ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ದಾವಣಗೆರೆ

ತಾಕತ್ತಿದ್ದರೆ ಗಣಿ, ರೆಸಾರ್ಟ್ ಬಂದ್ ಮಾಡಿ

Parashurama
Updated On : 14 Feb 2013, 10:56 am

ದಾವಣಗೆರೆ; ನೂರಾರು ವರ್ಷಗಳಿಂದ ಅರಣ್ಯ ಭೂಮಿ ಸಾಗುವಳಿ ಮಾಡುತ್ತಿರುವ ಬಡ ರೈತರನ್ನು ಒಕ್ಕಲೆಬ್ಬಿಸುತ್ತಿರುವ ಅರಣ್ಯಾಧಿಕಾರಿಗಳಿಗೆ ತಾಕತ್ತಿದ್ದರೆ ಅಕ್ರಮ ಗಣಿ, ಕ್ರಷರ್, ರೆಸಾರ್ಟ್ ಬಂದ್ ಮಾಡಿ, ಅಧಿಕಾರಸ್ಥರನ್ನು ಮೊದಲು ಮಟ್ಟ ಹಾಕಲಿ ಎಂದು ರಾಜ್ಯ ರೈತ ಸಂಘದ ಪ್ರಧಾನ ಕಾರ್ಯದರ್ಶಿ ಹುಚ್ಚವ್ವನಹಳ್ಳಿ ಮಂಜುನಾಥ ಆಗ್ರಹಿಸಿದ್ದಾರೆ.
ನಗರದ ಬೀರಲಿಂಗೇಶ್ವರ ಮೈದಾನದಲ್ಲಿ ಬುಧವಾರ ರೈತ ಸಂಘದ ದಿವಂಗತ ಪ್ರೊ. ನಂಜುಂಡಸ್ವಾಮಿ ಸ್ಮರಣಾರ್ಥ ನಡೆದ ಅರಣ್ಯ ಭೂಮಿ ಸಾಗುವಳಿದಾರ ರೈತರ ಬೃಹತ್ ಸಮಾವೇಶದಲ್ಲಿ ಮಾತನಾಡಿದ ಅವರು, ಅರಣ್ಯ ಭೂಮಿ ಸಾಗುವಳಿದಾರ ರೈತರನ್ನು ಒಕ್ಕಲೆಬ್ಬಿಸಲು ಮುಂದಾದ ಅರಣ್ಯಾಧಿಕಾರಿಗಳು ಅಕ್ರಮ ಗಣಿಗಾರಿಕೆ, ಕ್ರಷರ್, ರೆಸಾರ್ಟ್ ನಡೆಸುವವರು, ರಾಜಕಾರಣಿಗಳು, ಪ್ರಭಾವಿಗಳನ್ನು ಅಲ್ಲಿಂದ ಓಡಿಸಲಿ ಎಂದರು.
ಕಣ್ಮುಚ್ಚಿ ಕುಳಿತ ಇಲಾಖೆ: ಜಿಲ್ಲೆಯಲ್ಲಿ 40 ಸಾವಿರ ಎಕರೆಯಲ್ಲಿ 12 ಸಾವಿರಕ್ಕೂ ಹೆಚ್ಚು ಕುಟುಂಬ ಅರಣ್ಯಭೂಮಿ ಸಾಗುವಳಿ ಮಾಡುತ್ತಿವೆ. ಕಾನೂನು ರೈತರ ಪರವಿದ್ದರೂ ಇಲಾಖೆ ದೌರ್ಜನ್ಯ ಮಾತ್ರ ತಪ್ಪಿಲ್ಲ. ಹಕ್ಕು ಪತ್ರ ಕೋರಿ 3 ಸಾವಿರ ಅರ್ಜಿ ಸಲ್ಲಿಸಿದ್ದರೂ, ವಿಲೇವಾರಿ ಮಾಡಿಲ್ಲ. ಬಂಡವಾಳಶಾಹಿ, ರಾಜಕಾರಣಿಗಳು ಅರಣ್ಯಭೂಮಿಯಲ್ಲಿ ಅಕ್ರಮ ಗಣಿಗಾರಿಕೆ, ಕ್ರಷರ್ ಹಾಗೂ ರೆಸಾರ್ಟ್ ನಡೆಸುತ್ತಿದ್ದರೂ, ಅರಣ್ಯಾಧಿಕಾರಿಗಳು ಕಣ್ಣು ಮುಚ್ಚಿಕೊಂಡು, ಬಡ ಸಾಗುವಳಿದಾರರ ಮೇಲೆ ಪೌರುಷ ತೋರುತ್ತಿದ್ದಾರೆ ಎಂದು ದೂರಿದರು.
ನ್ಯಾಯ ಕೊಡಿಸಲು ಮುಂದಾಗಲಿ: ಕಾನೂನು ಪ್ರಕಾರ ಅರಣ್ಯ ಭೂಮಿ ಸರಹದ್ದು ಗುರುತಿಸದ ಪ್ರದೇಶದಲ್ಲಿ ಸಾಗುವಳಿ ಮಾಡುವವರನ್ನು ಒಕ್ಕಲೆಬ್ಬಿಸುವಂತಿಲ್ಲ. ಆದರೂ, ಅರಣ್ಯಾಧಿಕಾರಿಗಳು ಆ ಕೆಲಸ ಮಾಡುತ್ತಿದ್ದು, ಇಂತಹ ವರ್ತನೆ ವಿರುದ್ಧ ರೈತರು ಧ್ವನಿ ಎತ್ತಲಿ. ಅರಣ್ಯ ಸಾಗುವಳಿ ಭೂಮಿ ವಶಕ್ಕೆ ಬಂದಾಗ, ಸಾಗುವಳಿದಾರರು ಪ್ರತಿರೋಧವೊಡ್ಡಲಿ. ಜನರಿಗೆ ನ್ಯಾಯ ಕೊಡಿಸಲು ಒಂದು ಕಾಲು ರೈಲಿನಲ್ಲಿ, ಇನ್ನೊಂದು ಕಾಲು ಜೈಲಿನಲ್ಲಿ ಎಂಬ ಹೋರಾಟಕ್ಕೂ ಮುಂದಾಗಬೇಕು ಎಂದು ಕರೆ ನೀಡಿದರು.
ಎಐಟಿಯುಸಿ ರಾಜ್ಯ ಕಾರ್ಯಾಧ್ಯಕ್ಷ ಎಚ್.ಕೆ. ರಾಮಚಂದ್ರಪ್ಪ ಮಾತನಾಡಿ, ಹೋರಾಟ, ಚಳವಳಿ ಮತ್ತು ಸಂಘಟನೆಯಿಂದ ಮಾತ್ರ ಹಕ್ಕು ಪಡೆಯಲು ಸಾಧ್ಯ. ಸರ್ಕಾರವನ್ನೇ ಅನುಕೂಲಕ್ಕೆ ತಕ್ಕಂತೆ ಆಡಿಸುವ ಬಂಡವಾಳಶಾಹಿಗಳಿಗೆ ಬಿಸಿ ಮುಟ್ಟಿಸುವ ಕೆಲಸವಾಗಬೇಕು. ಕೆಂಪು ಮತ್ತು ಹಸಿರು ಶಾಲು ಒಂದಾಗಿ, ಅಧಿಕಾರದ ಚುಕ್ಕಾಣಿ ಹಿಡಿಯಲಿವೆ ಎಂದರು.
ಸಂಘದ ಜಿಲ್ಲಾಧ್ಯಕ್ಷ ಕೈದಾಳೆ ವಸಂತಕುಮಾರ ಅಧ್ಯಕ್ಷತೆ ವಹಿಸಿದ್ದರು. ಅಖಿಲ ಭಾರತ ಕಿಸಾನ್ ಸಭಾ ರಾಜ್ಯ ಕಾರ್ಯದರ್ಶಿ ಹೊಸಳ್ಳಿ ಮಲ್ಲೇಶ, ರೈತ ಸಂಘದ ಕಾರವಾರ ಜಿಲ್ಲಾಧ್ಯಕ್ಷ ಬೆನಿತ್ ಸಿದ್ದಿ, ಚಿದಾನಂದ ಹರಿಜನ, ಹಾವೇರಿ ಜಿಲ್ಲಾಧ್ಯಕ್ಷ ಬಸವಣ್ಯಪ್ಪ ನಲುವಾಗಿಲು, ಕಾನನಕಟ್ಟೆ ತಿಪ್ಪೇಸ್ವಾಮಿ, ಕೈದಾಳೆ ರವಿಕುಮಾರ, ಫಣಿಯಾಪುರ ಲಿಂಗರಾಜ, ಗೋಪಾಲ ಪವಾರ್, ಹೊನ್ನೂರು ಮಂಜಪ್ಪ, ಗಡಿಮಾಕುಂಟೆ ಬಸವರಾಜಪ್ಪ ಮಾತನಾಡಿದರು.
ಸಂಘದ ಬ್ಯಾಡರಗೆರೆ ಹನುಮಂತಪ್ಪ, ಹರಿಹರ ವಿಜಯಕುಮಾರ, ಹೊನ್ನಾಳಿ ಕರಿಬಸವಾಚಾರ್, ನಲ್ಲೂರು ಹನುಮಂತಪ್ಪ, ಯರವನಾಗತಿಹಳ್ಳಿ ಬಾಲಾಜಿ, ಮಂಜುನಾಥ, ಆವರಗೆರೆ ಗೋಶಾಲೆ ಬಸವರಾಜ, ಕಾನನಕಟ್ಟೆ ತಿಪ್ಪಣ್ಣ, ಹೊನ್ನೂರು ಸಿದ್ದವೀರಪ್ಪ, ಪಾಮೇನಹಳ್ಳಿ ಗೌಡ್ರ ಶೇಖರಪ್ಪ, ಮಲ್ಲಶೆಟ್ಟಿಹಳ್ಳಿ ಹನುಮೇಶ ಇತರರು ಇದ್ದರು. ಇದಕ್ಕೂ ಮುನ್ನ ನಗರದ ಎಪಿಎಂಸಿ ಮಾರುಕಟ್ಟೆ ಆವರಣದಿಂದ ಪಿ.ಬಿ. ರಸ್ತೆ, ಗಾಂಧಿ ವೃತ್ತ, ಪಾಲಿಕೆ ಮುಂಭಾಗದಿಂದ ಸಮಾರಂಭ ಸ್ಥಳಕ್ಕೆ ಅಪಾರ ಸಂಖ್ಯೆಯಲ್ಲಿ ಸಾಗುವಳಿದಾರ ರೈತರು ಆಗಮಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

Show comments