ಬಜೆಟ್: ಛೇಂಬರ್ ಆಫ್ ಕಾಮರ್ಸ್ ಸ್ವಾಗತ
ದಾವಣಗೆರೆ: ಹಣಕಾಸು ಸಚಿವರೂ ಆದ ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಮಂಡಿಸಿದ 2013- 14ನೇ ಸಾಲಿನ ಮುಂಗಡಪತ್ರದ ಗಾತ್ರ 1.17 ಲಕ್ಷ ಕೋಟಿಯಾಗಿದ್ದು, ಕೃಷಿ, ಶಿಕ್ಷಣ, ಆರೋಗ್ಯ ಹಾಗೂ ಮೂಲ ಸೌಕರ್ಯ ಕಲ್ಪಿಸಲು ಒತ್ತು ನೀಡಿರುವುದನ್ನು ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಮಹಾಸಂಸ್ಥೆ ಸ್ವಾಗತಿಸಿದೆ.
ನೂತನ ರೈಲ್ವೆ ಯೋಜನೆಗಳ ಜಾರಿ ಕುರಿತಂತೆ ಪೂರ್ವ ಸಾಧ್ಯತೆಯ ಅಧ್ಯಯನಕ್ಕೆ 440 ಕೋಟಿ ಒದಗಿಸಿದ್ದು, ಬಿಪಿಎಲ್ ಕುಟುಂಬಗಳಿಗೆ ಆಹಾರ ಭದ್ರತೆಗಾಗಿ ಸಾರ್ವಜನಿಕ ವಿತರಣಾ ವ್ಯವಸ್ಥೆಯಡಿ 2 ಗೆ ಅಕ್ಕಿ ನೀಡಲು ಉದ್ದೇಶಿಸಿದ್ದು, ಹಾಲಿ ಇರುವ ತೆರಿಗೆಯಲ್ಲಿ ಯಾವುದೇ ಹೆಚ್ಚಳ ಮಾಡದಿರುವುದು, ಹೊಸ ತೆರಿಗೆ ಹೇರದಿರುವುದು ಸ್ವಾಗತಾರ್ಹ ಕ್ರಮಗಳಾಗಿವೆ ಎಂದು ಸಂಸ್ಥೆ ತಿಳಿಸಿದೆ.
ಮುದ್ರಾಂಕ ಶುಲ್ಕ ಇಳಿಕೆ: ಶೇ.5ರಿಂದ ಶೇ.5.5ಕ್ಕೆ ಹಾಗೂ ಶೇ.14ರಿಂದ ಶೇ.14.5ಕ್ಕೆ ಏರಿಸಿರುವ ಮೌಲ್ಯವರ್ಧಿತ ತೆರಿಗೆ ಜುಲೈನಲ್ಲಿ ಅಂತ್ಯ ಗೊಳಿಸಲು ಉದ್ದೇಶಿಸಿದ್ದು, ಅವಶ್ಯಕ ವಸ್ತುಗಳಾದ ಬತ್ತ, ಅಕ್ಕಿ, ಗೋಧಿ, ಬೇಳೆ ಕಾಳುಗಳ ಮೇಲಿನ ತೆರಿಗೆ ವಿನಾಯಿತಿಯನ್ನು ಮುಂದುವರಿಸಲು ನಿರ್ಧರಿಸಿರುವುದು, ನೋಂದಣಿ ಮತ್ತು ಮುದ್ರಾಂಕ ಶುಲ್ಕ ಶೇ.6ರಿಂದ 5ಕ್ಕೆ ಇಳಿಸಿದ್ದು, ನಗರಗಳ ಸಣ್ಣ ಉದ್ದಿಮೆಗಳ ಪರವಾನಿಗೆ ಅವದಿ 5 ವರ್ಷಕ್ಕೆ ವಿಸ್ತರಿಸಿದ್ದು ಶ್ಲಾಘನೀಯ ಕ್ರಮ ಎಂದು ಚೇಂಬರ್ ಹೇಳಿದೆ.
ಕಚ್ಛಾ ಹತ್ತಿ ತೆರಿಗೆ ಇಳಿಕೆ: ಸಂಸ್ಥೆಯಿಂದ ಸಲ್ಲಿಸಿದ್ದ ಕೃಷಿ ಉತ್ಪನ್ನ ಮಾರುಕಟ್ಟೆ ಶುಲ್ಕವನ್ನು ಶೇ.1.5ರಿಂದ ಶೇ.0.5ಕ್ಕೆ ಇಳಿಸಲು ಹಾಗೂ ಕಚ್ಛಾ ಹತ್ತಿಯ ಮೇಲೆ ತೆರಿಗೆಯನ್ನು ಶೇ.5ರಿಂದ 2ಕ್ಕೆ ಇಳಿಸಿರುವುದು, ಎಣ್ಣೆ ಕಾಳುಗಳಿಗೆ ಅನ್ವಯಿಸುವ ಬಗ್ಗೆ ಮುಂಗಡಪತ್ರದಲ್ಲಿ ಪರಿಗಣಿಸಿಲ್ಲ. ಕೃಷಿ, ಶಿಕ್ಷಣ, ವಾಣಿಜ್ಯ ಈ ಮೂರೂ ಕ್ಷೇತ್ರ ಪ್ರತಿನಿಧಿಸುವ ದಾವಣಗೆರೆ ಜಿಲ್ಲೆಗೆ ಹೊಸ ಯೋಜನೆಗಳನ್ನು ಬಜೆಟ್‌ನಲ್ಲಿ ಪ್ರಸ್ತಾಪಿಸದಿರುವುದು ಬೇಸರದ ಸಂಗತಿ ಎಂದು ಸಂಸ್ಥೆಯು ಅಭಿಪ್ರಾಯಪಟ್ಟಿದೆ.
ಸರ್ಕಾರಿ ವೈದ್ಯಕೀಯ ಕಾಲೇಜು, ಮೆಕ್ಕೆಜೋಳ ಸಂಸ್ಕರಣಾ ಘಟಕ, ವಿಮಾನ ನಿಲ್ದಾಣ, ಐಟಿ ಬಿಟಿ ಪಾರ್ಕ್, ಟ್ರಕ್ ಟರ್ಮಿನಲ್, ಜವಳಿ ಪಾರ್ಕ್ ಅಭಿವೃದ್ಧಿ ಪ್ರೋತ್ಸಾಹ, ದಾವಣಗೆರೆಯಲ್ಲಿ ಜನತೆಗೆ ಸುಗಮ ಸಂಚಾರಕ್ಕೆ ಅಗತ್ಯ ಫ್ಲೈ ಓವರ್ ಮತ್ತು ಸಬ್‌ವೇ ನಿರ್ಮಾಣದ ಬೇಡಿಕೆಗೆ ಬಜೆಟ್‌ನಲ್ಲಿ ಸ್ಪಂದನೆ ಸಿಕ್ಕಿಲ್ಲ. ಒಟ್ಟಾರೆ, ದಾವಣಗೆರೆ ಜಿಲ್ಲೆ ಪಾಲಿಗೆ ಸಿಎಂ ಜಗದೀಶ ಶೆಟ್ಟರ್ ಹೇಳಿಕೊಳ್ಳುವಂತಹ ಹೊಸ ಕೊಡುಗೆ ನೀಡಿಲ್ಲ ಎಂದು ಚೇಂಬರ್ ತಿಳಿಸಿದೆ.
ಜನ ಸಾಮಾನ್ಯರಿಗೆ ಹೊರೆಯಾಗದಂತೆ ಬಜೆಟ್‌ನ್ನು ಶೆಟ್ಟರ್ ಮಂಡಿಸಿದ್ದು, ಇದೊಂದು ಸ್ವಾಗತಾರ್ಹ ಮುಂಗಡಪತ್ರವಾಗಿದೆ ಎಂದು ಸಂಸ್ಥೆ ಅಧ್ಯಕ್ಷ ಕಾಸಲ್ ಎಸ್. ವಿಠಲ್, ಉಪಾಧ್ಯಕ್ಷ, ಮಾಜಿ ಶಾಸಕ ಯಜಮಾನ ಮೋತಿ ವೀರಣ್ಣ, ಕಾರ್ಯದರ್ಶಿ ಅಜ್ಜಂಪುರಶೆಟ್ರು ಶಂಭುಲಿಂಗಪ್ಪ, ಜಂಟಿ ಕಾರ್ಯದರ್ಶಿ ಕಿರುವಾಡಿ ಸೋಮಶೇಖರ, ಖಜಾಂಚಿ ಎ.ಸಿ. ಜಯಣ್ಣ ಮತ್ತಿತರೆ ಪದಾಧಿಕಾರಿಗಳು, ಸದಸ್ಯರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.