ಬಜೆಟ್ ಸತ್ಯ ಶೆಟ್ಟರ್ಗೆ ಗೊತ್ತು: ವ್ಯಂಗ್ಯ
ದಾವಣಗೆರೆ: ಮಠಗಳಿಗೆ ನೂರಾರು ಕೋಟಿ ಹಣ ಕೊಟ್ಟ ಸಿಎಂ ಶೆಟ್ಟರ್ಗೆ ಬಜೆಟ್ನಲ್ಲಿ ಘೋಷಣೆಯಾದ ಯೋಜನೆ ಅನುಷ್ಟಾನಕ್ಕೆ ಬರದು, ತಾವೂ ಅಧಿಕಾರದಲ್ಲೂ ಇರುವುದಿಲ್ಲ ಎಂಬ ಸತ್ಯ ಗೊತ್ತಿದ್ದರಿಂದಲೇ ಗಂಟೆಗಟ್ಟಲೆ ಬಜೆಟ್ ಮಂಡಿಸಿದ್ದಾರೆ ಎಂದು ಎಐಟಿಯುಸಿ ರಾಜ್ಯ ಪ್ರಧಾನ ಕಾರ್ಯದರ್ಶಿ ಎಚ್.ವಿ. ಅನಂತ ಸುಬ್ಬರಾವ್ ಟೀಕಿಸಿದರು.
ನಗರದ ರೋಟರಿ ಬಾಲಭವನದಲ್ಲಿ ಭಾನುವಾರ ಕಾರ್ಮಿಕ ಸಂಘಟನೆಗಳ ಜಂಟಿ ಸಮಿತಿ ಜಿಲ್ಲಾ ಸಮಾವೇಶದಲ್ಲಿ ಮಾತನಾಡಿದ ಅವರು, ಜಗದೀಶ ಶೆಟ್ಟರ್ಗೆ ತಾವು ಘೋಷಿಸಿದ ಯೋಜನೆ ಅನುಷ್ಟಾನಗೊಳಿಸಲು ತಾವೇ ಇರುವುದಿಲ್ಲ ಎಂಬ ಸಂಗತಿಯು ಗೊತ್ತಿದ್ದರಿಂದಲೇ ಗಂಟೆಗಟ್ಟಲೆ ಬಜೆಟ್ ಮಂಡಿಸಿದರು ಎಂದು ವ್ಯಂಗ್ಯವಾಡಿದರು.
ಹಳ್ಳಿ, ನಗರ, ಪಟ್ಟಣ ಪ್ರದೇಶದ ಅಂಗನವಾಡಿ ಕೇಂದ್ರಗಳಲ್ಲಿ ದಿನವಿಡಿ ದುಡಿಯುವ ಕಾರ್ಯಕರ್ತೆಯರಿಗೆ ಕೇವಲ 500 ಪ್ರೋತ್ಸಾಹ ಧನವನ್ನು ಘೋಷಿಸಿ, ಸಾಯುವವರ ಬಾಯಿಗೆ ಒಂದು ಹನಿ ನೀರು ಬಿಟ್ಟಂತೆ ಮುಖ್ಯಮಂತ್ರಿ ಜಗದೀಶ ಶೆಟ್ಟರ್ ವರ್ತಿಸಿದ್ದಾರೆ. ಇಂತಹ ಮಹಿಳೆಯರು ಅಲ್ಪವೇತನಕ್ಕೆ ದುಡಿಯುತ್ತಿರುವುದು ಸಿಎಂ ಗಮನಕ್ಕೆ ಬಂದಿಲ್ಲವೆ ಎಂದು ಅವರು ಪ್ರಶ್ನಿಸಿದರು.
ಬೆಲೆ ಏರಿಕೆಗೆ ಕಡಿವಾಣ ಹಾಕುವಂತೆ ಹಲವಾರು ವರ್ಷಗಳಿಂದಲೂ ಹೋರಾಟ ನಡೆಸುತ್ತಾ ಬಂದಿದ್ದೇವೆ. ತೈಲ ಬೆಲೆಗಳಂತೂ ಗಗನಕ್ಕೆ ಏರುತ್ತಿದ್ದು, ಇಳಿಕೆಯಾಗುವ ಯಾವುದೇ ಲಕ್ಷಣಗಳೂ ಕಾಣುತ್ತಿಲ್ಲ. ತೈಲ, ದೂರವಾಣಿ ಸೇರಿದಂತೆ ಎಲ್ಲಾ ಸರ್ಕಾರಿ ಸ್ವಾಮ್ಯದ ಇಲಾಖೆ, ನಿಗಮಗಳನ್ನು ಖಾಸಗೀಕರಣ ಮಾಡಿರುವುದು, ಮಾಡುತ್ತಿರುವುದೇ ಬೆಲೆ ಏರಿಕೆಗೆ ಕಾರಣವಾಗುತ್ತಿದೆ ಎಂದು ಅವರು ಆರೋಪಿಸಿದರು.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.