ನೀರಿನ ಸಮಸ್ಯೆ ನಿವಾರಣೆಗೆ ರು. 29 ಲಕ್ಷ ಪ್ರಸ್ತಾವನೆ
ಹರಪನಹಳ್ಳಿ: ಪಟ್ಟಣದಲ್ಲಿ ಕುಡಿವ ನೀರಿನ ಸಮಸ್ಯೆ ತೀವ್ರಗೊಂಡಿದೆ. ಬಾವಿಗಳ ಸ್ವಚ್ಛತೆ, ಕೈ ಪಂಪು ದುರಸ್ತಿ ಸೇರಿದಂತೆ ಸಮಸ್ಯೆ ನಿವಾರಣೆಗೆ ರು. 29 ಲಕ್ಷ ಅನುದಾನ ಕೋರಿ ಜಿಲ್ಲಾಧಿಕಾರಿಗೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಪುರಸಭಾಧ್ಯಕ್ಷ ಮಹಬೂಬ್ ಸಾಹೇಬ್ ಹಾಗೂ ಮುಖ್ಯಾಧಿಕಾರಿ ಎಸ್. ಲಕ್ಷ್ಮಿ ತಿಳಿಸಿದ್ದಾರೆ.
ಅವರು ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿ ತುಂಗಭದ್ರ ನದಿ ಬತ್ತಿ ಕಳೆದ 25 ದಿನಗಳಿಂದ ಪಟ್ಟಣದಲ್ಲಿ ಕುಡಿವ ನೀರಿನ ಸಮಸ್ಯೆ ಉಂಟಾಗಿದೆ. ಆದ್ದರಿಂದ ಪಟ್ಟಣ ವ್ಯಾಪ್ತಿಯಲ್ಲಿ ಇರುವ 20 ಬಾವಿಗಳ ಸ್ವಚ್ಛತೆಗೆ, ರಿಬೋರ್, ಕೈ ಪಂಪು ದುರಸ್ತಿ, ನದಿಯಲ್ಲಿ ಮರಳಿನ ಒಡ್ಡು ನಿರ್ಮಿಸಲು ಹಾಗೂ ಟ್ಯಾಂಕರ್‌ನಿಂದ ನೀರು ಸರಬರಾಜು ಮಾಡಲು ಅನುದಾನ ಕೋರಲಾಗಿದೆ ಎಂದರು.
ಕೇವಲ ಟ್ಯಾಂಕರ್ ನೀರು ಸರಬರಾಜು ಮಾಡಲು ಈಗಾಗಲೇ ರು. 3.48 ಲಕ್ಷ ಮಾತ್ರ ಬಿಡುಗಡೆ ಮಾಡಲಾಗಿದೆ. ಈಗ 7 ಟ್ಯಾಂಕರ್‌ನಿಂದ ನೀರು ಸರಬರಾಜು ಮಾಡಲಾಗುತ್ತಿದೆ. 35 ಹ್ಯಾಂಡ್‌ಪಂಪು ದುರಸ್ತಿ ಮಾಡಲಾಗಿದೆ. ಇನ್ನೂ 10 ಕೈಪಂಪು ದುರಸ್ತಿ ಮಾಡಲಾಗಿದೆ. ನದಿಯಲ್ಲಿ ಮರಳು ಚೀಲಗಳಿಂದ ಒಡ್ಡು ನಿರ್ಮಿಸುವ ಕಾರ್ಯ ಪ್ರಗತಿಯಲ್ಲಿದೆ ಎಂದರು.
ಆದೇಶ ಜಾರಿಯಾಗಲಿ: ನದಿ ತೀರದಲ್ಲಿ ಯಾವ ರೈತರೂ ಏತ ನೀರಾವರಿಗೆ ಹಾಗೂ ಪಂಪು ಸೆಟ್‌ನಿಂದ ಬೆಳೆಗಳಿಗೆ ನೀರು ಹಾಯಿಸಿಕೊಳ್ಳುವಂತಿಲ್ಲ ಎಂದು ಜಿಲ್ಲಾಧಿಕಾರಿ ಆದೇಶ ಮಾಡಿದ್ದಾರೆ. ಅವರ ಆದೇಶ ಇನ್ನೂ ಜಾರಿಯಾಗಬೇಕು ಎಂದು ಹೇಳಿದರು.
ಭದ್ರಾ ಡ್ಯಾಂನಿಂದ ನದಿಗೆ ಬಿಟ್ಟಿರುವ ನೀರು ಇನ್ನೂ ನಿಟ್ಟೂರು ಬಸ್ಸಾಪುರ ಬಳಿ ಸಣ್ಣದಾಗಿ ಬರುತ್ತಿದೆ. ಪಟ್ಟಣಕ್ಕೆ ನೀರು ಸರಬರಾಜು ಮಾಡುವ ಗರ್ಭಗುಡಿ ಗ್ರಾಮದ ನದಿಗೆ ಯಾವಾಗ ಬರುತ್ತದೆ ಎಂದು ಗೊತ್ತಿಲ್ಲ ಅಲ್ಲಿಯವರೆಗೂ ನದಿ ನೀರು ಸಿಗುವುದು ದೂರದ ಮಾತು ಎಂದರು.
ನಾಗರಿಕರಿಗೆ ಆದಷ್ಟು ಕುಡಿಯುವ ನೀರು ಪೂರೈಸುವ ಕಾರ್ಯ ಮಾಡುತ್ತಿದ್ದೇವೆ. ಟ್ಯಾಂಕರ್ ತಮ್ಮ ಓಣಿಯಲ್ಲಿ ಬಂದರೆ ಸಾಲಾಗಿ, ಶಾಂತ ರೀತಿಯಿಂದ ಹಿಡಿದುಕೊಳ್ಳಬೇಕು ಎಂದು ವಿನಂತಿಸಿದರು. ಎಂಜಿನಿಯರ್ ದೇವರಾಜ ಸುದ್ದಿಗೋಷ್ಠಿಯಲ್ಲಿ ಇದ್ದರು.
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.