ಕೊಟ್ಟೂರು: ಕೊಟ್ಟೂರು ಪಟ್ಟಣ ಪಂಚಾಯಿತಿ ಸೇರಿದಂತೆ ರಾಜ್ಯದ ಇತರೆ ಸ್ಥಳೀಯ ಸಂಸ್ಥೆಗಳಿಗೆ ಚುನಾವಣಾ ಆಯೋಗ ಮಾ. 7ರಂದು ಚುನಾವಣೆ ನಡೆಸಲು ದಿನಾಂಕ ನಿಗದಿಗೊಳಿಸಿ ಆದೇಶಿಸಿದ್ದು, ಕೊಟ್ಟೂರೇಶ್ವರ ಸ್ವಾಮಿ ಜಾತ್ರೆ ಮಾ. 6ರಂದು ಜರುಗುವ ಹಿನ್ನೆಲೆಯಲ್ಲಿ ಕೊಟ್ಟೂರು ಮಟ್ಟಿಗೆ ಚುನಾವಣಾ ದಿನಾಂಕವನ್ನು ಬದಲಾಯಿಸಬೇಕೆಂಬ ಕೂಗು ಕೇಳಿಬಂದಿದೆ. ಕೊಟ್ಟೂರೇಶ್ವರ ಸ್ವಾಮಿ ರಥೋತ್ಸವ ಮಾ. 6ರಿಂದ 13ರವರೆಗೂ ನಡೆಯಲಿದೆ. ಆಗ ಚುನಾವಣೆ ಪ್ರಕ್ರಿಯೆಯಲ್ಲಿ ಇಲ್ಲಿಯ ಮತದಾರರು ತೊಡಗಿಸಿಕೊಳ್ಳಲು ತೊಂದರೆಯಾಗುತ್ತದೆ ಎಂದು ಹೇಳಿರುವ ಪಟ್ಟಣ ಪಂಚಾಯಿತಿ ಉಪಾಧ್ಯಕ್ಷ ಎಚ್. ಗುರುಬಸವರಾಜ್, ಸುಗಮ ಮತದಾನಕ್ಕೆ ಬೇರೆ ದಿನಾಂಕ ನಿಗದಿ ಮಾಡುವ ಅಗತ್ಯವಿದೆ. ದೇವಸ್ಥಾನವಿರುವ ಪ್ರದೇಶದಲ್ಲೇ 3-4 ಮತಕೇಂದ್ರಗಳು ಪ್ರಾರಂಭಗೊಳ್ಳಲಿವೆ. ಜಾತ್ರೆಗೆ ತೊಂದರೆಯಾಗದಂತೆ ದಿನಾಂಕ ನಿಗದಿಗೊಳಿಸಲು ಜಿಲ್ಲಾಧಿಕಾರಿಗಳು ಚುನಾವಣಾ ಆಯೋಗಕ್ಕೆ ತಿಳಿಸಬೇಕು ಎಂದರು. ಚುನಾವಣಾ ದಿನಾಂಕದ ಅಧಿಕೃತ ಪ್ರಕಟಣಾ ಪಟ್ಟಿ ತಮ್ಮ ಕೈ ಸೇರಿಲ್ಲ. ಕೈ ಸೇರಿದ ನಂತರ ಮಾ. 6ರಿಂದ ನಡೆಯುವ ಕೊಟ್ಟೂರು ಜಾತ್ರೆ ಕುರಿತು ತಕ್ಷಣ ಡಿಸಿ ಗಮನಕ್ಕೆ ತರಲಾಗುವುದು. ಚುನಾವಣೆಗೆ ಅನುಕೂಲವಾಗುವ ರೀತಿ ಚುನಾವಣಾ ಆಯೋಗ ಕ್ರಮ ಕೈಗೊಳ್ಳುವಂತೆ ಮೊರೆ ಹೋಗುತ್ತೇವೆ ಎಂದು ಕೂಡ್ಲಿಗಿ ತಹಸೀಲ್ದಾರ್ ಜವರೇಗೌಡ ತಿಳಿಸಿದರು.