ಕಿಷ್ಕಿಂಧೆಯಂತಹ ದೋಭಿಘಾಟ್
ದಾವಣಗೆರೆ: ಸಮಾಜದ ಕೊಳೆ ತೊಳೆಯುವ ಪುಣ್ಯ ಕಾರ್ಯದಲ್ಲಿ ತೊಡಗಿರುವ ಜನರಿಗೆ ಅನುಕೂಲವಾಗಲೆಂದು ನಿರ್ಮಿಸಿದ್ದ ದೋಭಿಘಾಟ್ ಇಂದು ಮೂಲ ಸೌಲಭ್ಯಗಳಿಂದ ವಂಚಿತವಾಗಿದ್ದು, ವರ್ಷದ 365 ದಿನವೂ ಇಂತಹ ವೃತ್ತಿಯಲ್ಲಿ ತೊಡಗಿದ ಜನರ ಬವಣೆ ಕೇಲುವವರೇ ಇಲ್ಲದಂತಾಗಿದೆ.
ವಿಶ್ರಾಂತಿ ಗೃಹ ನಿರ್ಮಿಸಿಲ್ಲ: ನಗರದ ಹೊರ ವಲಯದ ಜಿಪಂ ಕಚೇರಿ ಎದುರು ದೋಭಿಘಾಟ್ ನಿರ್ಮಾಣ ಕಾರ್ಯ ಪ್ರಗತಿಯಲ್ಲಿದೆ. ಆದರೆ, ಪ್ರತಿದಿನ ಮುಂಜಾನೆಯಿಂದಲೇ ಬಟ್ಟೆ ಸ್ವಚ್ಛಗೊಳಿಸುವ ಕಾಯಕದಲ್ಲಿ ತೊಡಗಿದ ಈ ವೃತ್ತಿ ಬಾಂಧವರಿಗೆ ಕನಿಷ್ಠ ವಿಶ್ರಾಂತಿ ಗೃಹವನ್ನು ನಿರ್ಮಿಸಿಲ್ಲ. ಸ್ವಚ್ಛಗೊಳಿಸಿದ ಬಟ್ಟೆ ದಾಸ್ತಾನು ಮಾಡಿಡುವ ವ್ಯವಸ್ಥೆಯನ್ನೇ ಅಲ್ಲಿ ಮಾಡುತ್ತಿಲ್ಲ ಎಂಬ ಅಸಮಾಧಾನ ಈಗ ಕೇಳಿ ಬರುತ್ತಿದೆ.
ಸಮಸ್ಯೆ ಆರಂಭ: ದೋಭಿಘಾಟ್ ನಿರ್ಮಾಣದ ಪೂರ್ವದಲ್ಲಿ ವೃತ್ತಿ ಬಾಂಧವರ ಜೊತೆ ಚರ್ಚಿಸಿ, ಅಲ್ಲಿಗೆ ಅಗತ್ಯ ಸೌಲಭ್ಯದ ಚರ್ಚಿಸಿದ್ದರೆ ಸಮಸ್ಯೆ ಉದ್ಭವಿಸುತ್ತಿರಲಿಲ್ಲ. ಆದರೆ, ಕಾಮಗಾರಿ ಬೇಗ ಮುಗಿಸುವ ಭರದಲ್ಲಿ ವೃತ್ತಿ ಬಾಂಧವರ ಬೇಡಿಕೆಗೂ ಯಾರೊಬ್ಬರೂ ಕಿವಿಗೊಡದ ಪರಿಣಾಮ ದೋಭಿಘಾಟ್ ಪೂರ್ಣವಾಗದಿದ್ದರೂ ಒಂದೊಂದಾಗಿ ಸಮಸ್ಯೆ ಆರಂಭಗೊಳ್ಳುತ್ತಿವೆ.
ಮಾನವೀಯತೆ: ಸೂರ್ಯ ಮೂಡುವ ಹೊತ್ತಿಗೆ ನಗರದ ಎಲ್ಲಾ ಕಡೆಯಿಂದ ಮೈಲಿಗೆ ಬಟ್ಟೆ ಹೊತ್ತು ತರುವ ವೃತ್ತಿ ಬಾಂಧವರು ವೈಯಕ್ತಿಕ ಆರೋಗ್ಯವನ್ನೂ ಲೆಕ್ಕಿಸದೆ, ತಮ್ಮ ಕಾಯಕದಲ್ಲಿ ತೊಡಗುತ್ತಾರೆ. ಹೀಗೆ ಧಣಿವರಿಯದೆ ದುಡಿಯುವ ಬಟ್ಟೆ ಸ್ವಚ್ಛಗೊಳಿಸುವ ಅವರ ಬಗ್ಗೆ ಸರ್ಕಾರ ಮಾನವೀಯತೆಯಿಂದ ಸ್ಪಂದಿಸುತ್ತಿಲ್ಲ ಎಂಬ ಬೇಸರ ಇವರಲ್ಲಿದೆ. ಮಳೆಗಾಲದಲ್ಲಿ ಬಟ್ಟೆ ಸ್ವಚ್ಛಗೊಳಿಸುವಾಗ ಸಾಕಷ್ಟು ಸಮಸ್ಯೆ ಎದುರಾಗುತ್ತವೆ. ಬಟ್ಟೆ ಒಣಗಿಸಲು, ಒಣಗಿದ ಬಟ್ಟೆ ಒಂದೆಡೆ ಕೂಡಿಡಲು ಸಾಧ್ಯವಾಗಲಿಕ್ಕಿಲ್ಲ. ಇನ್ನು ಮುಂದಾದರೂ ಇಲ್ಲಿ ವಿಶ್ರಾಂತಿ ಗೃಹ, ಬಟ್ಟೆ ಶೇಖರಿಸಿಡುವ ಕಟ್ಟಡ ನಿರ್ಮಿಸಿಕೊಡಲಿ ಎಂಬುದು ನಿಂಗರಾಜ ಮನವಿ.
ದಿನನಿತ್ಯ ಕೂಲಿ ಮಾಡುವ ತಮಗೆ 200 ರು. ಸಿಕ್ಕರೆ ಅದೇ ಹೆಚ್ಚು. ವೈಯಕ್ತಿಕ ಆರೋಗ್ಯ ಲೆಕ್ಕಿಸದೆ ಪ್ರತಿಯೊಬ್ಬರ ಬಟ್ಟೆ ಸ್ವಚ್ಛಗೊಳಿಸುತ್ತೇವೆ. ವೃತ್ತಿ ನಂಬಿರುವ ಮಡಿವಾಳ ಸಮಾಜ ಬಾಂಧವರು ಕಡಿಮೆ ಆದಾಯದಲ್ಲೇ ಬಾಳಬೇಕಾಗಿದೆ. ಬೆಲೆ ಏರಿಕೆಯ ಇಂದಿನ ದಿನಗಳಲ್ಲಿ ನಮ್ಮ ಮಕ್ಕಳಿಗೂ ಉತ್ತಮ ಶಿಕ್ಷಣ ನೀಡಬೇಕು. ಸಮಾಜದಲ್ಲಿ ಎಲ್ಲರಂತೆ ಮುಖ್ಯವಾಹಿನಿಗೆ ಬರಬೇಕಿದೆ ಎಂದು ಪಕ್ಕೀರಸ್ವಾಮಿ ಹೇಳುತ್ತಾರೆ.
ಮಂಜುನಾಥ, ನಿಂಗಣ್ಣ, ಮಾರುತಿ, ರವಿ, ಹರೀಶ ಹೇಳುವಂತೆ, ಈಗಿರುವ ದೋಬಿಘಾಟ್ ಕಿಷ್ಕಿಂಧೆಯಂತಿದೆ. ಇಷ್ಟರಲ್ಲಿ ಸರದಿಯಲ್ಲಿ ಒಬ್ಬರಾದ ಮೇಲೆ ಒಬ್ಬರು ಬಟ್ಟೆ ತೊಳೆಯಬೇಕಾಗುತ್ತದೆ. ಸರದಿಯಲ್ಲಿ ಕಾಯಕ ಮಾಡಬೇಕಾದ ಸ್ಥಿತಿ ಇಲ್ಲಿ ಇದೆ. ವಿಶಾಲವಾಗಿ ದೋಭಿಘಾಟ್ ನಿರ್ಮಿಸಿ, ವಿಶ್ರಾಂತಿ ಗೃಹ, ಬಟ್ಟೆ ದಾಸ್ತಾನು ಕೊಠಡಿ ನಿರ್ಮಿಸಿಕೊಡಬೇಕು ಎಂದು ಅವರು ಒತ್ತಾಯಿಸುತ್ತಾರೆ.
ದಾವಣಗೆರೆ ದಿನದಿನಕ್ಕೂ ಬೆಳೆಯುತ್ತಿದ್ದು, ಅದಕ್ಕೆ ತಕ್ಕಂತೆ ಇನ್ನೂ ಎರಡು ಕಡೆ ದೋಬಿಘಾಟ್ ನಿರ್ಮಿಸಬೇಕು. ಮಡಿವಾಳ ಸಮಾಜದವರಿಗೆ ಆಶ್ರಯ ವಸತಿ ಯೋಜನೆಯಡಿ ಮನೆ ಒದಗಿಸಬೇಕು. ವೃತ್ತಿ ಬಾಂಧವರ ಮಕ್ಕಳಿಗೆ ಉತ್ತಮ ಶಿಕ್ಷಣ ಕಲ್ಪಿಸಲು ಸರ್ಕಾರ ಸೂಕ್ತ ಕ್ರಮ ಕೈಗೊಳ್ಳಬೇಕು.
ಆರೋಗ್ಯವನ್ನು ಕಾಪಾಡಲು ತಮ್ಮ ವೈಯಕ್ತಿಕ ಆರೋಗ್ಯವನ್ನೇ ಲೆಕ್ಕಿಸದೆ ದುಡಿಯುತ್ತಿರುವ ವೃತ್ತಿ ಬಾಂಧವರಿಗೆ ಸರ್ಕಾರ ಬಜೆಟ್ನಲ್ಲಿ ಸ್ಪಂದಿಸಿ, ಸಮಾಜಕ್ಕೆ ಅಗತ್ಯ ನೆರವನ್ನು ಘೋಷಿಸಬೇಕು ಎಂಬುದು ವೃತ್ತಿ ಬಾಂಧವರ ಮನವಿಯಾಗಿದೆ.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.