ಅಫ್ಜಲ್ ಗುರುಗೆ ಗಲ್ಲು: ವಿಜಯೋತ್ಸವ
ದಾವಣಗೆರೆ: ದೇಶದ ಶಕ್ತಿಕೇಂದ್ರ ಸಂಸತ್ ಮೇಲಿನ ದಾಳಿ ನಡೆಸಿ ಹಲವರನ್ನು ಹತ್ಯೆಗೈದಿದ್ದ ಉಗ್ರ ಅಫ್ಜಲ್ ಗುರುವನ್ನು ಬೆಳಿಗ್ಗೆ ಗಲ್ಲಿಗೇರಿಸಿದ ಕೇಂದ್ರದ ನಿಲುವನ್ನು ಸ್ವಾಗತಿಸಿ ಹಿಂದೂ ಜಾಗರಣಾ ವೇದಿಕೆ ಮತ್ತಿತರೆ ಹಿಂದೂ ಪರ ಸಂಘಟನೆಗಳಿಂದ ನಗರದಲ್ಲಿ ಶುಕ್ರವಾರ ವಿಜಯೋತ್ಸವ ಆಚರಿಸಲಾಯಿತು.
ನಗರದ ಜಯದೇವ ವೃತ್ತದಲ್ಲಿ ಹಿಂಜಾವೇ ಮತ್ತಿತರೆ ಸಂಘಟನೆಗಳ ಮುಖಂಡರ ನೇತೃತ್ವದಲ್ಲಿ ಪಟಾಕಿ ಸಿಡಿಸಿ, ಪರಸ್ಪರ ಸಿಹಿ ಹಂಚುವ ಮೂಲಕ ಉಗ್ರರ ದಮನಕ್ಕೆ ಧೈರ್ಯ ತೋರಿದ ಕೇಂದ್ರ ಸರ್ಕಾರದ ಕ್ರಮವನ್ನು ಸ್ವಾಗತಿಸಿ ವಿಜಯೋತ್ಸವವನ್ನು ಆಚರಿಸಲಾಯಿತು.
ಇದೇ ವೇಳೆ ಮಾತನಾಡಿದ ಹಿಂಜಾವೇ ವಿಭಾಗೀಯ ಸಂಚಾಲಕ ಎಸ್.ಟಿ. ವೀರೇಶ, ಪ್ರಜಾಪ್ರಭುತ್ವದ ದೇವಾಲಯವೆಂದೇ ಕರೆಯುವ ಸಂಸತ್ ಮೇಲೆ ಅಫ್ಜಲ್ ಗುರು ಇತರೆ ಉಗ್ರರು 2001ರಲ್ಲಿ ದಾಳಿ ನಡೆಸಿ, 9 ಯೋಧರ ಹತ್ಯೆಗೈದಿದ್ದರು. ಸಂಸತ್ ಭವನ ಸ್ಪೋಟಿಸುವ ಜೊತೆಗೆ ದೇಶದ ರಾಷ್ಟ್ರೀಯ ನಾಯಕರನ್ನು ಹತ್ಯೆಗೈಯುವ ಸಂಚಿನಡಿ ಉಗ್ರರು ದಾಳಿ ನಡೆಸಿದ್ದರು ಎಂದು ಆರೋಪಿಸಿದರು.
ತಡವಾದರೂ ದಿಟ್ಟ ನಿರ್ಧಾರ: ಸಂಸತ್ ದಾಳಿ ಪ್ರಕರಣ ದೇಶವನ್ನೇ ಬೆಚ್ಚಿ ಬೀಳಿಸಿತ್ತು. ಅಪ್ಜಲ್ ಗುರುವಿಗೆ 12 ವರ್ಷದ ನಂತರವಾದರೂ ಕೇಂದ್ರವು ದಿಟ್ಟ ನಿರ್ಧಾರ ಕೈಗೊಂಡು ಗಲ್ಲಿಗೇರಿಸುವ ಮೂಲಕ ಉಗ್ರರಿಗೆ ಎಚ್ಚರಿಕೆ ಸಂದೇಶ ನೀಡಿದೆ. ಮುಂಬೈ ದಾಳಿ ಪ್ರಕರಣದಲ್ಲಿ ಜೀವಂತ ಸೆರೆ ಸಿಕ್ಕಿದ್ದ ಉಗ್ರ ಅಜ್ಮಲ್ ಕಸಬ್ನಂತೆ ಇದೀಗ ಮತ್ತೆ ಅಫ್ಜಲ್ ಗುರುಗೆ ಗಲ್ಲಿಗೇರಿಸಿ, ಉಗ್ರರಿಗೆ ಎಚ್ಚರಿಕೆಯ ಗಂಟೆಯನ್ನು ಕೇಂದ್ರ ಭಾರಿಸಿದೆ ಎಂದು ಹೇಳಿದರು.
ವಿವಾದಾತ್ಮಕ ಹೇಳಿಕೆ ಸರಿಯಲ್ಲ: ಜಾತ್ಯತೀತ ನಾಯಕರೆಂದು ಹೇಳಿಕೊಳ್ಳುವವರು ಕೆಲವರು ಸುದ್ದಿ ವಾಹಿನಿಗಳಲ್ಲಿ ಕುಳಿತು, ಉಗ್ರ ಅಫ್ಜಲ್ಗೆ ಗಲ್ಲಿಗೇರಿಸಿರುವುದು ನ್ಯಾಯಯುತವಾಗಿಲ್ಲ ಎಂಬುದಾಗಿ ಅಭಿಪ್ರಾಯ ಹೇಳಿಕೊಳ್ಳುತ್ತಿರುವುದು ಒಳ್ಳೆಯದಲ್ಲ. ವಿವಾದಾತ್ಮಕ ಹೇಳಿಕೆ ನೀಡುವ ಮೂಲಕ ದಿಢೀರ್ ಪ್ರಚಾರ ಗಳಿಸುವ, ಚರ್ಚೆಯಲ್ಲಿ ಗ್ರಾಸವಾಗುವ ವರ್ತನೆಯ ತೋರಿದ್ದು ಮಾತ್ರ ನಾಚಿಕೆಗೇಡಿನ ಸಂಗತಿಯಾಗಿದೆ ಎಂದು ಟೀಕಿಸಿದರು.
ಎಚ್ಚರಿಕೆ ಸಂದೇಶ ರವಾನೆ: ಸಂಘಟನೆ ಮುಖಂಡ ದೀಪಕ್ ಕಾನಡೆ ಮಾತನಾಡಿ, ಕೇಂದ್ರ ಸರ್ಕಾರವು ಅಫ್ಜಲ್ಗೆ ಗಲ್ಲು ಶಿಕ್ಷೆಯನ್ನು ವಿಧಿಸುವ ಮೂಲಕ ಭಾರತದ ಸಾರ್ವಭೌಮತ್ವಕ್ಕೆ ಧಕ್ಕೆ ತಂದೊಡ್ಡುವ, ಶಾಂತಿ, ಸೌಹಾರ್ಧತೆಗೆ ಭಂಗ ತರುವ ಉಗ್ರರಿಗೆ ತಕ್ಕ ಸಂದೇಶ ರವಾನೆ ಮಾಡಿದೆ. ದೇಶಾದ್ಯಂತ ಉಗ್ರರ ಚಟುವಟಿಕೆಗೆ ಪ್ರತ್ಯಕ್ಷ, ಪರೋಕ್ಷವಾಗಿ ಬೆಂಬಲಿಸುವವರನ್ನೂ ಕೇಂದ್ರ ಸರ್ಕಾರ, ಆಯಾ ರಾಜ್ಯ ಸರ್ಕಾರಗಳೂ ಮಟ್ಟ ಹಾಕಬೇಕು ಎಂದರು.
ಸ್ಲೀಪರ್ ಸೆಲ್ ನಿರ್ನಾಮ ಮಾಡಿ: ಉಗ್ರರ ಪಾಲಿಗೆ ಸ್ಲೀಪರ್ ಸೆಲ್ ಆಗಿರುವ ಸ್ಥಳಗಳನ್ನು ಪತ್ತೆ ಮಾಡಿ, ಅವುಗಳನ್ನು ನಿರ್ನಾಮ ಮಾಡಬೇಕು. ಉಗ್ರರಿಗೆ ಬೆಂಬಲಿಸುವ ಯಾರೇ ಆಗಿದ್ದರೂ ಅಂತಹವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು. ಜಿಹಾದ್ನ ಮಾನಸಿಕತೆ ಮೊದಲು ಕಿತ್ತು ಹಾಕುವ ಕೆಲಸವನ್ನು ಸರ್ಕಾರ ಮಾಡಬೇಕು ಎಂದು ಆಗ್ರಹಿಸಿದರು.
ಬಂದ್ ಖಂಡನೀಯ: ಉಗ್ರ ಅಫ್ಜಲ್ ಗುರುವಿಗೆ ಗಲ್ಲು ಶಿಕ್ಷೆ ವಿಧಿಸಿದ್ದನ್ನು ಖಂಡಿಸಿ ಜಮ್ಮು ಮತ್ತು ಕಾಶ್ಮೀರದಲ್ಲಿ ಹುರಿಯತ್ ಕಾನ್ಫರೆನ್ಸ್ ಮೂರು ದಿನಗಳ ಕಾಲ ಬಂದ್ಗೆ ಕರೆ ನೀಡಿದ್ದುದು ಖಂಡನೀಯ. ದೇಶ ವಿರೋಧಿ ವರ್ತನೆ ತೋರುವ ವ್ಯಕ್ತಿಗಳು, ನಾಯಕರು, ಸಂಘಟನೆಗಳು ಯಾರೇ ಆಗಿದ್ದರೂ ಅಂತಹವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಿ. ಈ ವಿಚಾರದಲ್ಲಿ ಕೇಂದ್ರ, ರಾಜ್ಯ ಸರ್ಕಾರ ಯಾವುದೇ ಕಾರಣಕ್ಕೂ ಉದಾಸೀನ ಮಾಡಬಾರದು ಎಂದರು.
ಸಂಘಟನೆ ಮುಖಂಡರಾದ ಎನ್.ಎಚ್. ಶಿವಕುಮಾರ, ಬಿಜೆಪಿ ಜಿಲ್ಲಾ ಯುವ ಪ್ರಧಾನ ಕಾರ್ಯದರ್ಶಿ ಪಿ.ಸಿ. ಶ್ರೀನಿವಾಸ, ಸತೀಶ ಪೂಜಾರಿ, ಮೃತ್ಯುಂಜಯ, ಶ್ರೀರಾಮ ಸೇನೆಯ ಪರಶುರಾವ, ಕಿಶೋರ, ದೀಪಕ್, ರಾಕೇಶ್, ಹರೀಶ, ಮಹಾಂತೇಶ, ಪ್ರವೀಣ ಜಾಧವ್, ಪ್ರಕಾಶ, ರಮೇಶ, ಶ್ರೀನಿವಾಸ, ಶಂಕರಗೌಡ, ರಾಘವೇಂದ್ರ, ತೇಲ್ಕರ್, ಮಾರುತಿ ಸೇರಿದಂತೆ ಮುಖಂಡರು ಇದ್ದರು.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.