ಪ್ರತಿ ಮಹಾನಗರ ಪಾಲಿಕೆಗೆ ರು. 200 ಕೋಟಿ ಅನುದಾನ ನೀಡಿರುವುದು ಸಂತೋಷ ತಂದಿದೆ. ಬಜೆಟ್‌ನಲ್ಲಿ ರು. 200 ಕೋಟಿ ಘೋಷಣೆ ಮಾಡಿರುವುದರಿಂದ ಮಹಾನಗರಗಳನ್ನು ಸಾಕಷ್ಟು ಅಭಿವೃದ್ಧಿಪಡಿಸಬಹುದು.
- ಸಿ. ಇಬ್ರಾಹಿಂಬಾಬು, ಮೇಯರ್
ಇದು ಬಿಜೆಪಿ ಚುನಾವಣೆ ಪ್ರಣಾಳಿಕೆಯಾಗಿದೆ. ತಾಂತ್ರಿಕ ದೋಷದ ಲಾಭ ಪಡೆದು ಬಜೆಟ್ ಮಂಡಿಸಲಾಗಿದೆ. ಯಾರು ಅನುಷ್ಠಾನಗೊಳಿಸುತ್ತಾರೆ ಎಂಬುದು ಪ್ರಶ್ನೆ. ಜನರನ್ನು ತಪ್ಪುದಾರಿಗೆ ಎಳೆಯುವ ಕೆಲಸ ಮಾಡಿದ್ದಾರೆ.
- ಎಸ್. ಪನ್ನರಾಜ್, ಲೆಕ್ಕ ಪರಿಶೋಧಕ
ಹನಿ ನೀರಾವರಿಗೆ ಸಹಾಯಧನ, ಸಾವಯವ ಕೃಷಿಕ ಗುಂಪು, ರೈತ ಪಾಸ್‌ಬುಕ್, ರೈತ ಆದಾಯ ಆಯೋಗ ರಚನೆ, ವಿಮಾ ಯೋಜನೆ ಸ್ವಾಗತಾರ್ಹ. ಆದರೆ ಎಲ್ಲವೂ ರೈತನಿಗೆ ತಲುಪುತ್ತವೆಯೋ ಎಂದು ಕಾದುನೋಡಬೇಕು.
-ಎಸ್.ಪಿ. ನಾಗನಗೌಡ, ಅರ್ಥಶಾಸ್ತ್ರಜ್ಞ
ಜಿಲ್ಲೆಯ ಕಂಪ್ಲಿ, ಕುರುಗೋಡು, ಕೊಟ್ಟೂರು ತಾಲೂಕೆಂದು ಘೋಷಣೆ ಮಾಡಿರುವ ಜಗದೀಶ್ ಶೆಟ್ಟರ್ ಅವರ ಕ್ರಮ ಸ್ವಾಗತಾರ್ಹ. ಆದರೆ ಇವು ಬಜೆಟ್‌ನಲ್ಲಿ ಕೇವಲ ಘೋಷಣೆಗೆ ಸೀಮಿತವಾದಂತೆ ಕಾಣುತ್ತಿವೆ.
- ನಾರಾ ಸೂರ್ಯನಾರಾಯಣ ರೆಡ್ಡಿ
ಉಜ್ಜಯಿನಿ ಪೀಠದ ಅಭಿವೃದ್ಧಿಗೂ ರು. 2 ಕೋಟಿ ಮೀಸಲಿರಿಸಿದ್ದು ಸಂತಸ ತಂದಿದೆ. ಸಿಎಂ ಶೆಟ್ಟರ್ ಕೊಟ್ಟೂರನ್ನು ತಾಲೂಕನ್ನಾಗಿ ಘೋಷಿಸಿ, ಈ ಭಾಗದ ಅಭಿವೃದ್ಧಿಗೆ ಹೆಚ್ಚಿನ ಒತ್ತು ಕಲ್ಪಿಸಿದ್ದಾರೆ. ಜನಪರ ಬಜೆಟ್.
- ಜಗುದ್ಗರು ಸಿದ್ಧಲಿಂಗ ಶಿವಾಚಾರ್ಯರು
ಹಳೆ ರಾಜ್ಯ ಹೆದ್ದಾರಿಗಳಿಗೆ ಶ್ರೀರಂಗ ಟೋಲ್ ಹಾಕಿರುವುದು ಖಂಡನೀಯ. ಮಠ ಮಾನ್ಯಗಳಿಗೆ ಅನುದಾನ ನೀಡುವುದು ಪರಂಪರೆಯಾಗಬಾರದು. ಇದೊಂದು ರಾಜಕೀಯ ಪ್ರೇರಿತ ಅನುದಾನ.
- ಎನ್. ಪ್ರತಾಪ ರೆಡ್ಡಿ, ಉದ್ಯಮಿ
ಬಜೆಟ್ ನೋಡಲು ಚೆನ್ನಾಗಿದೆ. ಆದರೆ ಇದು ಪಕ್ಕಾ ಚುನಾವಣೆ ಬಜೆಟ್ ಆಗಿದ್ದು, ರೈತರಿಗೆ, ಸಾಮಾನ್ಯ ಜನತೆಗೆ ಮೂಗಿನ ಮೇಲೆ ತುಪ್ಪ ಸವರಿದಂತೆ ಇದೆ. ಕೃಷಿ ಬಜೆಟ್ ಫಲಕಾರಿಯಾಗುತ್ತದೆ ಎಂಬುದನ್ನು ಕಾದು ನೋಡಬೇಕು.
- ಎ.ಎಂ. ಗುರುಪ್ರಸಾದ್, ತಾಪಂ ಸದಸ್ಯ
ಈ ಬಾರಿಯ ಬಜೆಟ್ ಜನಹಿತ ಕಾಪಾಡುವಂತಿದ್ದು, ರಾಜ್ಯದಲ್ಲಿ 43 ಹೊಸ ತಾಲೂಕುಗಳನ್ನು ರಚನೆ ಮಾಡುವ ಮೂಲಕ ರಾಜ್ಯದ ಇತಿಹಾಸದಲ್ಲೇ ನೆನಪುಳಿಯುವಂತಹ ಕಾರ್ಯವನ್ನು ಮುಖ್ಯಮಂತ್ರಿ ಶೆಟ್ಟರ್ ಮಾಡಿದ್ದಾರೆ.
- ರೇವಣಸಿದ್ದಪ್ಪ ಬೆನಕನಹಳ್ಳಿ
ಸರ್ವರಿಗೂ ರಾಜ್ಯದ ಸಮಪಾಲನ್ನೂ ಸಮನಾಗಿ ಹಂಚಿಕೆ ಮಾಡುವ ರೀತಿ ರಾಜ್ಯ ಬಜೆಟ್‌ನಲ್ಲಿ ಅನುದಾನ ಮೀಸಲಿರಿಸುವ ಮೂಲಕ ಸರ್ವರ ಹಿತ ಕಾಪಾಡಿದ್ದಾರೆ. ಶೆಟ್ಟರ್ ಅತ್ಯುತ್ತಮ ಬಜೆಟ್ ಮಂಡಿಸಿದ್ದಾರೆ.
- ಕೊಟ್ರೇಶ್ ಕಾಮಶೆಟ್ಟಿ, ಪಪಂ ಸದಸ್ಯ
ಮಠ ಮಾನ್ಯಗಳಿಗೆ ಅನಗತ್ಯವಾಗಿ ಕೋಟ್ಯಂತರ ರುಪಾಯಿಗಳ ಉದಾರ ದೇಣಿಗೆಯನ್ನು ಬಜೆಟ್‌ನಲ್ಲಿ ನೀಡಿರುವುದು ನಿಜಕ್ಕೂ ನೋವಿನ ಸಂಗತಿ. ಸರ್ಕಾರ ರೈತರ ಸಹಾಯಕ್ಕೆ ಮುಂದಾಗಬೇಕಿತ್ತು.
-ಎಸ್.ಎಸ್. ಕೊಟ್ರೇಶ್, ವ್ಯಾಪಾರಿ