ಅಸಮರ್ಪಕ ವಿದ್ಯುತ್ ಪೂರೈಕೆ ವಿರುದ್ಧ ಪ್ರತಿಭಟನೆ
ಚನ್ನಗಿರಿ: ತಾಲೂಕಿನಲ್ಲಿ ಅಸಮರ್ಪಕ ವಿದ್ಯುತ್ ಪೂರೈಕೆಯ ವಿರುದ್ಧ ತಾಲೂಕು ಕಾಂಗ್ರೆಸ್ ಪಕ್ಷದ ವತಿಯಿಂದ ಬೃಹತ್ ಪ್ರತಿಭಟನೆ ಹಾಗೂ ಬೆಸ್ಕಾಂ ಕಚೇರಿಗೆ ಮುತ್ತಿಗೆ ಹಾಕುವ ಕಾರ್ಯಕ್ರಮ ಮಾಜಿ ಶಾಸಕ ವಡ್ನಾಳ್ ರಾಜಣ್ಣ ನೇತೃತ್ವದಲ್ಲಿ ಗುರುವಾರ ನಡೆಯಿತು.
ಇಲ್ಲಿನ ಮಹಾತ್ಮಗಾಂಧಿ ವೃತ್ತದಿಂದ ಒಂದೆಡೆ ಸೇರಿದ ಕಾಂಗ್ರೆಸ್ ಕಾರ್ಯಕರ್ತರು ಪಟ್ಟಣದ ಪ್ರಮುಖ ಬೀದಿಗಳಲ್ಲಿ ಅಸಮರ್ಪಕ ವಿದ್ಯುತ್ ಸರಬರಾಜು ಮಾಡುತ್ತಿರುವ ರಾಜ್ಯ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗುತ್ತಾ ಸಾಗಿ ಬೆಸ್ಕಾಂ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು.
ಪ್ರತಿಭಟನಾ ಸಭೆಯನ್ನುದ್ದೇಶಿಸಿ ಮಾಜಿ ಶಾಸಕ ವಡ್ನಾಳ್ ರಾಜಣ್ಣ ಮಾತನಾಡಿ, ವಿದ್ಯುಚ್ಛಕ್ತಿಯ ತೊಂದರೆಯನ್ನು ತಾಲೂಕಿನ ರೈತರು, ವಿದ್ಯಾರ್ಥಿಗಳು, ಸಣ್ಣ ಉದ್ದಿಮೆದಾರರು ಅನುಭವಿಸುತ್ತಿದ್ದಾರೆ. ಅಡಿಕೆ, ತೆಂಗು, ಬಾಳೆ ಹಾಕಿದ ರೈತರು ತುಂಬಾ ತೊಂದರೆ ಅನುಭವಿಸುತ್ತಿದ್ದಾರೆ, ಕುಡಿಯುವ ನೀರಿನ ಸಮಸ್ಯೆ ಅಧಿಕವಾಗಿದೆ. ಬೆಸ್ಕಾಂ ಅಧಿಕಾರಿಗಳಾದ ನೀವು ಎಷ್ಟು ಗಂಟೆ ಸಮರ್ಪಕವಾಗಿ ವಿದ್ಯುತ್ ಕೊಡುತ್ತೀರಿ ಎಂದು ಲಿಖಿತವಾಗಿ ಬರೆದುಕೊಡಬೇಕು ಎಂದು ಅಧಿಕಾರಿಗಳಿಗೆ ತಾಕೀತು ಮಾಡಿದರು.
ಸಿಂಗಲ್ ಫೇಸ್ ಬೇಕು: ಹಗಲು ಹೊತ್ತಿನಲ್ಲಿ 4 ಗಂಟೆ, ರಾತ್ರಿ ಸಮಯಲ್ಲಿ 4 ಗಂಟೆಯಂತೆ ತ್ರಿಫೇಸ್ ವಿದ್ಯುಚ್ಛಕ್ತಿ ಸರಬರಾಜು ಮಾಡುವ ಜೊತೆಗೆ ಎಂಟು ಗಂಟೆಗಳ ಕಾಲ ಸಿಂಗಲ್ ಫೇಸ್‌ನಲ್ಲಿ ವಿದ್ಯುತ್ ಸರಬರಾಜು ಮಾಡಲೇಬೇಕು ಎಂದು ಆಗ್ರಹಿಸಿದರು.
ವಿದ್ಯುತ್ ಸರಬರಾಜಾಗುವ ಸಮಯವನ್ನು ತಾಲೂಕಿನ ಗ್ರಾಮ ಪಂಚಾಯಿತಿಗಳ ನೋಟಿಸ್ ಬೋರ್ಡ್‌ನಲ್ಲಿ ಪ್ರಕಟಿಸಬೇಕು ಎಂದು ಹೇಳಿದರು.
ಪ್ರತಿಭಟನಾ ನಿರತರ ಬಳಿ ದಾವಣಗೆರೆಯಿಂದಾ ಬೆಸ್ಕಾಂನ ಕಾರ್ಯನಿರ್ವಾಹಕ ಅಭಿಯಂತರರಾದ ನಾಗಪ್ಪ, ಗ್ಯಾನಪ್ಪ, ಕೆಪಿಟಿಸಿಎಲ್ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ ವಾಸುದೇವಾಚಾರ್, ಇಲ್ಲಿನ ಬೆಸ್ಕಾಂ ಅಭಿಯಂತರ ಎಸ್.ಕೆ. ಪಾಟೀಲ್ ಮತ್ತು ಬೆಸ್ಕಾಂನ ಐದು ವಿಭಾಗಗಳ ಅಭಿಯಂತರರು ಸ್ಥಳಕ್ಕೆ ಬಂದು ಪ್ರತಿಭಟನಾನಿರತರಿಂದ ಆಗುತ್ತಿರುವ ಸಮಸ್ಯೆಗಳ ಬಗ್ಗೆ ಮಾಹಿತಿಯನ್ನು ಪಡೆದರು.
ಟ್ರಾನ್‌ಫಾರ್ಮರ್ ಸಮಸ್ಯೆ: ಟ್ರಾನ್‌ಫಾರ್ಮರ್ ದುರಸ್ಥಿ ಇದ್ದ ಕಾರಣ ವಿದ್ಯುತ್ ಸರಬರಾಜಿನಲ್ಲಿ ತೊಂದರೆಯಾಗಿತ್ತು. ನೀವು ಕೇಳುತ್ತಿರುವಂತೆ ತ್ರಿಫೇಸ್‌ನಲ್ಲಿ ಹಗಲು ಮತ್ತು ರಾತ್ರಿ ಎಂಟು ಗಂಟೆಗಳ ಕಾಲ ವಿದ್ಯುಚ್ಛಕ್ತಿ ಕೊಡಲು ಸದ್ಯಕ್ಕೆ ಸಾಧ್ಯವಾಗುವುದಿಲ್ಲ ಎಂದು ತಿಳಿಸಿದರು.
ಹಗಲು ಮೂರು ಗಂಟೆ, ರಾತ್ರಿ ಮೂರು ಗಂಟೆಯಂತೆ ತ್ರಿಫೇಸ್‌ನಲ್ಲಿ ವಿದ್ಯುತ್ ಕೊಡುತ್ತೇವೆ. ತಾಂತ್ರಿಕ ದೋಷದ ಸುಧಾರಣೆಯಾದ ಮೇಲೆ ನೀವು ತಿಳಿಸಿದಂತೆ ವಿದ್ಯುತ್ ಸರಬರಾಜು ಮಾಡಲಾಗುವುದು ಎಂದು ತಿಳಿಸಿದರು.
ಪ್ರತಿಭಟನಾನಿರತರ ಬಳಿ ಶಿರಸ್ತೇದಾರ್ ಬಂದು ಮನವಿ ಪಡೆದರು. ಪ್ರತಿಭಟನಾ ಕಾರ್ಯಕ್ರಮದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಸಿ.ಎಚ್. ಶ್ರೀನಿವಾಸ್, ಶಿವಕುಮಾರ್, ಕಾಂಗ್ರೆಸ್ ಮುಖಂಡರಾದ ಲೋಕೇಶ್ವರಪ್ಪ, ಎಂ. ಸಿದ್ದಪ್ಪ, ನಲ್ಲೂರು ಎಚ್. ಕೃಷ್ಣಪ್ಪ, ವಾಮದೇವ್, ರುದ್ರೇಗೌಡ, ಕುಮಾರಣ್ಣ, ರಾಜಪ್ಪ, ಸಿ. ನಾಗರಾಜ್, ವಡ್ನಾಳ್ ಜಗದೀಶ್, ರಾಜಪ್ಪ ಇದ್ದರು.
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.