ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ದಾವಣಗೆರೆ

ಬಿಜೆಪಿ ಪ್ರಭಾವಿಗಳ ಜಿಲ್ಲೆಗೆ ಮತ್ತೆ ಖಾಲಿ ಬಾಗಿನ

ನ್ಯಾಮತಿಗೊಲಿದ ಅದೃಷ್ಟ ಮಾಯಕೊಂಡಕ್ಕಿಲ್ಲ / ಮೆಕ್ಕೆಜೋಳದ ಕಣಜಕ್ಕೆ ನಿರಾಸೆಯ ಕಾರ್ಮೋಡ

Parashurama
Updated On : 9 Feb 2013, 10:47 am

 ದಾವಣಗೆರೆ: ಬಿಜೆಪಿ ಸರ್ಕಾರದ ಪ್ರಭಾವಿಗಳ ತವರು, ರೆಬಲ್ ಸ್ಟಾರ್‌ಗಳ ನೆಲೆ, ಮೆಕ್ಕೆಜೋಳದ ಕಣಜ ಹೀಗೆ ಹತ್ತಾರು ಬಿರುದು ಬಾವಲಿಗಳಿಂದ ಬೀಗುತ್ತಿದ್ದ ದಾವಣಗೆರೆ ಜಿಲ್ಲೆಗೆ ಮುಖ್ಯಮಂತ್ರಿ ಜಗದೀಶ ಶೆಟ್ಟರ್ ನೇತೃತ್ವದ ಸರ್ಕಾರ ಮತ್ತೊಮ್ಮ ಖಾಲಿ ಬಾಗಿನ ಅರ್ಪಿಸುವ ಮೂಲಕ 5ನೇ ವರ್ಷದಲ್ಲೂ ನಿರಾಸೆಯ ಕೂಪಕ್ಕೆ ತಳ್ಳಿದೆ.
 ಬಜೆಟ್ ಪೂರ್ವದಲ್ಲಿ ದಾವಣಗೆರೆ ಜಿಲ್ಲೆಗೆ ಹೊಸ ಕೈಗಾರಿಕೆ, ಹೊಸ ಅಭಿವೃದ್ಧಿ ಯೋಜನೆ, ವಿನೂತನ ಕಾರ್ಯಕ್ರಮಗಳನ್ನು ಸರ್ಕಾರ ಘೋಷಿಸಬಹುದು ಎಂಬುದು ಎಲ್ಲರ ನಿರೀಕ್ಷೆಯಾಗಿತ್ತು. ಅಲ್ಲದೇ, ಜಿಲ್ಲೆಯ 8 ಕ್ಷೇತ್ರಗಳಲ್ಲಿ ಕೆಲವರನ್ನು ಹೊರತುಪಡಿಸಿ ಉಳಿದವರು ರೆಬಲ್ ಸ್ಟಾರ್‌ಗಳಾಗಿಯೇ ಅವದಿ ಕಳೆದವರಾಗಿದ್ದಾರೆ. ಜಿಲ್ಲೆಯ ಪಾಲಿಗೆ ನಾಯಕರಂತೆ ಬಂತು, ಹೊಸ
 ಯೋಜನೆ ಘೋಷಿಸುವಲ್ಲೂ ಪ್ರಮುಖ ಪಾತ್ರ ವಹಿಸುತ್ತಾರೆಂಬ ಆಸೆಗೆ ಸರ್ಕಾರ ತಣ್ಣೀರೆರಚಿದೆ.
ನ್ಯಾಮತಿ ಹೊಸ ತಾಲೂಕಾಗಿ ಘೋಷಿಸಿದ್ದು, ದಾವಣಗೆರೆಯಲ್ಲಿ 2 ಕೋಟಿ ವೆಚ್ಚದಲ್ಲಿ ಗಾಜಿನ ಮನೆ ನಿರ್ಮಾಣ, 2 ಏತ ಯೋಜನೆ ಘೋಷಣೆ, ಎರಡು ಮಠಗಳಿಗೆ 7 ಕೋಟಿ ಅನುದಾನ ಘೋಷಿಸಿದ್ದನ್ನು ಬಿಟ್ಟರೆ ಸಾರ್ವಜನಿಕರಿಗೆ, ರೈತರಿಗೆ, ಕಾರ್ಮಿಕರಿಗೆ, ಜನ ಸಾಮಾನ್ಯರಿಗೆ ಅನುಕೂಲವಾಗುವಂತೆ ಯಾವುದೇ ಘೋಷಣೆಯಾಗಿಲ್ಲ. ಅಲ್ಲದೇ, ಬಂದಿದ್ದು ಅಲ್ವವಾಗಿದ್ದು, ಬರಬೇಕಾಗಿದ್ದು ಮಾತ್ರ ಬೆಟ್ಟದಷ್ಟೇ ಇದೆ ಎಂಬುದೂ ಸುಳ್ಳಲ್ಲ. ಬೆಟ್ಟದಷ್ಟು ನಿರೀಕ್ಷೆ ಇಟ್ಟುಕೊಂಡಿದ್ದ ಜನ ಈಗ ತೀವ್ರವಾಗಿ ಭ್ರಮನಿರಸನರಾಗಿದ್ದಾರೆ.
 ಮಧ್ಯ ಕರ್ನಾಟಕದ ಜೀವನದಿ ತುಂಗಭದ್ರಾ ಮಳೆಗಾಲದಲ್ಲಿ ತುಂಬಿ ಹರಿಯುತ್ತಾಳೆ. ಮತ್ತೊಂದು ಕಡೆ ಭದ್ರಾ ನಾಲೆಗಳು ಜಿಲ್ಲೆಯ ಬಹುತೇಕ ಭಾಗಗಳಲ್ಲಿ ನರ ನಾಡಿಯಂತೆ ಹಂಚಿ ಹೋಗಿವೆ. ಅತೀ ಶ್ರೀಮಂತರ ತಾಲೂಕೆಂಬ ಹೆಗ್ಗಳಿಕೆಯ ಜೊತೆಗೆ ಅತ್ಯಂತ ಹಿಂದುಳಿದ, ಬಡವರ ತಾಲೂಕುಗಳನ್ನೂ ಜಿಲ್ಲೆ ಹೊಂದಿದೆ. ಕುಬೇರರಂತೆ ಇಲ್ಲಿ, ಕುಚೇಲರೂ ಇದ್ದಾರೆ ಎಂಬುದನ್ನು ಮುಖ್ಯಮಂತ್ರಿ ಶೆಟ್ಟರ್ ಮರೆತಂತಿದೆ.
 ಭದ್ರಾ ನಾಲೆಗಳ ಆಸರೆಯಲ್ಲಿ ಭತ್ತ, ಮೆಕ್ಕೆಜೋಳ ಬೆಳೆಯಲಾಗುತ್ತದೆ. ಅದರಲ್ಲೂ ನಾಡಿನ ಮೆಕ್ಕೆಜೋಳದ ಕಣಜವೆಂದೇ ಜಿಲ್ಲೆ ಗುರುತಿಸಲ್ಪಡುತ್ತದೆ. ಇಂತಹ ಕಣಜಕ್ಕೆ ಪೂರಕವಾಗಿ ಆಹಾರ ಸಂಸ್ಕರಣಾ ಘಟಕ ಸ್ಥಾಪಿಸುವ ಕೆಲಸ ಸರ್ಕಾರ ಮಾಡುವ ಇಚ್ಚಾಶಕ್ತಿ ತೋರಿಲ್ಲ. ತೋಟಗಾರಿಕೆ ಬೆಳೆ ಸಂಸ್ಕರಿಸಿಡಲು ಪೂರಕವಾಗಿ ಶೀಥಲೀಕರಣ ಘಟಕದ ಸ್ಥಾಪನೆ ಬಗ್ಗೆ ಚಕಾರ ಎತ್ತಿಲ್ಲ. ಇನ್ನು ರೈತರಿಗೆ ಪೂರಕವಾಗುವ, ಜಿಲ್ಲೆಗೆ ಅನ್ವಯವಾಗುವ ಹೊಸ ಯೋಜನೆ ಪ್ರಸ್ತಾಪವಾಗಿಲ್ಲ.
 ತಮ್ಮ ಸ್ಥಾನಮಾನ, ಅಧಿಕಾರಕ್ಕೆ ಚ್ಯುತಿ ಬಂದಾಗ ಕೊಸರಾಡುತ್ತಿದ್ದ ಜಿಲ್ಲೆಯ ಜನ ಪ್ರತಿನಿಧಿಗಳೂ ಜಿಲ್ಲೆಯ ಅಭಿವೃದ್ಧಿಗೆ ಪೂರಕ ಯೋಜನೆಗಳನ್ನು ಅನುಷ್ಟಾನಗೊಳಿಸುವಂತೆ ಸಿಎಂ ಶೆಟ್ಟರ ಮೇಲೆ ಒತ್ತಡ ಹೇರುವಲ್ಲಿ ವಿಫಲರಾಗಿದ್ದಾರಾ ಎಂಬುದಾಗಿ ಜನ ಮಾತನಾಡಿಕೊಳ್ಳುತ್ತಿದ್ದಾರೆ. ಬಿಜೆಪಿಗೆ ಭದ್ರ ನೆಲೆ ಕಲ್ಪಿಸಿಕೊಂಡ, 8 ಕ್ಷೇತ್ರಗಳಲ್ಲಿ ಬರೋಬ್ಬರಿ 7 ಕ್ಷೇತ್ರ ಗೆಲ್ಲಿಸಿಕೊಂಡ, ಲೋಕಸಭೆ ಕ್ಷೇತ್ರ ಬಿಜೆಪಿಗೆ ಮಾಡಿಕೊಂಡ ದಾವಣಗೆರೆ ಜಿಲ್ಲೆಯ ಋಣ ತೀರಿಸಬೇಕಾದ ಸರ್ಕಾರವೇ ಈಗ ಮೂಗಿಗೆ ತುಪ್ಪ ಸವರುವಂತಹ  ಕೆಲಸ ಮಾಡುತ್ತಿದೆ.
 ನ್ಯಾಮತಿ ಗ್ರಾಮ ಸ್ವಾತಂತ್ರ್ಯ ಪೂರ್ವದಲ್ಲೇ ಬ್ರಿಟೀಷರ ಕಾಲದಲ್ಲೇ ಪ್ರಮುಖ ತಾಣವಾಗಿತ್ತು. ನಂತರದಲ್ಲಿ ಕಡೆಗಣನೆಗೆ ಒಳಗಾಗಿತ್ತು. ನ್ಯಾಮತಿ ತಾಲೂಕು ಘೋಷಣೆಗೆ ಒತ್ತಾಯಿಸಿ ಹೋರಾಟ ನಡೆದಿದ್ದವು. ಕೊನೆಗೂ ನ್ಯಾಮತಿ ಹೋರಾಟಕ್ಕೆ ಮಣಿದ ಸರ್ಕಾರ ನೂತನ ತಾಲೂಕನ್ನು ಘೋಷಿಸಿದೆ. ಮತ್ತೊಂದು ಪ್ರಮುಖ ಸ್ಥಳವಾಗಿದ್ದ ಮಾಯಕೊಂಡ ತಾಲೂಕಾಗಬೇಕೆಂಬ ಬೇಡಿಕೆಗೆ ಸರ್ಕಾರ ತಣ್ಣೀರೆರಚಿದೆ.
 ದಕ್ಷಿಣ ಭಾರತದ ಎರಡನೇ ಅತೀ ದೊಡ್‌ಡ ಕೆರೆ ಎಂಬ ಹೆಗ್ಗಳಿಕೆ ಹೊಂದಿರುವ ಸೂಳೆಕೆರೆ ಬಳಸಿ, ನೀರಿನ ಮೂಲ ಸಮರ್ಪಕ ಬಳಸಿಕೊಂಡು ಜಿಲ್ಲೆಯಲ್ಲಿ ನೀರಾವರಿ ಯೋಜನೆ ಅನುಷ್ಟಾನಗೊಳಿಸಲು, ಕುಡಿಯುವ ನೀರಿನ ಯೋಜನೆಗಳನ್ನು ಘೋಷಿಸಲಿಲ್ಲ. ಇನ್ನೂ ಹಲವಾರು ಬೇಡಿಕೆಗಳ ಪಟ್ಟಿಯೂ ಹಾಗೆಯೇ ಉಳಿದಿದೆ. 7 ಜನರನ್ನು ಚುನಾಯಿಸಿ ಕಳಿಸಿದ್ದ ಜಿಲ್ಲೆಗೆ ನೀಡಬೇಕಾಗಿದ್ದ ಆದ್ಯತೆಯನ್ನು ಸರ್ಕಾರ ನೀಡಲಿಲ್ಲವೆಂಬ ಕೊರಗು ಜನತೆಯಲ್ಲಿದೆ.
-ನಾಗರಾಜ ಬಡದಾಳ್

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

Show comments