ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ದಾವಣಗೆರೆ

ಜಗತ್ತನ್ನು ನೋಡುವ ದೃಷ್ಟಿಕೋನ ಬದಲಾಗಲಿ

Parashurama
Updated On : 15 Feb 2013, 11:49 am

ದಾವಣಗೆರೆ: ಭಯ ಇರುವವರಲ್ಲಿ ಮಾತ್ರ ಭಯೋತ್ಪಾದನೆ ಕಾಣಬಹುದಾಗಿದ್ದು, ನಿರ್ಭಯವಾಗಿ ಜೀವಿಸುವ ಮೂಲಕ ಸುಂದರ ಕನಸ್ಸನ್ನು ಸಾಕಾರಗೊಳಿಸಲು ನಾವು ಗಮನ ಹರಿಸಬೇಕು ಎಂದು ಮಾಜಿ ಶಾಸಕ ಮಹಿಮ ಜೆ. ಪಟೇಲ್ ಹೇಳಿದ್ದಾರೆ.
ನಗರದ ಬಾಪೂಜಿ ಸಭಾಂಗಣದಲ್ಲಿ ಗುರುವಾರ ಜೆ.ಎಚ್. ಪಟೇಲ್ ಕಾಲೇಜಿನ ಮಾತೃ ಸಂಸ್ಥೆ ಸೆಟ್ ಡೆಮ್ಸ್ ಸಂಸ್ಥೆ ದಶಮಾನೋತ್ಸವ ಹಾಗೂ ಪ್ರಶಸ್ತಿ ಪ್ರದಾನ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ರಾಜಕಾರಣಿಗಳಲ್ಲಿ ಮಾತ್ರ ಅಭದ್ರತೆ ಇಲ್ಲ. ಅಂತಹವರನ್ನು ಆಯ್ಕೆ ಮಾಡಿದ ಮತದಾರರಲ್ಲೂ ಅಭಧ್ರತೆ ಕಾಡುತ್ತಿದ್ದು, ನಾವು ಆಲೋಚನೆ ಮಾಡುವ ರೀತಿಯಲ್ಲಿ ನಮ್ಮ ಜೀವನ ಶೈಲಿಯೂ ಇರುತ್ತದೆ ಎಂದರು.
ಕಲಿಕೆ ನಿರಂತರ ಪ್ರಕ್ರಿಯೆ: ಜೀವನದಲ್ಲಿ ಕಲಿಕೆ ಎಂಬುದು ನಿರಂತರ ಪ್ರಕ್ರಿಯೆಯಾಗಿದೆ. ಜೀವನದಲ್ಲಿ ಎಷ್ಟೇ ಕಲಿತರೂ, ಕಲಿಕೆ ಇನ್ನೂ ಸಾಕಷ್ಟಿರುತ್ತದೆ. ನಾವು ಮಾಡುವ ಆಲೋಚನೆ ಮುಖ್ಯವಾಗುತ್ತವೆ. ಪರಿಸರ, ಭೂಮಿ ಚೆನ್ನಾಗಿಯೇ ಇರುತ್ತದೆ. ನಾವು ಅದನ್ನು ನೋಡುವ ದೃಷ್ಟಿಕೋನ ಚೆನ್ನಾಗಿರಬೇಕು. ಶೇ.90ಕ್ಕಿಂತ ಒಳ್ಳೆಯದೇ ಆಗುತ್ತದೆ. ಶೇ.10ರಷ್ಟು ಕೊರತೆಯನ್ನೇ ದೊಡ್ಡದಾಗಿ ಮಾಡಿ, ಅವೇ ದೊಡ್ಡ ಸಮಸ್ಯೆಯಾಗಿ ಭಾಸವಾಗುತ್ತಿವೆಯಷ್ಟೇ ಎಂದು ಅವರು ತಿಳಿಸಿದರು.
ಸಮಾಜವಾದಿ ಜೆ.ಎಚ್. ಪಟೇಲ್ ಸೇವಾ ಸಮ್ಮಾನ್ ಪ್ರಶಸ್ತಿ ಪುರಸ್ಕೃತರಾದ ವೃಕ್ಷಮಾತೆ ಸಾಲು ಮರದ ತಿಮ್ಮಕ್ಕ ಮಾತನಾಡಿ, ಮದುವೆಯಾಗಿ ಸುಮಾರು ವರ್ಷಗಳ ನಂತರವೂ ನನಗೆ ಸಂತಾನ ಭಾಗ್ಯವಿರಲಿಲ್ಲ. ಮಕ್ಕಳಿಲ್ಲದ ನಾನು ಸಸಿಗಳನ್ನು ನೆಟ್ಟು, ಅವುಗಳನ್ನು ಆರೈಕೆ ಮಾಡುವ ಮೂಲಕ ಅದರಲ್ಲೇ ಮಕ್ಕಳನ್ನು ಕಂಡೆ. ಇಂದು ಸಾವಿರಾರು ಮಕ್ಕಳ ತಾಯಿಯಾಗಿ ನೆಮ್ಮದಿಯಾಗಿ, ಸಂತಸದಿಂದ ಇದ್ದೇನೆ. ಅಂತಹ ಪುಣ್ಯ ಕಾರ್ಯ ನೆಮ್ಮದಿ ತಂದು ಕೊಡುತ್ತಿದೆ. ನೀವು ಸಸಿ ನೆಟ್ಟು, ಮರ ಬೆಳೆಸಿ ಎಂದರು.
ಪರಿಸರ ಸಮತೋಲನ ಕಾಪಾಡಿ: ದಾವಿವಿ ಕುಲಪತಿ ಪ್ರೊ. ಎಸ್. ಇಂದುಮತಿ ಮಾತನಾಡಿ, ಪರಿಸರ ಸಮತೋಲನ ಕಾಪಾಡಲು ಕೇವಲ ಹಸಿರಿನಿಂದ ಮಾತ್ರವಲ್ಲ, ಮಳೆ ಕೂಡ ಪ್ರಮುಖ ಪಾತ್ರ ವಹಿಸುತ್ತದೆ. ನೀರಿಗೆ ಎಷ್ಟು ಮಹತ್ವವಿದೆಯೋ, ಪ್ರಾಣವಾಯು ನೀಡುವ ಮರ, ಗಿಡಕ್ಕೂ ಅಷ್ಟೇ ಮಹತ್ವವಿದೆ. ಆಮ್ಲಜನಕ ನೀಡುವ ಮರಗಳು ವಿದ್ಯುತ್ ಉಳಿತಾಯಕ್ಕೂ ಸಹಕಾರಿ ಎಂದರು.
ಸಾಧಕರು ಆದರ್ಶವಾಗಲಿ: ಮನಸ್ಸು ಮಾಡಿದರೆ. ಏನಾದರೂ ಸಾಧನೆ ಮಾಡಬಹುದು ಎಂಬುದಕ್ಕೆ ಸಾಲು ಮರದ ತಿಮ್ಮಕ್ಕ, ಅಣ್ಣಾ ಹಜಾರೆಯಂತಹ ಹಿರಿಯರೇ ಜೀವಂತ ನಿದರ್ಶನ. ಹಜಾರೆ ಕಠಿಣ ಪರಿಶ್ರಮದಿಂದ ಒಂದು ಗ್ರಾಮಕ್ಕೆ ಶುದ್ಧ ಕುಡಿಯುವ ನೀರು ಪೂರೈಸುವ ಮೂಲಕ ಗ್ರಾಮದ ಚಿತ್ರಣ ಬದಲಿಸಿದ ಸಾಧಕ. ಸಾಲು ಮರದ ತಿಮ್ಮಕ್ಕ ನೂರಾರು ಕೋಟಿ ಬೆಲೆ ಬಾಳುವ ಸಸ್ಯ ಸಂಪತ್ತನ್ನು ಸಮಾಜಕ್ಕೆ ಕೊಡುಗೆ ನೀಡಿದ ಸಾಧಕಿ. ಇಂತಹವರು ಯುವ ಜನಾಂಗಕ್ಕೆ ಆದರ್ಶವಾಗಲಿ ಎಂದು ಅವರು ಹೇಳಿದರು.
ಕಾಲೇಜು ಪ್ರಾಚಾರ್ಯರಾದ ಪ್ರತಿಭಾ ಪಿ. ದೊಗ್ಗಳ್ಳಿ ಅಧ್ಯಕ್ಷತೆ ವಹಿಸಿದ್ದರು. ಕಾಲೇಜು ನಿರ್ದೇಶಕ ಎಂ. ಗುರುಸಿದ್ದಸ್ವಾಮಿ, ಸಾಲು ಮರದ ತಿಮ್ಮಕ್ಕನ ಸಾಕು ಮಗ ಸಾಲು ಮರದ ಉಮೇಶ, ಕಾಲೇಜು ಕಾರ್ಯದರ್ಶಿ ದೊಗ್ಗಳ್ಳಿ ಗೌಡ್ರ ಪುಟ್ಟರಾಜು, ಕೆ. ಬಸವರಾಜ, ಚೈತ್ರಾ, ವಿನುತಾ, ಶ್ವೇತಾ ಮತ್ತಿತರರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement