಇವರಿಗೆ ಅರ್ಜಿ ಸಲ್ಲಿಸುವಂತೆ ಕೋರಲಾಗಿದೆ.