ಭಕ್ತರೇ ಮಠಕ್ಕೆ ಆಸ್ತಿ: ಸಾಣೆಹಳ್ಳಿ ಶ್ರೀ
ಹರಿಹರ: ಭಕ್ತರೇ ಮಠಕ್ಕೆ ಆಸ್ತಿ ಎಂದು ಸಾಣೆಹಳ್ಳಿ ಪಂಡಿತಾರಾಧ್ಯ ಶಿವಾಚಾರ್ಯರ್ಯ ಸ್ವಾಮೀಜಿ ನುಡಿದರು.
ನಗರದ ಸಮೀಪದ ಬೈಪಾಸ್ ಬಳಿ ಇರುವ ವೀರಶೈವ ಪಂಚಮಸಾಲಿ ಪೀಠದ ಆವರಣದಲ್ಲಿ ಸೋಮವಾರ ನಡೆದ ಲಿಂಗೈಕ್ಯ ಡಾ. ಮಹಾಂತ ಶಿವಾಚಾರ್ಯ ಸ್ವಾಮೀಜಿಗಳ ಪುಣ್ಯಸ್ಮರಣೆ ಕಾರ್ಯಕ್ರಮದಲ್ಲಿ ಸಾನ್ನಿಧ್ಯ ವಹಿಸಿ ಮಾತನಾಡಿದ ಅವರು, ಸ್ವಾಮೀಜಿಗಳಿಗೆ ಅಂಜಿ ನಡೆವ ಭಕ್ತರು ಹಾಗೂ ಭಕ್ತರಿಗೆ ಅಂಜಿ ನಡೆವ ಸ್ವಾಮೀಜಿಗಳು ಇದ್ದಲ್ಲಿ ಮಠಗಳು ಹಾಗೂ ಸಮಾಜ ಬೆಳೆಯಲು ಸಾಧ್ಯ ಎಂದರು.
ಸಂಸ್ಕೃತ ವಿದ್ಯಾಂಸರು: ಜಗದ್ಗುರುಗಳು ಜನರ ಮಧ್ಯೆ ಇರಬೇಕೇ ಹೊರತು ಸಿಂಹಾಸನದ ಮೇಲೆ ಅಲ್ಲ. ಖಾವಿ ಧರಿಸಿದವರೆಲ್ಲಾ ಸ್ವಾಮಿಜಿಗಳಾಗಲು ಸಾಧ್ಯವಿಲ್ಲ. ಖಾವಿ ಬಟ್ಟೆಗಳ ಹಿಂದೆ ಕಾಮನೆಗಳು, ಅಲ್ಪತನಗಳು, ಇರಬಾರದು ಅಂಥಹ ಸ್ವಾಮೀಜಗಳಿಗೆ ಸಮಸ್ಕರಿಸಿದಲ್ಲಿ ಪುಣ್ಯದ ಬದಲು ಪಾಪ ಸುತ್ತಿಕೊಳ್ಳುತ್ತದೆ. ಮಹಾಂತ ಸ್ವಾಮಿಗಳು ಅಧ್ಬುತ ಸಂಸ್ಕೃತ ವಿದ್ಯಾಂಸರು, ಮೇದಾವಿಗಳೂ ಆಗಿದ್ದರು. ಆದರೂ ಸಮಾಜದ ಪ್ರತಿ ವರ್ಗದ ಜನರಿಗೆ ಗೌರವ ನೀಡುವ ಹಾಗೂ ಅವರೊಂದಿಗೆ ಬೆರೆಯುವ ಗುಣವಿತ್ತು ಎಂದರು.
ಸದ್ಭಾವನೆ: ಯಾರು ಎಷ್ಟು ದಿನ ಬದುಕುತ್ತಾರೆ ಎಂಬುದಕ್ಕಿಂತಾ ಹೇಗೆ ಬದುಕುತ್ತಾರೆ ಎಂಬುದು ಮುಖ್ಯ. ಸಮಾಜದಲ್ಲಿ ನಮ್ಮ ಬಗ್ಗೆ ದುರ್ಭಾವನೆ ಬರದೇ ಸದ್ಭಾವನೆ ಬರುವಂತಹ ಕೆಲಸ ಮಾಡಬೇಕು. ಬಡ ಮಕ್ಕಳನ್ನು ದತ್ತು ಪಡೆದು ವಿದ್ಯಾಭ್ಯಾಸ ನೀಡುವ, ಪ್ರತಿಯೊಬ್ಬರನ್ನು ಒಪ್ಪಿಕೊಂಡು, ಅಪ್ಪಿಕೊಂಡು ಮುನ್ನಡೆಸುವ ಕಾರ್ಯ ಮಾಡಿದಲ್ಲಿ ಪೀಠ ಬೆಳೆಯಲು ಸಾಧ್ಯ. ಅಂಥಹ ಕಾರ್ಯವನ್ನು ಮಹಾಂತ ಸ್ವಾಮೀಜಿ ಮಾಡಿದರು ಎಂದು ಸ್ಮರಿಸಿದರು.
ಸಮಾಜದ ಬೆಳವಣಿಗೆ: ಪ್ರವಚನಕಾರ ಗಂಗಾಧರ ಕಂಬಾಳಿಮಠ ಮಾತನಾಡಿ, ಜಾತಿ ಜಂಗಮವೊ, ನೀತಿ ಜಂಗಮವೊ ಎಂಬ ಜಿಜ್ಞಾಸೆಗಿಂತಾ ಜಡತ್ವದೆಡೆಗೆ ಸಾಗದ ಜಂಗಮತ್ವ ಬೇಕಾಗಿದೆ. ಸಮಾಜಿಕ ಚಿಂತನೆ ಮಾಡುವಾಗ ಪೂರ್ವಗ್ರಹ ಪೀಡಿತರಾಗಿರಬಾರದು. ಸಮಾಜದ ಬೆಳವಣಿಗೆ ಕಡೆಗೆ ತೆರಳುವ ಅವಶ್ಯಕತೆ ಇದೆ ಎಂದರು.
ಆಶಯವಾಗಿತ್ತು: ಕಾರ್ಯಕ್ರಮದ ಸಾನ್ನಿದ್ಯ ವಹಿಸಿ ಮಾತನಾಡಿ ಪಂಚಮಸಾಲಿ ಸ್ಥಿರ ಪೀಠಾಧಿಪತಿ ಸಿದ್ಧಲಿಂಗೇಶ್ವರ ಸ್ವಾಮೀಜಿ ಹುಟ್ಟುತ್ತಲೇ ಬರುವ ಉಸಿರು ನಿಧನರಾದ ನಂತರ ಇರುವುದಿಲ್ಲ.
ಹುಟ್ಟಿದ ನಂತರ ಹೆಸರಿರುವಂತಹ ಕಾರ್ಯ ಮಾಡಬೇಕು. 18 ರೊಳಗೆ ಹರಿಹರದಲ್ಲಿ ನಿರ್ಮಾಣವಾಗುತ್ತಿರುವ ಮಠದ ಆವರಣದಲ್ಲಿ ನೆಲೆಸಬೇಕು ಎಂಬುದು ಮಹಾಂತ ಶ್ರೀಗಳ ಆಶಯವಾಗಿತ್ತು. ಆದಷ್ಟು ಬೇಗನೆ ಮಠದ ಕಾಮಗಾರಿಗಳು ಸಂಪೂರ್ಣ ಮಾಡಬೇಕು ಎಂಬ ಕನಸನ್ನು ಹೊಂದಿದ್ದರು. ಈಗಾಗಲೇ ಅಂದು ಕೊಂಡಂತೆ ಮಠದ ಆವರಣದಲ್ಲಿ ನೆಲೆಸಿದ್ದಾರೆ ಮಠವನ್ನು ಸಂಪೂರ್ಣ ಮಾಡುವ ಜವಬ್ದಾರಿಯನ್ನು ನಮ್ಮೆಲ್ಲರ ಮೇಲೆ ಬಿಟ್ಟು ಎಂದರು.
ದಾವಣಗೆರೆಯಲ್ಲಿ ಅಮವಾಸ್ಯೆಗಳಲ್ಲಿ ನಡೆಯುತ್ತಿದ್ದ ಕಾರ್ಯಕ್ರಮಗಳನ್ನು ಇಲ್ಲಿ ಮುಂದುವರೆಸಲಿದ್ದೇವೆ. ಮಕ್ಕಳಿಗೆ ಲಿಂಗಧಾರಣೆ, ದಾಸೋಹಗಳನ್ನು ಪ್ರತಿ ಗ್ರಾಮಗಳ ಸಹಕಾರದಲ್ಲಿ ನಡೆಸುವುದಾಗಿ ತಿಳಿಸಿದರು. ಮನಗೂಳಿ ಹಿರೆಮಠದ ಸಂಗನಬಸವ ಸ್ವಾಮೀಜಿ, 108 ಲಿಂಗೇಶ್ವರ ದೇವಸ್ಥಾನದ ಬಸವಲಿಂಗ ಸ್ವಾಮೀಜಿ, ಕೃಷ್ಣಾನಂದ ಸ್ವಾಮೀಜಿ, ಬಸಲಿಂಗ ಪ್ರಭು ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ವಿಪ ಮಾಜಿ ಸದಸ್ಯ ಎಚ್.ಎಸ್. ಶಿವಶಂಕರ್ ಜಿಪಂ ಸದಸ್ಯ ಹನಗವಾಡಿ ವೀರೇಶ್, ಕಂದನಕೋವಿ ರುದ್ರಪ್ಪ, ಬಾವಿ ಬೆಟ್ಟಪ್ಪ, ಬಿ.ಸಿ. ಉಮಾಪತಿ, ಚಂದ್ರಶೇಖರ್ ಪೂಜಾರ್, ಹದಡಿ ನಟರಾಜ್ ಇದ್ದರು.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.