ಕ.ಪ್ರ.ವಾರ್ತೆ ಬೆಂಗಳೂರು ಮಾ.20-
ಗಾಂಧಿನಗರದ ಹೊಟೇಲ್, ಬಾರ್, ಅಂಗಡಿಗಳ ಮೇಲೆ ಬುಧವಾರ ದಾಳಿ ಮಾಡಿದ ಪೊಲೀಸರು ಹಾಗೂ ವಿವಿಧ ಸಂಘಸಂಸ್ಥೆಗಳ ಸದಸ್ಯರು 40 ಬಾಲಕಾರ್ಮಿಕರ ರಕ್ಷಣೆ ಮಾಡಿದ್ದಾರೆ.
ಅವರಲ್ಲಿ 39 ಗಂಡು ಮಕ್ಕಳು ಹಾಗೂ ಒಬ್ಬಳು ಹುಡುಗಿ. ರಕ್ಷಣೆಗೊಳಗಾದವರಲ್ಲಿ 28 ಮಂದಿ ಉತ್ತರ ಕರ್ನಾಟಕದವರು, ಐವರು ಬಿಹಾರದವರು, ಐವರು ತಮಿಳುನಾಡಿನವರು, ಒಬ್ಬ ಪಶ್ಚಿಮ ಬಂಗಾಳ ಹಾಗೂ ಮತ್ತೊಬ್ಬ ಅಸ್ಸಾಂ ಮೂಲದವನು.
ರಕ್ಷಿಸಿದ 40 ಮಕ್ಕಳನ್ನು ನಿಮ್ಹಾನ್ಸ್ ಬಳಿ ಇರುವ ಬಾಲಮಂದಿರದಲ್ಲಿ ಇಡಲಾಗಿದೆ. ಗುರುವಾರ ಸಮಿತಿ ಮುಂದೆ ಆ ಮಕ್ಕಳನ್ನು ಹಾಜರುಪಡಿಸಲಾಗುವುದು.
ನಂತರ ಅವರ ಹೇಳಿಕೆ ಪಡೆದು ತಮ್ಮ ಪೋಷಕರ ಬಳಿ ಬಿಡುವ ವ್ಯವಸ್ಥೆ ಮಾಡಲಾಗುವುದು ಎಂದು ದಾಳಿ ಮಾಡಿದ ಸಂಸ್ಥೆಯ ಸಿಬ್ಬಂದಿ ತಿಳಿಸಿದ್ದಾರೆ.
ಗಾಂಧಿನಗರದಲ್ಲಿ ಹೆಚ್ಚು ಬಾಲಕಾರ್ಮಿಕರಿದ್ದಾರೆ ಎಂಬ ಬಗ್ಗೆ ಮಾಹಿತಿ ಆಧರಿಸಿ ಕೆಲ ದಿನಗಳಿಂದ ಸಂಘಸಂಸ್ಥೆಯ ಸಿಬ್ಬಂದಿ ಹೊಟೇಲ್, ಬೇಕರಿ, ಅಂಗಡಿ, ಕಟ್ಟಡ ಕಾಮಗಾರಿ ಸೇರಿದಂತೆ ಬಾಲಕಾರ್ಮಿಕರು ಇರುವ ಸ್ಥಳಗಳಿಗೆ ಭೇಟಿ ನೀಡಿ ಮಕ್ಕಳನ್ನು ಗುರುತಿಸಿದ್ದರು.
ಈ ವೇಳೆ 63 ಮಕ್ಕಳನ್ನು ಪತ್ತೆ ಮಾಡಲಾಗಿತ್ತು. ಆದರೆ, ದಾಳಿಯ ದಿನ 40 ಮಕ್ಕಳು ಸಿಕ್ಕಿದ್ದು, ಉಳಿದವರು ಪರಾರಿಯಾಗಿದ್ದಾರೆ.
ಮಧ್ಯವರ್ತಿಗಳ ಕೈವಾಡ ಇರುವ ಬಗ್ಗೆ ಅನುಮಾನವಿದೆ. ಕೆಲ ಮಕ್ಕಳನ್ನು ಪೋಷಕರೇ ಕಳುಹಿಸಿದ್ದಾರೆ. ಹೊರರಾಜ್ಯದಿಂದ ಬಂದಿರುವ ಮಕ್ಕಳನ್ನು ಇಲ್ಲಿಗೆ ಕರೆತಂದಿರುವ ಬಗ್ಗೆ ಅನುಮಾನವಿದ್ದು, ಕಳ್ಳಸಾಗಾಣಿಕೆ ಮುಖಾಂತರ ಕರೆದುಕೊಂಡು ಬಂದಿರುವ ಬಗ್ಗೆ ಶಂಕೆಯಿದೆ ಎಂದು ಬಾಸ್ಕೋದ ಸಿಬ್ಬಂದಿ ತಿಳಿಸಿದ್ದಾರೆ.