ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ದಾವಣಗೆರೆ

ತಿಂಗಳಲ್ಲಿ ನೀರಿನ ಕಾಮಗಾರಿ ಪೂರ್ಣಗೊಳಿಸಲು ಆದೇಶ

Parashurama
Updated On : 12 Feb 2013, 10:41 am

ದಾವಣಗೆರೆ: ಬೇಸಿಗೆ ದಿನಗಳಲ್ಲಿ ಬಾಕಿ ಉಳಿದ ಕುಡಿಯುವ ನೀರಿನ ಕಾಮಗಾರಿ ಮುಗಿಸಲು ಒಂದೇ ತಿಂಗಳ ಕಾಲಾವಕಾಶವಿದ್ದು, ಅಷ್ಟರಲ್ಲಿ ಅಪೂರ್ಣ ಕಾಮಗಾರಿ ಪೂರ್ಣಗೊಳಿಸುವ ಮೂಲಕ ನೀರು ಪೂರೈಸಲು ಸಮರೋಪಾದಿಯಲ್ಲಿ ಕಾರ್ಯ ನಿರ್ವಹಿಸುವಂತೆ ಜಿಪಂ ಅಧ್ಯಕ್ಷೆ ಶೀಲಾ ಗದ್ದಿಗೇಶ್ ಅಧಿಕಾರಿಗಳಿಗೆ ತಾಕೀತು ಮಾಡಿದ್ದಾರೆ.
ನಗರದ ಜಿಪಂ ಸಭಾಂಗಣದಲ್ಲಿ ಸೋಮವಾರ ಕೆಡಿಪಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಆರ್ಥಿಕ ವರ್ಷ ಮುಗಿಯಲು ಇನ್ನು ಒಂದೇ ತಿಂಗಳು ಬಾಕಿ ಇದೆ. ಅಷ್ಟರಲ್ಲಿ ಇರುವ ಅನುದಾನ ಬಳಸಿಕೊಂಡು ಕಾಮಗಾರಿ ಕಾಲಮಿತಿಯಲ್ಲಿ ಪೂರ್ಣಗೊಳಿಸಲು ಇಚ್ಛಾಶಕ್ತಿ, ಬದ್ಧತೆಯಿಂದ ಕಾರ್ಯ ನಿರ್ವಹಿಸಿ ಎಂದರು.
ಎಂಜಿನಿಯರ್‌ಗಳೇ ಹೊಣೆ: ಕುಡಿಯುವ ನೀರು ಪೂರೈಸುವ ಯಾವುದೇ ಕಾಮಗಾರಿ ಮಂದಗತಿಯಲ್ಲಿ ಸಾಗುತ್ತಿದ್ದರೆ, ಅವುಗಳಿಗೆ ಚುರುಕು ಮೂಡಿಸಬೇಕು. ಜಿಲ್ಲೆಯ ಯಾವುದೇ ಭಾಗದಲ್ಲೂ ನೀರಿನ ಸಮಸ್ಯೆಯಾಗದಂತೆ ನೋಡಿ ಕೊಳ್ಳುವ ನಿಟ್ಟಿನಲ್ಲಿ ಸಮರೋಪಾದಿಯಲ್ಲಿ ಕಾರ್ಯ ನಿರ್ವಹಿಸಿ. ನಾಳೆ ಯಾವುದೇ ಭಾಗದಲ್ಲಿ ನೀರಿನ ಸಮಸ್ಯೆ ಉಂಟಾದಲ್ಲಿ ಅದಕ್ಕೆ ಎಂಜಿನಿಯರ್‌ಗಳೇ ನೇರ ಹೊಣೆ ಹೊರಬೇಕಾಗುತ್ತದೆ ಎಂದು ಎಚ್ಚರಿಸಿದರು.
ಜಿಪಂ ಸಿಇಒ ಎ.ಬಿ. ಹೇಮಚಂದ್ರ ಮಾತನಾಡಿ, ಕೇಂದ್ರ ಸರ್ಕಾರದಿಂದ ರಾಷ್ಟ್ರೀಯ ಗ್ರಾಮೀಣ ಕುಡಿಯುವ ನೀರು ಪೂರೈಕೆ ಯೋಜನೆಯಡಿ ಜಿಲ್ಲೆಗೆ 5.92 ಕೋಟಿ ಹಣ ಬಂದಿದೆ. ಈವರೆಗೆ ಕೇವಲ 1.4ರು. ಕೋಟಿ ಮಾತ್ರ ಖರ್ಚು ಮಾಡಿದ್ದೀರಿ. ಆರ್ಥಿಕ ವರ್ಷ ಮುಗಿಯುತ್ತಾ ಬಂದಿದ್ದು, ಮಾರ್ಚ್ ಒಳಗಾಗಿ ಅಂತಹ ಎಲ್ಲಾ ಅಪೂರ್ಣ ಕಾಮಗಾರಿ ಪೂರ್ಣಗೊಳಿಸಲು ಸಾಧ್ಯವೇ ಎಂದು ಜಿಪಂ ಎಂಜಿನಿಯರಿಂಗ್ ಉಪ ವಿಭಾಗದ ಇಇ ನಾಗರಾಜ್‌ರನ್ನು ಪ್ರಶ್ನಿಸಿದರು.
ಮರಳಿ ತರುವುದು ಕಷ್ಟ; ಕೇಂದ್ರ ಸರ್ಕಾರ ನೀಡಿದ ಅನುದಾನವನ್ನು ಕಾಲಮಿತಿಯಲ್ಲಿ ಬಳಸಿಕೊಂಡು, ನೀರೊದಗಿಸಬೇಕು. ಒಂದು ವೇಳೆ ಹಣ ಬಳಕೆ ಮಾಡದಿದ್ದರೆ, ಮಂದಗತಿಯಲ್ಲಿ ಕೆಲಸ ಮಾಡಿದರೆ ಅನುದಾನ ವಾಪಾಸ್ಸಾಗುತ್ತದೆ. ಒಮ್ಮೆ ಕೇಂದ್ರಕ್ಕೆ ವಾಪಾಸ್ಸಾದ ಹಣವನ್ನು ಮರಳಿ ತರುವುದು ಕಷ್ಟ ಎಂದರು.
ಶಿಕ್ಷಣಾಧಿಕಾರಿ ಕೆ.ಎಂ. ಗಂಗಾಧರಸ್ವಾಮಿ ಮಾತನಾಡಿ, ಜಿಲ್ಲಾದ್ಯಂತ ಪ್ರಸಕ್ತ ಸಾಲಿನಲ್ಲಿ ಒಟ್ಟು 940 ಮಕ್ಕಳು ಶಾಲೆಯಿಂದ ಹೊರಗಿದ್ದಾರೆ. ಕಳೆದ ವರ್ಷಕ್ಕಿಂತ ಈ ಸಾಲಿನಲ್ಲಿ ಶಾಲೆ ಬಿಟ್ಟ ಮಕ್ಕಳ ಸಂಖ್ಯೆ ಹೆಚ್ಚಾಗಿದೆ. ಆ ಮಕ್ಕಳನ್ನು ಪುನಾ ಶಾಲೆಗೆ ಕರೆ ತರಲು ಎಡಬ್ಲ್ಯುಡಿ ಯೋಜನೆಯಡಿ ಹರಪನಹಳ್ಳಿ ತಾ. ತೆಲಗಿ, ಚನ್ನಗಿರಿ ಇತರೆಡೆ ವಸತಿ ಶಾಲೆ ಸ್ಥಾಪಿಸುವ ಮೂಲಕ ವರ್ಷ ಪೂರ್ತಿ ಶಾಲೆ ಬಿಟ್ಟ ಮಕ್ಕಳು ವಸತಿ ಶಾಲೆಯಲ್ಲೇ ತಂಗಲು ವ್ಯವಸ್ಥೆ ಮಾಡಲಾಗುತ್ತಿದೆ ಎಂದು ಹೇಳಿದರು.
ಅಧಿಕಾರಿಗೆ ನೋಟಿಸ್: ಜಿಪಂ ಅಧ್ಯಕ್ಷೆ ಶೀಲಾ ಗದ್ದಿಗೇಶ ಮಾತನಾಡಿ, ಜಿಪಂ ಸಾಮಾನ್ಯ ಸಭೆ, ಕೆಡಿಪಿ ಸಭೆಗಳಿಗೆ ಪದೇಪದೇ ಗೈರು ಹಾಜರಾದ ಅರಣ್ಯಾಧಿಕಾರಿ ಮಳವಳ್ಳಿ ಮತ್ತೆ ಗೈರಾಗಿದ್ದಾರೆ. ತಮ್ಮ ಅಧೀನ ಅಧಿಕಾರಿಯನ್ನು ತಮ್ಮ ಪರ ಕಳಿಸಿಕೊಟ್ಟಿದ್ದಾರೆ. ಸಭೆಗೆ ಗೈರು ಹಾಜರಾಗದವರು ಮುಂದೆ ಅಂತಹ ತಪ್ಪು ಮುಂದುವರಿಸಬಾರದು. ಸಭೆಗೆ ಬಾರದ ಅರಣ್ಯಾಧಿಕಾರಿ ಮಳವಳ್ಳಿಗೆ ನೋಟಿಸ್ ಜಾರಿಗೊಳಿಸಲು ಸಿಇಓಗೆ ಆದೇಶಿಸಿದರು.
ಜಿಪಂ ಉಪಾಧ್ಯಕ್ಷೆ ಎ.ಕೆ. ಶಾರದಮ್ಮ, ಸ್ಥಾಯಿ ಸಮಿತಿ ಅಧ್ಯಕ್ಷರಾದ ಭಾನುವಳ್ಳಿ ಸಿ.ಎನ್. ವೀರಭದ್ರಪ್ಪ, ಶಾರದಮ್ಮ ಉಮೇಶನಾಯ್ಕ, ಸೊಕ್ಕೆ ಎಚ್. ನಾಗರಾಜ, ಉಪ ಕಾರ್ಯದರ್ಶಿ ಜಿ.ಎಸ್. ಷಡಕ್ಷರಪ್ಪ, ಮುಖ್ಯ ಲೆಕ್ಕಾಧಿಕಾರಿ ಜಯರಾಂ, ಸಾಶಿಇ ಉಪ ನಿರ್ದೇಶಕ ಡಿ.ಕೆ. ಶಿವಕುಮಾರ, ಕೃಷಿ ಇಲಾಖೆ ಜಂಟಿ ನಿರ್ದೇಶಕ ಡಾ. ಆರ್.ಜಿ. ಗೊಲ್ಲರ್, ಜಿಲ್ಲಾ ಮತ್ತು ತಾಲೂಕು ಮಟ್ಟದ ಅಧಿಕಾರಿಗಳು ಸಭೆಯಲ್ಲಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

Show comments