ಮಾಯಕೊಂಡ ಬಂದ್ ಯಶಸ್ವಿ: ತಾಲೂಕು ಘೋಷಣೆಗೆ ಆಗ್ರಹ
ಮಾಯಕೊಂಡ: ಮಾಯಕೊಂಡವನ್ನು ತಾಲೂಕು ಕೇಂದ್ರವಾಗಿ ಘೋಷಿಸುವಂತೆ ಒತ್ತಾಯಿಸಿ ಸೋಮವಾರ ಕರೆ ನೀಡಿದ್ದ ಬಂದ್ ಸಂಪೂರ್ಣ ಯಶಸ್ವಿಯಾಗಿದ್ದು, ಇಡೀ ಹೋಬಳಿ ಜನತೆ ಹೋರಾಟಕ್ಕೆ ಸ್ವಯಂ ಪ್ರೇರಿತರಾಗಿ ಸ್ಪಂದಿಸಿದರು.
ದಾವಣಗೆರೆ ತಾ. ಮಾಯಕೊಂಡ ಗ್ರಾಮವನ್ನು ತಾಲೂಕು ಕೇಂದ್ರವಾಗಿ ಘೋಷಿಸಲು ಒತ್ತಾಯಿಸಿ ಕರೆ ನೀಡಿದ್ದ ಬಂದ್ ಹಿನ್ನೆಲೆಯಲ್ಲಿ ಬೆಳಿಗ್ಗೆಯಿಂದಲೇ ಬಸ್ಸು ಮತ್ತಿತರೆ ವಾಹನ ಸಂಚಾರ ಸ್ತಬ್ಧಗೊಂಡಿತ್ತು. ಗ್ರಾಮದ ಪ್ರಮುಖ ಬೀದಿಗಳಲ್ಲಿ ತಾಲೂಕು ಹೋರಾಟ ಸಮಿತಿ ನೇತೃತ್ವದಲ್ಲಿ ಗ್ರಾಮಾದ್ಯಂತ ಮೆರವಣಿಗೆ ನಡೆಸಲಾಯಿತು.
ಘೋಷಣೆ: ಪ್ರತಿಭಟನೆಯುದ್ದಕ್ಕೂ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎ. ರವೀಂದ್ರನಾಥ, ಶಾಸಕ ಎಂ. ಬಸವರಾಜನಾಯ್ಕ, ಜಿಪಂ ಸದಸ್ಯೆ ಶಾರದಾ ಉಮೇಶನಾಯ್ಕ, ತಾಪಂ ಸದಸ್ಯ ಎ.ಕೆ. ಸುರೇಂದ್ರಪ್ಪ ವಿರುದ್ಧ ಘೋಷಣೆ ಕೂಗಿದ ಗ್ರಾಮಸ್ಥರು ಗ್ರಾಪಂ ಕಚೇರಿ ಎದುರು ಬಹಿರಂಗ ಸಭೆ ನಡೆಸುವ ಮೂಲಕ ತಾಲೂಕು ಘೋಷಣೆಗೆ ಸರ್ಕಾರಕ್ಕೆ ತಾಕೀತು ಮಾಡಿದರು.
ಅವಕಾಶ ವಂಚಿತ: ಇದೇ ವೇಳೆ ಮಾತನಾಡಿದ ತಾಲೂಕು ಹೋರಾಟ ಸಮಿತಿ ಗೌರವಾಧ್ಯಕ್ಷ ಎಂ.ಎಸ್.ಕೆ. ಶಾಸ್ತ್ರಿ, ಶಾಂತಿಯುತ ಹೋರಾಟಕ್ಕೆ ಸ್ಪಂದಿಸಿದ ಸರ್ಕಾರ ಮಾಯಕೊಂಡವನ್ನು ತಾಲೂಕು ಕೇಂದ್ರವಾಗಿ ಘೋಷಿಸಲಿ ಎಂದರು.
ವಿಶ್ರಮಿಸುವುದಿಲ್ಲ: ಸ್ವಾತಂತ್ರ್ಯ ಯೋಧ ವಿಶ್ವನಾಥಾಚಾರ್ ಮಾತನಾಡಿ, ಸ್ವಾತಂತ್ರ್ಯಕ್ಕಾಗಿ ಇಡೀ ಊರಿಗೆ ಊರೇ ಬೀದಿಗಿಳಿದು ಹೋರಾಡಿದ್ದ ನೆಲವಿದು. ಯಾವುದೇ ಊರಿನಲ್ಲೂ ಇಷ್ಟೊಂದು ಪ್ರಮಾಣದ ಸ್ವಾತಂತ್ರ್ಯ ಯೋಧರಿದ್ದ ನಿದರ್ಶನವಿಲ್ಲ. ಇಂತಹ ಊರನ್ನು ತಾಲೂಕು ಕೇಂದ್ರವಾಗಿ ಘೋಷಿಸಲು ಒತ್ತಾಯಿಸಿ ನ್ಯಾಯ ಸಿಗುವವರೆಗೆ ವಿಶ್ರಮಿಸುವುದಿಲ್ಲ. ಉಪವಾಸ ಸತ್ಯಾಗ್ರಹಕ್ಕೂ ಸಿದ್ಧ ಎಂದು ಘೋಷಿಸಿದರು.
ಸರ್ಕಾರಕ್ಕೆ ಪಾಠ: ಪುರಸಭೆ ಮಾಜಿ ಅಧ್ಯಕ್ಷ ಎಸ್. ನೀಲಪ್ಪ ಮಾತನಾಡಿ, ತಾಲೂಕು ರಚನೆಯಾಗದಿದ್ದರೆ, ಮುಂಬರುವ ಚುನಾವಣೆಗಳನ್ನು ಬಹಿಷ್ಕರಿಸಿ, ಸರ್ಕಾರಕ್ಕೆ ಪಾಠ ಕಲಿಸುತ್ತೇವೆ ಎಂದರು.
ಗ್ರಾಪಂ ಅಧ್ಯಕ್ಷ ಆರ್. ನಾಗರಾಜಪ್ಪ ಮಾತನಾಡಿ, ತಾಲೂಕು ಕೇಂದ್ರವಾಗಿ ಘೋಷಿಸುವಂತೆ ಎಂತಹದ್ದೇ ತ್ಯಾಗಕ್ಕೂ ನಾವು ಸಿದ್ಧ. ಪಕ್ಷಾತೀತ ಬೇಡಿಕೆ ಈಡೇರಿಸದಿದ್ದರೆ ಗ್ರಾಪಂ ಸರ್ವ ಸದಸ್ಯರೂ ಸಾಮೂಹಿಕ ರಾಜಿನಾಮೆ ನೀಡುವ ಮೂಲಕ ಸರ್ಕಾರಕ್ಕೆ ಪಾಠ ಕಲಿಸಲಿದ್ದೇವೆ. ಎಂದರು.
ಕೆಪಿಸಿಸಿ ಸದಸ್ಯ ಡಿ. ಬಸವರಾಜ ಮಾತನಾಡಿ, ಗ್ರಾಮಸ್ಥರು ಸಂಘಟಿತ ಹೋರಾಟ ನಡೆಸಿದರೆ, ಸರ್ಕಾರವೇ ಇಲ್ಲಿಗೆ ಓಡಿಕೊಂಡು ಬರುವಂತೆ ಮಾಡುವ ಶಕ್ತಿಯೂ ನಿಮ್ಮಲ್ಲಿದೆ ಎಂದು ಹೋರಾಟಕ್ಕೆ ಬೆಂಬಲಿಸಿದರು. ಜಿಪಂ ಸ್ಥಾಯಿ ಸಮಿತಿ ಮಾಜಿ ಅಧ್ಯಕ್ಷ ಮಾಯಕೊಂಡ ಎಸ್. ವೆಂಕಟೇಶ, ಕಾಂಗ್ರೆಸ್ ಪಕ್ಷದ ಓಬಿಸಿ ಘಟಕದ ಜಿಲ್ಲಾಧ್ಯಕ್ಷ ನಲ್ಕುಂದ ಹಾಲೇಶ, ಗ್ರಾಪಂ ಸದಸ್ಯ ಕೆ.ಟಿ. ರೇವಣ್ಣ, ಆರ್. ಮಾದಪ್ಪ, ಕೆ.ಎಸ್. ಬಸಂತಪ್ಪ, ಆಶೋಕ, ಹನುಮಂತಪ್ಪ, ಕುಬೇಂದ್ರಪ್ಪ, ಮಂಜುನಾಥ ಸ್ವಾಮಿ, ಕೆ.ಆರ್. ಲಕ್ಷ್ಮಣ, ಎಂ.ಜಿ. ಗೋಪಾಲ, ಎನ್.ಎಸ್. ಶ್ರೀನಿವಾಸ, ಗುಡ್ಲಿ ಗಂಗಣ್ಣ ಮಾತನಾಡಿದರು.
ಗುರು ರಾಜಣ್ಣ, ವಿ.ಜಿ. ರುದ್ರೇಶ, ಜಗನ್ನಾಥ, ಷಫೀ, ಉಮ್ಮರ್ ಸಾಬ್, ಹಿಂಡಸಘಟ್ಟ ಹನುಮಂತಪ್ಪ, ನಾಗರಾಜ, ರೇವಣಸಿದ್ದಪ್ಪ, ಎಂ.ಜಿ. ಗುರುನಾಥ, ಸಂಡೂರು ರಾಜಶೇಖರ, ಎಂ.ಜಿ. ಮಾಲತೇಶ, ವಿವಿಧ ಸಂಘ- ಸಂಸ್ಥೆ ಪದಾಧಿಕಾರಿಗಳು, ವಿದ್ಯಾರ್ಥಿ, ಯುವ ಜನರು, ಹಿರಿಯ ನಾಗರಿಕರು ಹೋರಾಟದಲ್ಲಿ ಪಾಲ್ಗೊಂಡಿದ್ದರು.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.