ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ದಾವಣಗೆರೆ

'ಎಂಪಿಪಿ ಒಂದು ಜಾತಿಗೆ ಸೀಮಿತ ನಾಯಕರಲ್ಲ'

Parashurama
Updated On : 12 Feb 2013, 10:43 am

ಹರಪನಹಳ್ಳಿ: ಇಂದು ಹಣವುಳ್ಳವರು ರಾಜಕಾರಣ ಪ್ರವೇಶಿಸಿಸುತ್ತಿದ್ದಾರೆ. ವೀರಶೈವ, ದಲಿತ, ಹಿಂದುಳಿದ  ನಾಯಕರು ಎಂದು ಬಿಂಬಿಸಿಕೊಳ್ಳುತ್ತಿದ್ದಾರೆ. ಅದರೆ ಎಂ.ಪಿ. ಪ್ರಕಾಶ್ ರಾಜಕಾರಣದಲ್ಲಿ ಎಂದಿಗೂ ಒಂದು  ಜಾತಿಗೆ ಸೀಮಿತ ನಾಯಕರಾಗಿರಲಿಲ್ಲ ಎಂದು ಚಿತ್ರದುರ್ಗ ಮಾದಾರ ಚನ್ನಯ್ಯ ಗುರುಪೀಠದ ಬಸವಮೂರ್ತಿ ಮಾದಾರ ಚನ್ನಯ್ಯ ಸ್ವಾಮೀಜಿ ಹೇಳಿದರು.
ಪಟ್ಟಣ ಎಡಿಬಿ ಕಾಲೇಜು ಆವರಣದಲ್ಲಿ ಹಡಗಲಿಯ ರಂಗಭಾರತಿ, ಹರಪನಹಳ್ಳಿಯ ಕಲಾಭಾರತಿ, ಗದಗ ಜಿಲ್ಲೆಯ ಮ.ಮ. ಪಾಟೀಲ್ ಪ್ರತಿಷ್ಠಾನ ಹಾಗೂ ಲಿಂಗಾಯತ ಅಧ್ಯಯನ ಸಂಸ್ಥೆ ಹಾಗೂ ಹಡಗಲಿಯ ಎಂ.ಪಿ.ಪ್ರಕಾಶ್ ಪ್ರತಿಷ್ಠಾನ ಸಹಯೋಗದಲ್ಲಿ ಆಯೋಜಿಸಿದ್ದ ದಿ.ಎಂ.ಪಿ. ಪ್ರಕಾಶ್ ಅವರ ಎರಡನೇ ವರ್ಷದ ಪುಣ್ಯ  ಸ್ಮರಣೆ ಕಾರ್ಯಕ್ರಮದಲ್ಲಿ ಮೂರನೇ ದಿನದಂದು ಪ್ರಶಸ್ತಿ ಪ್ರದಾನ ಸಮಾರಂಭದ ದಿವ್ಯ ಸಾನ್ನಿಧ್ಯವಹಿಸಿ ಅವರು ಅಶೀರ್ವಚನ ನೀಡಿದರು.
ನಾಯಕರ ಕೊರತೆ: ಇಂದು ರಾಜಕಾರಣದಲ್ಲಿ ಸ್ನೇಹಬದ್ಧತೆ, ಆತ್ಮೀಯತೆ, ಸೃಜನಶೀಲತೆಯ ನಾಯಕರ ಕೊರತೆ ಎದ್ದು ಕಾಣುತ್ತಿದೆ.  ಗಣಿ ಧೂಳು, ಅಕ್ರಮವಾಗಿ ಕಲ್ಲು- ಮಣ್ಣು ಮಾಡಿಕೊಂಡು ಲೂಟಿ ಹೊಡೆದಿರುವ ಹಣವನ್ನು ನೀರಿನಂತೆ ಖರ್ಚು ಮಾಡುವವರು ಚುನಾವಣೆಯಲ್ಲಿ ಗೆಲ್ಲುವ ಸಾಧ್ಯತೆ ಹೆಚ್ಚಿರುವ ಇಂತಹ ಸಂದರ್ಭದಲ್ಲಿ ವೈಚಾರಿಕ ನೆಲೆಗಟ್ಟಿನಲ್ಲಿ ಬೆಳೆದು ಬಂದಿದ್ದ ಮಾದರಿ ವ್ಯಕ್ತಿತ್ವ ಹೊಂದಿದ್ದ ಎಂಪಿಪಿಯ ಅದರ್ಶ, ಮೌಲ್ಯಗಳು ಕಳೆದ ಚುನಾವಣೆಯಲ್ಲಿ ಅವರನ್ನು ಕೈ ಹಿಡಿಯದಿರುವುದು ದುರಂತ ಎಂದರು.
ಕಾರ್ಯಕ್ರಮ ಉದ್ಘಾಟಿಸಿದ ಮಾಜಿ ಸಂಸದ ಕೆ.ಸಿ. ಕೊಂಡಯ್ಯ ಮಾತನಾಡಿ, ಬಳ್ಳಾರಿ ರೆಡ್ಡಿಗಳು ಲೂಟಿ ಹೊಡೆದ ಹಣದ ಹೊಳೆಯಲ್ಲಿ ಎಂಪಿಪಿಯ ರಾಜಕೀಯ ಮೌಲ್ಯಗಳು ಕೊಚ್ಚಿ ಹೋಗಿವೆ. ಲೂಟಿ ಹಣದ ಪ್ರಭಾವದಿಂದ ರಾಜ್ಯದ ರಾಜಕಾರಣ ಕಲುಷಿತಗೊಂಡಿದ್ದು, ತಲೆ ತಗ್ಗಿಸುವಂತಾಗಿದೆ. ಬಳ್ಳಾರಿ ಹಡಗಲಿ- ಹರಪನಹಳ್ಳಿ ಮತದಾರರನ್ನು ನೋಟುಗಳಲ್ಲಿ ಖರೀದಿಸಬಹುದು ಎಂಬ ವಾತಾವರಣ ಸೃಷ್ಟಿ ಮಾಡಿದ್ದಾರೆ. ಇದಕ್ಕೆ ದೇವರೇ ತಕ್ಕ ಶಿಕ್ಷೆ ನೀಡಿದ್ದಾರೆ. ಎಂಪಿಪಿ ಟೀಕಿಸಿದ ವ್ಯಕ್ತಿ ಜೈಲು ಪಾಲಾಗಿದ್ದಾರೆ ಎಂದು ಜನಾರ್ಧನರೆಡ್ಡಿ ವಿರುದ್ಧ ಹರಿಹಾಯ್ದರು.
ಕಂಪ್ಯೂಟರ್ ಇದ್ದ ಹಾಗೆ: ಸಣ್ಣ ಕೈಗಾರಿಕೆ ಸಚಿವ ನರಸಿಂಹ ನಾಯಕ(ರಾಜುಗೌಡ) ಮಾತನಾಡಿ, ರಾಜಕಾರಣದಲ್ಲಿ ಎಂಪಿಪಿ ಕಂಪ್ಯೂಟರ್ ಇದ್ದ ಹಾಗೆ. ಯಾವುದೇ ಇಲಾಖೆಗಳ ಅಭಿವೃದ್ಧಿ ಕಾರ್ಯಗಳನ್ನು ಅಂಕಿ- ಅಂಶಗಳ ಸಮೇತ ಉತ್ತರಿಸುತ್ತಿದ್ದರು ಎಂದರು.
ಅಧ್ಯಕ್ಷತೆ ವಹಿಸಿದ್ದ ಕೆಪಿಸಿಸಿ ಮಾಜಿ ಅಧ್ಯಕ್ಷ ಅಲ್ಲಂ ವೀರಭದ್ರಪ್ಪ, ಶಾಸಕ ಎಸ್.ವಿ. ರಾಮಚಂದ್ರ ಮಾತನಾಡಿದರು.  
ಗದಗ ಮ.ಮ. ಪಾಟೀಲ್ ಪ್ರತಿಷ್ಠಾನ ಹಾಗೂ ಲಿಂಗಾಯಿತ ಅಧ್ಯಯನ ಸಂಸ್ಥೆಯಿಂದ ಶಿವಮೊಗ್ಗದ ಹಿರಿಯ  ಸಮಾಜವಾದಿ ಹೋರಾಟಗಾರ ಕೋಣಂದೂರು ಲಿಂಗಪ್ಪ ಅವರಿಗೆ ಎಂ.ಪಿ. ಪ್ರಕಾಶ್ ರಾಷ್ಟ್ರೀಯ ಸಮಾಜ ಸಿರಿ  ಪ್ರಶಸ್ತಿ ಹಾಗೂ ಚಲನಚಿತ್ರ ಕಲಾವಿದೆ ಉಮಾಶ್ರೀ ಅವರಿಗೆ ಎಂ.ಪಿ. ಪ್ರಕಾಶ್ ಕಲಾಸಿರಿ ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು. ಬೆಂಗಳೂರು ಬಿ. ಭಾನುಮತಿ ತಂಡದಿಂದ ಭರತನಾಟ್ಯ ಹಾಗೂ ನಾಗತಿಹಳ್ಳಿ ಮಹಿಳಾ ತಂಡದಿಂದ ಕರಿಭಂಟ ನಾಟಕ ಪ್ರದರ್ಶನ ಕಂಡಿತು.
ಪ್ರೊ. ಶಾಂತಮೂರ್ತಿ ಕುಲಕರ್ಣಿ ಪ್ರಾಸ್ತಾವಿಕವಾಗಿ ಮಾತನಾಡಿದರು. ತೆಗ್ಗಿನಮಠದ ಚಂದ್ರಮೌಳೀಶ್ವರ  ಸ್ವಾಮೀಜಿ, ಹೊನ್ನಾಳಿ ಒಡೆಯರ್ ಚಂದ್ರಶೇಖರ್ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಬಳ್ಳಾರಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಎಂ.ಪಿ. ರವೀಂದ್ರ, ಉಪ ಪೊಲೀಸ್ ಆಯುಕ್ತ ಡಿ.ಸಿ. ರಾಜಪ್ಪ, ಮುಖಂಡರಾದ ಟಿ. ಮಹಬೂಬ್‌ಸಾಬ್, ವಿವಿಧ ಬ್ಲಾಕ್ ಅಧ್ಯಕ್ಷರಾದ ಎಚ್.ಕೆ. ಹಾಲೇಶ್, ಬಿ.ಕೆ. ಪ್ರಕಾಶ್, ಎಸ್. ಮಂಜುನಾಥ್, ಡಾ. ಮಂಜುನಾಥ್, ಸೋಪ್ಪಿನಬಾಳಪ್ಪ, ಕಣವಿಹಳ್ಳಿ ಮಂಜುನಾಥ್, ಎಂ.ವಿ. ಅಂಜಿನಪ್ಪ, ಶಿವಪ್ರಕಾಶ್ ಇದ್ದರು.  

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

Show comments