ದೇಶದಲ್ಲಿ ಸಮರ್ಥ ನಾಯಕತ್ವದ ಕೊರತೆ
ದಾವಣಗೆರೆ: ದೇಶದಲ್ಲಿ ಉದ್ಯೋಗಾವಕಾಶ ಸಾಕಷ್ಟು ಪ್ರಮಾಣದಲ್ಲಿದ್ದು, ಅವುಗಳನ್ನು ನಿರ್ವಹಿಸುವ ಸಮರ್ಥ ನಾಯಕರುಗಳಿಲ್ಲದಿರುವುದಕ್ಕೆ ನಮ್ಮ ಶಿಕ್ಷಣದ ಗುಣಮಟ್ಟವೇ ಕಾರಣವಾಗಿದೆ ಎಂದು ದಾವಣಗೆರೆ ವಿಶ್ವ ವಿದ್ಯಾನಿಲಯದ ಕುಲಪತಿ ಪ್ರೊ. ಎಸ್. ಇಂದುಮತಿ ವಿಷಾದ ವ್ಯಕ್ತಪಡಿಸಿದರು.
ಇಲ್ಲಿನ ಗಾಂಧಿ ನಗರದ ಹರಳಯ್ಯ ವಿದ್ಯಾಸಂಸ್ಥೆಯ ಎಸ್.ಎಂ. ಕೃಷ್ಣ ಶಿಕ್ಷಣ ಮಹಾವಿದ್ಯಾಲಯದಲ್ಲಿ 2012- 13ನೇ ಸಾಲಿನ ವಿದ್ಯಾರ್ಥಿ ಸಂಘದ ಉದ್ಘಾಟನೆ ಹಾಗೂ ದಿನದರ್ಶಿಕೆ ಬಿಡುಗಡೆ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ಉದ್ಯೋಗಾವಕಾಶ ಹೇರಳವಾಗಿದ್ದರೂ, ಪರಿಣಾಮಕಾರಿಯಾಗಿ ನಿರ್ವಹಿಸುವವರ ಕೊರತೆ ಇದೆ ಎಂದರು.
ಕಡಿಮೆ ಗುಣಮಟ್ಟ: ವಿದೇಶಕ್ಕೆ ಹೋಲಿಸಿದರೆ ನಮ್ಮ ಶಿಕ್ಷಣದ ಗುಣಮಟ್ಟ ಅತ್ಯಂತ ಕಡಿಮೆ ಇದೆ ಎಂಬುದು ಹಲವು ಸಮೀಕ್ಷೆಯಿಂದ ದೃಢಪಟ್ಟಿದೆ. ವಾಸ್ತವದ ಅರಿವಿದ್ದರೂ, ಶಿಕ್ಷಣದ ಗುಣಮಟ್ಟದ ಬಗ್ಗೆ ದೂರು, ಆಕ್ಷೇಪ ವ್ಯಕ್ತಪಡಿಸುತ್ತಾರೆಯೇ ಹೊರತು, ಅದರಲ್ಲಿ ಬದಲಾವಣೆ ತರುವಂತಹ ಸಕಾರಾತ್ಮಕ ಚಿಂತನೆಗೆ ಪ್ರಯತ್ನಿಸುವುದಿಲ್ಲ ಎಂದರು.
ದೇಶದಲ್ಲಿ ಉನ್ನತ ಶಿಕ್ಷಣ ಪಡೆಯುವ ಸಾವಿರಾರು ಯುವ ಜನರು ಉತ್ತಮ ಜೀವನ ಕಂಡುಕೊಳ್ಳಲು, ಆಕರ್ಷಕ ವೇತನ ಅರಸಿ ವಿದೇಶಕ್ಕೆ ವಲಸೆ ಹೋಗುತ್ತಿದ್ದಾರೆ. ಪ್ರತಿಭೆಗೆ ತಕ್ಕಂತೆ ವೇತನ, ಸೌಲಭ್ಯ, ಪ್ರೋತ್ಸಾಹ ಸಿಗದಿರುವುದೇ ಇದಕ್ಕೆಲ್ಲಾ ಕಾರಣ ಎಂಬ ವಾದ ಕೇಳಿ ಬರುತ್ತದೆ. ಮೊದಲು ಸಕಾರಾತ್ಮಕ ಪ್ರಯತ್ನದೊಂದಿಗೆ ಶಿಕ್ಷಣ ವ್ಯವಸ್ಥೆ ಸುಧಾರಿಸುವ ಪ್ರಯತ್ನವಾಗಬೇಕಿದೆ ಎಂದು ತಿಳಿಸಿದರು.
ಕಲಿಕಾಸಕ್ತಿ ಅಗತ್ಯ: ವಿದ್ಯಾರ್ಥಿಗಳಂತೆಯೇ ಶಿಕ್ಷಕರು, ಬೋಧಕರೂ ನಿರಂತರ ಕಲಿಕಾಸಕ್ತಿ ಹೊಂದಿಬೇಕು. ಹೊಸ ವಿಚಾರ ಅರಿಯುವ, ಹೊಸ ಸಂಗತಿ ತಿಳಿಯಬೇಕು. ಹೊಸ ಅಂಶಗಳನ್ನು ಬೋಧನಾ ವೃತ್ತಿಯಲ್ಲಿ ಅಳವಡಿಸಿಕೊಳ್ಳಬೇಕು. ಇಂತಹ ಬದಲಾವಣೆ ನಮ್ಮ ಶಿಕ್ಷಕರು, ಬೋಧಕರಿಂದ ಆದಾಗ ನಮ್ಮ ದೇಶದ ಶಿಕ್ಷಣ ವ್ಯವಸ್ಥೆ ಗುಣಮಟ್ಟ ಗಣನೀಯ ಪ್ರಮಾಣದಲ್ಲಿ ಸುಧಾರಿಸಲು ಸಾಧ್ಯ ಎಂದು ವಿವರಿಸಿದರು.
ದಾವಿವಿ ಸ್ನಾತಕ ಮತ್ತು ಸ್ನಾತಕೋತ್ತರ ಪಠ್ಯಕ್ರಮವನ್ನು ತೊಂದರೆ ಇಲ್ಲದಂತೆ ರಚಿಸಿದ್ದೇವೆ. ಪಿಯುಸಿ ಪಠ್ಯವನ್ನು ಆಧಾರವಾಗಿ ಇಟ್ಟುಕೊಂಡು, ರಾಜ್ಯದ ವಿವಿಧ ವಿವಿಗಳಿಂದ ವಿಷಯ ಪರಿಣಿತರನ್ನು ಕರೆಸಿ, ಪಠ್ಯಕ್ರಮ ರೂಪಿಸಲಾಗಿದೆ.
ಶಿಕ್ಷಣಕ್ಕಾಗಿ 12ನೇ ಪಂಚವಾರ್ಷಿಕ ಯೋಜನೆಯಲ್ಲಿ ರು. 200 ಕೋಟಿಯನ್ನು ರಾಜ್ಯಪಾಲರು ಬಜೆಟ್ನಲ್ಲಿ ಮೀಸಲಿಟ್ಟಿದ್ದು, ಶಿಕ್ಷಣ ವ್ಯವಸ್ಥೆ, ಗುಣಮಟ್ಟ ಸುಧಾರಣೆಗೆ ಪ್ರತಿಯೊಬ್ಬರೂ ಕೈಜೋಡಿಸಬೇಕು ಎಂದು ಮನವಿ ಮಾಡಿದರು.
ಸಂಸ್ಥೆ ಕಾರ್ಯದರ್ಶಿ ಕೆ.ಎಸ್. ಬಸವರಾಜ ಅಧ್ಯಕ್ಷತೆ ವಹಿಸಿದ್ದರು. ಪ್ರಾಚಾರ್ಯ ಡಾ. ಎಚ್. ವಿಶ್ವನಾಥ, ಎಸ್.ಎಂ. ಕೃಷ್ಣ ಶಿಕ್ಷಣ ಮಹಾ ವಿದ್ಯಾಲಯದ ಪ್ರಾಚಾರ್ಯ ಪ್ರೊ. ಕೆ.ಎಸ್. ಗಂಗಾಧರ, ಬೋಧಕ ಎಸ್.ಎಸ್. ನಂದಿಹಾಳ, ಕುರುವತ್ತೆಪ್ಪ, ವಿದ್ಯಾರ್ಥಿ ಸಂಘದ ಶಿಲ್ಪಾ, ಕಿರಣ್, ಬೋಧಕ- ಬೋಧಕೇತರ ಸಿಬ್ಬಂದಿ ಕಾರ್ಯಕ್ರಮದಲ್ಲಿದ್ದರು. ಇದೇ ವೇಳೆ ಅತಿಥಿಗಳು ದಿನದರ್ಶಿಕೆ ಬಿಡುಗಡೆ ಮಾಡಿದರು.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.