ಕನ್ನಡಪ್ರಭ ವಾರ್ತೆ, ಬಳ್ಳಾರಿ, ಫೆ. 8
ಎರಡು ದಶಕಗಳ ಹೋರಾಟಕ್ಕೆ ತಾಲೂಕುಗಳ ರಚನೆ, 16 ವರ್ಷಗಳಿಂದ ನೆನೆಗುದಿಗೆ ಬಿದ್ದಿರುವ ರೈತರ ಮಹತ್ವಾಕಾಂಕ್ಷಿ ಯೋಜನೆಯಾದ ಕಗ್ಗಲ್ ಏತನೀರಾವರಿ ಯೋಜನೆಗೆ ಅಸ್ತು ನೀಡಿರುವುದು, ರಂಗಭಾರತಿಗೆ ರು. 1 ಕೋಟಿ ನೀಡುವ ಮೂಲಕ ಕೊನೆಗೆ ಎಂ.ಪಿ. ಪ್ರಕಾಶ್ರನ್ನು ನೆನೆದ ರಾಜ್ಯ ಸರ್ಕಾರ.
ಬಳ್ಳಾರಿ ಜಿಲ್ಲೆಯ ಕೊಟ್ಟೂರು, ಕುರುಗೋಡು, ಕಂಪ್ಲಿ ತಾಲೂಕುಗಳ ರಚನೆಗೆ ಸಾಕಷ್ಟು ಹೋರಾಟಗಳು ನಡೆದಿವೆ. ಒಂದೊಂದು ತಾಲೂಕು ಹೋರಾಟಕ್ಕೆ 2-3 ದಶಕಗಳ ಕಾಲ ನಡೆದ ಹೋರಾಟಗಳಿಗೆ ಇದೀಗ ಫಲಿಸಿವೆ.
ಕೊಟ್ಟೂರು ತಾಲೂಕು ರಚನೆ ಹೋರಾಟಕ್ಕೆ 1983ರಲ್ಲಿ ಹುಂಡೇಕರ್ ಕಮಿಟಿ ಬಂದಾಗಲೇ ಚಾಲನೆ ಸಿಕ್ಕಿತು. ಎಸ್.ಎಂ. ಕೃಷ್ಣ ಅವಧಿಯಲ್ಲಿ ಹೋರಾಟ ತೀವ್ರ ಸ್ವರೂಪ ಪಡೆದು, ಬೆಂಗಳೂರಿಗೆ ನಿಯೋಗ ಹೋಗಿ ಮನವಿ ಮಾಡಿತ್ತು.
ವಿಶೇಷ ತಹಸೀಲ್ದಾರ್ ನೇಮಕ: 2 ದಶಕಗಳ ಹೋರಾಟ ಫಲವಾಗಿ ಕುರುಗೋಡಿಗೆ ತಾಲೂಕು ರಚನೆಗೆ ಅಸ್ತು ನೀಡಲಾಗಿದೆ. ಅಲ್ಲಿನ ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಎನ್. ರಾಜಶೇಖರಗೌಡ ನೇತೃತ್ವದಲ್ಲಿ ಮೊದಲ ಹೋರಾಟ ಆರಂಭವಾಯಿತು. 2003ರಲ್ಲಿ ಅಲ್ಲಂ ವೀರಭದ್ರಪ್ಪ ತೋಟಗಾರಿಕಾ ಸಚಿವರಾಗಿದ್ದ ಸಂದರ್ಭದಲ್ಲಿ ಹೋರಾಟಕ್ಕೆ ಮನ್ನಣೆ ಸಿಕ್ಕು ವಿಶೇಷ ತಹಸೀಲ್ದಾರ್ರನ್ನು ನೇಮಕ ಮಾಡಲಾಯಿತು. ಅಲ್ಲಿಂದ ತಾಲೂಕು ರಚನೆ ಮಾಡಬೇಕೆಂಬ ಕುರುಗೋಡು ಬಂದ್ ಸೇರಿದಂತೆ ವಿವಿಧ ಹೋರಾಟಗಳು ನಡೆದವು. ಇದೀಗ ಅವರ ಹೋರಾಟಕ್ಕೆ ಫಲ ದೊರೆತಿದೆ.
ಕಂಪ್ಲಿ ತಾಲೂಕಿಗಾಗಿ ದಶಕದ ಹೋರಾಟ ನಡೆದಿದೆ. ಕಂಪ್ಲಿ ತಾಲೂಕು ರಚನೆಗೆ 2008-09ರಲ್ಲಿ ಹೋರಾಟ ಚುರುಕುಗೊಂಡಿತು. ಕಂಪ್ಲಿ ತಾಲೂಕು ರಚನೆಗಾಗಿ ಒತ್ತಾಯಿಸಿ, ಅರವಿ ಬಸವನಗೌಡ ಅವರು ಹೋರಾಟ ಮಾಡಿಕೊಂಡು ಬಂದಿದ್ದಾರೆ. ತಾಲೂಕು ರಚನೆಗೆ 117 ದಿನಗಳ ಕಾಲ ಕಂಪ್ಲಿ ಪುರಸಭೆಯ ಎದುರು ಧರಣಿ ಮಾಡಿದ್ದಾರೆ. ಇದೀಗ ಅಲ್ಲಿನ ಹೋರಾಟದ ಧ್ವನಿಗೆ ಸರ್ಕಾರ ಸ್ಪಂದಿಸಿದೆ.
1997ರಿಂದ ಕಗ್ಗಲ್ ಏತ ನೀರಾವರಿ ಯೋಜನೆ ಆರಂಭ: ಬಳ್ಳಾರಿ ಗ್ರಾಮೀಣ ಕ್ಷೇತ್ರದ ವೈ. ಕಗ್ಗಲ್ ಏತನೀರಾವರಿ ಯೋಜನೆ ಆರಂಭಿಸಿ ಬರೋಬ್ಬರಿ ಮೂರು ಸಾರ್ವತ್ರಿಕ ಚುನಾವಣೆ ಕಳೆದಿವೆ. 1997ರ ಫೆ. 14ರಂದು ವೈ.ಕಗ್ಗಲ್ ಏತ ನೀರಾವರಿ ಯೋಜನೆಗೆ ಸರ್ಕಾರ ಒಪ್ಪಿಗೆ ಸೂಚಿಸಿತು. ಮಾ. 7 2003ರಲ್ಲಿ ರು. 1.3 ಕೋಟಿಗೆ ಆಡಳಿತಾತ್ಮಕ ಅನುಮೋದನೆ ನೀಡಿತು. ಯೋಜನೆಗೆ ಭೂಮಿಪೂಜೆ ನೆರವೇರಿತು. ರೈತರು ಸಕಾಲಿಕ ಮಳೆ ಇಲ್ಲ ಎಂದು ಕೊರಗಿ, ಬರದ ಭೀತಿ ತಪ್ಪಿದೆ ಎಂದು ಅಂದುಕೊಂಡಿದ್ದರು. ಆದರೀಗ 16 ವರ್ಷಗಳ ಯೋಜನೆಗೆ ಕಾಯಕಲ್ಪ ದೊರೆತಿದೆ.
ಅಲ್ಲಂರಿಂದ ಆರಂಭ: ಬಳ್ಳಾರಿ ಗ್ರಾಮೀಣ ಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ಲಿಂಗದೇವಹನಳ್ಳಿ, ಯಾಳ್ಪಿ, ವೈ. ಕಗ್ಗಲ್, ಪರಮದೇವನಹಳ್ಳಿ, ಜೋಳದರಾಶಿ ಹಾಗೂ ಚೇಳ್ಳಗುರ್ಕಿ ಗ್ರಾಮಗಳ 6,643 ಎಕರೆ ಪ್ರದೇಶಕ್ಕೆ ನೀರುಣಿಸುವ ಮಹತ್ವಾಕಾಂಕ್ಷಿ ಯೋಜನೆ ಇದಾಗಿದೆ. ಹಿಂದೆ ಅಂದಿನ ಲೋಕೋಪಯೋಗಿ ಮತ್ತು ನೀರಾವರಿ ಖಾತೆ ಸಚಿವ ಎಚ್.ಡಿ. ದೇವೇಗೌಡ ಅವರಿಗೆ ಮನವಿ ಮಾಡಲಾಗಿತ್ತು. ಕಾಂಗ್ರೆಸ್ ಆಡಳಿತದಲ್ಲಿ ಅಲ್ಲಂ ವೀರಭದ್ರಪ್ಪ ನೀರಾವರಿ ಸಚಿವರಾಗಿದ್ದಾಗ ಯೋಜನೆಗೆ ಚಾಲನೆ ದೊರೆಯಿತು.
ನೆನಗುದಿಗೆ ಬಿದ್ದಿದ್ದ ಯೋಜನೆ: ಯೋಜನೆಯ ಮೊದಲ ಹಾಗೂ ಎರಡನೇ ಹಂತದ ಕಾಮಗಾರಿಗಳ ಟೆಂಡರ್ನ್ನು ಹುಬ್ಬಳ್ಳಿಯ ಆರ್.ಎಸ್. ಶೆಟ್ಟಿ ಕಂಪನಿಗೆ ನೀಡಲಾಗಿತ್ತು. ಮಾರ್ಚ್ 25, 2004ರಂದು ಕಾಮಗಾರಿ ಆರಂಭಿಸಲಾಗಿತ್ತು. ಆದರೆ ಜಾಕ್ವೆಲ್ ಮಣ್ಣಿನ ಅಗೆತದ ಕಾಮಗಾರಿ ಪ್ರಗತಿಯಲ್ಲಿದ್ದಾಗ, ಯೋಜನೆಯ ವಿನ್ಯಾಸ ಬದಲಾಯಿಸುವ ಪ್ರಸ್ತಾವನೆಯನ್ನು ಸರ್ಕಾರಕ್ಕೆ ಸಲ್ಲಿಸಲಾಗಿತ್ತು. ಆಗ ತಾಂತ್ರಿಕ ಸಲಹಾ ಸಮಿತಿ ಒಪ್ಪಿಗೆಯಿಂದ ಫೆ. 21, 2005ರಂದು 80ನೇ ಸಭೆಯಲ್ಲಿ ಯೋಜನೆ ವಿನ್ಯಾಸವನ್ನು ಬದಲಾಯಿಸಿ, ಯೋಜನಾ ವೆಚ್ಚವನ್ನು ರು. 1.3 ಕೋಟಿಯಿಂದ ರು. 3.95 ಕೋಟಿಗೆ ಏರಿಸಲಾಯಿತು. ಈಗ ಯೋಜನೆ ರು. 60 ಕೋಟಿಗೆ ಬಂದು ನಿಂತಿದೆ. ಆದರೆ ಕಾಮಗಾರಿ ಮಾತ್ರ ಪೂರ್ಣಗೊಂಡಿರಲಿಲ್ಲ. ಇದೀಗ ಸರ್ಕಾರ ಅಸ್ತು ನೀಡಿದೆ. ಯೋಜನಾ ಫಲಾನುಭವಿಗಳಿಗೆ ಹರ್ಷವಾಗಿದೆ.
-ಶಶಿಧರ ಮೇಟಿ