ಸರದಿ ಪದ್ಧತಿ ಖಂಡಿಸಿ ರೈತರ ರಸ್ತೆತಡೆ
ದಾವಣಗೆರೆ: ಭದ್ರಾ ಅಚ್ಚುಕಟ್ಟು ಪ್ರದೇಶ ಕೊನೆಯ ಭಾಗದ ಗದ್ದೆಗಳಿಗೆ ಸಮರ್ಪಕವಾಗಿ ನೀರು ತಲುಪಿಸದೆ ಸರದಿ ನಿಗದಿಪಡಿಸಿದ ನೀರಾವರಿ ಇಲಾಖೆಯ ಧೋರಣೆ ಖಂಡಿಸಿ ನಗರದ ಡಿಸಿ ಕಚೇರಿ ಎದುರು ಸೋಮವಾರ ಹಳೆ ಪಿ.ಬಿ. ರಸ್ತೆಯಲ್ಲಿ ರಸ್ತೆತಡೆ ನಡೆಸುವ ಮೂಲಕ ಪ್ರತಿಭಟನೆ ನಡೆಸಿದರು.
ನಗರದ ಡಿಸಿ ಕಚೇರಿ ಎದುರು ರಸ್ತೆತಡೆ ನಡೆಸಿದ ಪ್ರತಿಭಟನಾಕಾರರು ಭದ್ರಾನಾಲೆಯ ಅಚ್ಚುಕಟ್ಟು ಕೊನೆಯ ಭಾಗಕ್ಕೆ ಸಮರ್ಪಕ ನೀರೊದಗಿಸುವಲ್ಲಿ ವಿಫಲವಾದ ನೀರಾವರಿ ಇಲಾಖಾಧಿಕಾರಿಗಳು ತಮ್ಮ ಲೋಪ ಮರೆ ಮಾಚಿಕೊಳ್ಳಲು ಸರದಿ ಪದ್ಧತಿ ಹೇರಲು ಹೊರಟಿರುವುದನ್ನು ಖಂಡಿಸಿ ಘೋಷಣೆಗಳನ್ನು ಕೂಗಿದರು.
ಇದೇ ವೇಳೆ ಮಾತನಾಡಿದ ಎಪಿಎಂಸಿ ಮಾಜಿ ಅಧ್ಯಕ್ಷ ಮುದೇಗೌಡ್ರ ಗಿರೀಶ, ಜ.26ರಂದೇ ಭದ್ರಾ ನಾಲೆಯಲ್ಲಿ ನೀರು ಬಿಟ್ಟಿದ್ದು, ಪ್ರಥಮ ಹಂತವಾಗಿ ರು.7 ದಿನ ನೀರು ಹರಿಸುವುದಾಗಿ ಭರವಸೆ ನೀಡಿದ್ದರು. 17 ದಿನ ಕಳೆದರೂ ಅಚ್ಚುಕಟ್ಟು ಕೊನೆ ಭಾಗಕ್ಕೆ ನೀರು ತಲುಪಿಲ್ಲ. ಅಚ್ಚುಕಟ್ಟು ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ ಎಂದರು.
ರೈತ ಮುಖಂಡ ಬಿ.ಕೆ. ಪರಶುರಾಮ ಮಾತನಾಡಿ, ಭದ್ರಾ ನಾಲೆ ಕೊನೆ ಭಾಗದ ಹರಪನಹಳ್ಳಿ ವಿತರಣಾ ನಾಲೆ ಹಾಗೂ ಅನೇಕ ಗ್ರಾಮಗಳ ಜಮೀನಿಗೆ ನೀರು ತಲುಪಿಸದೆ, ಮೇಲ್ಭಾಗದ ಜಮೀನಿಗೆ ಸರದಿ ನಿಗದಿಪಡಿಸಿದ್ದು ಖಂಡನೀಯ. ಕೊನೆಯ ಭಾಗದ ರೈತರ ಜಮೀನಿಗೆ ನೀರು ತಲುಪದೆ, ಬೆಳೆ ನಾಶವಾಗುತ್ತಿವೆ. ಕೂಡಲೇ ಜಿಲ್ಲಾಡಳಿತ ಮಧ್ಯ ಪ್ರವೇಶಿಸಿ ನೀರಾವರಿ ಇಲಾಖೆಗೆ ಸೂಕ್ತ ನಿರ್ದೇಶನ ನೀಡುವ ಮೂಲಕ, ಕೊನೆಯ ಭಾಗಕ್ಕೆ ನೀರು ಕೊಡಿಸಬೇಕು ಎಂದು ಒತ್ತಾಯಿಸಿದರು.
ರೈತರಾದ ರಾಘವೇಂದ್ರ ನಾಯ್ಕ, ಲಕ್ಷ್ಮಣನಾಯ್ಕ, ತಿಮ್ಮಪ್ಪ, ನಾಗರಾಜ, ಮಲ್ಲಣ್ಣ, ಗುಡ್ಡಪ್ಪ, ಚಂದ್ರಪ್ಪ, ಬಸಪ್ಪ, ಆಂಜನೇಯ, ರಮೇಶ, ಹಾಲಸ್ವಾಮಿ, ರವಿ, ಹಾಲೇಶ ಸೇರಿದಂತೆ ಅನೇಕರು ಪ್ರತಿಭಟನೆಯಲ್ಲಿದ್ದರು. ನಂತರ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಲಾಯಿತು.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.