ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ದಾವಣಗೆರೆ

ಹಕ್ಕುಪತ್ರಕ್ಕೆ ಗಡವು :18ಕ್ಕೆ ಪಾಲಿಕೆಗೆ ಮುತ್ತಿಗೆ

Parashurama
Updated On : 14 Feb 2013, 10:57 am

ದಾವಣಗೆರೆ: ದಾವಣಗೆರೆ ನಗರದ ಕೊಂಡಜ್ಜಿ ರಸ್ತೆಯ ಶಿಬಾರ ಕ್ಯಾಂಪ್ ಕೊಳಚೆ ಪ್ರದೇಶದಲ್ಲಿ ವಾಸಿಸುವ 74 ಕುಟುಂಬಕ್ಕೆ ಹಕ್ಕುಪತ್ರ ವಿತರಿಸಲು 5 ದಿನಗಳ ಕಾಲಾವಕಾಶ ನೀಡಿದ್ದು, ಬೇಡಿಕೆ ಈಡೇರಿಸದಿದ್ದರೆ ಫೆ.18ರಂದು ನಗರ ಪಾಲಿಕೆಗೆ ಮುತ್ತಿಗೆ ಹಾಕಿ, ಉಪವಾಸ ಸತ್ಯಾಗ್ರಹ ಆರಂಭಿಸುವುದಾಗಿ ಅಲ್ಲಿನ ನಿವಾಸಿಗಳು ಪಾಲಿಕೆಗೆ ಎಚ್ಚರಿಸಿದ್ದಾರೆ.
ನಗರದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕೆ. ಬಸವರಾಜ, ಸಿದ್ದಲಿಂಗಪ್ಪ, 1987ರಲ್ಲಿ ಅಂದಿನ ನಗರಸಭೆ ಪ್ರತಿ ಚದರಕ್ಕೆ 6 ರಂತೆ 2800 ಪಡೆದು ನೀಡಿತ್ತು. ಅಂದಿನಿಂದ ಈವರೆಗೆ ಕಾಲಕಾಲಕ್ಕೆ ಕಂದಾಯ ಪಾವತಿಸುತ್ತಾ ಬಂದ ಎಲ್ಲಾ 74 ಕುಟುಂಬಕ್ಕೂ ಪಾಲಿಕೆ ಹಕ್ಕುಪತ್ರ ನೀಡದೆ, ಸತಾಯಿಸಲಾಗುತ್ತಿದೆ ಎಂದರು.
ಹಕ್ಕುಪತ್ರ ವಿತರಿಸುತ್ತಿಲ್ಲ: ಪರಿಶಿಷ್ಟರು, ಅರ್ಥಿಕವಾಗಿ ದುರ್ಬಲ ಕುಟುಂಬಗಳು ಅಲ್ಲಿದ್ದು, ಸುಮಾರು 700ಕ್ಕೂ ಹೆಚ್ಚು ಜನರಿದ್ದೇವೆ. ಹಕ್ಕುಪತ್ರಕ್ಕಾಗಿ ರಾಜ್ಯಪಾಲಕರು, ಜಿಲ್ಲಾ ಉಸ್ತುವಾರಿ ಸಚಿವ ರವೀಂದ್ರನಾಥ, ಸಂಸದ ಜಿ.ಎಂ. ಸಿದ್ದೇಶ್ವರ, ಶಾಸಕ ಡಾ. ಶಾಮನೂರು ಶಿವಶಂಕರಪ್ಪ, ನಗರಾಡಳಿತ ಸಚಿವ ಸುರೇಶಕುಮಾರ, ಡಿಸಿ ಪಟ್ಟಣಶೆಟ್ಟಿಗೆ ಒತ್ತಾಯಿಸಿದ್ದೇವೆ. ಹಕ್ಕುಪತ್ರ ವಿತರಿಸುವಂತೆ ಆದೇಶಿಸಿದ್ದರೂ ಪಾಲಿಕೆ ಹಕ್ಕುಪತ್ರ ವಿತರಿಸಲು ಮೀನಾ- ಮೇಷ ಎಣಿಸುತ್ತಿದೆ ಎಂದು ಅವರು ದೂರಿದರು.
ಮಲತಾಯಿ ಧೋರಣೆ: ಕಬ್ಬೂರು ಬಸಪ್ಪ ನಗರದ ನಿವಾಸಿಗಳಿಗೆ ಕಂದಾಯ ನಿವೇಶನ ಮತ್ತು ಮನೆಗಳಿಗೆ ಹಕ್ಕುಪತ್ರ ನೀಡಿದ ಪಾಲಿಕೆ ಕೊಂಡಜ್ಜಿ ರಸ್ತೆ ಶಿಬಾರದ ಕ್ಯಾಂಪ್ ಕೊಳಚೆ ಪ್ರದೇಶಗಳ ನಿವಾಸಿಗಳ ವಿಚಾರದಲ್ಲಿ ಮಲತಾಯಿ ಧೋರಣೆಯನ್ನ ಅನುಸರಿಸುತ್ತಿದೆ. ಸಚಿವರು, ಸಂಸದರು, ಶಾಸಕರು, ಜಿಲ್ಲಾಡಳಿತದ ಮಾತಿಗೂ ಬೆಲೆ ನೀಡದ ಪಾಲಿಕೆಗೆ ರಾಜ್ಯಪಾಲರ ನಿರ್ದೇಶನಕ್ಕೂ ಸ್ಪಂದಿಸಿಲ್ಲ. ಯಾರ ಮಾತಿಗೂ ಕಿವಿ ಗೊಡದ ಇಂತಹ ಪಾಲಿಕೆ ಜನ ಪ್ರತಿನಿಧಿಗಳು, ಅಧಿಕಾರಿಗಳಿಗೆ ನಾವೇ ಹೋರಾಟದ ಮೂಲಕ ಪಾಠ ಕಲಿಸ ಬೇಕಾದೀತು ಎಂದು ಅವರು ಹೇಳಿದರು.
ಪಾಲಿಕೆಗೆ ಮುತ್ತಿಗೆ: ಪಾಲಿಕೆ ಫೆ.16ರ ಒಳಗಾಗಿ ನಮಗೆ ಹಕ್ಕುಪತ್ರ ವಿತರಿಸದಿದ್ದರೆ, ಫೆ.18ರಂದು ಕೊಂಡಜ್ಜಿ ರಸ್ತೆಯ ಶಿಬಾರದ ಕ್ಯಾಂಪ್ ಕೊಳಚೆ ಪ್ರದೇಶ ನಿವಾಸಿಗಳು ಕುಟುಂಬ ಸಮೇತರಾಗಿ ಪಾಲಿಕೆಗೆ ಮುತ್ತಿಗೆ ಹಾಕುವ ಮೂಲಕ ಅನಿರ್ಧಿಷ್ಟಾವದಿ ಹೋರಾಟ ನಡೆಸಲಿದ್ದೇವೆ. ಮುಂದಾಗುವ ಯಾವುದೇ ಅನಾಹುತ, ಸಮಸ್ಯೆಗೆ ಪಾಲಿಕೆ ಆಡಳಿತ, ವಿಪಕ್ಷಗಳು ಹಾಗೂ ಅಧಿಕಾರಿಗಳೇ ನೇರ ಹೊಣೆಯಾಗಬೇಕಾದೀತು ಎಂದು ಅವರು ಸೂಚ್ಯವಾಗಿ ಎಚ್ಚರಿಸಿದರು.
ಕೊಳಗೇರಿ ನಿವಾಸಿಗಳಾದ ವಾಸುದೇವಪ್ಪ, ಪುಟ್ಟರಾಜ, ಕೊಟ್ರೇಶ, ಸಂಗಮೇಶ, ಕರಿಯಪ್ಪ, ಹನುಮಂತಪ್ಪ, ಗಂಗಾಧರ, ರೇಣುಕಮ್ಮ, ನಾಗರತ್ನ, ಸರಸ್ವತಿ, ಕವಿತಾ, ಮಂಜುಳಾ, ರೇಣುಕಮ್ಮ ಇತರರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

Show comments